ಬೆಂಗಳೂರು: ಭಾರಿ ಕುತೂಹಲ ಕೆರಳಿಸಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣೆ ಈಗ ಮುಗಿದಿದ್ದು, ಬಿಜೆಪಿಯ ಅಭ್ಯರ್ಥಿ ಎಂ ಗೌತಮ್ ಕುಮಾರ್ ಅವರು ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
129 ಮತ ಪಡೆಯುವ ಮೂಲಕ ಗೌತಮ್ ಕುಮಾರ್ ಸರಳ ಬಹುಮತ ಪಡೆದು ಆಯ್ಕೆಯಾದರು. ಅವರ ವಿರುದ್ಧ 110 ಮತಗಳು ಚಲಾವಣೆಗೊಂಡವು. ಕಾಂಗ್ರೆಸ್ ನ ಸತ್ಯನಾರಾಯಣ ಅವರ ಪರ 112 ಮತಗಳು ಚಲಾವಣೆಯಾಯಿತು. ಹೀಗಾಗಿ ಮುಂದಿನ ಒಂದು ವರ್ಷಗಳ ಕಾಲ ಗೌತಮ್ ಕುಮಾರ್ ಮೇಯರ್ ಆಗಿ ಅಧಿಕಾರ ನಡೆಸಲಿದ್ದಾರೆ.
ಬಿಬಿಎಂಪಿಯ ಉಪಮೇಯರ್ ಪಟ್ಟವೂ ಬಿಜೆಪಿ ಪಾಲಾಗಿದೆ. ಬೊಮ್ಮನಹಳ್ಳಿ ವಾರ್ಡ್ ನ ಬಿಜೆಪಿ ಸದಸ್ಯ ರಾಮ್ ಮೋಹನ್ ಅವರು ಆಯ್ಕೆಯಾಗಿದ್ದಾರೆ. ರಾಮ್ ಮೋಹನ್ ಅವರ ಪರ 129 ಮತಗಳು ಮತ್ತು ವಿರುದ್ಧ 108 ಮತಗಳು ಚಲಾವಣೆಗೊಂಡವು. ಇವರ ಪ್ರತಿಸ್ಪರ್ಧಿಯಾಗಿದ್ದ ಜೆಡಿಎಸ್ ನ ಗಂಗಮ್ಮ ಪರ 116 ಮತಗಳು ಚಲಾವಣೆಗೊಂಡರೆ ವಿರುದ್ಧವಾಗಿ 120 ಮತಗಳು ಚಲಾವಣೆಯಾದವು.
ಮೇಯರ್ ಸ್ಪರ್ಧೆಗೆ ಅಂತಿಮವಾಗಿ ಬಿಜೆಪಿಯಿಂದ ಜೋಗುಪಾಳ್ಯ ವಾರ್ಡ್ ನ ಗೌತಮ್ ಕುಮಾರ್ ಮತ್ತು ಕಾಂಗ್ರೆಸ್ ನಿಂದ ದತ್ತಾತ್ರೇಯ ವಾರ್ಡ್ ಕಾರ್ಪೋರೇಟರ್ ಸತ್ಯನಾರಾಯಣ ಕಣದಲ್ಲಿದ್ದರು.
ಬಿಜೆಪಿಯಿಂದ ಎರಡನೇ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಪದ್ಮನಾಭ ರೆಡ್ಡಿ ನಾಮಪತ್ರ ಹಿಂಪಡೆದ ಕಾರಣ ಅಂತಿಮವಾಗಿ ಇಬ್ಬರು ಮಾತ್ರ ಕಣದಲ್ಲಿ ಉಳಿದರು.
ಕೆಲವು ಸದಸ್ಯರು ಗೈರಾದ ಕಾರಣ ಬಿಬಿಎಂಪಿ ಸಂಖ್ಯಾಬಲ 249ಕ್ಕೆ ಇಳಿದಿದ್ದು, ಬಿಜೆಪಿ 124, ಕಾಂಗ್ರೆಸ್ 100 ಜೆಡಿಎಸ್ 18 ಮತ್ತು ಇತರೆ 7 ಸದಸ್ಯರ ಸಂಖ್ಯಾಬಲ ಹೊಂದಿದೆ. ಮೇಯರ್ ಸ್ಥಾನಕ್ಕೆ ಮ್ಯಾಜಿಕ್ ನಂಬರ್ 125 ಆಗಿದೆ.
ಬಿಬಿಎಂಪಿಯ ಕೌನ್ಸಿಲ್ ಕಟ್ಟಡದಲ್ಲಿ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ ಅವರ ನೇತೃತ್ವದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು.