Advertisement

ಕೋಟೆರಾಯನ ಬೆಟ್ಟಕ್ಕೆ ಭೂವಿಜ್ಞಾನಿಗಳು

11:12 PM Sep 23, 2020 | mahesh |

ಕುಂದಾಪುರ: ಉಡುಪಿ-ಶಿವಮೊಗ್ಗ ಜಿಲ್ಲೆಗಳ ಗಡಿಭಾಗದಲ್ಲಿರುವ ಪಶ್ಚಿಮ ಘಟ್ಟ ಶ್ರೇಣಿಯ ಕೋಟೆರಾಯನ ಬೆಟ್ಟದಲ್ಲಿ ಕುಸಿತ ಸಂಭವಿಸಿದ ಸ್ಥಳಕ್ಕೆ ಉಡುಪಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂವಿಜ್ಞಾನಿಗಳು ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.

Advertisement

ಭೂವಿಜ್ಞಾನಿಗಳ ತಂಡವು ಗುಡ್ಡ ಕುಸಿಯಲು ಕಾರಣ, ಎಷ್ಟು ದೂರದವರೆಗೆ ಕುಸಿದಿದೆ, ಮತ್ತಷ್ಟು ಅಪಾಯ ಎದುರಾಗಬಹುದೇ? ಮನೆ ಗಳಿಗೆ ಅಪಾಯ ವಿದೆಯೇ ಇತ್ಯಾದಿ ವಿಚಾರಗಳ ಕುರಿತು ಅಧ್ಯಯನ ನಡೆಸಿದರು. ಭೂವಿಜ್ಞಾನಿಗಳಾದ ಗೌತಮ್‌ ಶಾಸ್ತ್ರಿ, ಪದ್ಮಶ್ರೀ, ಸಂಧ್ಯಾ, ಹಾಜಿರಾ ಸಜಿನಿ, ಸ್ಥಳೀಯರಾದ ಶೋಭ್‌ರಾಜ್‌ ತಂಡದಲ್ಲಿದ್ದರು.

ಮಡಾಮಕ್ಕಿಯಿಂದ 5 ಕಿ.ಮೀ., ಶೇಡಿಮನೆ ಗ್ರಾಮದ ಅಗಳಿಬೈಲಿನಿಂದ ಸುಮಾರು 3 ಕಿ.ಮೀ. ದೂರದಲ್ಲಿರುವ ಬೆಟ್ಟವು ಗಾಳಿ – ಮಳೆಗೆ ಕುಸಿದು, ಗುಡ್ಡದ ಮಣ್ಣು ಬುಡದಲ್ಲಿರುವ ಮನ್ನಾಡಿಯ ತನಕ ಜರಿದು ಬಂದಿದೆ.

ಕುಸಿತಕ್ಕೆ ಕಾರಣ
ಭೂವಿಜ್ಞಾನಿಗಳ ಪ್ರಕಾರ, ನಿರಂತರ ಮಳೆಯಾಗಿದ್ದರಿಂದ ಬೆಟ್ಟದಲ್ಲಿರುವ ಬಂಡೆಗಳ ಸುತ್ತಲಿನ ಮಣ್ಣು ಕೊಚ್ಚಿ ಹೋಗಿದ ಮಣ್ಣು ಸಡಿಲಗೊಂಡು ಜಾರಿದೆ. ಮೇಲ್ಭಾಗದಲ್ಲಿ ಸುಮಾರು 250 ಮೀಟರ್‌ ಬೆಟ್ಟ ಕುಸಿದರೆ, ಮುಂದೆ 1.5 ಕಿ.ಮೀ. ವರೆಗೆ ಜರಿಯುತ್ತ ಸಾಗಿದೆ. ಮರ, ಗಿಡಗಳು, ಸಣ್ಣ-ಪುಟ್ಟ ಬಂಡೆ ಗಳು ಕೊಚ್ಚಿಕೊಂಡು ಬಂದಿವೆ.

ಭೇಟಿ ಸಾಹಸ ಬೇಡ
ಬೆಟ್ಟದ ಕೆಳಭಾಗದಲ್ಲಿ ಮನೆಗಳು ತುಂಬಾ ದೂರದಲ್ಲಿರುವುದರಿಂದ ಯಾವುದೇ ಅಪಾಯ ಸದ್ಯಕ್ಕಿಲ್ಲ. ಕೋಟೆರಾಯನ ಮೂಲ ಸಾನ್ನಿಧ್ಯಕ್ಕೆ ತೆರಳಲೂ ತೊಂದರೆಯಿಲ್ಲ. ಬೆಟ್ಟ ಕುಸಿತವನ್ನು ವೀಕ್ಷಿಸಲು ಜನ ಕುತೂಹಲ ದಿಂದ ಅಲ್ಲಿಗೆ ಭೇಟಿ ನೀಡುತ್ತಿ ದ್ದಾರೆ. ಆದರೆ ಆ ದುಸ್ಸಾಹಸ ಸದ್ಯ ಬೇಡ. ಅಲ್ಲಿನ ಹಾದಿಯು ದುರ್ಗಮವಾಗಿದೆ. 3-4 ಹಳ್ಳಗಳನ್ನು ದಾಟಿ ಹೋಗಬೇಕು. ಹೋದ ಮೇಲೆ ವಿಪರೀತ ಮಳೆ ಬಂದಲ್ಲಿ ಮರಳುವುದು ಕಷ್ಟ .
– ಗೌತಮ್‌ ಶಾಸ್ತ್ರೀ ಭೂವಿಜ್ಞಾನಿ

Advertisement
Advertisement

Udayavani is now on Telegram. Click here to join our channel and stay updated with the latest news.

Next