ಹೊನ್ನಾವರ: ಜಿಲ್ಲೆಯಲ್ಲಿ ವಂಶಾವಳಿ ರಾಜಕಾರಣ ನಡೆಸಿವೆ. ಈ ಕುಟುಂಬ ಗಳು ಜಿಲ್ಲೆಗೆ ಕೊಟ್ಟಿದ್ದೇನು ಎಂಬ ಪ್ರಶ್ನೆ, ಜೊತೆಯಲ್ಲಿ ಒಮ್ಮೆ ಸೋಲಿಸಿದವನನ್ನು ಪಕ್ಷ ಬದಲಾಯಿಸಿದ ಮಾತ್ರಕ್ಕೆ ಗೆಲ್ಲಿಸಬೇಕೇ, ಇಂಥವರಿಂದ ಜಿಲ್ಲೆಗೆ ಏನು ಲಾಭ ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ನೂರಾರು ಪ್ರಜ್ಞಾವಂತ ಸ್ವಾತಂತ್ರ್ಯ ಹೋರಾಟ ಗಾರರಿದ್ದರೂ ಉಡುಪಿಯಿಂದ ಬಂದ ಜೋಕಿಮ್ ಆಳ್ವಾ ಮೂರು ಅವಧಿಗೆ ಸಂಸದರಾದರು. ಇವರ ಪತ್ನಿ ವೈಲೆಟ್ ಆಳ್ವಾ ಮತ್ತು ಮಗಳು ಮಾರ್ಗರೇಟ್ ಆಳ್ವಾ ರಾಜ್ಯಸಭೆ ಸದಸ್ಯರಾದರು.ಮಾರ್ಗರೇಟ್ ಆಳ್ವಾ ಕೆಲಕಾಲ ಸಚಿವರಾದರು, ಸಂಸದರಾದರು. ಕರಾವಳಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ನಿವೇದಿತಾ ಆಳ್ವಾ ಈಗ ಶಿರಸಿಯಿಂದ ಶಾಸಕರಾಗ ಬಯಸಿದ್ದಾರೆ. ವಿ.ಡಿ. ಹೆಗಡೆಯವರನ್ನು ದೇಶಪಾಂಡೆ ಪರಿಷತ್ ಸದಸ್ಯರನ್ನಾಗಿ ಮಾಡಿದ್ದರು. ಅವರ ಮಗನಿಗೆ ಅವಕಾಶ ಸಿಗಲಿಲ್ಲ. ಬೇರೆ ಪಕ್ಷದಿಂದ ಶಾಸಕರಾದರು. ಈಗ ಪುನಃ ಬಿಜೆಪಿಯಿಂದ ವಿಧಾನಸಭೆಗೆ ಸ್ಪರ್ಧಿಸಲಿದ್ದಾರೆ.
ಆರ್.ವಿ. ದೇಶಪಾಂಡೆ ನಾಲ್ಕು ದಶಕದಿಂದ ಜಿಲ್ಲೆಯನ್ನು ಪ್ರತಿನಿ ಸುತ್ತಿದ್ದಾರೆ. ಇವರ ಮಗ ಪ್ರಶಾಂತ ದೇಶಪಾಂಡೆ ಲೋಕಸಭೆಗೆ ನಿಂತು ಸೋತರೂ ಸಕ್ರೀಯ ರಾಜಕಾರಣದಲ್ಲಿದ್ದಾರೆ. ವಸಂತ ಅಸ್ನೋಟಿಕರ್ ಶಾಸಕರಾದರು, ಅವರ ಹತ್ಯೆಯ ನಂತರ ಪತ್ನಿ ಶುಭಲತಾ ಅಸ್ನೋಟಿಕರ್ ರಾಜಕೀಯಕ್ಕಿಳಿದರು. ಮಗ ಆನಂದ ಅಸ್ನೋಟಿಕರ್ ಶಾಸಕರಾದರು. ಈಗ ಜೆಡಿಎಸ್‌ನಿಂದ ಸ್ಪರ್ಧಿಸಲಿದ್ದಾರೆ. ಮೋಹನ ಶೆಟ್ಟಿ ಶಾಸಕರಾಗಿದ್ದರು. ಈಗ ಅವರ ಪತ್ನಿ ಶಾರದಾ ಮೋಹನ ಶೆಟ್ಟಿ ಶಾಸಕರಾಗಿದ್ದಾರೆ. ಅಮ್ಮ ಬಿಟ್ಟುಕೊಟ್ಟರೆ ರವಿ ಶೆಟ್ಟಿ ಸ್ಪರ್ಧಿಸುವ ಉಮೇದಿಯಲಿದ್ದಾರೆ. ಜಿಲ್ಲೆಗೆ ಒಟ್ಟಾರೆ ಈ ಕುಟುಂಬದ ಕೊಡುಗೆ ಏನು? ಶಾಶ್ವತವಾಗಿ ಬಹುಜನಕ್ಕೆ ಉಪಯೋಗವಾಗುವ ಯಾವ ಕೊಡುಗೆ ಇವರಿಂದ ಸಂದಿದೆ ಎಂದು ಜನ ಪ್ರಶ್ನಿಸುವಂತಾಗಿದೆ.
ಕಾಂಗ್ರೆಸ್‌ನಿಂದ ಶಾಸಕರಾಗಿದ್ದ ಭಟ್ಕಳದ ಜೆ.ಡಿ. ನಾಯ್ಕ,ಜೆಡಿಎಸ್‌ನಿಂದ ಶಾಸಕರಾಗಿದ್ದ ಕುಮಟಾದ ದಿನಕರ ಶೆಟ್ಟಿ, ಹಳಿಯಾಳದ ಸುನಿಲ್ ಹೆಗಡೆ, ಈಗ ಬಿಜೆಪಿಯಿಂದ ಶಾಸಕರಾಗ ಬಯಸಿದ್ದಾರೆ. ಬಿಜೆಪಿಯಿಂದ ಶಾಸಕರಾಗಿದ್ದ ಆನಂದ ಅಸ್ನೋಟಿಕರ್ ಈಗ ಜೆಡಿಎಸ್‌ನಿಂದ ಶಾಸಕರಾಗ ಬಯಸಿದ್ದಾರೆ. ಪಕ್ಷ ಬದಲಾಯಿಸಿದ ಮಾತ್ರಕ್ಕೆ ಜನ ಇವರನ್ನು ಆಯ್ಕೆ ಮಾಡಿಕೊಳ್ಳಲೇ ಬೇಕೇ, ಬಿಜೆಪಿಗಾಗಿ ಸ್ವಂತ ಹಣ ಖರ್ಚು ಮಾಡಿ ಮನಮನೆ ತಿರುಗಿದ ಡಾ| ಎಂ.ಪಿ. ಕರ್ಕಿ, ಡಾ| ಟಿ.ಟಿ ಹೆಗಡೆ, ಡಾ| ಪಿಕಳೆ, ಕಾಂಗ್ರೆಸ್‌ಗಾಗಿ ದುಡಿದಿದ್ದ ಶಾಂತರಾಮ ಹೆಗಡೆ, ಆರ್.ಎನ್. ನಾಯ್ಕ, ರಮಾನಂದ ನಾಯ್ಕ, ಇವರ ಆಯುಷ್ಯ ವ್ಯರ್ಥವಾಯಿತೇ? ಇವರ ಧ್ವನಿಗೆ ಬೆಲೆ ಇಲ್ಲದೆ ಹೋಯಿತೇ. ಗೆಲುವೇ ಮುಖ್ಯವಾಗಿ ಎಲ್ಲ ಪಕ್ಷಗಳು ಸಿದ್ಧಾಂತಗಳಿಗೆ ತಿಲಾಂಜಲಿ ಕೊಟ್ಟವೇ, ಇನ್ನೆಷ್ಟು ಕಾಲ ಅವರವರೇ ಆಳಬೇಕು? ಇವರು ಅನಿವಾರ್ಯವೇ ಎಂಬ ಪ್ರಶ್ನೆಯನ್ನು ಮತದಾರರು ಕೇಳುತ್ತಿದ್ದಾರೆ.
ಜೀಯು, ಹೊನ್ನಾವರ