Advertisement

ಗಾಯತ್ರಿ ಸ್ವೀಟ್ಸ್‌ ವಿದೇಶದಲ್ಲೂ ಫೇಮಸ್‌  

06:00 AM Dec 03, 2018 | |

ರಿಂಗ್‌ ರಸ್ತೆಯಲ್ಲಿ ನಿಂತಾಗ ಜಯದೇವ ಸಿಗ್ನಲ್‌ ಎದುರಿಗೆ.  ಅದಕ್ಕಿಂತ ಮೊದಲು ಒಂದು ಸರ್ಕಲ್‌ ಸಿಗುತ್ತದೆ. ಬೆಂಗಳೂರಲ್ಲಿ ಅದಕ್ಕೆ ಈಸ್ಟ್‌ ಎಂಡ್‌ ಅಂತಲೂ ಕರೆಯುತ್ತಾರೆ.  ಅಲ್ಲೇ ಎಡಭಾಗದ ಮರದ ಬುಡ‚ದಲ್ಲಿ ನಿಂತು ಒಂದಷ್ಟು ಜನ ತಲೆ ತಗ್ಗಿಸಿ ಏನೋ ಮೆಲ್ಲುತ್ತಿರುತ್ತಾರೆ. ದೂರದಿಂದ ನೋಡಿದರೆ ಈ ಕಡೆ ಮೆಡಿಕಲ್‌ ಸ್ಟೋರ್‌, ಆ ಕಡೆ ಅಯ್ಯಂಗಾರ್‌ ಬೇಕರಿ ಮಧ್ಯೆ ಅವಿತು ಕುಳಿತ ಈ ಗಾಯತ್ರಿ ಸ್ವೀಟ್‌ ಸ್ಟಾಲ್‌ ಕಾಣೋದೇ ಇಲ್ಲ.  ಸ್ವಲ್ವ ಹತ್ತಿರ ಹೋದರೆ “ಸ್ವೀಟ್‌ ಸ್ಟಾಲ್‌ ಚಿಕ್ಕದಾದರೂ, ರುಚಿಯ ಚಮತ್ಕಾರ ದೊಡ್ಡದು’ ಅನ್ನೋದು ತಿಳಿಯುತ್ತದೆ.  ಎದುರಿಗೆ ನಿಂತಾಗ- ಬಾಯಲ್ಲಿ ನೀರು ಬರುವುದು ಗ್ಯಾರಂಟಿ.  ಏಕೆಂದರೆ, ಪಾಕವನ್ನು ಹೊದ್ದು ಮಿನು ಮಿನುಗುವ ಬಾದುಶಹ,  ಫ‌ಳ ಫ‌ಳ ಹೊಳೆಯುವ ಚಂದ್ರಕಲ ನೋಡುತಲಿದ್ದರೆ ನಾಲಿಗೆ ಪಿಟಿ ಪಿಟಿ ಅಂತೈತೆ, ಮನಸ್ಸು ಚುಮ ಚುಮ ಆಗೆôತೀ.  ತಿನ್ನೋ ಆಸೆ ಹೆಚ್ಚಿಸಲು ಕಾಜು ಬರ್ಫಿ, ಸೋಂಪಪ್ಪಡಿ, ಜಹಂಗೀರು, ಲಡ್ಡು- ಹೆಚ್ಚು ಕಮ್ಮಿ ಹೀಗೆ 25ಥರದ ಸ್ವೀಟ್‌ಗಳೂ ಇವೆ.  ಒಳಗೆ ಕಣ್ಣಿಟ್ಟರೆ ಕಾರಾಬೂಂದಿ, ಮಿಕ್ಚರ್‌ಗಳು ಘಮ್ಮೆನ್ನುತ್ತವೆ. 

Advertisement

ಇದನ್ನೆಲ್ಲ ನೋಡಿದ ಮೇಲೆ,  ಏನು ಆರ್ಡರ್‌ ಮಾಡಬೇಕು ಅಂತ ತಲೆ ಕೆರೆದುಕೊಳ್ಳುತ್ತಿರುವಾಗಲೇ  – ಕೈಗೆ, ಐವತ್ತೋ, ನೂರು ಗ್ರಾಂ. ತೂಗುವಷ್ಟು ಸ್ವೀಟು-ಖಾರ ಬಂದು ಬೀಳುತ್ತದೆ… ಆಗ ಗಾಬರಿಯಾಗುವ ಸರತಿ ನಿಮ್ಮದು; ಇದಕ್ಕೂ ದುಡ್ಡುಕೊಡಬೇಕಾ ಅಂತ. 

“ನಿಧಾನಕ್ಕೆ ತಿನ್ನಿ ಸಾರ್‌,  ಗಾಬರಿ ಬೇಡ.  ಏನು ಬೇಕು ಅಂತ ಯೋಚನೆ ಮಾಡಿ ಹೇಳಿ… ‘ ಅಂತ ಮಾಲೀಕ ಮಂಜುನಾಥ ನಾವಡರು ಹೇಳಿದಾಗಲೇ ಸಮಾಧಾನವಾಗೋದು. 

 ಈ ಗಾಯತ್ರಿ ಸ್ವೀಟ್‌ ಸ್ಟಾಲ್‌ನ ವಿಶೇಷ ಎಂದರೆ ಇದೇ. ಸದಾ ಗಜಿಬಿಜಿಯಾಗಿರುವ ಸ್ಟಾಲ್‌ನಲ್ಲಿ ನಿಮ್ಮ ಸರತಿ ಬರುವವರೆಗೂ ಸುಮ್ಮನೆ ನಿಲ್ಲುವಂತಿಲ್ಲ, ಮೆಲ್ಲುತಾ ಇರಲು ಏನೋ ಒಂದು ಕೈಗಿಡುತ್ತಾರೆ; ಅದೂ ಪುಕ್ಕಟ್ಟೆ.

ಬೆಂಗಳೂರಿನ ಬೇರೆ ಯಾವ ಸ್ವೀಟ್‌ ಸ್ಟಾಲ್‌ನವರೂ ಈ ರೀತಿ ಪುಕ್ಕಟ್ಟೆ ಕೊಡುವುದಿಲ್ಲ. ಅವರೆಲ್ಲಾ, ಪ್ರತಿ ಗ್ರಾಂ. ಅನ್ನೂ ಲೆಕ್ಕ ಇಡುತ್ತಾರೆ. “ನೀವ್ಯಾಕೆ ಹೀಗೆ ಮಾಡ್ತೀರಿ, ಲಾಸ್‌ ಆಗೋಲ್ವೇ’  ಅಂದರೆ 73 ವರ್ಷದ ನಾವಡಜ್ಜ-

Advertisement

“ನೋಡಿ, ನಾನು ಬೆಂಗಳೂರಿಗೆ ಬಂದು ಮನೆ, ಮಠ ಮಾಡ್ಲಿಲ್ಲ. ಬದಲಾಗಿ, ಒಳ್ಳೊಳ್ಳೆ ಗ್ರಾಹಕರನ್ನೇ ಸಂಪಾದನೆ ಮಾಡಿದ್ದೇನೆ. ಇರೋತನಕ ಲಾಭ ಮಾಡೋದು ಒಂದೇ ಅಲ್ಲ, ಜನರನ್ನು ತೃಪ್ತಿ ಪಡಿಸಬೇಕು’ ಅಂತಾರೆ. 

ನಾವಡರ ಈ ಸ್ವೀಟ್‌ ಸ್ಟಾಲ್‌ ಶುರುಮಾಡಿದ್ದು 1984ರಲ್ಲಿ. ಮೂಲತಃ ಕುಂದಾಪುರದ ವಡೆಯರೆ ಹೋಬಳಿ ಗ್ರಾಮದವರು. ಹೋಟೆಲ್‌ ಕೆಲಸಕ್ಕೆ ಬೆಂಗಳೂರಿಗೆ ಬಂದವರು-  ಹೆಬ್ಟಾಳದ ಪೂರ್ಣಿಮಾ ಹಾಗೂ ಸಾಗರ್‌ ಥಿಯೇಟರ್‌ ಬಳಿ ಇದ್ದ ಹರೇ ರಾಮ ಹೋಟೆಲ್‌ನಲ್ಲಿ ಸಪ್ಲೆಯರ್‌ ಆಗಿದ್ದರು.  ಇನ್ನೆಷ್ಟು ದಿನ ಹೀಗೆ ಪಾತ್ರೆ, ಲೋಟಗಳನ್ನು ತೊಳೆಯೋದು ಮಾರ್ರೆ  – ಅಂತ ಯೋಚಿಸಿ, ಜಯದೇವ ಆಸ್ಪತ್ರೆಯ ಬೆನ್ನ ಭಾಗದ ರಸ್ತೆಯಲ್ಲಿ ಈ ಸ್ವೀಟ್‌ಸ್ಟಾಲ್‌ ಶುರು ಮಾಡಿದರು. ಮುಂದಿನ ಕಥೆಯನ್ನು ಅವರ ಬಾಯಲ್ಲೇ ಕೇಳಿ-

“ಸ್ವತಂತ್ರವಾಗಿಬದುಕುವ ಛಲದಿಂದ ಸಣ್ಣ ಈ ಸ್ಟಾಲ್‌ ಶುರು ಮಾಡಿದೆ. ಆತನಕ ನನಗೆ ಸ್ವೀಟ್‌, ಖಾರದ ಗಂಧ ಗಾಳಿಯೂ ಇರಲಿಲ್ಲ. ಬೆಂಗಳೂರಲ್ಲಿ ಬೆಸ್ಟ್‌ ಸ್ವೀಟ್‌ಗಳನ್ನು ಮಾಡುವ ಅಡಿಗೆಯವರನ್ನು ಕರೆತಂದು ತಿಂಡಿ ಮಾಡಿಸುತ್ತಿದ್ದೆ.  ಆಗ ಜಯದೇವಆಸ್ಪತ್ರೆ ಇರಲಿಲ್ಲ. ಅಲ್ಲಿ ಖಾಲಿ ಬಯಲಿತ್ತು. ಇಲ್ಲಿನ ಜನ ಬೆಳಗಿನ “ತಾಪತ್ರಯ’ ನೀಗಿ ಕೊಳ್ಳಲು ಚೆಂಬು ಹಿಡಿದು ಅಲ್ಲಿಗೆ ಹೋಗುತ್ತಿದ್ದರು. ಇಂಥ ಸಂದರ್ಭದಲ್ಲಿ ನಾನು ಸ್ವೀಟ್‌ ಸ್ಟಾಲ್‌ ಶುರುಮಾಡಿದ್ದು. ನಿಧಾನಕ್ಕೆ ಪಿಕಪ್‌ ಆಯ್ತು. ಈಗ ಜಗತ್‌ಪ್ರಸಿದ್ಧಿ ಪಡೆದಿದೆ’ ಅನ್ನುತ್ತಾರೆ ನಾವಡಜ್ಜ. 

ಇವರ ಸ್ಟಾಲ್‌ನಲ್ಲಿ ಬಾದುಶ, ಚಂದ್ರಕಲ, ಮೈಸೂರು ಪಾಕ್‌- ತಿನ್ನುವುದನ್ನು ಮರೆಯವಂತಿಲ್ಲ. ಇದರ ಜೊತೆ, ಗೋಡಂಬಿ ಮಿಶ್ರಿತ ಖಾರದ ಅವಲಕ್ಕಿ, ಬಾಂಬೆ ಮಿಕ್ಚರ್‌ ಒಂದು ಸಲ ತಿಂದರೆ, ಮತ್ತೆ ಮತ್ತೆ ತಿನ್ನಬೇಕೆಂಬ ಆಸೆ ಪುಟಿದೆಬ್ಬಿಸುತ್ತದೆ. 

ಎಲ್ಲಕ್ಕಿಂತ ವಿಶೇಷ ಎಂದರೆ- ಇವರ ಸ್ಟಾಲ್‌ನ ಯಾವುದೇ ಸಿಹಿ, ಖಾರ ತಿಂಡಿಗಳನ್ನು ಕೊಂಡರೂ ನಿಶ್ಚಿಂತೆಯಾಗಿ 15-20 ದಿನ ಇಡಬಹುದು. ಯಾವುದೇ ಕಾರಣಕ್ಕೂ ಕೆಡುವುದಿಲ್ಲ.  ಹೀಗಾಗಿಯೇ, ಅವಲಕ್ಕಿ, ಮೈಸೂರ್‌ಪಾಕ್‌- ಪ್ರತಿದಿನ ದುಬೈ, ಅಮೇರಿಕಕ್ಕೆ ಹಾರುತ್ತವೆ. ತಿಂಗಳಲ್ಲಿ ನಾಲ್ಕೈದು ಸಲ, ದುಬೈ, ಅಮೇರಿಕದ ನಾಲಿಗೆಯನ್ನು ಸವರುತ್ತದೆ. 

ಇದೆಲ್ಲ ಹೇಗೆ ಸಾಧ್ಯ ಅಂದಾಗ ನಾವಡರು ಮತ್ತೂಮ್ಮೆ ಮಾತು ಚಪ್ಪರಿಸಿದರು-

ನೋಡಿ, ನಮಗೆ ಲಾಭ ಮಾತ್ರವಲ್ಲ. ಗುಣಮಟ್ಟವೂ ಮುಖ್ಯ. ಅದಕ್ಕೇ ಕಾಳಜಿ ವಹಿಸಿ, ಕಡಲೆ ಬೇಳೆಯನ್ನು ಬಿಸಿಲಿಗೆ ಒಣಗಿ ಹಾಕಿ, ನಾವೇ ಪುಡಿ ಮಾಡಿ ಖಾದ್ಯ ಗಳನ್ನು ತಯಾರಿಸುತ್ತೇವೆ. ಇದಕ್ಕೆ ಬಳಸುವ ಎಣ್ಣೆ ಕೂಡ ಗುಣಮಟ್ಟದ್ದು. ಹೀಗಾಗಿ, ಅದು  ಬೇಗ ಕೆಡುವುದಿಲ್ಲ.  ನೋಡಿ ಬೇಕಾದರೆ- ಬಿಸಿ ಬಿಸಿ ಪೀಸು ಮೈಸೂರ್‌ ಪಾಕನ್ನು ಕೊಟ್ಟರು. ಬಾಯಲ್ಲಿ ಇಟ್ಟುಕೊಂಡರೆ ಬೆಣ್ಣೆಯಂತೆ ಕರಗಿ ಹೋಯಿತು. ಮೈಸೂರ್‌ಪಾಕ್‌, ಮಿಕ್ಚರ್‌ ರುಚಿಯ ಗುಟ್ಟು ಭೇದಿಸಿ ಹೊರಟಾಗ ಒಬ್ಬ ವ್ಯಕ್ತಿ ಸಿಕ್ಕರು- ಅವರೇ ಮಿಕ್ಚರ್‌ ಸುಂದರ್‌. ಗಾಯತ್ರಿ ಸ್ವೀಟ್‌ ಸ್ಟಾಲ್‌ ಶುರುವಾದಗಿನಿಂದ ಈವರೆಗೂ ಅವರೇ ಇಲ್ಲಿಯ ತಿಂಡಿಗಳ ಉಸ್ತುವಾರಿ ಹೊಸ್ತಿರುವವರು.  ಹೀಗಾಗಿ, ರುಚಿಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲವಂತೆ.  

ಗಾಯತ್ರಿ ಸ್ವೀಟ್‌ಸ್ಟಾಲ್‌ಗೆ ರಜೆ ಇಲ್ಲ. ಬೆಳಗ್ಗೆ 10ಕ್ಕೆ ಶುರುವಾದರೆ ರಾತ್ರಿ 10ರ ತನಕ ತೆರೆದಿರುತ್ತದೆ. ಮುಂದಿನ ಬೀದಿಯಲ್ಲೇ ಸಿಹಿತಿನಿಸುಗಳು ತಯಾರಾಗುವುದರಿಂದ ಎಲ್ಲವೂ ಬಿಸಿ, ಬಿಸಿಯಾಗೇ ದೊರೆಯುತ್ತದೆ.  ಹೀಗಾಗಿ,  ಇಲ್ಲಿ ನೀವೇನಾದರೂ ಒಮ್ಮೆ ತಿಂದರೆ ಮತ್ಯಾವ ಹೋಟೆಲ್‌ನ ತಿಂಡಿಗಳನ್ನೂ ಮನಸ್ಸು ಒಪ್ಪಲ್ಲ. ಹಾಗಿರುತ್ತದೆ ರುಚಿ. 

ಮಾಹಿತಿಗೆ-9902100315

– ಕಟ್ಟೆ ಗುರುರಾಜ್‌

Advertisement

Udayavani is now on Telegram. Click here to join our channel and stay updated with the latest news.

Next