Advertisement

ನೀರಿನ ಹಂಚಿಕೆ; ವಿಶೇಷ ಸಭೆಗೆ ತಾಕೀತು

07:16 PM Nov 06, 2020 | Suhan S |

ರಾಯಚೂರು: ಟೆಲೆಂಡ್‌ ಭಾಗದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ, ಟಿಎಲ್‌ಬಿಸಿ, ಎನ್‌ಆರ್‌ಬಿಸಿ ನೀರು ನಿರ್ವಹಣೆಗೆ ವಿಶೇಷ ಸಾಮಾನ್ಯ ಸಭೆ ನಡೆಸುವಂತೆ ಸದಸ್ಯರು ಒಕ್ಕೊರಲಿನಿಂದ ಒತ್ತಾಯಿಸಿದ ಪ್ರಸಂಗ ನಡೆಯಿತು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ 10ನೇ ಸಾಮಾನ್ಯ ಸಭೆಯಲ್ಲಿ, ಟಿಎಲ್‌ಬಿಸಿ ನೀರಿನ ಹಂಚಿಕೆಯಲ್ಲಾಗುತ್ತಿದ್ದು,ಅಕ್ರಮದ ಬಗ್ಗೆ ರೌಡಕುಂದ ಸದಸ್ಯ ಬಸವರಾಜ ಹಿರೇಗೌಡರ್‌ ಧ್ವನಿ ಎತ್ತಿದರು. ಕೊನೆ ಭಾಗಕ್ಕೆ ಹರಿಸುವ ನೀರಿನ ಲೆಕ್ಕಾಚಾರದಲ್ಲೇ ಸಾಕಷ್ಟು ಲೋಪವಿದೆ. ಆಂಧ್ರಕ್ಕೆ ನೀರು ಹರಿಸುತ್ತಿದ್ದು, ಕೇಳುವವರೇ ಇಲ್ಲದಾಗಿದೆ ಎಂದು ದೂರಿದರು.

ಇದಕ್ಕೆ ಅನೇಕ ಸದಸ್ಯರು ದನಿಗೂಡಿಸಿ, ಟಿಎಲ್‌ಬಿಸಿ ಮತ್ತು ಎನ್‌ಆರ್‌ಬಿಸಿಯಲ್ಲೂ ಇದೇ ಸಮಸ್ಯೆ ಕಂಡು ಬರುತ್ತಿದೆ. ಹೀಗಾಗಿ ವಿಶೇಷ ಸಾಮಾನ್ಯ ಸಭೆಕರೆದು ಈ ವಿಚಾರದ ಬಗ್ಗೆ ಚರ್ಚಿಸಬೇಕು ಎಂದು ಒತ್ತಾಯಿಸಿದರು.

ತುಂಗಭದ್ರಾ ಯೋಜನೆ ಮುಖ್ಯ ಅಧೀಕ್ಷಕ ಮಂಜಪ್ಪ ಮಾಹಿತಿ ನೀಡಿ, ಜಲಾಶಯದಲ್ಲಿ ಸಂಗ್ರಹವಿರುವ ನೀರು ಬೇಸಿಗೆ ಕುಡಿಯುವನೀರು, ಈಗಿರುವ ಬೆಳೆ ಮಾತ್ರ ಬಳಕೆ ಮಾಡಲು ಸಾಧ್ಯವಾಗಲಿದೆ. ನದಿ ಮೇಲ್ಭಾಗದಲ್ಲಿ ಮಳೆಯಾಗದೇ ಇರುವುದರಿಂದ ಬೇಸಿಗೆ ಬೆಳೆಗೆ ನೀರು ಹರಿಸುವ ಭರವಸೆ ಈಗಲೇ ನೀಡಲು ಆಗುವುದಿಲ್ಲ. ಇದೇ ತಿಂಗಳ ಮೂರನೇ ವಾರದಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆಸಲು ಸಲಹಾ ಸಮಿತಿ ಅಧ್ಯಕ್ಷರಾದ ಉಸ್ತುವಾರಿ ಸಚಿವರೊಂದಿಗೆ ಸಮಾಲೋಚಿಸಲಾಗಿದೆ ಎಂದರು.

ಸದಸ್ಯ ಎನ್‌. ಕೇಶವರೆಡ್ಡಿ ಮಾತನಾಡಿ, ತುಂಗಭದ್ರಾ ಅಚ್ಚುಕಟ್ಟು ನೀರು ರಾಯಚೂರುತಾಲೂಕಿಗೆ ಬರುತ್ತಿಲ್ಲ. ಹನಿ ನೀರು ಬಾರದೇ ಇದ್ದರೂ ನೀರಾವರಿ ಪ್ರದೇಶವೆಂದು ನಮೂದಿಸಲಾಗಿದೆ. ವಿಶೇಷ ಸಭೆ ಕರೆದು ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕೆಂದರು. ಸದಸ್ಯ ಶರಬಣ್ಣ ಸಾಹು ಮಾತನಾಡಿ, ನೀರು ಪೂರೈಸದೇ ನೀರಾವರಿ ಪ್ರದೇಶವೆಂದು ನಮೂದಿಸುವುದನ್ನು ನಿಲ್ಲಿಸಬೇಕು. ಅಕ್ರಮ ನೀರಾವರಿಗೆ ನೀರು ಹರಿಸಲಾಗುತ್ತಿದೆ. ಅಧಿಕೃತ ಪ್ರದೇಶಗಳಿಗೆ ನೀರು ಪೂರೈಸುತ್ತಿಲ್ಲ. ವಿಶೇಷ ಸಭೆ ಕರೆದು ಪರಿಹರಿಸುವಂತೆ ಒತ್ತಾಯಿಸಿದರು.

Advertisement

ಸದಸ್ಯ ಬಸವರಾಜ ಪ್ರತಿಕ್ರಿಯಿಸಿ, ಅಚ್ಚುಕಟ್ಟು ಪ್ರದೇಶದಲ್ಲಿ ನೀರು ಲೋಪವಾಗುತ್ತಿದೆ. ವಡ್ಡರಹಟ್ಟಿ ಡಿವಿಜನ್‌ನಲ್ಲಿ ಕಾಲುವೆ ನೀರು ಹಳ್ಳಗಳಿಗೆ ವೃಥಾ ಹರಿಯುತ್ತಿದೆ. ಈ ಬಗ್ಗೆ ಕ್ರಮ, ಅಧಿ ಕಾರಿಗಳು ನೀರಿನನಿರ್ವಹಣೆ ಲೆಕ್ಕ ಸರಿಯಾಗಿ ನಿರ್ವಹಿಸುತ್ತಿಲ್ಲ. ಕೊನೆ ಭಾಗದಲ್ಲಿ ಗೇಜ್‌ ನಿರ್ವಹಣೆ ಮಾಡದ ಕಾರಣ ನೀರಾವರಿ ವ್ಯಾಪ್ತಿಗೆ ಒಳಪಟ್ಟ ರೈತರಿಗೆ ನೀರು ಸಿಗದ ಸ್ಥಿತಿ ಇದೆ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ ಜಿ.ಲಕ್ಷ್ಮೀ ಕಾಂತ ರೆಡ್ಡಿ, ಈ ಕುರಿತು ವಿಶೇಷ ಸಾಮಾನ್ಯ ಸಭೆ ಕರೆದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದರು. ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಿವಜ್ಯೋತಿ,ದುರಗಮ್ಮ, ಎನ್‌. ಕೇಶವರೆಡ್ಡಿ ಸೇರಿದಂತೆ ಸದಸ್ಯರು, ಅಧಿಕಾರಿಗಳು ಇದ್ದರು.

ನೀರಿನ ಲಭ್ಯತೆ ಮೇಲೆ ನೀರು ಹರಿಸಲು ನಿರ್ಧರಿಸಬೇಕಾಗುತ್ತದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಮಳೆಯಾಗಿದ್ದರೂ ನೀರಿನ ಸಂಗ್ರಹ ಪ್ರಮಾಣ ಕುಸಿದಿದೆ. ಆಂಧ್ರಪ್ರದೇಶದಪಾಲಿನ ನೀರು ಹಾಗೂ ರಾಜ್ಯಕ್ಕೆ ಲಭ್ಯವಾಗುವ ನೀರಿನ ಲಭ್ಯತೆ ಮೇಲೆ ನೀರು ಹರಿಸಲು ತೀರ್ಮಾನಿಸಬೇಕಿದೆ. -ಮಂಜಪ್ಪ, ತುಂಗಭದ್ರಾ ಯೋಜನೆ ಮುಖ್ಯ ಅಧೀಕ್ಷಕ

Advertisement

Udayavani is now on Telegram. Click here to join our channel and stay updated with the latest news.

Next