ಚಿತ್ರದುರ್ಗ: ವಿಕಲಚೇತನರಿಗೆ ಶೇ. 10 ರಷ್ಟು ಮೀಸಲಾತಿಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಎಲ್ಲಾ ಇಲಾಖೆಗಳಲ್ಲಿ ಮೀಸಲಿಡಬೇಕು ಎಂದು ಹಿರಿಯ ವಕೀಲ ದಾವಣಗೆರೆಯ ಡಾ| ರೇವಣ್ಣ ಬಳ್ಳಾರಿ ಒತ್ತಾಯಿಸಿದರು.
ನಗರದ ರೋಟರಿ ಬಾಲಭವನದಲ್ಲಿ ವಿಶೇಷ ಚೇತನರ ವೀಣಾಪಾಣಿ ಸಾಹಿತ್ಯ ಸಾಂಸ್ಕೃತಿಕ ಸಂಘದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿಕಲಚೇತನರಲ್ಲಿ ಸಾಕಷ್ಟು ಪ್ರತಿಭೆ ಇರುತ್ತದೆ. ಅಂಗವೈಕಲ್ಯವನ್ನು ಮೆಟ್ಟಿ ನಿಂತು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ಸಾಕಷ್ಟು ಸಾಧನೆಗಳನ್ನು ಮಾಡಿದ್ದಾರೆ. ಆದ್ದರಿಂದ ವಿಕಲಚೇತರನ್ನು ಕೇವಲವಾಗಿ ಕಾಣಬಾರದು. ಅನುಕಂಪ, ಸಹಾಯಕ್ಕಿಂತ ಪ್ರೋತ್ಸಾಹ ನೀಡಬೇಕಾಗಿದೆ. ರೈಲು, ಬಸ್ ಸೇರಿದಂತೆ ಉನ್ನತ ಶಿಕ್ಷಣದಲ್ಲಿ ವಿಕಲಚೇತನರಿಗೆ ಮೀಸಲಾತಿ ನೀಡಬೇಕು. ವಿಕಲಚೇತನರಲ್ಲೂ ಧೈರ್ಯ, ಸಾಹಸದ ಮನೋಬಲವಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲಾ ಸವಲತ್ತುಗಳು ವಿಕಲಚೇತನರಿಗೆ ತಲುಪಬೇಕು. ಆರೋಗ್ಯಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಸೌಲಭ್ಯಗಳು ಸಿಕ್ಕಾಗ ಮಾತ್ರ ವಿಕಲಚೇತನರು ಸಮಾಜದಲ್ಲಿ ಎಲ್ಲರಂತೆ ಬದುಕಲು ಸಾಧ್ಯ ಎಂದರು.
ಸಾಹಿತಿ ಹಾಗೂ ವೆಂಕಟೇಶ್ವರ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ| ಬಸವರಾಜ ಟಿ. ಬೆಳಗಟ್ಟ ಮಾತನಾಡಿ, ವಿಕಲಚೇತನರು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಇದಕ್ಕಾಗಿ ಅವರು ತಮ್ಮಲ್ಲಿನ ಕೀಳರಿಮೆಯನ್ನು ಬಿಡಬೇಕು. ಭಾಷೆ ಸಮಸ್ಯೆ ಮತ್ತು ಮುಜುಗರದಿಂದ ವಿಕಲಚೇತನರು ಮುಖ್ಯವಾಹಿನಿಗೆ ಬರಲು ಆಗುತ್ತಿಲ್ಲ. ಆದರೂ ಸ್ವಾಭಿಮಾನ ಮತ್ತು ದೃಢಸಂಕಲ್ಪ ಅವರಲ್ಲಿದೆ. ಆದರೆ ಅವಕಾಶಗಳ ಕೊರತೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು.
ಲೇಖಕ ಆನಂದಕುಮಾರ್ ಮಾತನಾಡಿ, ವಿಕಲಚೇತನರಲ್ಲಿ ನ್ಯೂನತೆ ಇರುವಂತೆ ಮಾನಸಿಕ ಖನ್ನತೆಗೊಳಗಾಗಿರುವವರು ಕೂಡ ವಿಕಲಚೇತನರೇ ಆಗಿದ್ದಾರೆ. ಅದಕ್ಕಾಗಿ ಸಾಮಾನ್ಯರಂತೆ ವಿಕಲಚೇತನರು ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಎಲ್ಲರ ಸಹಕಾರ ಅಗತ್ಯ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅವರ ನೆರವಿಗೆ ಮುಂದೆ ಬರಬೇಕು ಎಂದು ಮನವಿ ಮಾಡಿದರು.
ಎಸ್.ಕೆ.ಪಿ ಸೊಸೈಟಿ ನಿರ್ದೇಶಕ ಬ್ರಹ್ಮಾನಂದ ಗುಪ್ತ ಮಾತನಾಡಿ, ವಿಕಲಚೇತರ ವೀಣಾಪಾಣಿ ಸಾಹಿತ್ಯ ಸಾಂಸ್ಕೃತಿಕ ಸಂಘ ಬಲಿಷ್ಠವಾಗಿ ಬೆಳೆಯಲಿ. ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಲಿ ಎಂದು ಶುಭ ಕೋರಿದರು.
ಜಿಲ್ಲಾ ವಿಶೇಷಚೇತನರ ವೀಣಾಪಾಣಿ ಸಾಹಿತ್ಯ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಜಯಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಅಧ್ಯಕ್ಷೆ ದಯಾ ಪುತ್ತೂರ್ಕರ್ ಇದ್ದರು.