ನವದೆಹಲಿ: “ಅದಾನಿ ಗ್ರೂಪ್‌ನ ಪಯಣ ಆರಂಭವಾಗಿದ್ದು 3 ದಶಕಗಳ ಹಿಂದೆ. ಕಾಂಗ್ರೆಸ್‌ನ ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗಲೇ ನಮ್ಮ ಭವಿಷ್ಯ ಟೇಕ್ ಆಫ್ ಆಯಿತು.’
ಹೀಗೆಂದು ಹೇಳಿದ್ದು ಕೈಗಾರಿಕೋದ್ಯಮಿ ಗೌತಮ್ ಅದಾನಿ. ಪ್ರಧಾನಿ ಮೋದಿಯವರೊಂದಿಗಿನ ನಂಟಿನಿಂದಾಗಿ ಅದಾನಿ ಗ್ರೂಪ್ ಬೆಳೆಯುತ್ತಿದೆ ಎಂಬ ಆರೋಪ ತಳ್ಳಿಹಾಕುವ ವೇಳೆ ಅವರು ಈ ಹೇಳಿಕೆ ನೀಡಿದ್ದಾರೆ. “ನಾನು ಮತ್ತು ಪ್ರಧಾನಿ ಮೋದಿ ಒಂದೇ ರಾಜ್ಯಕ್ಕೆ ಸೇರಿದವರು. ಅದೇ ಕಾರಣಕ್ಕಾಗಿ ನನ್ನ ವಿರುದ್ಧ ಆಧಾರ ರಹಿತ ಆರೋಪ ಮಾಡಲಾಗುತ್ತಿದೆ. ಇದು ದುರದೃಷ್ಟಕರ’ ಎಂದು ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಅದಾನಿ ಬೇಸರ ವ್ಯಕ್ತಪಡಿಸಿದ್ದಾರೆ.
ಎಲ್ಲರೂ ಅಲ್ಪಾವಧಿಯ ಕನ್ನಡಕ ಧರಿಸಿಕೊಂಡು ನಮ್ಮ ಸಮೂಹದ ಯಶಸ್ಸನ್ನು ನೋಡುತ್ತಿದ್ದಾರೆ. ನನ್ನ ವೃತ್ತಿಪರ ಯಶಸ್ಸಿಗೆ ಯಾವನೇ ಒಬ್ಬ ನಾಯಕ ಕಾರಣ ಅಲ್ಲ.
ದೀರ್ಘಾವಧಿಯಲ್ಲಿ ವಿವಿಧ ಸರ್ಕಾರಗಳು, ನಾಯಕರು ಕೈಗೊಂಡ ಸಾಂಸ್ಥಿಕ ಸುಧಾರಣೆಗಳು ಮತ್ತು ನೀತಿನಿರೂಪಣೆಗಳು ಕಾರಣ. ರಾಜೀವ್ ಗಾಂಧಿ ಅವರು ರಫ್ತು-ಆಮದು ನೀತಿಯಲ್ಲಿ ತಂದ ಉದಾರೀಕರಣ, ಆರಂಭಿಕ ಹಂತದಲ್ಲಿ ನಮಗೆ ಉತ್ತೇಜನ ನೀಡಿತು. 1991ರಲ್ಲಿ ನರಸಿಂಹರಾವ್ ಮತ್ತು ಮನಮೋಹನ್ ಸಿಂಗ್ ಜೋಡಿ ಕೈಗೊಂಡ ದೊಡ್ಡಮಟ್ಟದ ಆರ್ಥಿಕ ಸುಧಾರಣೆಗಳು ನಮಗೆ ಬಲ ತಂದುಕೊಟ್ಟವು. ಈ ನೀತಿಗಳಿಂದ ಇತರೆ ಎಲ್ಲರಂತೆ ನನಗೂ ಅನುಕೂಲವಾಯಿತು.
1995ರಲ್ಲಿ ಗುಜರಾತ್‌ನಲ್ಲಿ ಕೇಶುಭಾಯಿ ಪಟೇಲ್ ಸಿಎಂ ಆದಾಗ, ಮುಂದ್ರಾದಲ್ಲಿ ಬಂದರು ನಿರ್ಮಾಣ ಮಾಡಿದ್ದು, 2001ರಲ್ಲಿ ಗುಜರಾತ್‌ನಲ್ಲಿ ಮೋದಿಯವರಿಂದಾಗಿ ಆದ ಅಭಿವೃದ್ಧಿ ಕೂಡ ನಮ್ಮ ಯಶಸ್ಸಿಗೆ ಪೂರಕವಾಗಿ ಕೆಲಸ ಮಾಡಿದವು ಎಂದೂ ಗೌತಮ್ ಅದಾನಿ ಹೇಳಿದ್ದಾರೆ.