Advertisement

ಪುರಸಭೆ ಸದಸ್ಯರು ಲೆಕ್ಕಕ್ಕಿಲ್ಕದಂತಾಗಿದೆ: ಕಿಡಿ

02:33 PM Apr 23, 2022 | Team Udayavani |

ಪಾಂಡವಪುರ: ಪುರಸಭೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಿದ್ದು ಅಧಿಕಾರಿಗಳು ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ. ಪುರಸಭೆ ಸದಸ್ಯರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬತಾಗಿದೆ ಎಂದು ಬಿಜೆಪಿ ಸದಸ್ಯ ಪಾರ್ಥಸಾರಥಿ ಆರೋಪಿಸಿದರು.

Advertisement

ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಅರ್ಚನಾ ಚಂದ್ರು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ವರ್ತನೆ ಬಗ್ಗೆ ನೇರ ಆರೋಪ ಮಾಡಿದ ಅವರು, ಕಚೇರಿ ಅಧಿಕಾರಿಗಳು ಮಧ್ಯವರ್ತಿಗಳಿಗೆ ನೀಡುವ ಗೌರವವನ್ನು ಸದಸ್ಯರಿಗೆ ನೀಡುವುದಿಲ್ಲ. ನಮ್ಮನ್ನು ಚುನಾಯಿಸಿ ಕಳುಹಿಸಿರುವ ಮತದಾರರು ಸಣ್ಣ ಕೆಲಸಕ್ಕಾಗಿ ಕಚೇರಿಗೆ ಅಲೆಯುವ ಪರಿಸ್ಥಿತಿ ಉಂಟಾಗಿದೆ ಎಂದು ದೂರಿದರು.

ಪಟ್ಟಣದ ಕಾಮನಚೌಕದ ಆಟೋ ಸ್ಟ್ಯಾಂಡ್‌ ನಿಂದಾಗಿ ಈ ಭಾಗದ ನಿವಾಸಿಗಳಿಗೆ ಬಹಳ ತೊಂದರೆಯಾಗು ತ್ತಿದೆ. ತಕ್ಷಣ ಆಟೋ ಸ್ಟ್ಯಾಂಡ್‌ ತೆರವುಗೊಳಿಸಿ ನೆಮ್ಮದಿಯಾಗಿ ಬದುಕಲು ಅವಕಾಶ ಮಾಡಿಕೊಡಬೇಕು. ಇಲ್ಲವಾದರೆ ಎಲ್ಲರು ಸಾಮೂಹಿಕವಾಗಿ ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದರಲ್ಲದೇ, ಹಿಂದೂ ರುದ್ರ ಭೂಮಿಯಲ್ಲಿ ಅಪರಿಚಿತ ಶವ ಸಂಸ್ಕಾರ ನಮಗೆ ಶ್ರೇಯಸ್ಸಲ್ಲ ಹೀಗಾಗಿ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸರ್ವೇ ಮಾಡಿಸಿ: ಬಿಜೆಪಿ ಸದಸ್ಯ ಎಲ್‌.ಅಶೋಕ್‌ ಮಾತನಾಡಿ, ಸಂತೆಮೈದಾನ ಜಾಗದ ಅಳತೆ ಬಗ್ಗೆ ಪುರಸಭೆ ಕಚೇರಿಯಲ್ಲಿ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದರೆ ಯಾರಲ್ಲೂ ಉತ್ತರ ಇಲ್ಲವಾಗಿದೆ. ಇಡೀ ಸಂತೆ ಮೈದಾನ ಜಾಗ ಸರ್ವೇ ಮಾಡಿಸಿ ಒತ್ತುವರಿ ತೆರವು ಮಾಡಿಸಬೇಕು. ಪ್ರಭಾವಿಗಳು ತಮ್ಮ ಪ್ರಭಾವ ಬಳಸಿ ಒತ್ತುವರಿ ಮಾಡಿಕೊಂಡಿರುವ ಜಾಗ ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ. ತಕ್ಷಣ ಸರ್ವೇ ಮಾಡಿಸಿ ಸಂತೆಮೈದಾನ ಜಾಗದ ಗಡಿ ಗುರುತಿಸಿ ಕಾಪಾಡಿಕೊಳ್ಳಬೇಕಿದೆ ಎಂದರು.

ರಸ್ತೆಗಳು ಒತ್ತುವರಿ: ಸದಸ್ಯ ಚಂದ್ರಶೇಖರ್‌ ಮಾತನಾಡಿ, ಮಾಸಿಕವಾಗಿ ಎಷ್ಟು ಖಾತೆ, ಇ-ಸ್ವತ್ತು ಮಾಡಲಾಗಿದೆ ಎಂಬುದನ್ನು ಸಭೆಯ ಗಮನಕ್ಕೆ ತರಬೇಕು. ಅಂಗಡಿಗಳಿಗೆ ಪರವಾನಗಿ ಕೊಟ್ಟರೆ ಅಲ್ಲಿಗೆ ಕೆಲಸ ಮುಗಿಯಿತು ಎಂದು ಅಧಿಕಾರಿಗಳು ಭಾವಿಸಿದ್ದಾರೆ. ಪರವಾನಗಿ ತಯಾರಿಸಿದ ನಂತರ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುವು ದಿಲ್ಲ. ಪಟ್ಟಣದ ಬಹುತೇಕ ರಸ್ತೆಗಳು, ಪಾದಚಾರಿ ಮಾರ್ಗ ಒತ್ತುವರಿಯಾಗಿದೆ. ಜತೆಗೆ ಚರಂಡಿ ಮೇಲೆ ಕಟ್ಟಡ ನಿರ್ಮಿಸಲಾಗಿದೆ ಎಂದು ಆರೋಪಿಸಿದರು.

Advertisement

ಆದಾಯವೂ ವೃದ್ಧಿ: ಬಿಜೆಪಿ ಸದಸ್ಯ ಶ್ರೀನಿವಾಸ ನಾಯಕ ಮಾತನಾಡಿ, ಪುರಸಭೆಗೆ ಸೇರಿದ 82 ವಾಣಿಜ್ಯ ಮಳಿಗೆಗಳನ್ನು ಮೂಲ ಬಿಡ್ಡುದಾರರು 5 ರಿಂದ 10 ಲಕ್ಷದವರೆಗೆ ಇತರರರಿಗೆ ವರ್ಗಾಯಿಸಿದ್ದಾರೆ. ಕಳೆದ 30 ವರ್ಷಗಳ ಹಿಂದೆ ನಿಗದಿಯಾಗಿದ್ದ 150, 200 ರೂ. ಬಾಡಿಗೆಯನ್ನೇ ಈಗಲೂ ವಸೂಲಿ ಮಾಡಲಾಗುತ್ತಿದೆ. ಆದರೆ ಮಳಿಗೆ ವಹಿಸಿಕೊಂಡಿರುವ ವ್ಯಕ್ತಿಗಳು ವಾಸ್ತವವಾಗಿ 8 ರಿಂದ 10 ಸಾವಿರ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ. ಇದರಿಂದ ಪುರಸಭೆಗೆ ಮಾಸಿಕ ಲಕ್ಷಾಂತರ ನಷ್ಟವಾಗುತ್ತಿದೆ. ಇರುವ ಮಳಿಗೆ ನವೀಕರಣಗೊಳಿಸಿ ಹೊಸದಾಗಿ ಹರಾಜು ಹಾಕಿದರೆ ಅಭಿವೃದ್ಧಿ ಕೆಲಸಗಳಿಗೆ ಬೇಕಾಗಿರುವ ಹಣ ಲಭ್ಯವಾಗುತ್ತದೆ. ಜತೆಗೆ ಪುರಸಭೆ ಮಾಸಿಕ ಆದಾಯವೂ ವೃದ್ಧಿಯಾಗುತ್ತದೆ ಎಂದರು.

ಪಕ್ಷದ ಸದಸ್ಯರಿಂದ ಅಧಿಕಾರಿಗಳ ವಿರುದ್ಧ ಮಾಡಿದ ಆರೋಪ ಮತ್ತು ಸಮಸ್ಯೆ ಆಲಿಸಿದ ಶಾಸಕ ಸಿ.ಎಸ್‌. ಪುಟ್ಟರಾಜು ಅಧಿಕಾರಿಗಳಿಗೆ ಎಲ್ಲಾ ಸಮಸ್ಯೆಗಳನ್ನು ತಕ್ಷಣ ಬಗೆಹರಿಸುವಂತೆ ತಾಕೀತು ಮಾಡಿದ್ದರಲ್ಲದೇ, ವಾಣಿಜ್ಯ ಮಳಿಗೆ ವ್ಯಾಪಾರಿಗಳು, ಆಟೋನಿಲ್ದಾಣದ ಸಮಸ್ಯೆ, ಸಂತೆ ಮೈದಾನ ಒತ್ತುವರಿ ಸೇರಿದಂತೆ ಇತರೆ ವಿಚಾರ ಚರ್ಚಿಸಿ ಬಗೆಹರಿಸಲು ಏ.29 ರಂದು ಸಭೆ ನಿಗದಿಪಡಿಸಿ ಇದಕ್ಕೆ ಸಂಬಂಧ ಪಟ್ಟ ಎಲ್ಲರನ್ನೂ ಕರೆಯಿರಿ, ಸೌಹಾರ್ದಯುತವಾಗಿ ಎಲ್ಲವನ್ನು ತೀರ್ಮಾನಿಸೋಣ ಎಂದರು. ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷೆ ಶ್ವೇತಾ ಉಮೇಶ್‌, ಮುಖ್ಯಾಧಿಕಾರಿ ವೀಣಾ, ಸದಸ್ಯರಾದ ಮಹಾತ್ಮಗಾಂಧಿನಗರ ಚಂದ್ರು, ಎಚ್‌.ಡಿ.ಶ್ರೀಧರ, ಶಿವಕುಮಾರ್‌, ಸರಸ್ವತಿ, ಬಿ.ವೈ. ಬಾಬು, ಆರ್‌.ಸೋಮಶೇಖರ್‌, ಗೀತಾ, ಸುನೀತಾ, ಎಂ.ಗಿರೀಶ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next