ಜೈಪುರ : ರಾಜಸ್ಥಾನದ ಮುಂದಿನ ಮುಖ್ಯಮಂತ್ರಿ ಯಾರೆಂಬುದನ್ನು ನಿರ್ಧರಿಸುವ ಕಗ್ಗಂಟಿನ ಸಮಸ್ಯೆಯನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಉತ್ತಮ ಮುತ್ಸದ್ದಿತನ ತೋರಿ ಕೊನೆಗೂ ಬಗೆಹರಿಸಿದ್ದಾರೆ.
ಎರಡು ಬಾರಿಯ ಮುಖ್ಯಮಂತ್ರಿ, ಪಕ್ಷದ ಹಿರಿಯ ನಾಯಕ, ಅಶೋಕ್ ಗೆಹ್‌ಲೋಟ್ ಅವರನ್ನು ಸಿಎಂ ಆಗಿಯೂ, ಪಿಸಿಸಿ ಅಧ್ಯಕ್ಷ ಸಚಿನ್ ಪೈಲಟ್ ಅವರನ್ನು ಡೆಪ್ಯುಟಿ ಸಿಎಂ ಆಗಿಯೂ ಕಾಂಗ್ರೆಸ್ ಪಕ್ಷ ಘೋಷಿಸಿದೆ.
ಸಿಎಂ ಪಕ್ಷಕ್ಕಾಗಿ ತೀವ್ರ ಪೈಪೋಟಿ ನಡೆಸಿದ್ದ ಗೆಹ್‌ಲೋಟ್ ಮತ್ತು ಪೈಲಟ್ ಅವರ ನಡುವೆ ರಾಜಿ ಏರ್ಪಡಿಸುವಲ್ಲಿ ರಾಹುಲ್ ಗಾಂಧಿ ಯಶಸ್ವಿಯಾಗಿದ್ದಾರೆ. ಇವರ ಬೆಂಬಲಿಗರ ನಡುವೆ ಘರ್ಷಣೆ ಉಂಟಾಗಿ ರಸ್ತೆ ಮತ್ತು ರೈಲು ತಡೆ ನಡೆದಿದ್ದುದು ಕಾಂಗ್ರೆಸ್‌ಗೆ ತೀವ್ರ ಇರಿಸುಮುರಿಸು ಉಂಟು ಮಾಡಿತ್ತು.
ಅಶೋಕ್ ಗೆಹ್‌ಲೋಟ್, ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ರಾಜಸ್ಥಾನದ ಜನರಿಗೆ ಕೃತಜ್ಞತೆ ಅರ್ಪಿಸಿದ್ದಾರೆ. ರಾಜ್ಯದಲ್ಲಿ ಮಾಡಬೇಕಾದ ಕೆಲಸಗಳು ಬಹಳಷ್ಟಿವೆ; ಹಿಂದಿನ ಸಿಎಂ ರಾಜೆ ವಿರುದ್ಧ ಜನರಲ್ಲಿ ಬಹಳಷ್ಟು ಆಕ್ರೋಶಗಳಿವೆ. ನಾವು ರಾಜ್ಯದ ಸಮಸ್ತ ಜನರಿಗಾಗಿ ಕೆಲಸ ಮಾಡುವ ಸರಕಾರವನ್ನು ನೀಡಲು ಶ್ರಮಿಸುತ್ತೇವೆ ಎಂದು ಗೆಹ್‌ಲೋಟ್ ಹೇಳಿದರು.
ಗೆಹಲೋಟ್ ಅವರು 1998ರಿಂದ 2003 ಮತ್ತು 2008ರಿಂದ 2013ರ ಅವಧಿಯಲ್ಲಿ ರಾಜಸ್ಥಾನದ ಮುಖ್ಯಮಂತ್ರಿಯಾಗಿದ್ದರು.