Advertisement
ಆದರೆ ವಾಹನಗಳಿಗೆ ಸುಗಮವಾಗಿ ಸಾಗಲು ವ್ಯವಸ್ಥಿತವಾಗಿ ರಸ್ತೆಯಾಗಲಿ, ಪೊಲೀಸ್ ಸೇವೆಯಾಗಲಿ ಲಭ್ಯವಿಲ್ಲ. ಅಲ್ಲದೆ ವಾಹನ ಚಾಲಕರೂ ಟ್ರಾಫಿಕ್ ನಿಯಮ ಉಲ್ಲಂಘಿಸುತ್ತಿರುವುದು ಇಲ್ಲಿ ಸಾಮಾನ್ಯವಾಗಿದೆ. ಇದರಿಂದಾಗಿ ನಿಗದಿತ ಸಮಯಕ್ಕೆ ತಲುಪಲು ಯಾರಿಗೂ ಸಾಧ್ಯವಾಗುತ್ತಿಲ್ಲ ಎಂಬುದು ಅಷ್ಟೇ ಸತ್ಯ. ರೋಗಿಗಳನ್ನು ಸಾಗಿಸುವ ಆ್ಯಂಬುಲೆನ್ಸ್ ಗಳು ವಾಹನ ದಟ್ಟಣೆಯಿಂದ ರಸ್ತೆ ಮಧ್ಯೆ ಸಿಲುಕಿಕೊಳ್ಳುವುದು ಸಾಮಾನ್ಯವಾಗಿದೆ. ಈ ಕಾರಣದಿಂದ ಆ್ಯಂಬುಲೆನ್ಸ್ ನಲ್ಲಿರುವ ರೋಗಿಗಳನ್ನು ಕ್ಷಿಪ್ರವಾಗಿ ಆಸ್ಪತ್ರೆಗಳಿಗೆ ಸಾಗಿಸಲು ಸಾಧ್ಯವಾಗುತ್ತಿಲ್ಲ. ವಾಹನ ದಟ್ಟಣೆಯ ಪರಿಣಾಮವಾಗಿ ಕಾಸರಗೋಡು ನಗರದಲ್ಲಿರುವ ಜನರಲ್ ಆಸ್ಪತ್ರೆಗೆ ರೋಗಿಗಳನ್ನು ಹೊತ್ತು ತರುವ ಆ್ಯಂಬುಲೆನ್ಸ್‌ಗಳಿಗೆ ಆಸ್ಪತ್ರೆಗೆ ತಲುಪಲು ಸುಲಭ ಸಾಧ್ಯವಾಗುವುದಿಲ್ಲ. ಇಲ್ಲಿಂದ ಮಂಗಳೂರಿಗೋ ಅಥವಾ ಇತರ ಆಸ್ಪತ್ರೆಗಳಿಗೋ ಸಾಗಿಸಲು ಬಹಳಷ್ಟು ಸಾಹಸ ಮಾಡಬೇಕಾದ ಪರಿಸ್ಥಿತಿ ಇದೆ.
Related Articles
ಜನರಲ್ ಆಸ್ಪತ್ರೆಯಿಂದ ಆ್ಯಂಬುಲೆನ್ಸ್‌ನ್ನು ಕಷ್ಟಪಟ್ಟು ಹೊರತಂದು ಮುಖ್ಯ ರಸ್ತೆಗೆ ಸಾಗಿದರೂ ಈ ರಸ್ತೆಯಲ್ಲೂ ವಾಹನ ದಟ್ಟಣೆಯಿಂದಾಗಿ ಸುಗಮ ವಾಗಿ ಸಾಗಲು ಸಾಧ್ಯವಾಗುತ್ತಿಲ್ಲ. ಇದೀಗ ಧಾರಾಕಾರ ಮಳೆ ಸುರಿದ ಹಿನ್ನೆಲೆಯಲ್ಲಿ ಕಾಸರಗೋಡಿನಿಂದ ತಲಪಾಡಿಯ ವರೆಗಿನ ರಸ್ತೆಯಲ್ಲಿ ಸೃಷ್ಟಿಯಾಗಿರುವ ಬೃಹತ್ ಗಾತ್ರದ ಹೊಂಡಗಳಿಂದಾಗಿ ಆ್ಯಂಬುಲೆನ್ಸ್ ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ರೋಗಿಗಳ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ಜೀವಕ್ಕೂ ಅಪಾಯ ಸಂಭವಿಸುವ ಸಾಧ್ಯತೆಯಿದೆ. ಆ್ಯಂಬುಲೆನ್ಸ್ ನಲ್ಲಿ ಮಹಿಳೆಯರನ್ನು ಹೆರಿಗೆಗಾಗಿ ಸಾಗಿಸುವಾಗ ಇನ್ನಷ್ಟು ಅಪಾಯಕಾರಿ ಯಾಗಿರುತ್ತದೆ. ರಸ್ತೆಯ ಹೊಂಡಗಳಲ್ಲಿ ಬಿದ್ದು, ಎದ್ದು ಹೋಗುವಾಗ ಆ್ಯಂಬುಲೆನ್ಸ್‌ನಲ್ಲೇ ಹೆರಿಗೆಯಾದರೂ ಅಚ್ಚರಿಯಿಲ್ಲ ಎಂದು ಆ್ಯಂಬುಲೆನ್ಸ್ ಚಾಲಕರೇ ಹೇಳುತ್ತಿದ್ದಾರೆ.
Advertisement