Advertisement
ಕ್ಷೇತ್ರದಲ್ಲಿ 500 ವರ್ಷಗಳ ಬಳಿಕ ಮಾತೆ-ಮಕ್ಕಳ ಪುನೀತ ಸಮಾಗಮ ನಡೆಯಿತು. ಮೂಲಸ್ಥಾನ ಗರಡಿಯಿಂದ ವೀರಪಥದಲ್ಲಿ ಇಳಿದು ಬಂದ ಕೋಟಿ – ಚೆನ್ನಯರು ಸತ್ಯಧರ್ಮ ಚಾವಡಿಯಲ್ಲಿ ಮಾತೆ ದೇಯಿಬೈದ್ಯೆತಿಯ ದರ್ಶನ ಮಾಡುವ ಕ್ಷಣಕ್ಕೆ ಗೆಜ್ಜೆಗಿರಿ ಮಣ್ಣಿನಲ್ಲಿ ಸಹಸ್ರಾರು ಸಂಖ್ಯೆಯ ಭಕ್ತರು ಕಾದುಕುಳಿತಿದ್ದರು. ತುಳುನಾಡಿನಾದ್ಯಂತ ಸುಮಾರು 240 ಗರಡಿಗಳಲ್ಲಿ ಕೋಟಿ ಚೆನ್ನಯರ ಆರಾಧನೆ ನಡೆಯುತ್ತಿದ್ದರೂ ಗೆಜ್ಜೆಗಿರಿ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕೂಡಿಬಂದ ಈ ಘಳಿಗೆಗೆ ವಿಶೇಷ ಮಹತ್ವವಿದೆ.
ಮಂತ್ರಿ ಮಲ್ಲಯ್ಯ ಬುದ್ಯಂತನನ್ನು ವಧೆ ಮಾಡಿದ ಬಳಿಕ, ಪರ್ಮಲೆ ಸಂಸ್ಥಾನ ವ್ಯಾಪ್ತಿ ಬಿಟ್ಟು ಪಂಜದ ಕಡೆಗೆ ಹೊರಡುವ ಸಂದರ್ಭ ದಲ್ಲಿ ಕೋಟಿ – ಚೆನ್ನಯರು ಮಾವನವರ ಆಶೀರ್ವಾದ ಪಡೆದು, ಕೊನೆಯ ಹಂತದಲ್ಲಿ ಗೆಜ್ಜೆಗಿರಿಯ ಮೇಲೆ ನಿಂತು ತಾಯಿಯ ಸ್ಮರಣೆ ಮಾಡುತ್ತಾರೆ. ಅದೇ ಜಾಗದಲ್ಲಿ ಈಗ ಮೂಲಸ್ಥಾನ ಗರಡಿ ನಿರ್ಮಾಣಗೊಂಡಿದೆ. ಗರಡಿಯಿಂದ ಸತ್ಯಧರ್ಮ ಚಾವಡಿ ವರೆಗೆ ನಿರ್ಮಿಸಿರುವ ವೀರಪಥದಲ್ಲಿ ಕೋಟಿ-ಚೆನ್ನಯ ದೈವ ಪಾತ್ರಿಗಳು ಗಾಂಭೀರ್ಯದಿಂದ ಸಾಗಿ ಬಂದರು. ಈ ಸಂದರ್ಭದಲ್ಲಿ ಕ್ಷೇತ್ರದ ಯಜಮಾನ ಶ್ರೀಧರ ಪೂಜಾರಿ, ಅನುವಂಶಿಕ ಮೊಕ್ತೇಸರರಾದ ಲೀಲಾವತಿ ಅಮ್ಮ, ಪದ್ಮನಾಭ ಸುವರ್ಣ, ರವೀಂದ್ರ ಸುವರ್ಣ, ಮಹಾಬಲ ಪೂಜಾರಿ, ದೇಯಿ ಬೈದ್ಯೆತಿ-ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಜಯಂತ ನಡುಬೈಲು, ಪ್ರಧಾನ ಕಾರ್ಯದರ್ಶಿ ರವಿ ಪೂಜಾರಿ ಚಿಲಿಂಬಿ, ಕಾರ್ಯದರ್ಶಿ ಸುಧಾಕರ ಸುವರ್ಣ ಹಾಗೂ ಉಲ್ಲಾಸ್ ಕೋಟ್ಯಾನ್, ಕೋಶಾಧಿಕಾರಿ ದೀಪಕ್ ಕೋಟ್ಯಾನ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪೀತಾಂಬರ ಹೇರಾಜೆ, ಕಾರ್ಯಾಧ್ಯಕ್ಷ ನಾರಾಯಣ ಪೂಜಾರಿ ಮಡ್ಯಂಗಳ, ನರೇಶ್ ಕುಮಾರ್ ಸಸಿಹಿತ್ಲು, ಪ್ರಧಾನ ಕಾರ್ಯದರ್ಶಿ ಯಶವಂತ ದೇರಾಜೆಗುತ್ತು, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಡಾ| ರಾಜಶೇಖರ ಕೋಟ್ಯಾನ್ ಸೇರಿದಂತೆ ಗಣ್ಯರು, ಭಕ್ತರು ಪಾಲ್ಗೊಂಡರು.
Related Articles
ಮೂಲಸ್ಥಾನ ಗರಡಿ ನೇಮ, ಪ್ರಸಾದ ವಿತರಣೆ, ದರ್ಶನ ಸೇವೆ, ಸೋಮವಾರ ಬೆಳಗ್ಗೆ ಸತ್ಯಧರ್ಮ ಚಾವಡಿಯಲ್ಲಿ ಕಲಶ ಹೋಮ, ಮಹಾಮಾತೆ ದೇಯಿ ಬೈದ್ಯೆತಿ ಮಹಾನೇಮ ವೈಭವ, ಪ್ರಸಾದ ವಿತರಣೆ, ಅನ್ನಸಂತರ್ಪಣೆಯೊಂದಿಗೆ 8 ದಿನಗಳ ಕಾರ್ಯಕ್ರಮ ಸಮಾಪನಗೊಂಡಿತು.
Advertisement
ಅಪೂರ್ವ ಕ್ಷಣಗೆಜ್ಜೆಗಿರಿಯ ಮೂಲಸ್ಥಾನ ಗರಡಿಯಲ್ಲಿ ಕೋಟಿ – ಚೆನ್ನಯರ ದರ್ಶನ ನಡೆದು ಬೆರ್ಮೆರ್ ಗುಂಡದಲ್ಲಿ ಫಲ ಸಮರ್ಪಣೆಯ ಬಳಿಕ ಮೇಲಿನಿಂದ ಕೆಳಗಿನ ತನಕ ದೀಪದ ಬೆಳಕಿನಲ್ಲಿ ಕಂಗೊಳಿಸುತ್ತಿದ್ದ ವೀರಪಥದಲ್ಲಿ ಚೆಂಡೆ, ಬ್ಯಾಂಡ್, ವಾದ್ಯ, ಜಯಘೋಷಗಳೊಂದಿಗೆ ಸುರಿಯೆ ಹಿಡಿದು ಆಗಮಿಸಿದ ಕೋಟಿ-ಚೆನ್ನಯರು ಸತ್ಯಧರ್ಮ ಚಾವಡಿಯಲ್ಲಿ ಮಾತೆ ದೇಯಿ ಬೈದ್ಯೆತಿಯ ದರ್ಶನ ಪಡೆದರು. ವೀರಪಥದ ಎರಡೂ ಬದಿಗಳಲ್ಲಿ ಹಾಗೂ ಕೆಳಭಾಗದಲ್ಲಿ ಸೇರಿದ ಭಕ್ತ ಸಮೂಹ ಈ ವಿಶೇಷ ಕ್ಷಣವನ್ನು ವೀಕ್ಷಿಸಿ ಪುನೀತರಾದರು. 10 ಲಕ್ಷಕ್ಕೂ ಅಧಿಕ ಭಕ್ತರು
ಫೆ. 24ರಿಂದ ಮಾ. 2ರ ತನಕ ನಡೆದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಮೂಲಸ್ಥಾನ ಗರಡಿ ನೇಮದಲ್ಲಿ 10 ಲಕ್ಷಕ್ಕೂ ಮಿಕ್ಕಿ ಭಕ್ತರು ಪಾಲ್ಗೊಂಡರು. ಲಕ್ಷಾಂತರ ಮಂದಿ ಉಪಾಹಾರ, ಭೋಜನ ಸ್ವೀಕರಿಸಿದರು. ಸಾವಿರಾರು ಸ್ವಯಂಸೇವಕರು ಅಚ್ಚುಕಟ್ಟಿನ ವ್ಯವಸ್ಥೆಗೆ ಶ್ರಮಿಸಿದ್ದರು.