Advertisement

ಗವಾಹ್‌ ಹೈ ಚಾಂದ್‌ ತಾರೇ ಗವಾಹ್‌ ಹೈ… 

06:00 AM Dec 25, 2018 | |

“ಪಿಜಿಗೆ ಬರುವುದು ಸ್ವಲ್ಪ ತಡವಾಯ್ತು. ಊಟವೂ ಇಲ್ಲ, ಸಂಜೆ ನಿನ್ನ ಜೊತೆ ಭೇಲ್‌ಪುರಿ ತಿಂದಿದ್ದಷ್ಟೆ. ವಿಪರೀತ ಹಸಿವು. ಎರಡು ಬಿಸ್ಕೆಟ್‌ ತಿಂದು ನೀರು ಕುಡಿದೆ’ ಜೋಲುಮೋರೆಯ ಇಮೋಜಿಯೊಂದಿಗೆ ಹೀಗೊಂದು ಸಂದೇಶವನ್ನೂ ಅವನಿಗೆ ಕಳುಹಿಸಿದಳು. ಅತ್ತ ಕಡೆಯಿಂದ ಸಾಂತ್ವನ ಬರಲಿಲ್ಲ. 

Advertisement

ನಸುಗೋಪದಿಂದಲೇ ಕಣ್ಮುಚ್ಚಿದಳು, ಎಫ್ಎಂ ರೇಡಿಯೋ ಹಚ್ಚಿ…

“ಕನಸಲಿ ನಡೆಸು ಬಿಸಿಲಾದರೆ ಒಲವನೆ  ಬಡಿಸು ಹಸಿವಾದರೆ 

ಜಗವ ಮರೆಸು ನಗುವ ಮುಡಿಸು ನೀ ನನ್ನ ಪ್ರೇಮಿ ಆದರೆ…’  

ಅವಳಿಷ್ಟದ ಹಾಡು ಕೇಳುತ್ತಾ ಕನಸು ಕಾಣತೊಡಗಿದಳು. ಮನಸ್ಸು ಬೆಚ್ಚಗಾಯಿತು. 

Advertisement

ಹತ್ತು ನಿಮಿಷಕ್ಕೆ ಅವನಿಂದ ಮೆಸೇಜ್‌- “ಮೊಬೈಲಿಗೆ ಊಟ ಇರಲಿಲ್ಲ, ತಡವಾದುದ್ದಕ್ಕೆ ಕ್ಷಮಿಸು, ಮಲಗಿಬಿಟ್ಯಾ?’ ಅವಳ ಕೋಪ ಒಮ್ಮೆಲೇ ಕರಗಿತು. “ಎಷ್ಟು ಸಲ ಹೇಳಿದ್ದೀನಿ, ಮೊಬೈಲ್‌ ಚಾರ್ಜ್‌ ವಿಷಯದಲ್ಲಿ ಯಾಮಾರಬೇಡ ಅಂತ. ನಿನ್ನಿಂದ ಉತ್ತರ ಬರದೇ ಹೋದರೆ ತಳಮಳ ಶುರುವಾಗಿಬಿಡುತ್ತೆ… ಇಲ್ಲ, ನಿದ್ದೆ ಹತ್ತಿರಲಿಲ್ಲ…ನೀನು ಬಂದಿದ್ಯಲ್ಲ …ಕನಸಿನಲ್ಲಿ’- ಇವಳು ಕೂತಲ್ಲೇ ನಾಚಿಕೊಂಡು, ತನ್ನಷ್ಟಕ್ಕೇ ನಗುತ್ತಾ, ಹಲ್ಕಿರಿವ ಇಮೋಜಿಯನ್ನೂ ರವಾನಿಸಿದಳು! 

ಅವನು ಹಗುರಾದ. 

ಹಿಂದೆಯೇ ಕೇಳಿದ: “ಏನು ಕನಸು ಕಾಣುತ್ತಿದ್ದೆ?’

“ಇನ್ನೇನು?ಈ ಪಿಜಿ ಸಹವಾಸ ಸಾಕಾಗಿದೆ. ನಮ್ಮದು ಅಂತ ಒಂದು ಗೂಡು ಆದರೆ ಎಷ್ಟು ಚಂದ. ನೀನು ಇಲ್ಲಿಗೆ ಬರೋದು ಯಾವಾಗ, “ನಾನು ನಿನ್ನವಳು’ ಅಂತ ತಲೆ ತಗ್ಗಿಸಿ, ನಾನು ನಾಚುವುದು ಯಾವಾಗ? ಐ ಮಿಸ್‌ ಯು, ಯು ನೋ ದಟ್‌..’
ಇವಳ ಪದಗಳಲ್ಲಿ ಪ್ರೀತಿ ತುಂಬಿತ್ತು. 

“ಇಷ್ಟು ದಿನವೇ ಕಾದಿದ್ದಾಗಿದೆ. ಇವತ್ತೂ ಅಮ್ಮ ಹೇಳಿದರು: “ಇನ್ನು ಒಂದು ತಿಂಗಳು ಕಾಯಿರಿ. ಪುಷ್ಯ ಮಾಸ ಕಳೀಲಿ, ಸಂಕ್ರಾಂತಿ ಬರ್ತಿದ್ದ ಹಾಗೆ ಓಲಗ ಊದಿಸೋಣ ಅಂತ’ ಅವನು ರಮಿಸಿದ..  

ಅವಳು ನರ್ತಿಸುವ ಬಾಲೆಯನ್ನು ರವಾನಿಸಿದಳು ತನ್ನ ಸಂಭ್ರಮವನ್ನು ವ್ಯಕ್ತಪಡಿಸಲು.

ರೇಡಿಯೋದಲ್ಲಿ ಅವಳ ಮೂಡ್‌ಗೆ ತಕ್ಕ ಹಾಡು… 

“ಗವಾಹ್‌ ಹೈ ಚಾಂದ್‌ ತಾರೇ ಗವಾಹ್‌ ಹೈ…’ 

ಅಲ್ಲವೇ, ನನ್ನ ನಿನ್ನ ಪ್ರೀತಿಗೆ ಆ ಚಂದ್ರ ತಾರೆಯರೇ ಸಾಕ್ಷಿ …

– ರಾಜಿ, ಬೆಂಗಳೂರು 

Advertisement

Udayavani is now on Telegram. Click here to join our channel and stay updated with the latest news.

Next