Advertisement

ಚಿಟಗುಪ್ಪಿ ಆಸ್ಪತ್ರೆಯಲ್ಲಿ ಜೆನರಿಕ್‌ ಔಷಧ ಕೇಂದ್ರ

12:48 PM Oct 25, 2019 | Suhan S |

ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಇನ್ನೊಂದು ತಿಂಗಳಲ್ಲಿ ಜನೌಷಧಿ ಕೇಂದ್ರ (ಜೆನರಿಕ್‌ ಮೆಡಿಸಿನ್‌ ಸೆಂಟರ್‌) ಆರಂಭಗೊಳ್ಳಲಿದೆ. ಬಹುದಿನಗಳ ಬಡಜನರ ಬೇಡಿಕೆ ಈಡೇರಿದ್ದು, ಆಸ್ಪತ್ರೆ ಆವರಣದಲ್ಲಿ ವೈದ್ಯಾಧಿಕಾರಿಗಳ ಕಟ್ಟಡದಲ್ಲಿ ಜನೌಷಧಿ ಕೇಂದ್ರ ಕಾರ್ಯಾರಂಭ ಮಾಡಲಿದೆ.

Advertisement

ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ಬಡಜನರಿಗೆ ಇದರಿಂದ ಅನುಕೂಲವಾಗಲಿದೆ. ಕಡಿಮೆ ಹಣದಲ್ಲಿ ಆಸ್ಪತ್ರೆಯ ಆವರಣದಲ್ಲಿಯೇ ಔಷಧಿಗಳು ಲಭ್ಯವಾಗಲಿವೆ. ಜನೌಷಧಿಯ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ಪಾಲಿಕೆ ಜಾಗದ ವ್ಯವಸ್ಥೆ ಮಾಡಿಕೊಟ್ಟರೆ ಟೆಂಡರ್‌ ಪಡೆದುಕೊಂಡವರು ಜನೌಷಧಿ ಕೇಂದ್ರ ಆರಂಭಿಸುವರು.

ಕಿಮ್ಸ್‌ ಆವರಣದಲ್ಲಿ ಜನೌಷಧಿ ಕೇಂದ್ರದಿಂದ ಪ್ರತಿದಿನ ಬರುವ ಸಾವಿರಾರು ರೋಗಿಗಳಿಗೆ ಪ್ರಯೋಜನವಾಗಿದ್ದರಿಂದ ಚಿಟಗುಪ್ಪಿ ಆಸ್ಪತ್ರೆ ಆವರಣದಲ್ಲಿ ಕೂಡ ಜೆನರಿಕ್‌ ಮೆಡಿಸಿನ್‌ ಸೆಂಟರ್‌ ಆರಂಭಿಸಿ ಅನುಕೂಲತೆ ಕಲ್ಪಿಸಬೇಕೆಂಬುದು ಹಲವು ಜನರ ಬಯಕೆಯಾಗಿತ್ತು. ಹತ್ತಿರದಲ್ಲಿ ಯಾವುದೇ ಔಷಧಾಲಯಗಳು ಇರಲಿಲ್ಲ. ಲ್ಯಾಮಿಂಗ್ಟನ್‌ ರಸ್ತೆ ದಾಟಿ ಹೋಗಬೇಕಿತ್ತು. ಜನೌಷಧಿ ಕೇಂದ್ರಕ್ಕಾಗಿ ಕೋರ್ಟ್‌ ವೃತ್ತ ಇಲ್ಲವೇ ಕೇಶ್ವಾಪುರಕ್ಕೆ ಹೋಗಬೇಕಿತ್ತು. ಚಿಟಗುಪ್ಪಿ ಆಸ್ಪತ್ರೆಗೆ ಪ್ರತಿ ದಿನ ಸುಮಾರು 250ರಿಂದ 300 ಹೊರರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಾರೆ. ಪ್ರತಿ ದಿನ 5-6 ಹೆರಿಗೆಗಳು ನಡೆಯುತ್ತವೆ. ಅಲ್ಲದೇ 150-200 ಟ್ಯುಬೆಕ್ಟಮಿ ಶಸ್ತ್ರಚಿಕಿತ್ಸೆಗಳು ಜರುಗುತ್ತವೆ.

ಅಲ್ಲದೇ ಗುರುವಾರ ಇಲ್ಲಿ ಗರ್ಭಿಣಿಯರಿಗೆ, ಬಾಣಂತಿಯರಿಗೆ ಲಸಿಕೆ ಹಾಕುವುದರಿಂದ 300ಕ್ಕೂ ಹೆಚ್ಚು ಮಹಿಳೆಯರು ಇಲ್ಲಿಗೆ ಬರುತ್ತಾರೆ. ಕಿಮ್ಸ್‌ನಲ್ಲಿ ಜನಸಂದಣಿ ಹೆಚ್ಚಾಗಿದ್ದರಿಂದ ನಗರದ ವಿವಿಧ ಬಡಾವಣೆಗಳ ಜನರು ಚಿಟಗುಪ್ಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಅದರಲ್ಲೂ ಹೆರಿಗೆ ಮಾಡಿಸಿಕೊಳ್ಳುವವರು ಇಲ್ಲಿಗೆ ಹೆಚ್ಚಾಗಿ ಆಗಮಿಸುತ್ತಾರೆ. ಹಲವು ಕಾರಣಗಳಿಂದಾಗಿ ಜನೌಷಧಿ ಕೇಂದ್ರ ಆರಂಭ ಕಾರ್ಯ ವಿಳಂಬವಾಗಿತ್ತು. ಪಾಲಿಕೆ ಸದಸ್ಯರು ಇದಕ್ಕೆ ಸಮ್ಮತಿ ಸೂಚಿಸಿದ್ದರೂ ಕೂಡ ಜಾಗದ ಕಾರಣದಿಂದಾಗಿ ಔಷಧಿ ಕೇಂದ್ರ ಶುರುವಾಗಿರಲಿಲ್ಲ.

ಚಿಟಗುಪ್ಪಿ ಉದ್ಯಾನದಲ್ಲಿ ಕೇಂದ್ರ ಮಾಡುವ ಕುರಿತು ಚಿಂತನೆ ನಡೆದಿತ್ತು. ಆದರೆ ಅನುದಾನದ ಕೊರತೆಯಿಂದಾಗಿ ಮತ್ತೆ ವಿಳಂಬವಾಯಿತು. ಜನೌಷಧಿ ಕೇಂದ್ರ ಚಿಟಗುಪ್ಪಿ ಆಸ್ಪತ್ರೆ ಆವರಣದಲ್ಲಿ ಆರಂಭವಾಗುವುದರಿಂದ ಔಷಧಿಗಳು ಕಡಿಮೆ ಬೆಲೆಗೆ ಸಿಗಲಿವೆ. ಇದರಿಂದ ಮಧುಮೇಹ, ಹೃದಯ ಸಮಸ್ಯೆ, ರಕ್ತದೊತ್ತಡದಂಥ ಸಮಸ್ಯೆಯುಳ್ಳವರು, ಪ್ರತಿನಿತ್ಯ ಮಾತ್ರೆ ತೆಗೆದುಕೊಳ್ಳುವವರಿಗೆ ಹೆಚ್ಚು ಅನುಕೂಲವಾಗುವುದು. ಅವರ ತಿಂಗಳ ಔಷಧ ಖರ್ಚು ಕಡಿಮೆಯಾಗಲಿದೆ.

Advertisement

ಜನೌಷಧಿ ಕೇಂದ್ರವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿಕೊಂಡುಹೋಗುವುದು ಅವಶ್ಯಕವಾಗಿದೆ. ಆಸ್ಪತ್ರೆಗೆ ಹೆಚ್ಚಾಗಿ ಬರುವ ರೋಗಿಗಳು, ಇಲ್ಲಿನ ವೈದ್ಯರುಬರೆದುಕೊಡುವ ಮಾತ್ರೆಗಳ ಸಮರ್ಪಕ ಲಭ್ಯತೆ ಕೂಡ ಅವಶ್ಯಕವಾಗಿದೆ. ಆಗ ಮಾತ್ರ ಕೇಂದ್ರ ಆರಂಭಿಸಿದ ಉದ್ದೇಶ ಈಡೇರಲಿದೆ.

ಜೆನರಿಕ್‌ ಔಷಧ ಕೇಂದ್ರಗಳನ್ನು ಸರಕಾರಿ ಆಸ್ಪತ್ರೆಗಳಲ್ಲಿ ಆರಂಭಿಸಬೇಕೇ ಹೊರತು ಗೋಕುಲ ರಸ್ತೆ, ಕೇಶ್ವಾಪುರದಲ್ಲಿ ಮಾಡಿದರೆ ಇದರ ಪ್ರಯೋಜನ ಹೆಚ್ಚಿನ ಜನರಿಗೆ ತಲುಪುವುದಿಲ್ಲ. ದಿನಕ್ಕೆ 10-15 ಸಾವಿರ ರೂ. ನೀಡಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವವರು ಔಷಧದಲ್ಲಿ ಹಣ ಉಳಿಸಲು ಬಯಸುವುದಿಲ್ಲ. ಚಿಟಗುಪ್ಪಿ ಆಸ್ಪತ್ರೆಯಲ್ಲಿ ಜೆನರಿಕ್‌ ಸೆಂಟರ್‌ ಆರಂಭಿಸಲು ನಿರ್ಧರಿಸಿರುವುದು ಶ್ಲಾಘನೀಯ. ಇದರಿಂದ ಜೆನರಿಕ್‌ ಕೇಂದ್ರ ಆರಂಭಿಸಿದ ಉದ್ದೇಶ ಈಡೇರುತ್ತದೆ.-ಡಾ| ಪಾಂಡುರಂಗ ಪಾಟೀಲ, ಮಾಜಿ ಮಹಾಪೌರ

 

-ವಿಶ್ವನಾಥ ಕೋಟಿ

Advertisement

Udayavani is now on Telegram. Click here to join our channel and stay updated with the latest news.

Next