ಬೆಂಗಳೂರು: ರಾಜ್ಯದಲ್ಲಿ ಭಾರೀ ಸದ್ದು ಮಾಡಿ ಹಿಂದಿನ ಕಾಂಗ್ರೆಸ್ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ಡಿವೈಎಸ್‌ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಕೇಸಿನಲ್ಲಿ ಮಾಜಿ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಸಿಬಿಐ “ಕ್ಲೀನ್‌ಚಿಟ್’ ನೀಡಿದೆ. ಜತೆಗೆ ಹಿರಿಯ ಐಪಿಎಸ್ ಅಧಿಕಾರಿಗಳಾದ ಪ್ರಣವ್ ಮೊಹಂತಿ, ಎ.ಎಂ. ಪ್ರಸಾದ್ ಪಾತ್ರವೂ ಇಲ್ಲ ಎಂದು ಉಲ್ಲೇಖೀಸಿದೆ.
ಈ ಸಂಬಂಧ ಮಡಿಕೇರಿ ನ್ಯಾಯಾಲಯಕ್ಕೆ ಸಿಬಿಐ “ಬಿ’ ರಿಪೋರ್ಟ್ ಸಲ್ಲಿಸಿದೆ. ಗಣಪತಿ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದ ದಿಲ್ಲಿಯ ಏಮ್ಸ್ ಆಸ್ಪತ್ರೆಯ ವೈದ್ಯರು, ಗಣಪತಿ ಅವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ವರದಿ ನೀಡಿದ್ದರು. ಈ ವರದಿಯನ್ನು ಅನುಮೋದಿಸಿರುವ ಸಿಬಿಐ, ಗಣಪತಿ ಅವರದ್ದು ಕೊಲೆಯಲ್ಲ, ಆತ್ಮಹತ್ಯೆ ಎಂದು ಹೇಳಿದೆ.
ಜಾರ್ಜ್, ಮೊಹಂತಿ, ಪ್ರಸಾದ್ ಅವರು ಗಣಪತಿ ಅವರಿಗೆ ಕಿರು ಕುಳ ನೀಡಿದ್ದರು ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ. ಗಣಪತಿ ಅವರಿಗೆ ವೃತ್ತಿಪರವಾಗಿ ಯಾವುದೇ ಒತ್ತಡ ಅಥವಾ ಕಿರುಕುಳ ಇರಲಿಲ್ಲ. ಕೌಟುಂಬಿಕ ಕಾರಣಗಳಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ ಎಂದು ಸಿಬಿಐ ವರದಿಯಲ್ಲಿ ಹೇಳಿದೆ.
ಹಲವು ವರ್ಷಗಳ ಹಿಂದಿನ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಗಣಪತಿ ಅವರು ಆರೋಪಿತರ ವಿರುದ್ಧ ಆರೋಪಗಳನ್ನು ಮಾಡಿ ದ್ದಾರೆ. ಆದರೆ ಅವರು ಮಾಡಿರುವ ಯಾವುದೇ ಆರೋಪಗಳು ಸಾಬೀತಾಗುವಂತಹ ಅಂಶ ಗಳು ತನಿಖೆಯಲ್ಲಿ ಕಂಡು ಬಂದಿಲ್ಲ ಎಂದು ಸಿಬಿಐ ತನ್ನ ವರದಿಯಲ್ಲಿ ಹೇಳಿದೆ.
ಅಷ್ಟೇ ಅಲ್ಲದೆ ಈ ಮೂವರ ವಿರುದ್ಧದ ಪ್ರಕರಣವನ್ನು ರದ್ದು ಮಾಡಿ ಖುಲಾಸೆ ಮಾಡ ಬಹುದು ಎಂಬ ಟಿಪ್ಪಣಿ ಅಂಶವನ್ನೂ ನ್ಯಾಯಾ ಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಸಿಬಿಐ ಉಲ್ಲೇಖೀಸಿದೆ ಎಂದು ಮೂಲಗಳು ತಿಳಿಸಿವೆ.
- ಮಂಜುನಾಥ ಲಘುಮೇನಹಳ್ಳಿ