Advertisement

ಗೌರಿ ಲಂಕೇಶ ಹಂತಕರ ಬಂಧನಕ್ಕೆ ಆಗ್ರಹ

04:45 PM Sep 08, 2017 | Team Udayavani |

ರಾಯಚೂರು: ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಹಿರಿಯ ಪತ್ರಕರ್ತೆ ಗೌರಿ ಲಂಕೇಶರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿರುವುದನ್ನು ಖಂಡಿಸಿ ಮತ್ತು ಹಂತಕರ ಬಂಧನಕ್ಕೆ ಆಗ್ರಹಿಸಿ ವಿವಿಧ ಸಂಘಟನೆಗಳ ಸದಸ್ಯರು ನಗರ ಸೇರಿದಂತೆ ಗುರುವಾರ ಜಿಲ್ಲಾದ್ಯಂತ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

Advertisement

ಕರ್ನಾಟಕ ರಣಧೀರ ಪಡೆ: ಸಂಘಟನೆ ಸದಸ್ಯರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಗೃಹ ಖಾತೆ ಸಚಿವರಿಗೆ ಮನವಿ ಸಲ್ಲಿಸಿದರು. ಕಳೆದ ಎರಡು ವರ್ಷಗಳ ಹಿಂದೆ ವಿಚಾರವಾದಿ ಡಾ| ಎಂ.ಎಂ. ಕಲಬುರ್ಗಿ ಅವರನ್ನು ಕೂಡ ಇದೇ ರೀತಿ ಹತ್ಯೆ ಮಾಡಲಾಗಿತ್ತು. ಗೌರಿ ಲಂಕೇಶರನ್ನು ಕೂಡ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವುದು ವಿಚಾರವಾದಿಗಳನ್ನು ಚಿಂತೆಗೀಡು ಮಾಡಿದೆ. ಇಂತಹ ಕೃತ್ಯ ತಡೆಯುವಲ್ಲಿ ರಾಜ್ಯ
ಸರ್ಕಾರದ ವೈಫಲ್ಯಕ್ಕೆ ಎದ್ದು ಕಾಣುತ್ತಿದೆ ಎಂದು ದೂರಿದರು.

ಚಿಂತಕರು, ಪ್ರಗತಿಪರ ಹೋರಾಟಗಾರರನ್ನು ಈ ರೀತಿ ಹತ್ಯೆ ಮಾಡುವುದರಿಂದ ಹೋರಾಟಗಳು ನಿಲ್ಲುವುದಿಲ್ಲ. ಇಂಥ
ಘಟನೆಗಳನ್ನು ಖಂಡಿಸಿ ನಿರಂತರ ಹೋರಾಟ ಮಾಡಲಾಗುವುದು. ಕೂಡಲೇ ಗೌರಿ ಲಂಕೇಶರನ್ನು ಹತ್ಯೆಗೈದ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.

ಸಂಘಟನೆ ಜಿಲ್ಲಾಧ್ಯಕ್ಷ ರಾಜಶೇಖರ, ಯುವ ಘಟಕದ ಅಧ್ಯಕ್ಷ ಸೈಯ್ಯದ್‌ ಜಾವೀದ್‌ ಖಾದ್ರಿ, ಸದಸ್ಯರಾದ ಶಿವು ಅಸ್ಕಿಹಾಳ, ಶೇಖರ ಕುಮಾರ, ನರಸಪ್ಪ ಗೋನವಾರ ಇತರರಿದ್ದರು.

ವೆಲ್ಪೇರ್‌ ಪಾರ್ಟಿ ಆಫ್‌ ಇಂಡಿಯಾ: ವೆಲ್ಫೆಧೀರ್‌ ಪಾರ್ಟಿ ಆಫ್‌ ಇಂಡಿಯಾ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಕೋಮುವಾದಿ ಸಂಘಟನೆಗಳ ಹಾವಳಿ ತಡೆಗೆ ಸರ್ಕಾರಗಳು ವಿಫಲವಾಗುತ್ತಿರುವುದು ಕಳವಳಕಾರಿ ಸಂಗತಿ. ಮಹಾರಾಷ್ಟ್ರದ ಡಾ| ನರೇಂದ್ರ ದಾಬೋಲ್ಕರ್‌ ಮತ್ತು ಕಾರ್ಮಿಕ ಮುಖಂಡ ಗೊವಿಂದ್‌ ಪನ್ಸಾರೆ ಹಾಗೂ ಹಿರಿಯ ಸಾಹಿತಿ ಡಾ| ಎಂ.ಎಂ. ಕಲಬುರ್ಗಿಯವರ ಹತ್ಯೆಗೆ ಕಾರಣರಾದವರನ್ನು ಪತ್ತೆ ಹಚ್ಚಲು ಈವರೆಗೂ, ಸರ್ಕಾರಗಳಿಗೆ ಸಾಧ್ಯವಾಗಿಲ್ಲ ಎಂದು ದೂರಿದರು. ರಾಜ್ಯದಲ್ಲಿ ಕೋಮುವಾದಿ ಶಕ್ತಿಗಳು ಹಿಂಸೆಯ ಮೂಲಕ ನಾಗರಿಕರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿವೆ. ಕೂಡಲೇ ಹಂತಕರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು. ಸಂಘಟನೆ ಸದಸ್ಯರಾದ ಅಬ್ದುಲ್‌ ಘನಿ, ಅಬ್ದುಲ್‌ ಲತೀಫ್‌, ಅನ್ವಾರುಲ್‌ ಹಸನ್‌, ಮೆಹಬೂಬ್‌ ಉಮ್ರಿ, ಇಮಾಮವೆಲ್‌ ಇತರರು ಇದ್ದರು.

Advertisement

ಎಸ್‌ಡಿಪಿಐ ಖಂಡನೆ: ಗೌರಿ ಲಂಕೇಶರ ಹತ್ಯೆಯನ್ನು ಸೋಷಿಯಲ್‌ ಡೆಮಾಕ್ರೆಟಿಕ್‌ ಪಾರ್ಟಿ ಆಫ್‌ ಇಂಡಿಯಾ ಕಾರ್ಯಕರ್ತರು ತೀವ್ರವಾಗಿ ಖಂಡಿಸಿ, ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು. ಕೋಮು ಸೌಹಾರ್ದತೆಗಾಗಿ ಶ್ರಮಿಸಿದ ಗೌರಿ ಲಂಕೇಶರ ಕೊಲೆ ಖಂಡನೀಯ. ಇದು ನಾಗರಿಕ ಸಮಾಜ ತಲೆತಗ್ಗಿಸುವಂಥ ಘಟನೆಯಾಗಿದ್ದು, ಚಿಂತನೆಗೀಡು ಮಾಡುವಂತಾಗಿದೆ. ಹಂತಕರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾಧ್ಯಕ್ಷ ಅಬ್ದುಲ್‌ ಮಜೀದ್‌ ಶಹಾಪುರಿ, ಸದಸ್ಯರಾದ ಎಂ.ಎ.ಮತಿನ ಅನ್ಸಾರಿ, ಎಂ.ಎ.ಅಜೀಮ್‌, ಎಂ.ಡಿ.ಇಸ್ಮಾಯಿಲ್‌, ಎಂ.ಡಿ. ಗೌಸ್‌, ಅಶ್ರಫ್‌ ಹುಸೇನ್‌, ಮಾಸೂರ್‌ ಅಹ್ಮದ್‌, ಜಾವೀದ್‌ ಅಲಿ, ಫಾರೂಕ್‌, ನೂರ್‌, ಶಫಿ, ಸೈಯ್ಯದ್‌ ಇರ್ಫಾನ್‌ ಇತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next