ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷಕ್ಕೆ (2020-21)ಎಂಜಿನಿಯರಿಂಗ್, ಯೋಗ ಮತ್ತು ನ್ಯಾಚುರೋಪಥಿ, ಕೃಷಿ ವಿಜ್ಞಾನ ಮೊದಲಾದ ವೃತ್ತಿಪರ ಕೋರ್ಸ್‌ಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಎ.22 ಮತ್ತು 23ರಂದು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಿದೆ.
ಮುಂದಿನ ವರ್ಷ ಯೋಗ ಮತ್ತು ನ್ಯಾಚುರೋಪಥಿ ಕೋರ್ಸ್‌ಗಳ ಪ್ರವೇಶಕ್ಕೆ ನೀಟ್ ಬರೆಯಬೇಕಿಲ್ಲ. ಸಿಇಟಿ ಮೂಲಕ ಪ್ರವೇಶ ಪಡೆಯಬಹುದು ಎಂಬುದನ್ನು ಪ್ರಾಧಿಕಾರ ಖಚಿತಪಡಿಸಿದೆ. ಆದರೆ ಆಯುರ್ವೇದ, ಯುನಾನಿ ಮತ್ತು ಹೋಮಿಯೋಪಥಿ ಕೋರ್ಸ್‌ಗಳಿಗೆ ಸಿಇಟಿ ಬರೆಯಲೇಬೇಕು ಎಂದು ಸ್ಪಷ್ಪಪಡಿಸಿದೆ.
ರಾಜ್ಯ ಸರಕಾರದ ನಿರ್ದೇಶದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮೊದಲ ವರ್ಷದ ಅಥವಾ ಮೊದಲ ಸೆಮಿಸ್ಟರ್ ಎಂಜಿನಿಯರಿಂಗ್, ತಂತ್ರಜ್ಞಾನ, ಯೋಗ ಮತ್ತು ನ್ಯಾಚುರೋಪಥಿ, ಕೃಷಿ ವಿಜ್ಞಾನ, ಪಶು ವೈದ್ಯಕೀಯ ಮತ್ತು ಪಶುಸಂಗೋಪನೆ, ಬಿಎಸ್ಸಿ ಕೃಷಿ, ಅರಣ್ಯ ವಿಜ್ಞಾನ, ರೇಷ್ಮೆ ಕೃಷಿ, ತೋಟಗಾರಿಕೆ, ಕೃಷಿ ಜೈವಿಕ ತಂತ್ರಜ್ಞಾನ, ಸಮುದಾಯ ವಿಜ್ಞಾನ, ಕೃಷಿ ಎಂಜಿನಿಯರಿಂಗ್, ಬಯೊ ಟೆಕ್ನಾಲಜಿ, ಹೈನುಗಾರಿಕೆ ತಂತ್ರಜ್ಞಾನ, ಬಿಎಫ್ಎಸ್ಸಿ(ಮೀನುಗಾರಿಕೆ) ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ, ಕೃಷಿ ಮಾರುಕಟ್ಟೆ ಮತ್ತು ಸಹಕಾರ, ಬಿ-ಫಾರ್ಮಾ, ಡಿ-ಫಾರ್ಮಾ ಕೋರ್ಸ್‌ಗಳ ಪ್ರವೇಶಕ್ಕಾಗಿ 2020ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.
ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್(ಆಯುರ್ವೇದ, ಯುನಾನಿ, ಹೋಮಿಯೋಪಥಿ) ಕೋರ್ಸ್‌ಗಳಿಗೆ ಅಭ್ಯರ್ಥಿಗಳು ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ(ಎನ್‌ಟಿಎ) ನಡೆಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್)-2020ರಲ್ಲಿ ಹಾಜರಾಗಬೇಕು.
ಆರ್ಕಿಟೆಕ್ಚರ್ ಕೋಸ್‌ನ ಪ್ರವೇಶಕ್ಕಾಗಿ ಅಭ್ಯರ್ಥಿಗಳು ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ನಡೆಸುವ ನ್ಯಾಷನಲ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಆರ್ಕಿಟೆಕ್ಚರ್(ಎನ್‌ಎಟಿಎ) ಪರೀಕ್ಷೆ ಅಥವಾ ಜೆಇಇ ಪೇಪರ್-2 ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಪ್ರಾಧಿಕಾದ ವೆಬ್‌ಸೈಟ್
//kea.kar.nic.in ನಲ್ಲಿ ಮಾಹಿತಿ ಪಡೆಯಬಹುದಾಗಿದೆ.
ಸಿಇಟಿ ವೇಳಾಪಟ್ಟಿ
ಎ.22ರ ಬೆಳಗ್ಗೆ 10.30ರಿಂದ 11.50ರವರೆಗೆ ಜೀವಶಾಸ್ತ್ರ, ಮಧ್ಯಾಹ್ನ 2.30ರಿಂದ 3.50ರವರೆಗೆ ಗಣಿತ ಪರೀಕ್ಷೆ ನಡೆಯಲಿದೆ. 23ರ ಬೆಳಗ್ಗೆ 10.30ರಿಂದ 11.50ರವರೆಗೆ ಭೌತಶಾಸ್ತ್ರ, ಮಧ್ಯಾಹ್ನ 2.30ರಿಂದ 3.50ರವರೆಗೆ ರಸಾಯನಶಾಸ್ತ್ರ ಪರೀಕ್ಷೆ ಹಮ್ಮಿಕೊಳ್ಳಲಾಗಿದೆ. ಎ.24ರ ಬೆಳಗ್ಗೆ 11.30ರಿಂದ ಮಧ್ಯಾಹ್ನ 12.30ರವರೆಗೆ ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಬೆಂಗಳೂರು ಕೇಂದ್ರದಲ್ಲಿ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದೆ.