Advertisement

ದಿಲ್ಲಿಯಲ್ಲಿ ಐಶಾರಾಮಿ ಬಾಲ್ಯ ಕಳೆದಿದ್ದ ಮುಷರಫ್; ಪಾಕ್ ಮಿಲಿಟರಿ ಚೀಫ್ ಟು ಡಿಕ್ಟೇಟರ್ ಪಯಣ

10:01 AM Dec 18, 2019 | Nagendra Trasi |

ನವದೆಹಲಿ/ಇಸ್ಲಾಮಾಬಾದ್: ಜಿಹಾದಿ ಭಯೋತ್ಪಾದಕರು ಪಾಕಿಸ್ತಾನದ ಹೀರೋಗಳು, ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಪಾಕಿಸ್ತಾನ ತರಬೇತಿ ನೀಡುತ್ತಿದೆ…ಭಾರತ-ಪಾಕ್ ವಿರುದ್ಧ ಹೇಳಿಕೆ ನೀಡುತ್ತಿದ್ದ ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಗೆ ಪಾಕಿಸ್ತಾನದ ವಿಶೇಷ ನ್ಯಾಯಾಲಯ ದೇಶದ್ರೋಹ ಆರೋಪದ ಮೇಲೆ ಮರಣದಂಡನೆ ಶಿಕ್ಷೆ ವಿಧಿಸಿದೆ.

Advertisement

ಪರ್ವೇಜ್ ಮುಷರಫ್ ಪಾಕಿಸ್ತಾನದ ರಾಜಕಾರಣಿ, ಪಾಕಿಸ್ತಾನ ಮಿಲಿಟರಿಯ ನಾಲ್ಕು ಸ್ಟಾರ್ ಗಳ ನಿವೃತ್ತ ಜನರಲ್, ಪಾಕಿಸ್ತಾನದ ಹತ್ತನೇ ಅಧ್ಯಕ್ಷ, ಕೊನೆಗೆ 2000ನೇ ಇಸವಿಯಲ್ಲಿ ಮುಷರಫ್ ಹಾಗೂ ಕುಟುಂಬ ಸೌದಿಅರೇಬಿಯಾಕ್ಕೆ ಗಡಿಪಾರು ಆಗಿದ್ದು, ಮುಷರಫ್ ಕುರಿತ ಸಂಕ್ತಿಪ್ತ ಒಳನೋಟ ಇಲ್ಲಿದೆ…

ದಿಲ್ಲಿ ಟು ಪಾಕ್ ಪಯಣ!

ಪರ್ವೇಜ್ ಮುಷರಫ್ 1943ರ ಆಗಸ್ಟ್ 11ರಂದು ದೆಹಲಿಯಲ್ಲಿ (ಅಂದಿನ ಬ್ರಿಟಿಷ್ ಇಂಡಿಯಾ) ಜನನ. ಮುಷರ್ರಫ್ಪುದ್ದೀನ್ ಹಾಗೂ ಬೇಗಂ ಝರೀನ್ ಮುಷರಫ್ ದಂಪತಿಯ ಪುತ್ರ ಪರ್ವೇಜ್ ಮುಷರಫ್. ಹಲವು ವರ್ಷಗಳ ಕಾಲ ದಿಲ್ಲಿಯಲ್ಲಿದ್ದ ಮುಷರಫ್ ಕುಟುಂಬ ನೆಹಾರ್ ವಾಲಿ ಹವೇಲಿ ಎಂಬ ಬೃಹತ್ ಮನೆಯಲ್ಲಿ ವಾಸವಾಗಿದ್ದರು. ಸುನ್ನಿ ಮುಸ್ಲಿಂ ಸಮುದಾಯದ ಈ ಕುಟುಂಬ ತಾವು ಪ್ರವಾದಿ ಮುಹಮ್ಮದರ ವಂಶಸ್ಥರು ಎಂದು ಹೇಳಿಕೊಳ್ಳುತ್ತಿದ್ದರು!

ಮುಷರಫ್ ದೊಡ್ಡಜ್ಜ ತೆರಿಗೆ ಕಲೆಕ್ಟರ್ ಆಗಿದ್ದರು. ಅಜ್ಜ ನ್ಯಾಯಾಧೀಶರಾಗಿದ್ದರು. ಹೀಗಾಗಿ ಮುಷರಫ್ ಬ್ರಿಟಿಷ್ ಇಂಡಿಯಾದಲ್ಲಿ ಐಶಾರಾಮಿ ಜೀವನ ನಡೆಸಿದ್ದರು. ತಾಯಿ ಝರೀನ್ 1920ರಲ್ಲಿ ಜನಿಸಿದ್ದು, ಲಕ್ನೋದಲ್ಲಿ ಬೆಳೆದಿದ್ದರು. ನಂತರ ಪ್ರತಿಷ್ಠಿತ ದೆಹಲಿ ವಿವಿಯ ಇಂದ್ರಪ್ರಸ್ಥ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದಿದ್ದರು. ನಂತರ ಸೈಯದ್ ಮುಷರ್ರಫ್ಪುದ್ದೀನ್ ಜತೆ ವಿವಾಹವಾಗಿದ್ದರು. ಝರೀನ್ ತಂದೆ ಸೈಯದ್ ಬ್ರಿಟಿಷ್ ಇಂಡಿಯಾ ಸರ್ಕಾರದಲ್ಲಿ ವಿದೇಶಾಂಗ ಕಚೇರಿಯಲ್ಲಿ ಅಕೌಂಟೆಂಟ್ ಆಗಿ ನಂತರ ನಿರ್ದೇಶಕರಾಗಿದ್ದರು.

Advertisement

ಮುಷರ್ರಫ್ಪುದ್ದೀನ್ ಹಾಗೂ ಝರೀನ್ ದಂಪತಿಗೆ ಮೂವರು ಗಂಡು ಮಕ್ಕಳು. ಡಾ.ಜಾವೇದ್ ಮುಷರಫ್ (ಆರ್ಥಿಕತಜ್ಞ), ಎರಡನೇ ಪುತ್ರ ಪರ್ವೇಜ್ ಮುಷರಫ್, ಮೂರನೇ ಪುತ್ರ ಡಾ.ನಾವೇದ್ ಮುಷರಫ್ (ಅಮೆರಿಕದ ಇಲಿನಾಯ್ಸ್ ನಲ್ಲಿ ಅನಸ್ತೇಶಿಯಾ ತಜ್ಞ).

ದೆಹಲಿಯ ನೆಹಾರ್ವಾಲಿ ಹವೇಲಿ(ಕಾಲುವೆ ಸಮೀಪದ ಮನೆ)ಯಲ್ಲಿ ಬಾಲ್ಯ ಕಳೆದಿದ್ದ ಪರ್ವೇಜ್ ಮುಷರಫ್. 4ನೇ ವಯಸ್ಸಿನ ವೇಳೆ ಭಾರತ 1947ರ ಆಗಸ್ಟ್ 15ರಂದು ಸ್ವತಂತ್ರವಾಗಿತ್ತು. ಅಲ್ಲದೇ ಪ್ರತ್ಯೇಕ ಪಾಕಿಸ್ತಾನ ರಚನೆಯಾಗಿತ್ತು. ಈ ಹಿನ್ನೆಲೆಯಲ್ಲಿ 1947ರ ಆಗಸ್ಟ್ ನಲ್ಲಿ ಈ ಕುಟುಂಬ ಭಾರತ ಬಿಟ್ಟು ಪಾಕಿಸ್ತಾನಕ್ಕೆ ತೆರಳಿತ್ತು. ಭಾರತ ಸ್ವಾತಂತ್ರ್ಯಗೊಳ್ಳುವ ಕೆಲವು ದಿನದ ಮೊದಲು ಮುಷರಫ್ ತಂದೆ ಪಾಕಿಸ್ತಾನದ ಸಿವಿಲ್ ಸರ್ವೀಸ್ ಗೆ ಸೇರ್ಪಡೆಗೊಂಡಿದ್ದರು. ನಂತರ ಮುಷ್ ತಂದೆ ವಿದೇಶಾಂಗ ಸಚಿವಾಲಯಕ್ಕೆ ಸೇರಿದ್ದರು.

1949ರಲ್ಲಿ ಪಾಕ್ ರಾಯಭಾರಿಯಾಗಿ ಟರ್ಕಿಗೆ ನಿಯುಕ್ತಿಗೊಂಡಿದ್ದರಿಂದ ಮುಷರಫ್ ತಂದೆ ಕುಟುಂಬ ಸಹಿತ ಅಂಕಾರಾಕ್ಕೆ ಸ್ಥಳಾಂತರಗೊಂಡಿದ್ದರು. 1956ರಲ್ಲಿ ಟರ್ಕಿ ತೊರೆದು 1957ಕ್ಕೆ ಪಾಕಿಸ್ತಾನಕ್ಕೆ ವಾಪಸ್ ಆಗಿದ್ದರು. ನಂತರ ಮುಷರಫ್ ಕರಾಚಿಯ ಸೈಂಟ್ ಪ್ಯಾಟ್ರಿಕ್ಸ್ ಸ್ಕೂಲ್ ಗೆ ಸೇರಿದ್ದು, ಬಳಿಕ ಲಾಹೋರ್ ನ ಫೋರ್ಮನ್ ಕ್ರಿಶ್ಚಿಯನ್ ಯೂನಿರ್ವಸಿಟಿಯಲ್ಲಿ ಗಣಿತದಲ್ಲಿ ಪದವಿ ಪಡೆದಿದ್ದರು.

18ನೇ ವಯಸ್ಸಿಗೆ ಮಿಲಿಟರಿ ಅಕಾಡೆಮಿಗೆ ಎಂಟ್ರಿ:

ಮುಷರಫ್ 1961ರಲ್ಲಿ ತನ್ನ 18ನೇ ವಯಸ್ಸಿಗೆ ಮಿಲಿಟರಿ ಅಕಾಡೆಮಿಗೆ ಪದಾರ್ಪಣೆ. ಕಾಲೇಜು ದಿನಗಳಲ್ಲಿಯೇ ಪಾಕ್ ಮಿಲಿಟರಿ ಅಕಾಡೆಮಿ ಮತ್ತು ಜಂಟಿ ಮಿಲಿಟರಿ ಪರೀಕ್ಷೆಗಳನ್ನು ನಡೆಸುತ್ತಿತ್ತು. ಮುಷರಫ್ ಕೂಡಾ ಮಿಲಿಟರಿಯ ಪರೀಕ್ಷೆ ಮತ್ತು ಪ್ರವೇಶ ಸಂದರ್ಶನ ಪೂರ್ಣಗೊಳಿಸಿದ್ದರು. ನಂತರ ಮುಷರಫ್ ದೈಹಿಕ, ಬೌದ್ಧಿಕ ಹಾಗೂ ತರಬೇತು ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದು, ಪಾಕ್ ಮಿಲಿಟರಿ ಅಕಾಡೆಮಿಯಲ್ಲಿ ತರಬೇತಿಗೆ ಆಯ್ಕೆಯಾಗಿದ್ದರು. 1964ರಲ್ಲಿ ಮುಷರಫ್ ಪದವಿ ಜತೆಗೆ ಪಾಕ್ ಮಿಲಿಟರಿ ಅಕಾಡೆಮಿ ತರಬೇತಿ ಪೂರ್ಣಗೊಳಿಸಿದ್ದರು. ನಂತರ ಪಾಕ್ ಮಿಲಿಟರಿಯ ಆರ್ಟಿಲರಿ ರೆಜಿಮೆಂಟ್ ನ ಎರಡನೇ ಲೆಫ್ಪಿನೆಂಟ್ ಆಗಿ ನೇಮಕಗೊಂಡಿದ್ದರು. ಹೀಗೆ ಇಂಡೋ-ಪಾಕ್ ಗಡಿಯಲ್ಲಿ ಕೆಲಸ ಆರಂಭಿಸಿದ್ದರು.

ಮೊದಲ ಯುದ್ಧದ ಅನುಭವ ಪಡೆದಿದ್ದು ಮುಷರಫ್ 1965ರಲ್ಲಿ ನಡೆದ ಭಾರತ-ಪಾಕಿಸ್ತಾನ ಸಂಘರ್ಷದಲ್ಲಿ..ಅದು ಎರಡನೇ ಕಾಶ್ಮೀರ ಯುದ್ಧವಾದ ಖೇಮ್ ಕರಣ್ ಸೆಕ್ಟರ್ ನಲ್ಲಿ ನಡೆದ ಕಾಳಗ. ಅಲ್ಲದೇ ಲಾಹೋರ್ ಮತ್ತು ಸಿಯಾಲ್ ಕೋಟ್ ಯುದ್ಧದ ವೇಳೆಯೂ ಮಷರಫ್ ಮುಂಚೂಣಿಯಲ್ಲಿದ್ದು, ಇದಕ್ಕಾಗಿ ಮಿಲಿಟರಿಯ ಇಮ್ತಿಯಾಝಿ ಸನಾದ್ ಗೌರವ ಪಡೆದಿದ್ದರು.

ಡಿಕ್ಟೇಟರ್ ಆದ ಮುಷರಫ್:

ಪಾಕಿಸ್ತಾನ ಮಿಲಿಟರಿಯಲ್ಲಿ ಒಂದೊಂದೇ ಹುದ್ದೆ ಮೇಲೇರುತ್ತಾ ಬಂದ ಮುಷರಫ್ 1974ರಲ್ಲಿ ಲೆಫ್ಟಿನೆಂಟ್ ಕರ್ನಲ್, 1978ರಲ್ಲಿ ಕರ್ನಲ್ ಆಗಿದ್ದು, ಬೆನಜೀರ್ ಭುಟ್ಟೋ ಪ್ರಧಾನಿಯಾಗಿದ್ದ ವೇಳೆ ಕಾರ್ಗಿಲ್ ನುಸುಳುವಿಕೆಯ ಪ್ರಸ್ತಾಪ ಇಟ್ಟಿದ್ದ ಮುಷರಫ್, ಆದರೆ ನಂತರ ಆ ಸಿದ್ಧತೆಗೆ ತಡೆಬಿದ್ದಿತ್ತು. ಆದರೆ ಪರ್ವೇಜ್ ಗೆ 2 ಸ್ಟಾರ್ ಜನರಲ್ ಹುದ್ದೆಗೇರಲು ಅವಕಾಶ ಮಾಡಿಕೊಟ್ಟಿತ್ತು. 1995 ಮತ್ತು 1998ರ ನಡುವೆ ತ್ರಿಸ್ಟಾರ್ ರಾಂಕ್ ಮೂಲಕ ಲೆಫ್ಟಿನೆಂಟ್ ಜನರಲ್ ಹುದ್ದೆಗೇರಿದ್ದರು. ಶತಾಯಗತಾಯ ಪ್ರಯತ್ನದಲ್ಲಿದ್ದ ಮುಷರಫ್ ಕೊನೆಗೂ 4 ಸ್ಟಾರ್ ಗಳ ಮಿಲಿಟರಿ ಜನರಲ್ ಚೀಫ್ ಆಗಿಬಿಟ್ಟಿದ್ದರು.

ಕಾರ್ಗಿಲ್ ಯುದ್ಧದ ರೂವಾರಿಯಾಗಿದ್ದ ಮುಷರಫ್ ಅದಾಗಲೇ ಸರ್ವಾಧಿಕಾರಿ ಧೋರಣೆ ತಳೆದುಬಿಟ್ಟಿದ್ದರ ಪರಿಣಾಮ 1999ರ ಅಕ್ಟೋಬರ್ 12ರಂದು ಪಾಕ್ ಸೇನಾ ಜಂಟಿ ಮುಖ್ಯಸ್ಥರು ಮತ್ತು ಸೇನಾ ಸಿಬ್ಬಂದಿಗಳ ಮುಖ್ಯಸ್ಥರಿಂದ ಜನರಲ್ ಪರ್ವೇಜ್ ಮುಷರಫ್ ಅವರನ್ನು ವಜಾಗೊಳಿಸುವ ಪ್ರಧಾನಿ ನವಾಜ್ ಷರೀಫ್ ಪ್ರಯತ್ನ ವಿಫಲಗೊಂಡಿತ್ತು. ಐಎಸ್ ಐ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ಜಿಯಾದಿನ್ ಬಟ್ ಅವರ ನೇಮಕವನ್ನು ಸೇನಾ ನಾಯಕತ್ವ ನಿರಾಕರಿಸಿದ ನಂತರ ಯತ್ನ ವಿಫಲವಾಗಿತ್ತು. ಅಷ್ಟೇ ಅಲ್ಲ ಜನರಲ್ ಮುಷರಫ್ ಪ್ರಯಾಣಿಸುತ್ತಿದ್ದ ವಿಮಾನ ಕರಾಚಿಯಲ್ಲಿ ಇಳಿಯದಂತೆ ತಡೆಯಬೇಕೆಂದು ಷರೀಫ್ ಫರ್ಮಾನು ಹೊರಡಿಸಿದ್ದರು.

ಹೀಗೆ ಮುಷರಫ್ ವಿಮಾನ ಕರಾಚಿಯ ವಿಮಾನ ನಿಲ್ದಾಣದಲ್ಲಿ ಹಲವಾರು ಗಂಟೆಗಳ ಕಾಲ ಆಕಾಶದಲ್ಲಿ ಹಾರಾಡುತ್ತಲೇ ಪ್ರಧಾನಿ ನವಾಜ್ ಷರೀಫ್ ವಿರುದ್ಧ ಪ್ರತಿದಂಗೆ ಆರಂಭವಾಗಿತ್ತು. ಮಿಲಿಟರಿ ನಾಯಕತ್ವದ ಹಿರಿಯ ಕಮಾಂಡರ್ ಗಳು ಷರೀಫ್ ಸರ್ಕಾರವನ್ನು ವಜಾಗೊಳಿಸಿ ವಿಮಾನ ನಿಲ್ದಾಣ ತಮ್ಮ ವಶಕ್ಕೆ ಪಡೆದಿದ್ದರು. ನಂತರ ಮುಷರಫ್ ವಿಮಾನ ಕರಾಚಿಯಲ್ಲಿ ಇಳಿದಿತ್ತು.

1999ರಲ್ಲಿ ಕ್ಷಿಪ್ರ ದಂಗೆಯ ಮೂಲಕ ಸರ್ಕಾರ ವಜಾಗೊಳಿಸಿ ಅಧಿಕಾರ ಹಿಡಿದುಕೊಂಡ ಮುಷರಫ್ ಅವರು ಪ್ರಧಾನಿ ಷರೀಫ್, ಜಿಯಾವುದೀನ್ ಬಟ್ ಮತ್ತು ಕ್ಯಾಬಿನೆಟ್ ಸಿಬ್ಬಂದಿಗಳನ್ನು ವಶಕ್ಕೆ ತೆಗೆದುಕೊಂಡು, ಅಡಿಯಾಲಾ ಜೈಲಿನಲ್ಲಿ ಇರಿಸಿದ್ದರು. ಸುಪ್ರೀಂಕೋರ್ಟ್ ವಿಚಾರಣೆಯಲ್ಲಿ ಷರೀಫ್ ಗೆ ಜೀವಾವಧಿ ಶಿಕ್ಷೆ ಜಾರಿಯಾಗಿತ್ತು. ಷರೀಫ್ ಅವರನ್ನು ವಜಾಗೊಳಿಸಿದ ಸುದ್ದಿ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿತ್ತು. ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ಮತ್ತು ಸೌದಿ ಅರೇಬಿಯಾ ರಾಜನ ಒತ್ತಡದಿಂದ ಮುಷರಫ್ ಷರೀಫ್ ಜೀವ ಉಳಿಸಲು ಒಪ್ಪಿಕೊಂಡು, ಅವರನ್ನು ಸೌದಿ ಅರೇಬಿಯಾಕ್ಕೆ ಗಡಿಪಾರು ಮಾಡಿದ್ದರು.

ನಂತರ ಪಾಕಿಸ್ತಾನದ ಮೊದಲ ಮಿಲಿಟರಿ ಅಧ್ಯಕ್ಷನಾಗಿ ಮುಷರಫ್ ಅಧಿಕಾರ ವಹಿಸಿಕೊಂಡಿದ್ದು, 2002ರ ಅಕ್ಟೋಬರ್ 12ರಂದು ಸುಪ್ರೀಂಕೋರ್ಟ್ ಸಾರ್ವತ್ರಿಕ ಚುನಾವಣೆ ನಡೆಸುವಂತೆ ಆದೇಶ ನೀಡಿತ್ತು. 2002ರ ಅಕ್ಟೋಬರ್ ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮುಷರಫ್ ನೇತೃತ್ವದ ಪಿಎಂಎಲ್-ಕ್ಯೂ ಪಕ್ಷ ಜಯಗಳಿಸಿತ್ತು. ಆದರೆ ಸ್ಪಷ್ಟ ಬಹುಮತ ಪಡೆಯುವಲ್ಲಿ ವಿಫಲವಾಗಿತ್ತು. ಬಳಿಕ ಎಂಎಂಎ ಹಾಗೂ ಎಂಕ್ಯೂಎಂ ಪಕ್ಷಗಳ ನೆರವಿನೊಂದಿಗೆ ಮುಷರಫ್ ಸರ್ಕಾರ ರಚಿಸಿದ್ದರು.

ಝಾಫರುಲ್ಲಾ ಖಾನ್ ಅವರನ್ನು ಪ್ರಧಾನಿಯನ್ನಾಗಿ ನೇಮಕ ಮಾಡಿದ ಮುಷರಫ್ ಸ್ವಯಂ ಆಗಿ ಎಲ್ಲಾ ಅಧಿಕಾರವನ್ನು ಅವರಿಗೆ ವರ್ಗಾಯಿಸಿದ್ದರು. ಅಲ್ಲದೇ ಪಾಕ್ ಸಂವಿಧಾನಕ್ಕೆ ತಿದ್ದುಪಡಿಯನ್ನೂ ತಂದಿದ್ದರು. ಎರಡು ವರ್ಷದೊಳಗೆ ಖಾನ್ ಆಡಳಿತ ವೈಫಲ್ಯದಿಂದ ರಾಜೀನಾಮೆ ಕೊಡುವಂತಾಯಿತು. ನಂತರ ಚೌಧರಿ ಶುಜಾತ್ ಹುಸೈನ್ ಪ್ರಧಾನಿ ಗದ್ದುಗೆ ಏರಿದ್ದರು.

2007ರಲ್ಲಿ ಮುಷರಫ್ ನೇತೃತ್ವದ ಸರ್ಕಾರ ದುರ್ಬಲಗೊಂಡು ತುರ್ತುಪರಿಸ್ಥಿತಿ ಘೋಷಿಸಿದ್ದರು. ನಂತರ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಚೌಧರಿ ಸೇರಿದಂತೆ 14 ನ್ಯಾಯಾಧೀಶರನ್ನು ಮುಷರಫ್ ವಜಾಗೊಳಿಸಿದ್ದರು. ಇದು ಪಾಕ್ ನಲ್ಲಿ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಯ್ತು. ನಂತರ ಮಿಲಿಟರಿ ಹುದ್ದೆಯಿಂದ ಕೆಳಗಿಳಿದ ಮುಷರಫ್ 2007ರ ನವೆಂಬರ್ 28ರಂದು 2ನೇ ಬಾರಿಗೆ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

2007ರಲ್ಲಿ ರಾವಲ್ಪಿಂಡಿಯಲ್ಲಿ ಬೆನಜೀರ್ ಭುಟ್ಟೋ ಹತ್ಯೆ ನಡೆದ ಪರಿಣಾಮ, 2008ರ ಜನವರಿ 8ಕ್ಕೆ ನಿಗದಿಯಾಗಿದ್ದ ಚುನಾವಣೆ ಫೆಬ್ರುವರಿ 18ಕ್ಕೆ ಮುಂದೂಡಿಕೆಯಾಗಿತ್ತು. ಆ ಚುನಾವಣೆಯಲ್ಲಿ ಮುಷರಫ್ ಪಕ್ಷ ಹೀನಾಯ ಸೋಲು ಕಂಡಿತ್ತು. ಚುನಾವಣೆಯಲ್ಲಿ ಪಿಪಿಪಿ ಮತ್ತು ಪಿಎಂಎಲ್ ಹೆಚ್ಚಿನ ಸ್ಥಾನ ಗೆದ್ದಿತ್ತು. 2008ರಲ್ಲಿ ಮುಷರಫ್ ರಾಜೀನಾಮೆ ನೀಡುವ ಮೂಲಕ ಒಂಬತ್ತು ವರ್ಷದ ಆಳ್ವಿಕೆ ಕೊನೆಗೊಂಡಂತಾಗಿತ್ತು. 2008ರ ನವೆಂಬರ್ 23ರಂದು ಮುಷರಫ್ ಲಂಡನ್ ಗೆ ಗಡಿಪಾರಾಗಿದ್ದರು. 2013ರಂದು ನ್ಯಾಯಾಧೀಶರ ಬಂಧನ ಪ್ರಕರಣದಲ್ಲಿ ಇಸ್ಲಾಮಾಬಾದ್ ಹೈಕೋರ್ಟ್ ಮುಷರಫ್ ಬಂಧನಕ್ಕೆ ಆದೇಶ ಹೊರಡಿಸಿತ್ತು. ಆದರೆ ಮುಷರಫ್ ಅಂದು ಅಲ್ಲಿಂದ ಪರಾರಿಯಾಗಿದ್ದು, ಗೃಹಬಂಧನಕ್ಕೊಳಗಾಗಿದ್ದರು. ಏತನ್ಮಧ್ಯೆ ಮುಷರಫ್ ವಿರುದ್ಧ ಪಾಕ್ ಸೆನೆಟ್ ದೇಶದ್ರೋಹದ ಆರೋಪದ ನಿರ್ಣಯವನ್ನು ಅಂಗೀಕರಿಸಿತ್ತು. 2014ರಲ್ಲಿ ಸಿಂಧ್ ಹೈಕೋರ್ಟ್ ಮುಷರಫ್ ಗೆ ಜಾಮೀನು ನೀಡಿ ವಿದೇಶ ಪ್ರಯಾಣಕ್ಕೆ ಅನುಮತಿ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next