Advertisement

ಕಣ್ಣು ಕೋರೈಸುವ ದೀಪಗಳ‌ ಸಾಲು, ಎಲ್ಲಿ‌ ನೋಡಲಲ್ಲಿ ಕಿಕ್ಕಿರಿದು ನಿಂತ ಜನ, ಆಕರ್ಷಕವಾಗಿ ಅಲಂಕೃತಗೊಂಡ ದೇವಾಲಯ, ಓಂ ನಮಃ ಶಿವಾಯ ಎಂಬ ಭಕ್ತಿ ಪೂರ್ವಕ ಉದ್ಘೋಷ, ಭಕ್ತರಿಗೆಂದೇ ಭೂಮಿಗಿಳಿದು ಬಂದಂತೆ ಕಾಣುತ್ತಿದ್ದ ಶ್ರೀಮಂಜುನಾಥ ಸ್ವಾಮಿ. ಇದು ಕಾರ್ತಿಕ ಲಕ್ಷ ದೀಪೋತ್ಸವದ ಕೊನೆಯದಿನದಂದು ಶ್ರೀ ಕ್ಷೇತ್ರ ಧರ್ಮಸ್ಥಳ ಕಂಗಳಿಸುತ್ತಿದ್ದ ರೀತಿ. ಪಾದಯಾತ್ರೆಯೊಂದಿಗೆ ಆರಂಭವಾಗಿದ್ದ ಲಕ್ಷದೀಪೋತ್ಸವದ ಉತ್ಸವಗಳು ಕಾರ್ತಿಕ ಮಾಸದ ಅಮಾವಾಸ್ಯೆಯಂದು ಜರುಗಿದ ಗೌರಿಮಾರು ಕಟ್ಟೆ ಉತ್ಸವದೊಂದಿಗೆ ಸಂಪನ್ನವಾಯಿತು.

Advertisement

ಎಂದಿನಂತೆ ಚಂಡೆ ವಾದನದ ಮೂಲಕ ದೇವಾಲಯದ ಪ್ರಾಂಗಣಕ್ಕೆ ದೇವರನ್ನು ಸ್ವಾಗತಿಸಲಾಯಿತು. ನಂತರ ಅಮ್ಮನವರ ಪ್ರಧಾನ ಅರ್ಚಕರು ದೇವಾಲಯದಲ್ಲಿರುವ ಬಲಿ ಪೀಠಗಳಿಗೆ, ಅಷ್ಟ ದಿಗ್ಪಾಲಕರಿಗೆ ಬಿಲ್ವಪತ್ರೆ, ಅಕ್ಷತೆಗಳ ಮೂಲಕ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸ್ವಾಮಿಗೆ ಪೂಜೆ ಮಾಡುವ ಪ್ರಧಾನ ಅರ್ಚಕರು ಹೂವು ಮತ್ತು ವಿವಿಧ ಆಭರಣಗಳಿಂದ ಸಿಂಗರಿಸಿದ ಶ್ರೀ ಸ್ವಾಮಿಯ ಉತ್ಸವ ಮೂರ್ತಿಯನ್ನು ತಲೆಯ ಮೇಲೆ ಹೊತ್ತು ದೇವಾಲಯ ಪ್ರದಕ್ಷಿಣೆ ಮಾಡಿದರು.

ಪೂಜೆ, ಆರತಿಯ ಬಳಿಕ ದೇವರನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಅಷ್ಟಾವಧಾನ ಸೇವೆ ಸಲ್ಲಿಸಲಾಯಿತು. ಚತುರ್ವೇದ ಪಾರಾಯಣ, ಪುರಾಣ, ಗೀತ, ಪಂಚಾಗ, ಸುಶಿರವಾದ್ಯಗಳಾದ ಕೊಳಲು, ಓಲಗ, ಚರ್ಮವಾದ್ಯಗಳಾದ ಚಂಡೆ, ಮದ್ದಳೆ, ಶಂಖ, ಜಾಗಟೆ, ಸಂಗೀತ ಗಾಯನದ ಮೂಲಕ ದೇವರಿಗೆ ಪೂಜೆ ಸಲ್ಲಿಸಲಾಯಿತು. ಹದಿನಾರು ಸುತ್ತಿನ ಬಳಿಕ ದೇವರನ್ನು ಹೊತ್ತು ದೇವಾಲಯದ ಮುಂಭಾಗದಲ್ಲಿ ಹೂವು, ದೀಪಗಳಿಂದ ಸಜ್ಜಾಗಿ ನಿಂತಿದ್ದ ಬೆಳ್ಳಿರಥಕ್ಕೆ ತರಲಾಯಿತು.

ರಥಾರೋಹಣನಾದ ಶ್ರೀ ಸ್ವಾಮಿಯನ್ನು ಆನೆ, ನಂದಿ, ತಮಟೆ, ಮಂಗಳವಾದ್ಯ, ಛತ್ರ ಚಾಮಾರಾದಿಗಳ ಸಹಿತ ದೇವಾಲಯ ಪ್ರದಕ್ಷಿಣೆ ಬಂದು ಶ್ರೀ ಕ್ಷೇತ್ರದ ಮುಖ್ಯ ದ್ವಾರದ ಬಳಿಯಿರುವ ಗೌರಿಮಾರು ಕಟ್ಟೆಗೆ ಕರೆತರಲಾಯಿತು. ಅಲ್ಲಿ ದೇವರನ್ನು ಪ್ರತಿಷ್ಠಾಪಿಸಿ, ಪೂಜಾಕೈಂಕರ್ಯಗಳನ್ನು ನೆರವೇರಿಸಲಾಯಿತು. ಋತ್ವಿಕರು, ಆಗಮಿಕರಿಂದ ವೇದಘೋಷ, ಮಂಗಳವಾದ್ಯ ವಾದನ, ಸಂಗೀತ ಗಾಯನ ಸೇರಿದಂತೆ ಮಹಾ ಮಂಗಳಾರತಿ ಬೆಳಗುವುದರೊಂದಿಗೆ ಗೌರಿಮಾರುಕಟ್ಟೆಯ ಪೂಜೆ ಸಾಂಗವಾಗಿ ನೆರವೇರಿಸಲಾಯಿತು.

Advertisement

ಪೂಜೆಯ ನಂತರ ದೇವಾಲಯಕ್ಕೆ ಹಿಂತಿರುಗಿದ ರಥದಿಂದ ಶ್ರೀ ಸ್ವಾಮಿಯ ಉತ್ಸವ ಮೂರ್ತಿಯನ್ನು ದೇವಾಲಯಕ್ಕೆ ಕೊಂಡೊಯ್ಯಲಾಯಿತು. ಈ ಸಂದರ್ಭದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ವಾದ್ಯ ವೃಂದ, ನಂದಿಕೋಲು ಕುಣಿತ, ವೀರಗಾಸೆ, ತಮಟೆ, ಕಂಸಾಳೆಗಳು ಜನರ ಮನಸೆಳೆದವು. ಕೆರೆಕಟ್ಟೆ ಉತ್ಸವದಿಂದ ಆರಂಭಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷ ದೀಪೋತ್ಸವಕ್ಕೆ ಗೌರಿ ಮಾರುಕಟ್ಟೆ ಉತ್ಸವ ಈ ವರ್ಷದ ಉತ್ಸವಗಳಿಗೆ ವಿರಾಮ ಹಾಕಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next