ಕೇಪ್ ಟೌನ್: ಇಲ್ಲಿನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯ ರೋಚಕ ಘಟ್ಟದತ್ತ ಸಾಗುತ್ತಿದೆ. ದಕ್ಷಿಣ ಆಫ್ರಿಕಾ ಸರಣಿ ಗೆಲುವಿನತ್ತ ಸಾಗುತ್ತಿದ್ದರೆ, ಹರಿಣಗಳನ್ನು ತಡೆಯಲು ಟೀಂ ಇಂಡಿಯಾ ರಣತಂತ್ರ ರೂಪಿಸಿದೆ.
ಗುರುವಾರದ ಆಟದಲ್ಲಿ ವಿರಾಟ್ ಕೊಹ್ಲಿ ಡಿಆರ್ ಎಸ್ ವಿವಾದ ಹೆಚ್ಚು ಸದ್ದು ಮಾಡಿದೆ. ದಕ್ಷಿಣ ಆಫ್ರಿಕಾದ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ವೇಳೆ ಅಶ್ವಿನ್ ಎಸೆತದಲ್ಲಿ ಡೀನ್ ಎಲ್ಗರ್ ಎಲ್ ಬಿ ಬಲೆಗೆ ಬಿದ್ದರು. ಅಂಪೈರ್ ಎರಾಸ್ಮಸ್ ಕೂಡಾ ಔಟ್ ನೀಡಿದರು. ಆದರೆ ಡೀನ್ ಎಲ್ಗರ್ ರಿವೀವ್ ತೆಗೆದುಕೊಂಡರು. ರಿವೀವ್ ನಲ್ಲಿ ನೋಡಿದಾಗ ಬಾಲ್ ವಿಕೆಟ್ ಗಿಂತ ಮೇಲೆ ಹೋಗಿರುವುದು ಕಂಡಿತ್ತು. ಹೀಗಾಗಿ ಅಂಪೈರ್ ನಾಟೌಟ್ ತೀರ್ಪು ನೀಡಬೇಕಾಯಿತು.
ಮೂರನೇ ಅಂಪೈರ್ ನಿರ್ಧಾರಕ್ಕೆ ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್ ಸೇರಿದಂತೆ ಭಾರತೀಯ ಆಟಗಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸ್ಟಂಪ್ ಮೈಕ್ ಬಳಿ ತೆರಳಿದ ನಾಯಕ ವಿರಾಟ್, “ನಿಮ್ಮ ತಂಡದ ಮೇಲೂ ಫೋಖಸ್ ಮಾಡಿ, ಎದುರಾಳಿಯ ಮೇಲೆ ಮಾತ್ರವಲ್ಲ.” ಎಂದು ಬ್ರಾಡ್ ಕಾಸ್ಟ್ ಚಾನಲ್ ಸೂಪರ್ ಸ್ಪೋರ್ಟ್ಸ್ ವಿರುದ್ಧ ವಾಗ್ದಾಳಿ ನಡೆಸಿದರು. “ಹನ್ನೊಂದು ಮಂದಿಯ ವಿರುದ್ಧ ಸಂಪೂರ್ಣ ದೇಶ ಆಡುತ್ತಿದೆ” ಎಂದು ರಾಹುಲ್ ಹೇಳಿದರೆ, “ ನೀವು ಜಯ ಗಳಿಸಲು ಉತ್ತಮ ವಿಧಾನವನ್ನು ಹುಡುಕಬೇಕು ಸೂಪರ್ ಸ್ಪೋರ್ಟ್” ಎಂದು ಅಶ್ವಿನ್ ಕೂಗಾಡಿದರು.
ವಿರಾಟ್ ಕೊಹ್ಲಿಯ ಈ ನಡೆಗೆ ಮಾಜಿ ಆಟಗಾರ ಗೌತಮ್ ಗಂಭೀರ್ ಗರಂ ಆಗಿದ್ದಾರೆ. ಸ್ಟಾರ್ ಸ್ಪೋರ್ಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಗಂಭೀರ್, “ಇದು ಒಳ್ಳೆಯದಲ್ಲ. ಸ್ಟಂಪ್ ಮೈಕ್ ನ ಹತ್ತಿರ ಹೋಗಿ ಈ ರೀತಿ ಹೇಳಿರುವುದು ಸಭ್ಯತೆಯಲ್ಲ. ಇದು ಅಪ್ರಬುದ್ಧ ನಡೆ. ಭಾರತೀಯ ನಾಯಕನ ಬಳಿ ನಾವು ಇದನ್ನು ನಿರೀಕ್ಷೆ ಮಾಡುವುದಿಲ್ಲ” ಎಂದಿದ್ದಾರೆ.
ಇದನ್ನೂ ಓದಿ:ಗೆಲ್ಲಲು ಉತ್ತಮ ಮಾರ್ಗ ಹುಡುಕಿ..: ಡಿಆರ್ ಎಸ್ ನಿರ್ಧಾರಕ್ಕೆ ಕೊಹ್ಲಿ ತೀವ್ರ ಅಸಮಾಧಾನ
212 ರನ್ ಗುರಿ ಪಡೆದ ದಕ್ಷಿಣ ಆಫ್ರಿಕಾ ದಿನದ ಅಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿದೆ. ಗೆಲುವಿಗೆ ಇನ್ನು 111 ರನ್ ಅಗತ್ಯವಿದೆ. ಕೀಗನ್ ಪೀಟರ್ಸನ್ ಕ್ರೀಸ್ ನಲ್ಲಿದ್ದಾರೆ.