Advertisement

ನಿಗೂಢ ಜನಾಂಗದ ಮಹಿಳೆಯ 7,200 ವರ್ಷಗಳ ಹಿಂದಿನ ಅಸ್ಥಿಪಂಜರದ “ಮಿಸ್ಸಿಂಗ್ ಲಿಂಕ್”

10:16 AM Aug 28, 2021 | Team Udayavani |

ಜಕಾರ್ತಾ: ಇಂಡೋನೇಷ್ಯಾದ ಸುಲಾವೆಸಿ ದ್ವೀಪದ ದಕ್ಷಿಣ ಭಾಗದಲ್ಲಿರುವ ಲಿಯಾಂಗ್‌ ಪೆನಿಂಗೆ ಎಂಬ ಸುಣ್ಣದ ಕಲ್ಲಿನ ಗುಹೆಯೊಂದರಲ್ಲಿ ಇಂಡೋನೇಷ್ಯಾದ ಹಸಾನುದ್ದೀನ್‌ ವಿಶ್ವ ವಿದ್ಯಾಲಯದ ಸಂಶೋಧಕರಿಗೆ 2015ರಲ್ಲಿ ಸಿಕ್ಕಿದ್ದ ಪ್ರಾಚೀನ ಮಹಿಳೆಯ ಅಸ್ಥಿಪಂಜರ, ಏಳು ಸಾವಿರ ವರ್ಷಗಳಷ್ಟು ಹಳೆಯದ್ದು ಎಂಬ ವಿಚಾರ ಬೆಳಕಿಗೆ ಬಂದಿದೆ.

Advertisement

ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಪುರಾತನ ಅಸ್ಥಿಪಂಜರ ಮೂಳೆಯಲ್ಲಿ ಡಿಎನ್‌ಎ ಪತ್ತೆಯಾಗಿದ್ದು, ಅದರ ಬೆನ್ನಟ್ಟಿದ್ದ ಸಂಶೋಧಕರು ಈ ಮಹಿಳೆಯು, ಇಂಡೋನೇಷ್ಯಾದಲ್ಲಿ 7,200 ವರ್ಷಗಳ ಹಿಂದೆ ಇದ್ದ, ಈವರೆಗೆ ಬೆಳಕಿಗೆ ಬಾರದ ಅಜ್ಞಾತ ಜನಾಂಗವೊಂದಕ್ಕೆ ಸೇರಿದವಳು ಎಂಬ ಹೊಸ ವಿಚಾರವನ್ನುಕಂಡುಕೊಂಡಿದ್ದಾರೆ.

ಆರಂಭದಲ್ಲಿ ಈಕೆಗೆ ಬರ್ಸೆಕ್‌ ಎಂದು ಹೆಸರಿಟ್ಟು ಸಂಶೋಧನೆ ಆರಂಭಿಸಲಾಗಿತ್ತು. ಈಕೆ ಸತ್ತಾಗ 17-18 ವರ್ಷದವಳಾಗಿದ್ದಳು‌ ಎಂದು ಸಂಶೋಧಕರು ತಿಳಿಸಿದ್ದರರು. ಆನಂತರದ ಅಸ್ಥಿಪಂಜರದ ಕಿವಿಯ ಮೂಳೆಯಲ್ಲಿ ಸಿಕ್ಕ ಡಿಎನ್‌ಎ, ಸಂಶೋಧನೆಯ ದಿಕ್ಕನ್ನು ಬದಲಿಸಿತು.

ಉತ್ತರಾರ್ಧ ಸ್ಪಷ್ಟ; ಪೂರ್ವಾರ್ಧ ನಿಗೂಢ!: ಡಿಎನ್‌ಎ ಜಾಡು ಹಿಡಿದ ತಜ್ಞರಿಗೆ, ಈಕೆ ಇಂಡೋನೇಷ್ಯಾದ ದ್ವೀಪ ಸಮೂಹಗಳಲ್ಲಿ, ವಿಶೇಷವಾಗಿ ಬೋರ್ನಿಯೊ ಹಾಗೂ ಸುಲಾವೆಸಿ ದ್ವೀಪದ ನಡುವೆ ಇರುವ ಹಲವು ಸಣ್ಣ ದ್ವೀಪಗಳಲ್ಲಿ ಬೇಟೆಯಾಡಿ ಜೀವಿಸುತ್ತಿದ್ದ ಟೊವಾಲಿಯನ್‌ ಜನಾಂಗಕ್ಕೆ ಸೇರಿದವಳೆಂಬುದು ತಿಳಿದುಬಂತು. ಈಕೆಯ “ಡಿಎನ್‌ಎ’ ನಲ್ಲಿರುವ ಅರ್ಧದಷ್ಟು ಅಂಶಗಳು ಈಗಿರುವ “ಆಸ್ಟ್ರೇಲಿಯಾ’ ದಿಂದ “ನ್ಯೂ ಗಿನಿಯಾ’ ದೇಶದವರೆಗಿನ ಭೂಭಾಗದಲ್ಲಿ ಈಗಲೂ ಜೀವಿಸುತ್ತಿರುವವರ ಡಿಎನ್‌ಎಗೆ ಹೋಲುವುದೂ ತಿಳಿದುಬಂತು.

ಆದರೆ, ಡಿಎನ್‌ಎಯ ಉಳಿದರ್ಧ ಅಂಶ ನಿಗೂಢ ಜನಾಂಗವೊಂದರ ಗುರುತನ್ನು ಹೇಳುತ್ತಿದೆ ಎಂದು ಸಂಶೋಧಕರು ಹೇಳುತ್ತಿದ್ದಾರೆ. ಆ ಜನಾಂಗ, ಇಂಡೋನೇಷ್ಯಾದಲ್ಲಿ 3,500 ವರ್ಷಗಳಿಗೂ ಹಿಂದಿದ್ದ “ನಿಯೋಲಿಥಿಕ್‌ ಮಾನವ’ (ಆಸ್ಟ್ರೋನಿಷಿಯನ್ಸ್‌) ಜನಾಂಗಕ್ಕಿಂತ ಹಿಂದೆ ಇದ್ದವ ‌ರು. ಆ ಜನಾಂಗದ ಬಗ್ಗೆ ಎಲ್ಲೂ ಯಾವುದೇ ಸಾಕ್ಷಿ, ಮಾಹಿತಿಯಿಲ್ಲ. ಹಾಗಾಗಿ, ಈಕೆಯ ಮೂಲದ ಹುಡುಕಾಟ “ಮಿಸ್ಸಿಂಗ್‌ ಲಿಂಕ್‌’ ಆಗಿ ಉಳಿದಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

Advertisement

ಮುಂದೇನು?
ಆ ಅಜ್ಞಾತ ಜನಾಂಗದವರ ಅಸ್ಥಿಪಂಜರ ಎಲ್ಲಾದರೂ ಸಿಕ್ಕರೆ ಬಹುಶಃ ಅದರಿಂದ , ಹೊಸ ಅನ್ವೇಷಣೆಗೆ ದಾರಿ ಸಿಗಬಹುದು ಎಂದು ಸಂಶೋಧಕರು ನಿರೀಕ್ಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next