Advertisement

ಗೌರಿ ಲಂಕೇಶ್‌ ಹತ್ಯೆ ಆರೋಪಿಗಳ ಪತ್ತೆಯಾಗಲಿ

07:51 AM Sep 07, 2017 | Team Udayavani |

ಕನ್ನಡದ ಪ್ರಮುಖ ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್‌ ಬರ್ಬರ ಹತ್ಯೆ ದೇಶಾದ್ಯಂತ ತಲ್ಲಣವುಂಟು ಮಾಡಿದೆ. 2013ರಲ್ಲಿ ಪುಣೆಯಲ್ಲಿ ನಡೆದ ನರೇಂದ್ರ ದಾಭೋಲ್ಕರ್‌, 2015ರಲ್ಲಿ ಕೊಲ್ಲಾಪುರದಲ್ಲಿ ನಡೆದ ಗೋವಿಂದ ಪನ್ಸರೆ ಮತ್ತು ಅದೇ ವರ್ಷ ಧಾರವಾಡದಲ್ಲಿ ನಡೆದ ಎಂ. ಎಂ. ಕಲಬುರಗಿ ಹತ್ಯೆ ಘಟನೆಗಳಿಗೂ ಮಂಗಳವಾರ ಬೆಂಗಳೂರಿನಲ್ಲಿ ನಡೆದ ಗೌರಿ ಲಂಕೇಶ್‌ ಹತ್ಯೆಗೂ ಹಲವಾರು ಸಾಮ್ಯತೆಗಳಿವೆ. ಹತ್ಯೆಯಾದ ಎಲ್ಲರೂ ವಿಚಾರವಾದಿಗಳಾಗಿದ್ದರು, ಒಂದು ನಿರ್ದಿಷ್ಟ ಸಿದ್ಧಾಂತದ ಪ್ರಬಲ ಪ್ರತಿಪಾದಕರಾಗಿದ್ದರು ಹಾಗೂ ಇದೇ ವೇಳೆ ಇನ್ನೊಂದು ಸಿದ್ಧಾಂತದ ಕಡು ವಿರೋಧಿಗಳಾಗಿದ್ದರು. ಎಲ್ಲರನ್ನೂ ಬಹುತೇಕ ಒಂದೇ ರೀತಿಯಲ್ಲಿ ಸಾಯಿಸಲಾಗಿದೆ. ಹಿಂದಿನ ಮೂರು ಹತ್ಯೆಗಳ ತನಿಖೆ ಇನ್ನೂ ದಡ ಮುಟ್ಟಿಲ್ಲ. ಕಲಬುರಗಿ ಹತ್ಯೆ ಎರಡು ವರ್ಷಗಳಿಂದ ಕುಂಟುತ್ತಾ ಸಾಗಿದೆ. ಧಾಬೋಲ್ಕರ್‌ ಪ್ರಕರಣದಲ್ಲಿ ಸಿಬಿಐಯೇ ತನಿಖೆ ನಡೆಸಿದರೂ ಅಪರಾಧಿಗಳು ಯಾರೆಂದು ಪತ್ತೆಯಾಗಿಲ್ಲ. ಈ ಹತ್ಯೆಗಳು ಇಡೀ ಪೊಲೀಸ್‌ ವ್ಯವಸ್ಥೆಗೆ ಸವಾಲಾಗಿ ಪರಿಣಮಿಸಿರುವುದನ್ನು ನೋಡುವಾಗ ಆಶ್ಚರ್ಯವಾಗುತ್ತದೆ. ಚಿಕ್ಕದೊಂದು ಸುಳಿವು ಕೂಡ ಇಲ್ಲದ ಪ್ರಕರಣಗಳನ್ನು ಭೇದಿಸುವ ಪೊಲೀಸರಿಗೆ ಹಾಡಹಗಲೇ 

Advertisement

ನಡೆದ, ಸಿಸಿಟಿವಿಗಳಲ್ಲೂ ದಾಖಲಾಗಿರುವ ಪ್ರಕರಣಗಳನ್ನು ಬಗೆಹರಿಸಿ ನಿಜವಾದ ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ನೋಡುವಾಗ ಹತ್ತಾರು ಅನುಮಾನಗಳು ಕಾಡುತ್ತವೆ. ನಿಜವಾಗಿ ಆರೋಪಿಗಳು ಪೊಲೀಸರಿಗಿಂತಲೂ ಹೆಚ್ಚು ಚಾಣಾಕ್ಷರಾಗಿದ್ದಾರೆಯೇ ಅಥವಾ ಆರೋಪಿಗಳನ್ನು ಹಿಡಿಯದಂತೆ ಪೊಲೀಸರ ಕೈಗಳನ್ನು ಯಾವುದಾದರೂ ಶಕ್ತಿಗಳು ಕಟ್ಟಿ ಹಾಕಿವೆಯೇ? ಆರೋಪಿಗಳನ್ನು ಹಿಡಿಯದೆ ಈ ಪ್ರಕರಣಗಳ ಜನಮಾನಸದಲ್ಲಿ ಸದಾ ಹಸಿರಾಗಿರಿ ಸಿಕೊಂಡು ರಾಜಕೀಯ ಲಾಭ ಪಡೆಯುವ ಹುನ್ನಾರ ಇದೆಯೇ? 

ಗೌರಿ ಲಂಕೇಶ್‌ಗೆ ತನಗನ್ನಿಸಿದ್ದನ್ನು ನಿರ್ಬಿಢೆಯಿಂದ ಹೇಳುವ ಮತ್ತು ಬರೆಯುವ ದಿಟ್ಟತನವಿತ್ತು. ಇಂಗ್ಲಿಷ್‌ನಲ್ಲಿ ಪತ್ರಿಕೋದ್ಯಮ ಶುರು ಮಾಡಿದರೂ ತಂದೆ ಪಿ. ಲಂಕೇಶ್‌ ನಿಧನದ ಬಳಿಕ ಕನ್ನಡ ಪತ್ರಿಕೋದ್ಯಮಕ್ಕೆ ಬಂದು ತಂದೆಯ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದರು. ದೇಶದ ಕೆಲವೇ ಪ್ರಮುಖ ಮಹಿಳಾ ಸಂಪಾದಕರ ಪೈಕಿ ಒಬ್ಬರಾಗಿದ್ದ ಅವರು ಪ್ರತಿಭೆ, ದಿಟ್ಟತನ, ನಿರ್ಭಿಡತೆ ಇತ್ಯಾದಿ ಗುಣಗಳನ್ನು ತಂದೆಯಿಂದ ಬಳುವಳಿಯಾಗಿ ಪಡೆದುಕೊಂಡು ಬಂದವರು. ಈ ಗುಣಗಳಿಂದಾಗಿ ಅವರು ತಂದೆಯಂತೆಯೇ ಸ್ನೇಹಿತರಿಗಿಂತ ಹೆಚ್ಚು ಶತ್ರುಗಳನ್ನು ಸಂಪಾದಿಸಿಕೊಂಡಿದ್ದರು. ನಕ್ಸಲ್‌ ಚಟುವಟಿಕೆಗಳತ್ತ ಆಕರ್ಷಿತರಾಗಿದ್ದ ಕೆಲವರನ್ನು ಮರಳಿ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು ಹಾಗೂ ಕೋಮು ಸೌಹಾರ್ದ ವೇದಿಕೆಯ ಸದಸ್ಯೆಯಾಗಿ ಈ ನಿಟ್ಟಿನಲ್ಲೂ ಕ್ರಿಯಾಶೀಲರಾಗಿದ್ದರು. ಅವರ ಅಗಲಿಕೆ ಕನ್ನಡ ಪತ್ರಿಕೋದ್ಯಮಕ್ಕೆ ಅಂತೆಯೇ ವೈಚಾರಿಕ ಕ್ಷೇತ್ರಕ್ಕೆ ಆಗಿರುವ ಬಲುದೊಡ್ಡ ನಷ್ಟ. ಇತ್ತೀಚೆಗೆ ಹತ್ಯೆಯಾಗಿರುವ ಎಲ್ಲ ನಾಲ್ವರು ವಿಚಾರವಾದಿಗಳೂ ಹಿಂದುತ್ವ ಮತ್ತು ಅದನ್ನು ಪ್ರತಿಪಾದಿಸುವ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳ ವಿರೋಧಿಗಳಾಗಿದ್ದ ಕಾರಣ ಸೈದ್ಧಾಂತಿಕ ಭಿನ್ನತೆಯ ಕಾರಣಕ್ಕೆ ನಡೆದಿರುವ ಹತ್ಯೆಗಳು ಎಂದು ತೀರ್ಮಾನಿಸಿ, ಅಪರಾಧಿಗಳು ಪತ್ತೆಯಾಗುವ ಮೊದಲೇ ಹತ್ಯೆಗಳ ಹಿಂದೆ ಹಿಂದುತ್ವವಾದಿಗಳಿದ್ದಾರೆ ಎಂದು ನಿರ್ಧರಿಸಿರುವುದು ಬೇಸರದ ಸಂಗತಿ. ಆದರೆ ನಾಲ್ಕೂ ಹತ್ಯೆಗಳಲ್ಲಿ ಹಂತಕರು ನಿರ್ದಿಷ್ಟ ಉದ್ದೇಶ ಹೊಂದಿದ್ದರು ಎನ್ನುವುದು ಮಾತ್ರ ಸತ್ಯ. ಅವರಿಗೆ ಕಾನೂನಿನ ಭಯ ಇಲ್ಲ ಎನ್ನುವುದನ್ನು ನೋಡುವಾಗ ಅವರ ಹಿಂದೆ ಬಲಿಷ್ಠ ವ್ಯಕ್ತಿಗಳು ಇದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ. ಹಾಗೆಂದು ವೈಚಾರಿಕ ಸಂಘರ್ಷವನ್ನು ದೇಶ ನೋಡುತ್ತಿರುವುದು ಇದೇ ಮೊದಲಲ್ಲ. ಆದರೆ ಹಿಂದೆಂದೂ ಇಲ್ಲದ ಭೀತಿಯ ವಾತಾವರಣವೊಂದನ್ನು ಸೃಷ್ಟಿಸಲು ವ್ಯವಸ್ಥಿತವಾದ ಪ್ರಯತ್ನಗಳು ನಡೆಯುತ್ತಿವೆ. ಈ ಪ್ರಯತ್ನದ ಹಿಂದೆ ಇರುವವರು ಯಾರು, ಇದರಿಂದ ಯಾರಿಗೆ ಲಾಭವಿದೆ ಎನ್ನುವುದನ್ನು ಪತ್ತೆಹಚ್ಚುವ ತನಕ ಹತ್ಯೆಗಳ ಕುರಿತ ಪರ -ವಿರೋಧ ಚರ್ಚೆಗಳನ್ನು ನಿಲ್ಲಿಸುವುದು ಸಾಧ್ಯವಿಲ್ಲ. ವಿಚಾರಗಳನ್ನು, ಸಿದ್ಧಾಂತಗಳನ್ನು ಅದುಮಿದಷ್ಟು ಅವುಗಳು ಪುಟಿದು ನಿಲ್ಲುವ ಸಾಮರ್ಥ್ಯ ಹೊಂದಿವೆ ಎನ್ನುವುದನ್ನು ಇಂತಹ ಕೃತ್ಯಗಳನ್ನು ಎಸಗುವವರು ನೆನಪಿಟ್ಟುಕೊಳ್ಳಬೇಕು. ಇನ್ನು ಅಪರಾಧ ಚಟುವಟಿಕೆಗಳನ್ನು ಮಟ್ಟ ಹಾಕುವಲ್ಲಿ ರಾಜ್ಯದ ಪೊಲೀಸರು ಸಂಪೂರ್ಣ ವಿಫ‌ಲರಾಗಿದ್ದಾರೆ ಎನ್ನುವುದು ಮತ್ತೂಮ್ಮೆ ಸಾಬೀತಾಗಿದೆ. ಕಲಬುರ್ಗಿ ಪ್ರಕರಣವನ್ನು ಸಿಐಡಿ ತನಿಖೆಗೊಪ್ಪಿಸಿದರೂ ಇನ್ನೂ ತನಿಖೆ ಯಾವುದೇ ಪ್ರಗತಿ ಕಂಡಿಲ್ಲ. ಸಚಿವರ ಮೇಲೆ ಪ್ರಕರಣಗಳು ದಾಖಲಾದಾಗ ಕ್ಷಣಾ ರ್ಧದಲ್ಲಿ ತನಿಖೆ ನಡೆಸಿ ಕ್ಲೀನ್‌ಚಿಟ್‌ ಕೊಡುವ ಸಿಐಡಿಗೆ ಕಲಬುರಗಿ ಹತ್ಯೆ ಪ್ರಕರಣ ಬಗೆಹರಿಸಲಾಗದ ಕಗ್ಗಂಟು ಆಗಿರುವುದು ವಿಚಿತ್ರವಾಗಿ ಕಾಣಿಸುತ್ತಿದೆ. ಕಲಬುರಗಿ ಪ್ರಕರಣವೆಂದಲ್ಲ, ಒಟ್ಟಾರೆ ಕಾನೂನು ಮತ್ತು ವ್ಯವಸ್ಥೆ ಪಾಲನೆಯೇ ಹಳಿ ತಪ್ಪಿರುವುದನ್ನು ನೋಡುವಾಗ ಪೊಲೀಸ್‌ ಇಲಾಖೆಗೆ ತುರ್ತಾಗಿ ಕಾಯಕಲ್ಪ ನೀಡುವ ಅಗತ್ಯವಿದೆ ಅನ್ನಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next