Advertisement

ಬೇಸಿಗೆ ವಿಪತ್ತು ನಿರ್ವಹಣೆಗೆ ಸಜ್ಜಾಗಿ: ಡೀಸಿ

08:53 PM Mar 14, 2020 | Team Udayavani |

ಹಾಸನ: ಬೇಸಿಗೆಯಲ್ಲಿ ಕುಡಿಯುವ ನೀರು ಮತ್ತು ಜಾನುವಾರುಗಳ ಮೇವಿನ ಸಮಸ್ಯೆ ಹಾಗೂ ಉದ್ಭವಿಸುವ ಸಾಂಕ್ರಾಮಿಕ ರೋಗಗಳು ಮತ್ತು ಕಾಡ್ಗಿಚ್ಚು ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಲು ಅಧಿಕಾರಿಗಳು ಸಮನ್ವಯತೆಯಿಂದ ಕರ್ತವ್ಯ ನಿರ್ವಸಬೇಕೆಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಮಿತಿ ಸಭೆಯನ್ನು ಎಲ್ಲ ತಹಶೀಲ್ದಾರರು ಹಾಗೂ ಮತ್ತಿತರ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಜಿಲ್ಲಾಧಿಕಾರಿ, ಸುಮಾರು 309 ಗ್ರಾಮಗಳಲ್ಲಿ ಈ ಬಾರಿಯೂ ನೀರಿನ ಅಭಾವ ಉಂಟಾಗುವ ಸಾಧ್ಯತೆ ಇರುವುದರಿಂದ ತಾಲೂಕುವಾರು ತಹಶೀಲ್ದಾರ್‌

ಹಾಗೂ ಇತರೆ ಸಂಬಂಧಪಟ್ಟ ಅಧಿಕಾರಿಗಳು ಈಗಾಗಲೇ ಕೊರೆಸಲಾಗಿರುವ ಕೊಳವೆ ಬಾವಿಗಳನ್ನು ಪರಿಶೀಲಿಸಿ ಬೇಸಿಗೆಯಲ್ಲಿ ಅಗತ್ಯವಿರುವಷ್ಟು ನೀರು ಲಭ್ಯವಿದೆಯೇ ಎಂಬುದನ್ನು ಭೂ ವಿಜ್ಞಾನಿಗಳಿಂದ ಖಾತರಿ ಪಡಿಸಿಕೊಂಡು, ನಂತರ ನೀರಿನ ಅವಶ್ಯಕತೆ ಇದ್ದಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.

ಹೊಸ ಕೊಳವೆ ಬಾವಿಗೆ ಅನುಮತಿ ಅಗತ್ಯ: ಹೊಸದಾಗಿ ಕೊರೆಸಲಾದ ಕೊಳವೆ ಬಾವಿಗಳಿಗೆ ಹೊಸ ಪಂಪ್‌ ಹಾಗೂ ಇತರೆ ಅಗತ್ಯ ವಸ್ತುಗಳನ್ನು ಖರೀದಿಸುವ ಬದಲು ವಿಫ‌ಲವಾಗಿರುವ ಕೊಳವೆ ಬಾವಿಗಳ ವಸ್ತುಗಳನ್ನೇ ಮರುಬಳಕೆ ಮಾಡಬೇಕು. ಹೊಸ ಕೊಳವೆ ಬಾವಿ ಕೊರೆಸಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುಮೋದನೆ ಪಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕಾಡ್ಗಿಚ್ಚು ತಡೆಗಟ್ಟಿ: ಬೇಸಿಗೆಯಲ್ಲಿ ಅರಣ್ಯ ಪ್ರದೇಶಗಳಲ್ಲಿ ಕಾಡ್ಗಿಚ್ಚು ಉಂಟಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ವಹಿಸಿ ಸಾರ್ವಜನಿಕರು ಹಾಗೂ ಪ್ರವಾಸಿಗರು ಕಾಡ್ಗಿಚ್ಚು ಸಂಭವಿಸಬಹುದಾದ ಪ್ರದೇಶಗಳಿಗೆ ಹೋಗದಂತೆ ಅರಿವು ಮೂಡಿಸಬೇಕು ಎಂದ ಅವರು, ಸಾರ್ವಜನಿಕರು ಬೇಸಿಗೆಯಲ್ಲಿ ನೀರಿನ ಅಭಾವ ಸಂಭವಿಸುವುದರಿಂದ ನೀರನ್ನು ಶೇಖರಣೆ ಮಾಡುತ್ತಾರೆ.

Advertisement

ಶೇಖರಣೆ ಮಾಡಿದ ನೀರಿನಲ್ಲಿ ಲಾರ್ವಾಗಳು ಉತ್ಪತ್ತಿಯಾಗುವ ಸಂಭವವಿದ್ದು, ರೋಗಗಳು ಉಂಟಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ಶೇಖರಿಸಿದ ನೀರಿನ ಸಮರ್ಪಕ ನಿರ್ವಹಣೆಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಎ ಪರಮೇಶ್‌ ಮಾತನಾಡಿ ಕೊಳವೆ ಬಾವಿ ಕೊರೆಯುವ ಕಾರ್ಯಕ್ರಮವನ್ನು ಐಎಂಎಸ್‌ನಲ್ಲಿ ತೆಗೆದುಕೊಳ್ಳಲಾಗಿದೆ ಎಂಬುದನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಂಬಾಬು, ಉಪಭಾಗಾಧಿಕಾರಿಗಳಾದ ಡಾ.ನವೀನ್‌ ಭಟ್‌, ಗಿರೀಶ್‌ ನಂದನ್‌, ತಹಶೀಲ್ದಾರ್‌ ಶಿವಶಂಕರಪ್ಪ, ಜಿಲ್ಲಾ ಪಂಚಾಯಿತಿ ಕಾರ್ಯಪಾಲಕ ಎಂಜಿನಿಯರ್‌ ಶ್ರೀನಿವಾಸ್‌ ಹಾಗೂ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ನೀರು ಸರಬರಾಜಿಗೆ ಕ್ರಮ: ಬರ ಪೀಡಿತ ಪ್ರದೇಶವೆಂದು ಘೋಷಣೆಯಾದ ತಾಲೂಕುಗಳಿಗೆ ಎನ್‌ಡಿಆರ್‌ಎಫ್ನಡಿ ಕೊಳವೆ ಬಾವಿ ಕೊರೆಯಲು ಹಣ ನೀಡಲಾಗುವುದು. ಉಳಿದಂತೆ ಗ್ರಾಮ ಪಂಚಾಯತಿಯಿಂದ ನಿರ್ವಹಣೆ ಮಾಡಿ ನೀರು ಸರಬರಾಜು ಮಾಡಬೇಕು. ಯಾವುದೇ ತಾಲೂಕಿನಲ್ಲಿ ನೀರಿನ ಅಭಾವ ಉಂಟಾದ ತಕ್ಷಣವೇ ಜಿಲ್ಲಾಡಳಿತದ ಗಮನಕ್ಕೆ ತರಬೇಕೆಂದು ಜಿಲ್ಲಾಧಿಕಾರಿ ಗಿರೀಶ್‌ ತಾಕೀತು ಮಾಡಿದರು.

ಬೇಸಿಗೆಯಲ್ಲಿ ಜಾನುವಾರುಗಳಿಗೆ ಮೇವಿನ ಅಭಾವ ಉಂಟಾಗದಂತೆ ನಿಗಾವಹಿಸಬೇಕು. ರೈತರಿಗೆ ಮೇವಿನ ಕಿರು ಪೊಟ್ಟಣಗಳನ್ನು ವಿತರಿಸಿ ಮೇವು ಬೆಳೆಯಲು ಹಾಗೂ ಸರ್ಕಾರಿ ಕಾವಲುಗಳ ಜಾಗದಲ್ಲಿಯೂ ಮೇವು ಬೆಳೆಯಲು ಕ್ರಮವಹಿಸಿ ಯಾವುದೇ ಕಾರಣಕ್ಕೂ ಮೇವಿನ ಅಭಾವ ಉಂಟಾಗದಂತೆ ಮುಂಜಾಗ್ರತೆ ವಹಿಸುವಂತೆ ಪಶುಪಾಲನಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next