Advertisement

ಗೌರಿ ಹತ್ಯೆ ಖಂಡಿಸಿ ಪ್ರತಿರೋಧ ಸಮಾವೇಶ ನಾಳೆ

06:50 AM Sep 11, 2017 | Team Udayavani |

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸದೇ ರಾಜ್ಯ ಸರ್ಕಾರ ನೇಮಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ)ವೇ ನಡೆಸಬೇಕು ಎಂದು ಗೌರಿ ಲಂಕೇಶ್‌ ಹತ್ಯೆ ವಿರೋಧಿ ಹೋರಾಟ ವೇದಿಕೆ ಒತ್ತಾಯಿಸಿದೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ್‌, ಗೌರಿ ಲಂಕೇಶ್‌ ಅವರದ್ದು ಕರಾಳ ಹತ್ಯೆ. ಈ ಕರಾಳತೆ ದೇಶದ ತುಂಬಾ ಹಬ್ಬಿದೆ. ಕಲಬುರ್ಗಿ ಹತ್ಯೆ ಪ್ರಕರಣದಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರಿತ್ತು. ಆದರೆ, ಗೌರಿ ಲಂಕೇಶ್‌ ಹತ್ಯೆ ನಂತರ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಹೆಚ್ಚು ಮುತುವರ್ಜಿ ವಹಿಸಿ ಎಸ್‌ಐಟಿ ತನಿಖೆ ನಡೆಸುತ್ತಿದೆ. ಈ ನಡುವೆ ತನಿಖೆ ದಿಕ್ಕು ತಪ್ಪಿಸುವಂತಹ ಗಾಳಿ ಸುದ್ದಿಗಳು ಹಬ್ಬುತ್ತಿವೆ. ಅದಕ್ಕೆಲ್ಲಾ ನಾವು ತಲೆಕೆಡಿಸಿಕೊಳ್ಳುವುದಿಲ್ಲ.

ಶೀಘ್ರವೇ ಹಂತಕರನ್ನು ಪತ್ತೆ ಹಚ್ಚುವ ಕೆಲಸವನ್ನು ಎಸ್‌ ಐಟಿ ಮಾಡುತ್ತದೆ ಎಂಬ ನಂಬಿಕೆ ಇದೆ ಎಂದರು. ಪಿ.ಲಂಕೇಶ್‌ ಅವರ ವೈಚಾರಿಕ ಪರಂಪರೆಯನ್ನು ಅವರಿಗಿಂತಲೂ ಪ್ರಖರವಾಗಿ ಮುಂದುವರಿಸಿದ್ದ ಗೌರಿ ಅವರ ಹತ್ಯೆಯಾಗಿದೆ. ಇದು ಆತಂಕಕಾರಿ ಮತ್ತು ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ. ಇದನ್ನು ಖಂಡಿಸಿ ಮಂಗಳವಾರ (ಸೆ.12) ರಾಷ್ಟ್ರಮಟ್ಟದ ಪ್ರತಿರೋಧ ಸಮಾವೇಶ ಹಮ್ಮಿಕೊಂಡಿದ್ದು, ಪ್ರಗತಿಪರ ಚಿಂತನೆ ಹೊಂದಿದ ಎಲ್ಲಾ ವರ್ಗದವರೂ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಹಿರಿಯ ಚಿಂತಕ ಕೆ.ಮರುಳಸಿದ್ದಪ್ಪ ಮಾತನಾಡಿ, ನೇರವಾಗಿ ನಿರ್ಭಯವಾಗಿ ಮಾತನಾಡುವವರನ್ನು ಹತ್ಯೆ ಮಾಡಲಾಗುತ್ತಿದೆ. ಇಂದು ಫ್ಯಾಸಿಸ್ಟ್‌ ವ್ಯವಸ್ಥೆಯಾಗಿದ್ದು, ಅವರೊಬ್ಬರೇ ಮಾತನಾಡಬೇಕು, ಉಳಿದವರು ಕೇಳಿಸಿಕೊಳ್ಳಬೇಕೆಂಬ ವಾತಾವರಣ ನಿರ್ಮಾಣವಾಗಿದೆ. ನಿಮ್ಮ ಭಯ ಹುಟ್ಟಿಸುವ ತಂತ್ರ ನಡೆಯುವುದಿಲ್ಲ. ಕೆಲವರು
ನಮ್ಮನ್ನು ದೇಶದ್ರೋಹಿಗಳು ಅನ್ನುತ್ತಾರೆ. ಪಾಕಿಸ್ತಾನಕ್ಕೆ ಹೋಗಿ ಅನ್ನುತ್ತಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ
ಕೊಳಕು ಮನಸ್ಸುಗಳು ವಿಜೃಂಭಿಸುತ್ತಿರುವುದು ತಲೆತಗ್ಗಿಸುವ ವಿಚಾರ. ಇಂತಹ ಹೀನಮನಸ್ಸುಗಳನ್ನು ಪ್ರಧಾನಮಂತ್ರಿ ಫಾಲೋ ಮಾಡುವುದು ದೊಡ್ಡ ದುರಂತ ಎಂದರು.

ಪಿ.ಲಂಕೇಶ್‌ ಅವರು ಗೌರಿಗಿಂತ ನಿರ್ಭೀತ ಪತ್ರಕರ್ತರಾಗಿದ್ದರು. ಆದರೆ, ಆಗಿನ ಜನರ ಮನಸ್ಥಿತಿ ಈಗಿನಂತಿರಲಿಲ್ಲ. ಈಗ ಮಾತನಾಡಿದರೆ ಸಾಕು ಕೊಲೆ ಮಾಡುವ ಹಂತಕ್ಕೆ ಹೋಗುತ್ತಾರೆ. ಇಂತಹ ಭಯಪಡಿಸುವ ಪ್ರವೃತ್ತಿಗೆ ಹೆದರುವುದಿಲ್ಲವೆಂದು ಅವರು ತಿಳಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ನಟ ಚೇತನ್‌, ದಲಿತ ಮುಖಂಡ ಮಾವಳ್ಳಿ ಶಂಕರ್‌, ಎನ್‌.ಮುನಿಸ್ವಾಮಿ, ಕೋಮುಸೌಹಾರ್ದ ವೇದಿಕೆ ಪ್ರಧಾನ ಕಾರ್ಯದರ್ಶಿ ಕೆ.ಎಲ್‌.ಅಶೋಕ್‌ ಮತ್ತಿತರರು ಉಪಸ್ಥಿತರಿದ್ದರು. 

ರಾಷ್ಟ್ರಮಟ್ಟದ ಸಮಾವೇಶ
ಹೋರಾಟಗಾರ್ತಿ ಕೆ.ನೀಲಾ ಮಾತನಾಡಿ, ಮಂಗಳವಾರ (ಸೆ.12) ಬೆಳಗ್ಗೆ 10.30ಕ್ಕೆ ಸಿಟಿ ರೈಲ್ವೆ ನಿಲ್ದಾಣದಿಂದ ಸೆಂಟ್ರಲ್‌ ಕಾಲೇಜು ಮೈದಾನದವರೆಗೆ ಪ್ರತಿರೋಧ ಮೆರವಣಿಗೆ ನಡೆಯಲಿದೆ. ರಾಷ್ಟ್ರಮಟ್ಟದ ಸಮಾವೇಶ ಇದಾಗಿದ್ದು, ಪ್ರತಿರೋಧ ಸಮಾವೇಶ ಎಂದು ಹೆಸರಿಡಲಾಗಿದೆ.

ಭಾಷಾತಜ್ಞ ಜಿ.ಎನ್‌.ಗಣೇಶ್‌ ದೇವಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಖ್ಯಾತ ಪತ್ರಕರ್ತ
ಪಿ.ಸಾಯಿನಾಥ್‌, ಸಾಮಾಜಿಕ ಹೋರಾಟಗಾರರಾದ ಮೇಧಾ ಪಾಟ್ಕರ್‌, ಆನಂದ್‌ ಪಟವರ್ಧನ್‌, ತೀಸ್ತಾ
ಸೆಟ್ಲವಾದ್‌, ಯೋಗೇಂದ್ರ ಯಾದವ್‌, ಜಿಗ್ನೇಶ್‌ ಮೇವಾನಿ, ರಾಕೇಶ್‌ ಶರ್ಮಾ ಮತ್ತಿತರರು ಭಾಗವಹಿಸಲಿದ್ದಾರೆ.
ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಲಾಡ್ಜ್ಗಳ ಮೇಲೆ ನಿಗಾ
ಬೆಂಗಳೂರು:
ಗೌರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ನಗರದ ಎಲ್ಲ ಹೋಟೆಲ್‌ ಮತ್ತು ಲಾಡ್ಜ್ಗಳನ್ನು ಪರಿಶೀಲನೆ ನಡೆಸುತ್ತಿದೆ.

ದುಷ್ಕರ್ಮಿಗಳು ಹತ್ಯೆಗೂ ಕೆಲ ದಿನ ಮೊದಲು ಗೌರಿ ಅವರ ಚಲನವಲನಗಳನ್ನು ಸೂಕ್ಷ್ಮವಾಗಿಯೇ ಗಮನಿಸಿದ್ದಾರೆ. ಈ
ಹಿನ್ನೆಲೆಯಲ್ಲಿ ನಗರದ ಎಲ್ಲ ಠಾಣಾ ವ್ಯಾಪ್ತಿಯಲ್ಲಿರುವಂತಹ ಹೋಟೆಲ್‌, ಲಾಡ್ಜ್ಗಳು, ಅತಿಥಿ ಗೃಹಗಳನ್ನು ಸಂಪೂರ್ಣವಾಗಿ ಜಾಲಾಡುತ್ತಿದ್ದಾರೆ. ನೆರೆ ರಾಜ್ಯ ಅಥವಾ ಜಿಲ್ಲೆಯಿಂದ ಬೆಂಗಳೂರಿಗೆ ಬಂದಿರುವ ವ್ಯಕ್ತಿಗಳು ಅನುಮಾನಾಸ್ಪದವಾಗಿ ತಿಂಗಳು ಗಟ್ಟಲೇ ಇಲ್ಲಿಯೇ ಉಳಿದುಕೊಂಡಿದ್ದರೇ ಎಂಬ ಬಗ್ಗೆ ಹೋಟೆಲ್‌ ಹಾಗೂ ಇತರೆ ಅತಿಥಿ ಗೃಹಗಳ ನೋಂದಣಿ ಪುಸ್ತಕಗಳನ್ನು ಪರಿಶೀಲಿಸುತ್ತಿದ್ದಾರೆ. ಇದಕ್ಕಾಗಿ ಪ್ರತಿ ಠಾಣಾ ವ್ಯಾಪ್ತಿಯ ಇನ್‌ ಸ್ಪೆಕ್ಟರ್‌ಗಳನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮತ್ತೂಂದೆಡೆ ನಗರದಿಂದ ಹೊರಹೋಗುವ ಎಲ್ಲ ಟೋಲ್‌ ಗೇಟ್‌ಗಳಲ್ಲಿರುವ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದು, ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ.

ವಾಹನ ಸಂಖ್ಯೆ ಆಧಾರದಲ್ಲಿ ತನಿಖೆ
ಇದುವರೆಗೂ ಪರಿಶೀಲನೆ ನಡೆಸಿರುವ 33 ಸಿಸಿ ಕ್ಯಾಮೆರಾದ ನೂರಾರು ದೃಶ್ಯಾವಳಿಗಳಲ್ಲಿ ಮೂರು ದ್ವಿಚಕ್ರ ವಾಹನಗಳ ಮೇಲೆ ಬಲವಾದ ಶಂಕೆಯಿದ್ದು, ಅವುಗಳ ನೋಂದಣಿ ಸಂಖ್ಯೆ ಸ್ಪಷ್ಟವಾಗಿ ಕಾಣುತ್ತಿಲ್ಲ. ಅದನ್ನು ಅಭಿವೃದಿಟಛಿ ಪಡಿಸಲು ಪರಿಣಿತರಿಗೆ ಕೊಡಲಾಗಿದೆ. ಬಳಿಕ ವಾಹನ ಸಂಖ್ಯೆಯ ಆಧಾರದ ಮೇಲೆ ತನಿಖೆ ಆರಂಭಿಸಲಾಗುವುದು. ಅದುವರೆಗೂ ಏನು ಹೇಳಲು ಸಾಧ್ಯವಿಲ್ಲ ಎಂದು ಮೂಲಗಳು ತಿಳಿಸಿವೆ.

ರಾಹುಲ್‌ ವಿಚಾರಣೆಗೆ ಪ್ರಹ್ಲಾದ ಜೋಶಿ ಒತ್ತಾಯ
ಹುಬ್ಬಳ್ಳಿ:
ಗೌರಿ ಹತ್ಯೆಯನ್ನು ಆರೆಸ್ಸೆಸ್‌ ಹಾಗೂ ಬಿಜೆಪಿಯವರೇ ಮಾಡಿಸಿದ್ದಾರೆಂದು ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದು, ಅವರಿಗೆ ಹತ್ಯೆ ಮಾಡಿದವರ ಬಗ್ಗೆ ಪೂರ್ಣ ಮಾಹಿತಿಯಿದೆ. ಆದ್ದರಿಂದ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಕೂಡಲೇ ಅವರನ್ನು ವಿಚಾರಣೆಗೊಳಪಡಿಸಬೇಕು ಎಂದು ಸಂಸದ ಪ್ರಹ್ಲಾದ ಜೋಶಿ ಒತ್ತಾಯಿಸಿದ್ದಾರೆ.

ವೈಚಾರಿಕತೆಯ ಕಗ್ಗೊಲೆ: ಪ್ರೊ. ಜಿಕೆಜಿ
ಬೆಂಗಳೂರು:
“ಗೌರಿ ಹತ್ಯೆ ಕೇವಲ ಒಬ್ಬ ವ್ಯಕ್ತಿಯದ್ದಲ್ಲ, ಅದೊಂದು ವೈಚಾರಿಕತೆಯ ಕಗ್ಗೊಲೆ. ಇದೊಂದು ಹೇಡಿಗಳ ಕೃತ್ಯ. ಜೀವಪರ ನಿಲುವುಗಳನ್ನು ಎದುರಿ ಸಲಾಗದ ಶಕ್ತಿಗಳು ಬಂದೂಕಿನ ಮೊರೆ ಹೋಗಿವೆ. ಆದರೆ, ತಲೆಗೆ ಗುಂಡಿಟ್ಟರೆ ವಿಚಾರ, ಎದೆಗೆ ಗುಂಡಿಟ್ಟರೆ ಹೃದಯ ವಂತಿಕೆ ಕೊಲ್ಲಬಹುದೆಂದು ತಿಳಿದುಕೊಂಡಿದ್ದರೆ ಅದು ಮೂರ್ಖತನ’
ಎಂದು ವಿಚಾರವಾದಿ ಪ್ರೊ. ಜಿ.ಕೆ. ಗೋವಿಂದರಾವ್‌ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಚಾರಗಳನ್ನು ಬಂದೂಕಿನ ಮೂಲಕ ಹತ್ತಿಕ್ಕಲು ಸಾಧ್ಯವಿಲ್ಲ ಮತ್ತು ಬೆದರಿಕೆ ಹಾಗೂ ಬಂದೂಕಿಗೆ ವಿಚಾರಗಳು ಬಗ್ಗುವುದಿಲ್ಲ ಎಂದರು. ರಂಗಕರ್ಮಿ ಶ್ರೀನಿವಾಸ್‌ ಕಪ್ಪಣ್ಣ, ಡಾ. ಕೆ.ವೈ ನಾರಾಯಣಸ್ವಾಮಿ, ಡಾ. ಎಚ್‌.ಎಲ್‌ ಪುಷ್ಪ, ಡಾ.ಡಾಮಿನಿಕ್‌, ಹುಲಿಕುಂಟೆ ಮೂರ್ತಿ ಇತರರಿದ್ದರು.

ನನಗೂ ಬೆದರಿಕೆ ಕರೆಗಳು ಬರುತ್ತಿವೆ
ರಾಯಚೂರು:
ಗೌರಿ ಹತ್ಯೆ ನಂತರ ಸಾಹಿತಿಗಳಿಗೆ ಭದ್ರತೆ ಕಲ್ಪಿಸುವ ವಿಚಾರ ಗೊತ್ತಾಗಿದೆ. ನನಗೂ ಬೆದರಿಕೆ ಕರೆಗಳು ಬರುತ್ತಿವೆ. ಆದರೆ, ಹೆದರಿಲ್ಲ. ನಾನು ಭದ್ರತೆ ನೀಡುವಂತೆ ಸರ್ಕಾರಕ್ಕೆ ಕೇಳಿಲ್ಲ. ಸ್ನೇಹಿತರು, ಜನರೇ ನನ್ನ ಭದ್ರತೆ. ಕೊಲೆಗಡುಕರು ಬಂದರೂ ನಗುತ್ತಾ ಸ್ವಾಗತಿಸುವೆ ಎಂದು ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ ತಿಳಿಸಿದ್ದಾರೆ. ಭಾನುವಾರ ಸುದ್ದಿಗಾರರ ಜತೆ ಮಾತನಾಡಿ, ರಾಯಚೂರು ಜಿಲ್ಲೆಯ ಸಿಂಧನೂರಿನಿಂದ ಯಾರೋ ಅನಾಮಿಕರು ಕರೆ ಮಾಡಿ ನನಗೂ ಜೀವ ಬೆದರಿಕೆ ಹಾಕಿದರು. ಅದರ ಬಗ್ಗೆ ಹೆಚ್ಚೇನೂ ಹೇಳಲಾರೆ. ನಾನು ಭದ್ರತೆ ಕೇಳಿರಲಿಲ್ಲ. ಆದರೆ, ನೀಡುವುದಾಗಿ ತಿಳಿಸುತ್ತಿದ್ದಾರೆ ಎಂದರು.

ಸರ್ಕಾರ ಪ್ರಗತಿಪರರಿಗೆ ರಕ್ಷಣೆ ಕೊಡಬೇಕು. ಎಸ್‌ಐಟಿ ತನಿಖೆ ಶೀಘ್ರ ನಡೆಸಿ, ಹಂತಕರನ್ನು ಪತ್ತೆ ಮಾಡಬೇಕು. ನಾವು ಅಹಿಂಸೆಯಲ್ಲಿ ನಂಬಿಕೆಯಿಟ್ಟಿರು ವವರು. ಹೊಡೆಯುವವರಲ್ಲಿ ಶಕ್ತಿಯಿರುವುದಿಲ್ಲ. ಬದಲಿಗೆ ಹೊಡೆಸಿಕೊಳ್ಳುವವರಲ್ಲಿ ಶಕ್ತಿ ಇರುತ್ತದೆ. ಗನ್‌ಗಿಂತ ಪೆನ್‌ ಶಕ್ತಿ ದೊಡ್ಡದು ಮತ್ತು ಬುಲೆಟ್‌ ಗಿಂತ ಬ್ಯಾಲೆಟ್‌ ಮುಖ್ಯ ಎಂದು ಜನ ನಂಬಿದ್ದಾರೆ. ಅದನ್ನು ನಾವು ಎತ್ತಿ ಹಿಡಿಯುತ್ತೇವೆ.
– ಚೇತನ್‌, ಚಲನಚಿತ್ರ ನಟ

ಸುಪ್ರೀಂ ಕೋರ್ಟ್‌ ಮಾರ್ಗದರ್ಶನದಲ್ಲಿ ಸಿಬಿಐ ಮತ್ತು ರಾಜ್ಯಗಳ ತನಿಖಾ ತಂಡಗಳು ಜಂಟಿಯಾಗಿ ದಾಬೋಲ್ಕರ್‌, ಕಲಬುರ್ಗಿ, ಗೌರಿ ಲಂಕೇಶ್‌ ಸೇರಿ ನಾಲ್ವರು ಪ್ರಗತಿಪರರ ಹತ್ಯೆ ಪ್ರಕರಣದ ತನಿಖೆ ನಡೆಸಬೇಕು. ಆದರೆ, ಎಸ್‌ಐಟಿ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ತನಿಖೆ ತೀವ್ರಗೊಳಿಸಬೇಕು. ಇಲ್ಲದಿದ್ದರೆ ಇನ್ನೂ ಇಂತಹ ಕೊಲೆಗಳು ನಡೆಯುವ ಸಾಧ್ಯತೆ ಇದೆ.
– ಕೆ.ಮರುಳಸಿದ್ಧಪ್ಪ, ಹಿರಿಯ ಚಿಂತಕ

ಗೌರಿ ಹತ್ಯೆಗೆ ಕಾರಣ ಏನೆಂಬ ಪ್ರಶ್ನೆ ಎದುರಾಗಿದೆ. ನಾವು ಹೇಳುವ ಸಿದ್ಧಾಂತವನ್ನೇ ಆಕೆ ಉಗ್ರವಾಗಿ ಹೇಳುತ್ತಿದ್ದಳು ಅಷ್ಟೆ. ಗೌರಿಯನ್ನು ಹತ್ಯೆ ಮಾಡಿದ ಮಾತ್ರಕ್ಕೆ ಆಕೆಯ ವಿಚಾರಗಳನ್ನು ಹತ್ಯೆ ಮಾಡಿದ್ದೇವೆ ಎಂದು ತಿಳಿದರೆ ಅಂತಹ ಮೂರ್ಖರಿಗೆ ಏನು ಹೇಳಲು ಸಾಧ್ಯ?. ಭಾರತದಲ್ಲಿ ಇಂದು ಪ್ರಕ್ಷುಬದ್ಧ ಹಾಗೂ ಉಸಿರುಗಟ್ಟಿಸುವ ವಾತಾವರಣವಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷದ ಶಕ್ತಿ ಹಾಗೂ ಬದಟಛಿತೆ ಸಾಕಾಗುತ್ತಿಲ್ಲ. ಇದನ್ನು ನೇರವಾಗಿ ಹೇಳುತ್ತೇನೆ.
– ರಮೇಶ್‌ ಕುಮಾರ್‌, ಸಚಿವ

ಗೌರಿ ಲಂಕೇಶ್‌ ಹತ್ಯೆ ಅಮಾನವೀಯ, ಮೃಗೀಯ ಹಾಗೂ ಖಂಡನೀಯ. ಹತ್ಯೆಗೆ ಸಾಮಾಜಿಕ ಜಾಲತಾಣಗಳೇ
ಪ್ರಮುಖ ಕಾರಣ.

– ವೈ.ಎಸ್‌.ವಿ.ದತ್ತ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next