ನಟ ಪ್ರಜ್ವಲ್ ದೇವರಾಜ್ ಅವರ ಈ ಬಾರಿಯ ಹುಟ್ಟುಹಬ್ಬ ಎಂದಿಗಿಂತ ಸ್ಪೆಷಲ್ ಆಗಿತ್ತೆಂದರೆ ತಪ್ಪಲ್ಲ. ಅವರ ನಟನೆಯ ಸಿನಿಮಾಗಳ ಟೀಸರ್, ಟ್ರೇಲರ್, ಫಸ್ಟ್‌ಲುಕ್‌ಗಳು ಬಿಡುಗಡೆಯಾಗುವ ಮೂಲಕ ಪ್ರಜ್ವಲ್ ಮುಖದಲ್ಲಿ ನಗುಮೂಡಿದೆ. ಹಾಗೆ ಟೀಸರ್ ಬಿಡುಗಡೆ ಮಾಡಿದ ಪ್ರಜ್ವಲ್ ಸಿನಿಮಾದಲ್ಲಿ ‘ಜಂಟಲ್ಮ್ಯಾನ್’ ಕೂಡಾ ಒಂದು. ಈ ಸಿನಿಮಾದ ಹೆಸರನ್ನು ನೀವು ಕೇಳಿರಬಹುದು. ಈಗ ಆ ಚಿತ್ರ ಬಹುತೇಕ ಮುಗಿದಿದ್ದು, ಬಿಡುಗಡೆಯ ಹಂತಕ್ಕೆ ಬಂದಿದೆ. ನಿರ್ದೇಶಕ ಗುರುದೇಶಪಾಂಡೆ ತಮ್ಮ ಬ್ಯಾನರ್‌ನಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಹಾಗಂತ ನಿರ್ದೇಶನದ ಜವಾಬ್ದಾರಿಯನ್ನು ಜಡೇಶ್ ಅವರಿಗೆ ನೀಡಿದ್ದಾರೆ. ಈ ಹಿಂದೆ ‘ರಾಜಹಂಸ’ ಸಿನಿಮಾ ನಿರ್ದೇಶಿಸಿದ್ದ ಜಡೇಶ್ ಅವರಿಗೆ ಇದು ಎರಡನೇ ಸಿನಿಮಾ.
ಎಲ್ಲಾ ಓಕೆ, ಈ ಚಿತ್ರದ ಕಾನ್ಸೆಪ್ಟ್ ಏನು ಎಂದು ನೀವು ಕೇಳಬಹುದು. ಈ ಬಗ್ಗೆ ಮಾತನಾಡುವ ನಿರ್ದೇಶಕ ಜಡೇಶ್, ‘ಇದು ಸ್ಲಿಪಿಂಗ್ ಬ್ಯೂಟಿ ಸಿಂಡ್ರೋ ಎಂಬ ಅಂಶದೊಂದಿಗೆ ಸಾಗುವ ಸಿನಿಮಾ. ನಾಯಕನಿಗೆ ನಿದ್ರೆ ಮಾಡೋದೇ ಒಂದು ಕಾಯಿಲೆ. ಬೇರೆಯವರು ದಿನದ 18 ಗಂಟೆ ಎದ್ದಿದ್ದರೆ, ಈತ 18 ಗಂಟೆ ಮಲಗಿರುತ್ತಾನೆ. ಮಿಕ್ಕ ಆರು ಗಂಟೆಗಳಲ್ಲಿ ತನ್ನ ಕೆಲಸ ಮಾಡುತ್ತಾನೆ .. ಈ ತರಹ ಸಾಗುವ ಕಥೆಯಲ್ಲಿ ಲವ್, ಸೆಂಟಿಮೆಂಟ್, ಆ್ಯಕ್ಷನ್ ಎಲ್ಲವೂ ಇದೆ. ಈ ಚಿತ್ರಕ್ಕೆ ಪ್ರಜ್ವಲ್ ನೀಡಿದ ಸಹಕಾರವನ್ನು ಮರೆಯುವಂತಿಲ್ಲ. ಮೈಸೂರಿನ ಕಸದ ರಾಶಿಯಲ್ಲಿ ಚಿತ್ರೀಕರಣ ಮಾಡಬೇಕಿತ್ತು. ಪ್ರಜ್ವಲ್ ಅದಕ್ಕೂ ಒಪ್ಪಿ ಚಿತ್ರೀಕರಣದಲ್ಲಿ ಭಾಗಿಯಾದರು’ ಎನ್ನುತ್ತಲೇ ನಿರ್ಮಾಪಕ ಗುರುದೇಶಪಾಂಡೆ ನೀಡಿದ ಅವಕಾಶಕ್ಕೆ ಥ್ಯಾಂಕ್ಸ್ ಹೇಳಿದರು.
ನಿರ್ಮಾಪಕ ಗುರುದೇಶಪಾಂಡೆ ಹಾಗೂ ಪ್ರಜ್ವಲ್ ಈ ಹಿಂದೆಯೇ ಸಿನಿಮಾವೊಂದನ್ನ ಮಾಡಬೇಕಿತ್ತು. ಆದರೆ, ಕಾರಣಾಂತರಗಳಿಂದ ಅದು ಆಗಲಿಲ್ಲ. ಅದೊಂದು ದಿನ ಗುರುದೇಶಪಾಂಡೆ, ಪ್ರಜ್ವಲ್ ಮನೆಗೆ ಹೋಗಿದ್ದಾಗ ಅವರ ಅಮ್ಮ, ‘ಪೇಪರ್‌ನಲ್ಲಿ ಜಾಹೀರಾತನ್ನಷ್ಟೇ ನೋಡುತ್ತಿದ್ದೇನೆ, ಸಿನಿಮಾ ಯಾವಾಗ ಮಾಡುತ್ತೀರಿ’ ಎಂದು ನಗುತ್ತಾ ಕೇಳಿದರಂತೆ. ಅದರ ಬೆನ್ನಲ್ಲೇ ಗುರುದೇಶಪಾಂಡೆ ಆರಂಭಿಸಿದ್ದು ‘ಜಂಟಲ್ಮ್ಯಾನ್’. ಜಡೇಶ್ ಅವರು ಹೇಳಿದ ಕಥೆ ಇಷ್ಟವಾಗಿ ಆ ಕಥೆಯನ್ನೇ ಆಯ್ಕೆ ಮಾಡಿದ್ದಾಗಿ ಹೇಳಿದರು ಗುರುದೇಶಪಾಂಡೆ.
ನಾಯಕ ಪ್ರಜ್ವಲ್ ದೇವರಾಜ್‌ಗೆ ಒಂದು ಒಳ್ಳೆಯ ಸಿನಿಮಾದಲ್ಲಿ ನಟಿಸಿದ ಖುಷಿ ಇದೆಯಂತೆ. ‘ಅನೇಕ ಕಥೆಗಳನ್ನು ಕೇಳುತ್ತಿರುತ್ತೇನೆ. ಹಾಗೆ ಈ ಕಥೆಯನ್ನು ಕೇಳಿದೆ. ಕೇಳಿದ ಕೂಡಲೇ ಇದರಲ್ಲಿ ಹೊಸತನವಿದೆ ಎನಿಸಿ ಮಾಡಲು ಒಪ್ಪಿಕೊಂಡೆ’ ಎನ್ನುವುದು ಪ್ರಜ್ವಲ್ ಮಾತು. ನಾಯಕಿ ನಿಶ್ವಿಕಾ ನಾಯ್ಡು ಕೂಡಾ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಚಿತ್ರದ ಸಾಹಸ ನಿರ್ದೇಶಕರಾದ ವಿನೋದ್ ಹಾಗೂ ಡಿಫರೆಂಟ್ ಡ್ಯಾನಿ ಫೈಟ್ ಚೆನ್ನಾಗಿ ಮೂಡಿಬಂದ ಬಗ್ಗೆ ಸಂತಸ ವ್ಯಕ್ತಪಡಿಸಿದರು.
•ರವಿ ರೈ