Advertisement
ಯಾವುದು ಜೆನೆರಿಕ್ ಔಷಧಿಗಳು?ಸರಳವಾಗಿ ತಿಳಿಸುವುದಾದರೆ ಜೆನೆರಿಕ್ ಔಷಧಿಗಳೆಂದರೆ ಸಮಾನ ಗುಣಮಟ್ಟದ, ಅದೇ ವೈದ್ಯಶಾಸ್ತ್ರೀಯ ಮೌಲ್ಯವುಳ್ಳ ಬ್ರಾಂಡ್ ರಹಿತ (ಅನ್ ಬ್ರಾಂಡೆಡ್) ಔಷಧಿಗಳು. ಅವು ವಿಶೇಷ ಔಷಧಿಗಳಲ್ಲ, ಜೆನೆರಿಕ್ ಹೆಸರುಳ್ಳ, ಅತಿ ಕಡಿಮೆ ಬೆಲೆಗೆ ದೊರಕುವ ಅನ್‌ಬ್ರಾಂಡೆಡ್ ಔಷಧಿಗಳು. ಔಷಧಿ ಕಂಪೆನಿಗಳು ಔಷಧಿಗಳ ಸಂಶೋಧನೆಗಾಗಿ ಅಪಾರ ಹಣವನ್ನು ವಿನಿಯೋಗಿಸುತ್ತವೆ. ಸಂಶೋಧನೆಯ ಬಳಿಕವೂ ಔಷಧಿಗಳ ವೈದ್ಯಶಾಸ್ತ್ರೀಯ ಮೌಲ್ಯ, ರೋಗ ಉಪಶಮನದಲ್ಲಿ ಅದರ ಪರಿಣಾಮವನ್ನು ನಿರ್ಧರಿಸುವಲ್ಲೂ ಹಣ ಖರ್ಚುಮಾಡುತ್ತವೆ. ಅದರ ಸಮಗ್ರ ಪ್ರಕ್ರಿಯೆಗೆ ತುಂಬಾ ಸಮಯವೂ ಬೇಕು. ಇನ್ನೂ ಹೆಚ್ಚಿನ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಕಂಪೆನಿಗಳು ಈ ಎಲ್ಲಾ ವೆಚ್ಚವನ್ನು ವಸೂಲುಮಾಡಬೇಕು. ಆದ್ದರಿಂದ ಶೋಧಿಸಲ್ಪಟ್ಟ ಔಷಧಿಗಳ ಮೇಲೆ ಪೇಟೆಂಟನ್ನು ಹೊಂದಿರುತ್ತವೆ. ಅದೇ ಫಾರ್ಮುಲವನ್ನು ಬಳಸಿ ಔಷಧಿಯನ್ನು ಬೇರೆ ಕಂಪೆನಿಗಳು ಉತ್ಪಾದಿಸುವಂತಿಲ್ಲ. ಪೇಟೆಂಟ್ ಅವಧಿ ಮುಗಿದ ಬಳಿಕ ಅದೇ ಔಷಧಿಯನ್ನು ಬೇರೆ ಕಂಪೆನಿಗಳು ಉತ್ಪಾದಿಸಬಹುದು. ಈ ಔಷಧಿಗಳು ಲೈಸೆನ್ಸ್ ದೊರೆತ ಬಳಿಕ ಅದರ ಜೆನೆರಿಕ್ ಹೆಸರಿನಲ್ಲೇ ಉತ್ಪಾದಿಸಲ್ಪಡಬೇಕು ಮತ್ತು ವೈದ್ಯ ಶಾಸ್ತ್ರೀಯ ಮೌಲ್ಯವನ್ನು ದೃಢೀಕರಿಸಬೇಕು. ಇಂತಹ ಔಷಧಿಗಳೇ ಜೆನೆರಿಕ್ ಔಷಧಿಗಳು. ಇವುಗಳು ಜನೌಷಧಿ ಮಳಿಗೆಗಳಲ್ಲಿ ದೊರಕುತ್ತವೆ.
ಯಾವುದೇ ವಸ್ತುವೊಂದು ಅತಿ ಅಗ್ಗದ ಬೆಲೆಗೆ ದೊರಕುವಾಗ ಅದು ಕಳಪೆ ಗುಣಮಟ್ಟದ್ದು ಎಂಬ ಭಾವನೆ ಜನಸಾಮಾನ್ಯರಿಗಿದೆ. ಆದರೆ ಜೆನೆರಿಕ್ ಔಷಧಿಗಳು ಹಾಗಲ್ಲ. ಜೆನೆರಿಕ್ ಮತ್ತು ಬ್ರಾಂಡೆಡ್ ಔಷಧಿಗಳ ಸತ್ವ ಸಮಾನವಾದುದು. ಅದರ ವೈದ್ಯಶಾಸ್ತ್ರೀಯ ಮೌಲ್ಯಗಳೂ ಸಮವಾಗಿವೆ. ಬಣ್ಣದ ಅಂಶಗಳು, ತುಂಬಲು ಬಳಸುವ ಸಾಧನಗಳು, ರುಚಿ ಇತ್ಯಾದಿಗಳು ಭಿನ್ನವಾಗಿದ್ದರೂ ಅದರ ವೈದ್ಯಶಾಸ್ತ್ರೀಯ ಮೌಲ್ಯಕ್ಕೆ ಹಾನಿಯಿಲ್ಲ. ಜನೌಷಧಿ ಮಳಿಗೆಗಳಲ್ಲಿ ದೊರಕುವ ಮೊದಲು ಔಷಧಿಗಳು ಅದರ ಪರಿಣಾಮ, ಗುಣಮಟ್ಟ ಮತ್ತು ಸುರಕ್ಷತೆ ಬಗ್ಗೆ, ನ್ಯಾಷನಲ್ ಎಕ್ರಿಡಿಟೇಶನ್ ಬೋರ್ಡ್ ಫಾರ್ ಟೆಸ್ಟಿಂಗ್ ಆಂಡ್ ಕ್ಯಾಲಿಬ್ರೇಶನ್ ಲಾಬ್‌ನಲ್ಲಿ ವ್ಯಾಪಕ, ಕಠಿಣ ಪರೀಕ್ಷೆಗೆ ಒಳಪಡುತ್ತವೆ. ಬಳಿಕ ಮಾರುಕಟ್ಟೆಗೆ ಬಿಡುಗಡೆಗೊಳ್ಳುತ್ತದೆ. ಬಿಪಿಪಿಐ(ಬ್ಯುರೋ ಆಫ್ ಫಾರ್ಮಾ ಪಿಎಸ್‌ಯು ಆಫ್ ಇಂಡಿಯಾ)ಯು ಈ ಯೋಜನೆಯನ್ನು ಮಾನಿಟರ್ ಮಾಡಲು ಸ್ಥಾಪಿಸಲ್ಪಟ್ಟಿದೆ. ರಾಜ್ಯ ಸರಕಾರದ ಪಾಲುದಾರಿಕೆಯೊಂದಿಗೆ ಬಿಪಿಪಿಐ ಜನೌಷಧಿ ಮಳಿಗೆಗಳನ್ನು ತೆರೆಯುವುದು, ಮಾನಿಟರ್ ಮಾಡುವುದು, ಜೆನೆರಿಕ್ ಔಷಧಿಗಳ ಬೆಲೆಯನ್ನು ನಿಗದಿಗೊಳಿಸುವುದು, ವಿತರಣೆಯನ್ನು ಖಾತರಿಪಡಿಸುತ್ತದೆ. ಜನೌಷಧಿ ಮಳಿಗೆಗಳನ್ನು ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ತೆರೆಯುವುದು ಬಿಪಿಪಿಐಯ ಮುಖ್ಯ ಉದ್ದೇಶ. ರಾಜ್ಯ ಸರಕಾರಗಳು ಸರಕಾರೀ ಆಸ್ಪತ್ರೆಗಳ ಸಮೀಪ ಸೂಕ್ತ ಜಾಗವನ್ನು ಒದಗಿಸಬೇಕು. ಅಂಚೆ ಕಚೇರಿ, ರೈಲ್ವೇ ಸ್ಟೇಷನ್, ಪಂಚಾಯತ್ ಕಚೇರಿ, ಬಸ್‌ಸ್ಟಾಂಡ್, ರಕ್ಷಣಾ ಪ್ರದೇಶಗಳಲ್ಲೂ ಜಾಗವನ್ನು ಒದಗಿಸಬೇಕು. ಜನೌಷಧಿ ಮಳಿಗೆಗಳನ್ನು ತೆರೆಯುವ ಪ್ರಕ್ರಿಯೆ ಬಹಳ ಸರಳವಾಗಿದೆ. ಯೋಗ್ಯತೆಯುಳ್ಳ ಸಾಮಾನ್ಯ ವ್ಯಕ್ತಿ, ಸರಕಾರೇತರ ಸಂಸ್ಥೆ ಅಥವಾ ಟ್ರಸ್ಟ್ ಮಳಿಗೆಗಗಳನ್ನು ತೆರೆಯಬಹುದು. ಜನೌಷಧಿಯನ್ನು ಉತ್ತೇಜಿಸುವ ಸಲುವಾಗಿ ರೂ. 2000 ಅರ್ಜಿ ಶುಲ್ಕವನ್ನೂ ಮನಾ °ಮಾಡಲಾಗಿದೆ. ಜನೌಷಧೀ ಕೇಂದ್ರಗಳನ್ನು ತೆರೆಯಲು ಕೇಂದ್ರ ಸರಕಾರ ಆರ್ಥಿಕ ಸಹಾಯವನ್ನು ನೀಡುತ್ತದೆ.
Related Articles
Advertisement