Advertisement

ನವಜಾತ ಶಿಶುಗಳ ಉಳಿವಿನಲ್ಲಿ ಲಿಂಗ ಅಂತರ: ಎಚ್ಚೆತ್ತುಕೊಳ್ಳಬೇಕಾದ ಕಾಲ

06:00 AM Jan 21, 2018 | Team Udayavani |

ಶಿಶುಗಳ ನವಜಾತ ಕಾಲವು ಜನನದಿಂದ ತೊಡಗಿ ಮೊದಲ ಒಂದು ತಿಂಗಳ ಅವಧಿಯಾಗಿದೆ. ಈ ಅವಧಿಯಲ್ಲಿ ನವಜಾತ ಶಿಶು ಹೊಸ ಪರಿಸರಕ್ಕೆ ಹೊಂದಿಕೊಳ್ಳುತ್ತಿದ್ದು, ಮಾನಸಿಕವಾದ ಮತ್ತು ದೇಹ ರಚನೆಗೆ ಸಂಬಂಧಿಸಿದ ಬದಲಾವಣೆಗಳನ್ನು ಅನುಭವಿಸುತ್ತದೆ. ಇದು ಹಸುಳೆಯು ತಾಯಿಯ ಗರ್ಭದಿಂದ ಸ್ವತಂತ್ರ ಅಸ್ತಿತ್ವಕ್ಕೆ ಪರಿವರ್ತನೆಗೊಳ್ಳುವ ಅವಧಿ. ಪ್ರಸವದ ಬಳಿಕ ಮೊದಲ ಸುಮಾರು ನಾಲ್ಕು ವಾರಗಳು ಎಂದು ವ್ಯಾಖ್ಯಾನಿಸಲಾಗುವ ನವಜಾತ ಅವಧಿಯು ಪ್ರಾಯಶಃ ಮನುಷ್ಯನ ಬದುಕಿನಲ್ಲಿ ಅತ್ಯಂತ ಕಠಿನವಾದ ಕಾಲಾವಧಿ. ಪ್ರತೀ ವರ್ಷ 36 ಲಕ್ಷ ನವಜಾತ ಶಿಶುಗಳು ಬದುಕಿನ ಮೊದಲ ನಾಲ್ಕು ವಾರಗಳಲ್ಲಿ (ನವಜಾತ ಅವಧಿ) ಸಾವನ್ನಪ್ಪುತ್ತಿವೆ ಎಂದು ಅಂದಾಜಿಸಲಾಗಿದೆಯಾದರೂ ಮನೆಗಳಲ್ಲಿ ಉಂಟಾಗುವ ಇಂತಹ ಬಹುತೇಕ ನವಜಾತ ಶಿಶು ಮರಣಗಳು ಗಮನಕ್ಕೆ ಬಾರದೇ ಹೋಗುತ್ತಿವೆ. ಈ ಕಳವಳಕಾರಿ ವಿದ್ಯಮಾನದ ಬಗ್ಗೆ ಜಾಗೃತಿ ಮೂಡಿಸಲು ರಾಷ್ಟ್ರೀಯ ನವಜಾತ ಶಿಶು ವೇದಿಕೆಯು 2017ರ ನವೆಂಬರ್‌ ತಿಂಗಳಿನಲ್ಲಿ ನವಜಾತ ಶಿಶುಗಳ ಸಪ್ತಾಹವನ್ನು “ನವಜಾತ ಶಿಶುಗಳ ಉಳಿವಿನಲ್ಲಿ ಲಿಂಗ ಅಂತರ: ಎಚ್ಚತ್ತುಕೊಳ್ಳಬೇಕಾದ ಕಾಲ’ ಎಂಬ ಧ್ಯೇಯವನ್ನು ಇರಿಸಿಕೊಂಡು ಆಚರಿಸಿದೆ. 

Advertisement

ಜಾಗತಿಕವಾಗಿ 2016ರ ಮೊದಲ ತಿಂಗಳು ಅಂದರೆ ಜನವರಿಯಲ್ಲಿ 26 ಲಕ್ಷ ನವಜಾತ ಶಿಶುಗಳು ಮರಣ ಹೊಂದಿವೆ. ಪ್ರತೀದಿನ ಅಂದಾಜು 7,000 ಶಿಶುಗಳು ಮರಣವನ್ನಪ್ಪುತ್ತಿದ್ದು, ಇದು 5 ವರ್ಷದೊಳಗಣ ಮಕ್ಕಳ ಒಟ್ಟಾರೆ ಮರಣ ಪ್ರಮಾಣದ ಶೇ.46 ಆಗಿದೆ. ಭಾರತದಲ್ಲಿ ಪ್ರತೀವರ್ಷ 75 ಸಾವಿರ ನವಜಾತ ಶಿಶುಗಳು ಮರಣಿಸುತ್ತಿವೆ. ನವಜಾತ ಶಿಶು ಮರಣ ದರ (ನಿಯೊನೇಟಲ್‌ ಮೊರ್ಟಾಲಿಟಿ ರೇಟ್‌ – ಎನ್‌ಎಂಆರ್‌)ವು 1990ರಲ್ಲಿ ಪ್ರತೀ 1000 ಸಜೀವ ಜನನಗಳಲ್ಲಿ 52 ಆಗಿತ್ತು, ಅದು 2015ರಲ್ಲಿ  ಪ್ರತೀ 1000 ಸಜೀವ ಜನನಗಳಲ್ಲಿ 25ಕ್ಕೆ ಇಳಿದಿದೆ. ಆದರೂ ಈ ಇಳಿಕೆ ನಿಧಾನಗತಿಯದ್ದಾಗಿದೆ ಮತ್ತು ಜಗತ್ತಿನ ಇತರ ದೇಶಗಳಲ್ಲಿಯ ಐದು ವರ್ಷದೊಳಗಿನ ಮಕ್ಕಳು ಮತ್ತು ಶಿಶುಗಳ ಮರಣ ದರಕ್ಕಿಂತ ತುಂಬಾ ಹೆಚ್ಚು ಇದೆ. 

ಭಾರತ: ಜನನ ಸಮಯದಲ್ಲಿ ಲಿಂಗಾನುಪಾತ
ಭಾರತದಲ್ಲಿ 2015ರ ಜನಗಣತಿಯ ಪ್ರಕಾರ, ರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ಜನನ ದರವು (ಕ್ರೂಡ್‌ ಬರ್ತ್‌ ರೇಟ್‌ (ಸಿಬಿಆರ್‌) 20.8 ಆಗಿದೆ. ನವಜಾತ ಶಿಶು ಮರಣ ದರವು (ಐಎಂಆರ್‌) 1000 ಸಜೀವ ಜನನಗಳಿಗೆ 37 ಆಗಿದೆ. ಅತ್ಯಂತ ಗರಿಷ್ಠ ಐಎಂಆರ್‌ ಮಧ್ಯಪ್ರದೇಶದಲ್ಲಿ ದಾಖಲಾಗಿದೆ. ದೇಶದಲ್ಲಿಯ ಜನನ ಸಮಯದ ಲಿಂಗಾನುಪಾತವು 2012-2014ರಲ್ಲಿ 906 (1000 ಗಂಡು ಮಕ್ಕಳು: 906 ಹೆಣ್ಣು ಮಕ್ಕಳು) ಆಗಿದ್ದುದು 2013-2015ರಲ್ಲಿ 6 ಅಂಕಿ ಇಳಿಕೆಯಾಗಿ 900ಕ್ಕೆ ಕುಸಿದಿದೆ. ಕೇರಳದಿಂದ ವರದಿಯಾಗಿರುವ ಪ್ರತೀ 1000 ಗಂಡು ಮಕ್ಕಳಿಗೆ 967 ಹೆಣ್ಣುಮಕ್ಕಳು ದೇಶದ ಗರಿಷ್ಠ ಲಿಂಗಾನುಪಾತ; ಇದೇ ವೇಳೆ ಹರಿಯಾಣದಿಂದ ವರದಿಯಾಗಿರುವ 836 ದೇಶದ ಮಟ್ಟಿಗೆ ಅತ್ಯಂತ ಕನಿಷ್ಟ ಲಿಂಗಾನುಪಾತವಾಗಿದೆ. ಕರ್ನಾಟಕದಲ್ಲಿಯೂ ಲಿಂಗಾನುಪಾತ ಕುಸಿದಿದ್ದು, 2005ರಲ್ಲಿ ಪ್ರತೀ 1000 ಗಂಡು ಮಕ್ಕಳಿಗೆ 922 ಹೆಣ್ಣು ಮಕ್ಕಳು ಇದ್ದುದು 2015ರಲ್ಲಿ 910 ಆಗಿದೆ (ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆಯ ಅಂಕಿಅಂಶ).

– ಮುಂದಿನ ವಾರಕ್ಕೆ  

– ಡಾ| ಮರಿಯ ಪಾಯ್ಸ
ಅಸಿಸ್ಟೆಂಟ್‌ ಪ್ರೊಫೆೆಸರ್‌,
ಓಬಿಜಿ ನರ್ಸಿಂಗ್‌ ವಿಭಾಗ,
ಮಣಿಪಾಲ್‌ ಕಾಲೇಜ್‌ ಆಫ್ ನರ್ಸಿಂಗ್‌, ಮಣಿಪಾಲ

Advertisement
Advertisement

Udayavani is now on Telegram. Click here to join our channel and stay updated with the latest news.

Next