Advertisement

ಪ್ರವಾಹ ಪರಿಸ್ಥಿತಿ ಎದುರಿಸಲು ಸಜ್ಜಾಗಿ

10:01 AM Jul 07, 2019 | Team Udayavani |

ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದ ಗಡಿ ಭಾಗದ ನದಿಗಳಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಇದ್ದು, ಪ್ರವಾಹ ಪರಿಸ್ಥಿತಿ ಎದುರಿಸಲು ಅಧಿಕಾರಿಗಳು ಸಿದ್ಧರಾಗಬೇಕು ಎಂದು ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನಹಳ್ಳಿ ಸೂಚನೆ ನೀಡಿದರು.

Advertisement

ನಗರದ ಸಿಬಿ ಕೋರೆ ಪಾಲಿಟೆಕ್ನಿಕ ಕಾಲೇಜಿನ ಸಭಾ ಭವನದಲ್ಲಿ ಶನಿವಾರ ಅತಿವೃಷ್ಟಿ ಹಾಗೂ ಪ್ರವಾಹ ಮುನ್ನೆಚ್ಚರಿಕೆ ಕುರಿತು ಚಿಕ್ಕೋಡಿ ಉಪವಿಭಾಗದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ವಿಷಯದಲ್ಲಿ ಉದಾಸೀನತೆ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ. ಗಡಿ ಭಾಗದ ಕೃಷ್ಣಾ, ದೂಧಗಂಗಾ ಮತ್ತು ವೇಧಗಂಗಾ ನದಿಗಳಿಗೆ ಕಳೆದ 2005-06ರಲ್ಲಿ ಉಂಟಾದ ಪ್ರವಾಹದಿಂದ ಚಿಕ್ಕೋಡಿ ಉಪವಿಭಾಗದಲ್ಲಿ ಸಾಕಷ್ಟು ಹಾನಿ ಸಂಭವಿಸಿತ್ತು. ಇದರಿಂದ ಪ್ರವಾಹ ಬಂದರೆ ಎದುರಿಸಲು ಎಲ್ಲ ಇಲಾಖೆ ಅಧಿಕಾರಿಗಳು ಸನ್ನದ್ಧರಾಗಬೇಕು ಎಂದರು.

ಚಿಕ್ಕೋಡಿ,ರಾಯಬಾಗ ಮತ್ತು ಅಥಣಿ ತಾಲೂಕಿನ ನದಿ ತೀರದಲ್ಲಿ ಬರುವ ಗ್ರಾಮಗಳ ಜನರಲ್ಲಿ ಪ್ರವಾಹ ಕುರಿತು ಜಾಗೃತಿ ಮೂಡಿಸಬೇಕು. ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದರೆ ನದಿಗಳ ನೀರಿನ ಮಟ್ಟ ಅವಲೋಕಿಸುತ್ತಿರಬೇಕು. ನದಿ ನೀರಿನ ಮಟ್ಟ ಏರುತ್ತ ಇದ್ದರೆ ತಕ್ಷಣ ಜನರನ್ನು ಸ್ಥಳಾಂತರ ಮಾಡಲು ಸ್ಥಳಾವಕಾಶ ಗುರುತಿಸಬೇಕು. ಗಂಜಿ ಕೇಂದ್ರ ತೆಗೆಯಲು ಅನುಕೂಲ ಮಾಡಿಕೊಳ್ಳಬೇಕು. ಜನ-ಜಾನುವಾರಗಳಿಗೆ ಕುಡಿಯಲು ಶುದ್ಧ ನೀರಿನ ಘಟಕ ಸ್ಥಾಪನೆ ಮಾಡಬೇಕು. ವಿದ್ಯುತ್‌ ಕಡಿತವಾಗದಂತೆ ನೋಡಿಕೊಳ್ಳಬೇಕು. ಜನರ ರಕ್ಷಣೆಗೆ ಈಜುಗಾರರನ್ನು ಪತ್ತೆ ಹಚ್ಚಿ ಇಡಬೇಕು. ದೋಣಿ ವ್ಯವಸ್ಥೆ ಮಾಡಿಕೊಂಡಿರಬೇಕು. ಸಾರ್ವಜನಿಕರಿಗೆ ರೋಗ ರುಜಿನ ಹರಡದಂತೆ ಆರೋಗ್ಯ ಇಲಾಖೆ ಔಷಧೋಪಚಾರ ವ್ಯವಸ್ಥೆಯಲ್ಲಿ ಇರಬೇಕು ಎಂದರು.

ಮಳೆಯಿಂದ ಅಥವಾ ನದಿ ನೀರಿನಿಂದ ರಸ್ತೆ, ಗಟಾರ, ಬ್ರಿಜ್‌ಗಳು ಕಿತ್ತು ಹೋದರೆ ತಕ್ಷಣ ರಿಪೇರಿ ಮಾಡಿಕೊಳ್ಳಲು ಲೋಕೋಪಯೋಗಿ ಮತ್ತು ಪಂಚಾಯತರಾಜ್‌ ಎಂಜಿನಿಯರಿಂಗ್‌ ಇಲಾಖೆ ಸಿದ್ಧತೆ ಮಾಡಿಕೊಂಡಿರಬೇಕು. ಜನರನ್ನು ಸುರಕ್ಷಿತ ಸ್ಥಳಗಳಿಗೆ ತರಲು ಅಗ್ನಿಶಾಮಕ ದಳ, ಪೊಲೀಸರು, ನಿಪುಣ ಈಜುಗಾರರು, ಸಂಘ-ಸಂಸ್ಥೆಗಳ ಜೊತೆ ನಿಕಟ ಸಂಪರ್ಕದಲ್ಲಿರಬೇಕು. ಒಟ್ಟಾರೆ ಪ್ರವಾಹ ಎದುರಾದರೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಲ್ಲ ಇಲಾಖೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಲು ಸಿದ್ಧರಿರಬೇಕು ಎಂದರು.

Advertisement

ಗ್ರಾಮೀಣ ಮತ್ತು ನಗರ ಪಟ್ಟಣ ಪ್ರದೇಶಗಳಲ್ಲಿ ಮಳೆ ನೀರಿನಿಂದ ಅವಾಂತರ ಸೃಷ್ಟಿಯಾಗುವುದನ್ನು ತಪ್ಪಿಸಲು ಈಗಿನಿಂದಲೇ ಚರಂಡಿ ಸ್ವಚ್ಛತೆ ಮಾಡಿಕೊಳ್ಳಬೇಕು. ರಸ್ತೆಯಲ್ಲಿ ಕಸ ಇಲ್ಲದಂತೆ ನೋಡಿಕೊಳ್ಳಬೇಕು. ಮಳೆ ಸುರಿದ ಮೇಲೆ ರಸ್ತೆ ಮೇಲೆ ನೀರು, ಮನೆಯಲ್ಲಿ ನೀರು ಹೋದರೆ ಅದಕ್ಕೆ ಸ್ಥಳೀಯ ಅಧಿಕಾರಿಗಳೇ ನೇರವಾಗಿ ಹೊಣೆಯಾಗುತ್ತಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯ ಜನಪ್ರತಿನಿಧಿಗಳ ಜೊತೆ ಸಭೆ ನಡೆಸಿ ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದರು.

ಮಳೆಗಾಲ ಮುಗಿಯುವವರೆಗೂ ಅಧಿಕಾರಿಗಳು ಕೇಂದ್ರ ಸ್ಥಾನ ಬಿಟ್ಟು ಹೋಗುವಂತಿಲ್ಲ. ಜನರ ಸುರಕ್ಷತೆ ದೃಷ್ಟಿಯಿಂದ ತಾಲೂಕು ಮಟ್ಟದ ಅಧಿಕಾರಿಗಳು ಆಯಾ ತಹಶೀಲ್ದಾರರ ಲಿಖೀತ ಅನುಮತಿ ಇಲ್ಲದೆ ರಜೆ ಪಡೆಯುವಂತಿಲ್ಲ, ಏನಾದರೂ ಅವಘಡ ಸಂಭವಿಸಿದರೇ ಅಧಿಕಾರಿಗಳನ್ನೇ ನೇರ ಹೊಣೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯತ್‌ ಸಿಇಒ ಡಾ| ಕೆ.ವಿ.ರಾಜೇಂದ್ರ ಮಾತನಾಡಿ, ಮಳೆಗಾಲದಲ್ಲಿ ಅಂಗನವಾಡಿ, ಶಾಲಾ ಕಟ್ಟಡ ಸೋರಿ ಮಕ್ಕಳಿಗೆ ತೊಂದರೆಯಾಗುತ್ತದೆ. ಹೀಗಾಗಿ ಸೋರುತ್ತಿರುವ ಕಟ್ಟಡಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಶಿಥಿಲ ಕಟ್ಟಡ ಇದ್ದರೆ ಅವುಗಳನ್ನು ತೆರವುಗೊಳಿಸಿ ಅಪಾಯ ತಪ್ಪಿಸಲು ಸಿಡಿಪಿಒ ಮತ್ತು ಡಿಡಿಪಿಐ ತಮ್ಮ ತಮ್ಮ ಸಿಬ್ಬಂದಿಯ ಜೊತೆ ಸಭೆ ನಡೆಸಿ ಸೂಚನೆ ನೀಡಬೇಕು. ಸಾಂಕ್ರಾಮಿಕ ರೋಗ ಬರದಂತೆ ಆರೋಗ್ಯ ಇಲಾಖೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಗ್ರಾಮ ಮತ್ತು ನಗರ ಪಟ್ಟಣಗಳಲ್ಲಿ ಫಾಗಿಂಗ್‌ ಮಷಿನ್‌ ಮೂಲಕ ಔಷಧ ಸಿಂಪಡಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಚಿಕ್ಕೋಡಿ ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗನ್ನವರ ಪ್ರವಾಹ ಮುನ್ನೆಚ್ಚರಿಕೆ ಕ್ರಮಗಳ ಮಾಹಿತಿ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬೂದೆಪ್ಪ, ತಹಶೀಲ್ದಾರ್‌ ಡಾ| ಸಂತೋಷ ಬಿರಾದಾರ, ಸಿಪಿಐ ಬಸವರಾಜ ಮುಕರ್ತಿಹಾಳ, ಮುಖ್ಯಾಧಿಕಾರಿ ಡಾ| ಸುಂದರ ರೂಗಿ, ಮಹಾವೀರ ಬೋರನ್ನವರ, ಪರಿಮಳಾ ದೇಶಪಾಂಡೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next