Advertisement

ವಂಶಾಡಳಿತಕ್ಕೆ ಸರ್ಕಾರದ ನಿರ್ಮಿತಿ ಕೇಂದ್ರದ ಸಮ್ಮತಿ!

03:24 PM Mar 29, 2019 | pallavi |
ಸಾಗರ: ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿಯೇ ಲೋಕಸಭಾ ಚುನಾವಣೆಗಳು ನಡೆಯುತ್ತಿದ್ದರೂ ಕುಟುಂಬ ರಾಜಕಾರಣದ ಅಬ್ಬರದಲ್ಲಿ ಮತದಾರ ಗೊಂದಲಕ್ಕೊಳಗಾಗುವ ಪರಿಸ್ಥಿತಿಯಿರುವಾಗ ಸರ್ಕಾರದ ಭಾಗವಾದ ನಿರ್ಮಿತಿ ಕೇಂದ್ರದ ಅಧಿಕಾರಿಗಳು ವಂಶಾಡಳಿತಕ್ಕೆ ಅಧಿಕೃತತೆ ಒತ್ತಿಬಿಟ್ಟಿರುವ ವಿಶಿಷ್ಟ ಉದಾಹರಣೆ ಸಾಗರ ತಾಲೂಕಿನಲ್ಲಿ ಲಭ್ಯವಾಗಿದೆ.
 ಶ್ರೀಧರ ಸ್ವಾಮೀಜಿಯವರ ಪುಣ್ಯಕ್ಷೇತ್ರ ವರದಪುರದಲ್ಲಿ ಶಿವಮೊಗ್ಗದ ನಿರ್ಮಿತಿ ಕೇಂದ್ರ ಸಂಸತ್‌ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಿಸಿರುವ ಬಸ್‌ ಪ್ರಯಾಣಿಕರ ತಂಗುದಾಣದಲ್ಲಿ ಅಳವಡಿಸಿರುವ ಪ್ರಚಾರದ ಫ್ಲೆಕ್ಸ್‌ನಲ್ಲಿ ಅವತ್ತಿನ ಸಂಸದ ಬಿ.ಎಸ್‌. ಯಡಿಯೂರಪ್ಪ ಅವರ ಭಾವಚಿತ್ರದ ಜೊತೆ,
ತಂಗುದಾಣವನ್ನು ನಿರ್ಮಿಸಿದ ನಂತರದ ದಿನಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ ವಿಜೇತರಾದ ಯಡಿಯೂರಪ್ಪ ಪುತ್ರ ರಾಘವೇಂದ್ರರ ಫೋಟೋ ಕೂಡ ಸಾಥ್‌ ನೀಡಿದೆ!
ನಿರ್ಮಿತಿಗೆ ಭವಿಷ್ಯ ಗೊತ್ತು!: 2017-18ನೇ ಸಾಲಿನ ಸಂಸದರ ನಿ ಯಡಿ ಶಿವಮೊಗ್ಗ ಕ್ಷೇತ್ರದ ಎಂಪಿ ಯಡಿಯೂರಪ್ಪ ಪಾಲಿನ ಮೂರು ಲಕ್ಷ ರೂ. ಬಳಸಿ ಈ ನಿಲ್ದಾಣ ನಿರ್ಮಿಸಲಾಗಿದೆ. 2018ರ ಜೂನ್‌ 22ಕ್ಕೆ ಆರಂಭವಾದ ಕಾಮಗಾರಿ ಜು. 20ಕ್ಕೆ ಪೂರ್ಣಗೊಂಡಿದೆ ಎಂದು ನಿರ್ಮಿತಿ ಕೇಂದ್ರವೇ ಅಧಿಕೃತವಾದ ಫಲಕ ಹಾಕಿದೆ.
ಯಡಿಯೂರಪ್ಪ ಅವರ ರಾಜೀನಾಮೆಯಿಂದ ತೆರವಾಗಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿಯ ಬಿ.ವೈ. ರಾಘವೇಂದ್ರ ಗೆಲುವು ಸಾ ಧಿಸಿದ್ದು 2018ರ ನ. 6ರಂದು!
ನಿರ್ಮಾಣ ಪೂರ್ಣಗೊಂಡ ಬಸ್‌ ನಿಲ್ದಾಣದ ಫಲಕ ಹಾಕುವಾಗ ಯಡಿಯೂರಪ್ಪ ಅವರಿಂದ ತೆರವು ಆದ ಸ್ಥಾನಕ್ಕೆ ಅವರ ಮಗ ಬಿ.ವೈ. ರಾಘವೇಂದ್ರ ನಿಲ್ಲುತ್ತಾರೆ ಮತ್ತು ಅವರು ಗೆಲ್ಲುತ್ತಾರೆ ಎಂಬ ಬಗ್ಗೆ ನಿರ್ಮಿತಿ ಕೇಂದ್ರಕ್ಕೆ ಕನಸು ಬಿದ್ದಿತ್ತೇ ಎಂಬ ಪ್ರಶ್ನೆ ಮೂಡುತ್ತದೆ.
ವಂಶಾಡಳಿತದ ಹಿನ್ನೆಲೆಯಲ್ಲಿ ಸಂಸದರ ನಿರ್ದಿಷ್ಟ ವರ್ಷದ ಅನುದಾನವನ್ನು ಬಳಸಿ ನಿರ್ಮಿಸಿರುವ ಬಸ್‌ ನಿಲ್ದಾಣದಲ್ಲಿ ಇಬ್ಬರು ಸಂಸದರ ಫೋಟೋ
ಹಾಕುವುದು ಕಾನೂನು ಸಮ್ಮತವೇ ಹಾಗೂ ಒಂದೊಮ್ಮೆ, ವಿಭಿನ್ನ ಪಕ್ಷಗಳವರು ಸಂಸದರಾಗಿ ಆಯ್ಕೆ ಆಗಿದ್ದರೆ ವಿವಾದಗಳಾಗುತ್ತಿರಲಿಲ್ಲವೇ ಎಂಬ ಪ್ರಶ್ನೆಯನ್ನು ವರದಪುರಕ್ಕೆ ಭೇಟಿ ನೀಡುವವರು ಕೇಳುತ್ತಿದ್ದಾರೆ.
ಈ ಕುರಿತು ಪತ್ರಿಕೆಯ ಗಮನ ಸೆಳೆದ ಚಿತ್ರದುರ್ಗದ ಸೂರ್ಯಪ್ರಕಾಶ್‌, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಅವತ್ತಿನ ಸಂಸದ ಬಿ.ಎಸ್‌ .ಯಡಿಯೂರಪ್ಪ ಅವರ ಸಂಸತ್‌ ನಿಧಿಯಲ್ಲಿ ನಿರ್ಮಾಣವಾದ ಎಲ್ಲ ಬಸ್‌ ಪ್ರಯಾಣಿಕರ ತಂಗುದಾಣಗಳಲ್ಲಿ ಇದೇ ರೀತಿಯ ಫಲಕಗಳನ್ನು ಅಳವಡಿಸಿರುವ ಸಾಧ್ಯತೆಯಿದೆ. ಇದು ಸ್ಪಷ್ಟವಾಗಿ ಕಾನೂನಿನ ಉಲ್ಲಂಘನೆ. ಕಾರಣಕರ್ತರಾದ ಶಿವಮೊಗ್ಗ ನಿರ್ಮಿತಿ ಕೇಂದ್ರದ ಅಧಿಕಾರಿಗಳ ವಿರುದ್ಧ ಸರ್ಕಾರ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸುತ್ತಾರೆ.
ನೀತಿ ಸಂಹಿತೆಯೂ ಚೂರು ಚೂರು!
ಚುನಾವಣಾ ನೀತಿ ಸಂಹಿತೆಯ ಪ್ರಕಾರ, ಬಸ್‌ ನಿಲ್ದಾಣದ ಮೇಲಿನ ರಾಜಕಾರಣಿಗಳ ಹೆಸರು, ಫೋಟೋಗಳನ್ನು ಮರೆಮಾಚಬೇಕಾಗುತ್ತದೆ. ಆದರೆ
ವರದಪುರದ ಈ ಬಸ್‌ ನಿಲ್ದಾಣದಲ್ಲಿನ ಫಲಕದಲ್ಲಿನ ಹೆಸರನ್ನು ಪತ್ರಿಕೆಯನ್ನು ಹಚ್ಚಿ ಮಾಯ ಮಾಡಿದಂತೆ ಕಾಣುತ್ತದೆಯಾದರೂ ನಿಲ್ದಾಣದ
ಬೆನ್ನಿಗಿರುವ ಫಲಕದಲ್ಲಿ ಮೋದಿ ಸರ್ಕಾರದ ಸಾಧನೆ, ಯಡಿಯೂರಪ್ಪ ಹಾಗೂ ರಾಘವೇಂದ್ರರ ಫೋಟೋ ಬಿಜೆಪಿಯ ಪೋಸ್ಟರ್‌ನಂತೆ ಕಾಣಿಸುತ್ತಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಚುನಾವಣೆ ಘೋಷಣೆ ದಿನ ಪೇಪರ್‌ ಬಳಸಿ ಮರೆಮಾಚುವ ಕೆಲಸ ಮಾಡಲಾಗಿದ್ದರೂ 24 ಗಂಟೆಗಳಲ್ಲಿ ಅದನ್ನು
ತೆಗೆದುಹಾಕಲಾಗಿತ್ತು.
Advertisement

Udayavani is now on Telegram. Click here to join our channel and stay updated with the latest news.

Next