ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್, ಸಂಶೋಧಕ ಎಂ.ಎಂ.ಕಲಬುರ್ಗಿ, ಚಿಂತಕರಾದ ನರೇಂದ್ರ ದಾಬೋಲ್ಕರ್, ಪನ್ಸಾರೆ ಹತ್ಯೆಗಳನ್ನು ಭಯೋತ್ಪದನಾ ಕೃತ್ಯ ಎಂದು ಘೋಷಿಸಬೇಕು ಎಂದು ಗೌರಿ ಲಂಕೇಶ್ ಹತ್ಯಾ ವಿರೋಧಿ ವೇದಿಕೆ ಆಗ್ರಹಿಸಿದೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ರಾಜ್ಯ ಸಂಚಾಲಕಿ ಕೆ.ನೀಲಾ, ಸಂಘ ಪರಿವಾರದ ಜತೆ ಸಂಪರ್ಕದಲ್ಲಿರುವವರೇ ಗೌರಿ ಲಂಕೇಶ್ ಅವರನ್ನು ಹತ್ಯೆಗೈದಿದ್ದಾರೆ ಎಂದು ಆರೋಪಿಸಿದರು.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಎಸ್‌ಐಟಿ ತನಿಖೆಯನ್ನು ತೀವ್ರಗೊಳಿಸಿ ಹಂತಕರನ್ನು ಶೀಘ್ರದಲ್ಲೇ ಬಂಧಿಸಬೇಕು. ಗೌರಿ ಹತ್ಯೆಯನ್ನು ಸಂಭ್ರಮಿಸಿದ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಪ್ರಮುಖವಾಗಿ ಆರೋಪಿಗಳನ್ನು ಸೆರೆ ಹಿಡಿಯುವ ಜತೆಗೆ, ಕೊಲೆಗೆ ಪ್ರೇರಣೆ ನೀಡಿದ ಸಂಘಟನೆಗಳ ಹಿನ್ನೆಲೆಯನ್ನು ಬಹಿರಂಗಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ಸುಳಿವು ಪತ್ತೆಯಾಗಿಲ್ಲ: ಗೌರಿ ಲಂಕೇಶ್ ಹತ್ಯೆಗೈದು ಒಂದು ತಿಂಗಳು ಕಳೆದಿದೆ. ಆದರೆ, ಸರ್ಕಾರ ರಚನೆ ಮಾಡಿರುವ ಎಸ್‌ಐಟಿ ಇದುವರೆಗೂ ಆರೋಪಿಗಳ ಒಂದು ಸಣ್ಣ ಸುಳಿವು ಸಹ ಪತ್ತೆ ಮಾಡಿಲ್ಲ. ಇದನ್ನು ಪ್ರತಿಯೊಬ್ಬರು ಖಂಡಿಸಬೇಕಿದೆ. ಗೌರಿ ಲಂಕೇಶ್ ಹತ್ಯೆಯನ್ನು ಕೆಲ ವಿಕೃತ ಮನಸ್ಸುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಿಸಿವೆ. ಇತಂಹ 100ಕ್ಕೂ ಅಧಿಕ ಮಂದಿಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಆದರೆ, ಕೆಲವರನ್ನು ಮಾತ್ರ ವಿಚಾರಣೆ ನಡೆಸಿದ್ದಾರೆ. ಮೂಲ ಕಾರಣಕರ್ತರನ್ನು ವಿಚಾರಣೆ ಮಾಡಿಲ್ಲ. ಹೀಗಾಗಿ ಎಸ್‌ಐಟಿ ಅಧಿಕಾರಿಗಳಿಗೆ ಆರೋಪಿಗಳ ಬಗ್ಗೆ ಮಾಹಿತಿ ಸಿಗುತ್ತಿಲ್ಲ ಎಂದು ಆರೋಪಿಸಿದರು.
ಗೌರಿ ಹತ್ಯೆ ನಮ್ಮೆಲ್ಲರಲ್ಲಿ ಆತಂಕ ಮೂಡಿಸಿದೆ. ಜತೆಗೆ ದೇಶದೆಲ್ಲೆಡೆ ತೀವ್ರ ಪ್ರತಿರೋಧ ಹುಟ್ಟು ಹಾಕಿದೆ. ಹತ್ಯೆ ಖಂಡಿಸಿ ದೇಶದ ನೂರಾರು ಕಡೆ ಪ್ರತಿಭಟನೆಗಳು ನಡೆಯುತ್ತಿವೆ. ಅಷ್ಟೇ ಅಲ್ಲದೇ, ಫ್ಯಾಸಿಸ್ಟ್ ಶಕ್ತಿಗಳ ಕ್ರೌರ್ಯ ಎದುರಿಸಲು ಹಾಗೂ ಪ್ರಜಾಪ್ರಭುತ್ವದ ಆಶಯಗಳನ್ನು ಉಳಿಸಿಕೊಳ್ಳಲು ಇನ್ನೂ ಹೆಚ್ಚಿನ ಸಂಘಟಿತ ಹೋರಾಟದ ಅಗತ್ಯವಿದೆ. ಇದಕ್ಕೆ ಎಲ್ಲರೂ ಒಟ್ಟಾಗಬೇಕಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ, ಗೌರಮ್ಮ, ಅನಂತನಾಯಕ್, ನರಸಿಂಹಮೂರ್ತಿ ದೊಡ್ಡಿಪಾಳ್ಯ ಉಪಸ್ಥಿತರಿದ್ದರು.
ಅ.5ರಂದು ದೆಹಲಿಯಲ್ಲಿ ಹೋರಾಟ: ರಾಷ್ಟಮಟ್ಟದಲ್ಲಿ ಗೌರಿ ಲಂಕೇಶ್ ಹತ್ಯೆ ಬಗ್ಗೆ ಆಕ್ರೋಶಗಳು, ಆತಂಕಗಳು ಮೂಡಿ ಬಂದರೂ ರಾಜ್ಯ ತನಿಖಾ ತಂಡ ತನ್ನ ತನಿಖೆಯ ವೇಗ ಹೆಚ್ಚಿಸುತ್ತಿಲ್ಲ. ಹೀಗಾಗಿ ಅ.5ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ರ್ಯಾಲಿ ನಡೆಸಲು ವೇದಿಕೆ ಸಿದ್ಧತೆ ನಡೆಸಿದೆ. ಇದಕ್ಕೆ ಕಲಾವಿದರು, ಸಾಹಿತಿಗಳು, ಪತ್ರಕರ್ತರು, ವಿದ್ಯಾರ್ಥಿಗಳು, ಪ್ರಗತಿಪರ ಸ್ವಾಮೀಜಿಗಳು, ಚಿಂತಕರು ಭಾಗಿಯಾಗಲಿದ್ದಾರೆ. ಇದೇ ವೇಳೆ ದೇಶದ ವಿವಿಧೆಡೆ ಹೋರಾಟಗಳು ನಡೆಯಲಿವೆ ಎಂದು ನೀಲಾ ತಿಳಿಸಿದರು.