Advertisement

“ಗೌರಿಗೆ ಗುಂಡು ಹಾರಿಸಿದ್ದು ನಾನೇ’

06:35 AM Jun 14, 2018 | |

ಬೆಂಗಳೂರು: “ಗೌರಿ ಲಂಕೇಶ್‌ಗೆ ಗುಂಡು ಹಾರಿಸಿದ್ದು ನಾನೇ,ಗುಂಡು ಹಾರಿಸಿದ ಬಳಿಕ ಗನ್‌ ಅನ್ನು ಬೇರೆಯವರಿಗೆ ಕೊಟ್ಟಿದ್ದೇನೆ. ಆದರೆ, ಯಾರಿಗೆ ಕೊಟ್ಟಿದ್ದೇನೆ ಎಂಬುದು ಗೊತ್ತಿಲ್ಲ ಇದು ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಶಂಕಿತ ಆರೋಪಿ ಪರಶುರಾಮ್‌ ವಾಗ್ಮೋರೆ ಎಸ್‌ಐಟಿ ಅಧಿಕಾರಿಗಳ ಮುಂದೆ ನೀಡಿರುವ ತಪ್ಪೊಪ್ಪಿಗೆ ಹೇಳಿಕೆ.

Advertisement

“ಆಕೆ ಹಿಂದೂತ್ವ ಹಾಗೂ ಹಿಂದೂ ದೇವರ ಬಗ್ಗೆ ಕೆಟ್ಟ ರೀತಿಯಲ್ಲಿ ಮಾತನಾಡುತ್ತಿದ್ದರು. ಇದು ನನಗೆ ಸಹಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ನಾನೇ ಗುಂಡು ಹಾರಿಸಿ ಕೊಂದೆ.’ ಎಂದು ಹೇಳಿಕೆ ನೀಡಿದ್ದಾನೆ.

ಈ ಮೂಲಕ ಗೌರಿ ಹತ್ಯೆ ಪ್ರಕರಣ ಒಂದು ಹಂತ ತಲುಪಿದ್ದು, ಕೃತ್ಯದ ಹಿಂದೆ ಯಾರಿದ್ದಾರೆ ಎಂಬುದು ತನಿಖೆಯಿಂದ ಪತ್ತೆಯಾಗಬೇಕಿದೆ.

ಆರಂಭದಲ್ಲಿ ತನಿಖೆಗೆ ಸಹಕರಿಸದೆ ವಾದ ಮಾಡುತ್ತಿದ್ದ ಆರೋಪಿ, ಸಂಜೆ ವೇಳೆ ತೀವ್ರ ವಿಚಾರಣೆ ನಡೆಸಿ, ಸೂಕ್ತ
ದಾಖಲೆಗಳನ್ನು ಮುಂದಿಟ್ಟಾಗ ತಪ್ಪೊಪ್ಪಿಕೊಂಡಿದ್ದಾನೆ. ಆದರೆ, ಪ್ರಕರಣದ ತನಿಖೆ ಸಂಪೂರ್ಣವಾಗಿ ಮುಗಿದಿಲ್ಲ. ಬೈಕ್‌ ಚಾಲನೆ ಮಾಡುತ್ತಿರುವ ವ್ಯಕ್ತಿಯ ಬಗ್ಗೆ ಪತ್ತೆ ಮಾಡಬೇಕಿದೆ. ಇದರ ಹಿಂದಿನ ರೂವಾರಿಗಳು ತಿಳಿಯಬೇಕಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ ಹಿಂದೂ ಪರ ಸಂಘಟನೆ ಎಂದು ಹೇಳಲಾದರೂ ಸೂಕ್ತ ಸಾಕ್ಷ್ಯಗಳ ಕೊರತೆ ಇದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

Advertisement

ಸುಂಕದಕಟ್ಟೆ ಸುರೇಶ್‌ ಕೊಟ್ಟ ಮಾಹಿತಿ: ವಿಶೇಷ ತನಿಖಾ ತಂಡ ಪ್ರಕರಣದ ಬೆನ್ನು ಬಿದ್ದಾಗ ಮೊದಲು ಸಿಕ್ಕಿದ್ದು, ಕಟ್ಟಡ ನಿರ್ಮಾಣ ವ್ಯವಹಾರ ಮಾಡುವ ಸುಂಕದಕಟ್ಟೆ ಸುರೇಶ್‌. ಸುರೇಶ್‌ ನೀಡಿದ ಸುಳಿವಿನ ಮೇಲೆ ತನಿಖೆ ನಡೆಸಿ, ಪ್ರಮುಖ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. 

ಹತ್ಯೆಗೂ ಒಂದು ತಿಂಗಳ ಮೊದಲು ಪ್ರವೀಣ್‌ ಮತ್ತು ಪರಶುರಾಮ್ ಸುರೇಶ್‌ ಅವರ ಮನೆಯ ಬಾಡಿಗೆ ಕೊಠಡಿಯಲ್ಲಿ ತಂಗಿದ್ದರು.

ಕೃತ್ಯದ ದಿನ ಬೆಳಗ್ಗೆಯಿಂದ ಸಂಜೆವರೆಗೆ ಹತ್ತಾರು ಬಾರಿ ಮನೆಯಿಂದ ಹೋಗಿ ಬಂದು ಮಾಡುತ್ತಿದ್ದರು. ಸೆ.5ರಂದು
ಕೃತ್ಯವೆಸಗಿದ ಕೇವಲ 2-3 ಗಂಟೆಗಳಲ್ಲಿ ಇಬ್ಬರು ಕೊಠಡಿ ಖಾಲಿ ಮಾಡಿ ಲಗೇಜ್‌ ಸಮೇತ ಪರಾರಿಯಾಗಿದ್ದರು.
ಆದರೆ, ಪ್ರವೀಣ್‌ ಸುರೇಶ್‌ಗೆ ಪರಿಚಯ ಮಾಡಿಕೊಳ್ಳುವಾಗ ಸುಜಿತ್‌ ಎಂದಷ್ಟೇ ಪರಿಚಯಿಸಿಕೊಂಡಿದ್ದ. ಅಲ್ಲದೆ ಅವರು ಮರಾಠಿ ಭಾಷೆಯಲ್ಲಿ ಮಾತನಾಡುತ್ತಿದ್ದರು ಎಂಬುದು ತಿಳಿದಿತ್ತು. ಗೌರಿ ಮನೆ ಬಳಿ ಘಟನೆ ನಡೆಯುತ್ತಿದ್ದಂತೆ ಲಕ್ಷಾಂತರ ಮೊಬೈಲ್‌ ಕರೆಗಳ ವಿವರ ಸಂಗ್ರಹಿಸುವಾಗ ಎರಡು ನಂಬರ್‌ ಗಳಿಗೆ ಹತ್ತಾರು ಕರೆಗಳು ಬರುತ್ತಿರುವುದು ತಿಳಿಯಿತು.

ಪರಶುರಾಮ್‌ ಮೊದಲು ವಾರಕ್ಕೆ 2-3 ದಿನ ಮಾತ್ರ ಉಳಿಯುತ್ತಿದ್ದವನು ಆಗಸ್ಟ್‌ ಕೊನೆ ವಾರದಲ್ಲಿ ಇಲ್ಲಿಯೇ ಇದ್ದ. ಈ ವೇಳೆ ಒಮ್ಮೆ ನವೀನ್‌ ಕೂಡ ಬಂದಿದ್ದ. ಇಲ್ಲಿ ಇದ್ದ ವೇಳೆ ಇಲ್ಲಿಂದ ಆರ್‌.ಆರ್‌.ನಗರಕ್ಕೆ ಹತ್ತಿರ ದಾರಿ ಯಾವುದು ಎಂದು ಕೇಳುತ್ತಿದ್ದರು ಎಂದು ಸುರೇಶ್‌ ಹೇಳಿಕೆ ನೀಡಿದ್ದರು. ನವೀನ್‌ ಕುಮಾರ್‌ ಬಂಧನಕ್ಕೆ ಸುಳಿವು ಕೊಟ್ಟಿದ್ದು ಕಾಯಿನ್‌ 
ಬೂತ್‌. ನವೀನ್‌ಗೆ ಪದೇ ಪದೇ ಕಾಯಿನ್‌ ಬೂತ್‌ನಿಂದ ಕರೆಗಳು ಬರುತ್ತಿತ್ತು. ಈ ಆಧಾರದ ಮೇಲೆ ಶೋಧ ನಡೆಸಿದಾಗ ಆರೋಪಿಗಳ ಸುಳಿವು ಪತ್ತೆಯಾಯಿತು. ಹೆಚ್ಚಾಗಿ ಪ್ರವೀಣ್‌,ಅಮೋಲ್‌ ಕಾಳೆ, ಅಮಿತ್‌ ದೇಗ್ವೇಕರ್‌, ಮನೋಹರ್‌ ಯವಡೆ ಬಗ್ಗೆ ಮಾಹಿತಿ ಲಭ್ಯವಾಯಿತು. ಈ ಆರೋಪಿಗಳು ವಿಜಯಪುರ, ಬೆಳಗಾವಿ ಸೇರಿ ಕೆಲವಡೆಯಿಂದ ನವೀನ್ ಕುಮಾರ್‌ಗೆ ನಿರಂತರವಾಗಿ ಕಾಯಿನ್‌ ಬೂತ್‌ನಿಂದ ಕೋಡ್‌ ವರ್ಡ್‌ ಮೂಲಕ ಕರೆ ಮಾಡುತ್ತಿದ್ದರು.

3-4 ತಿಂಗಳು ಕಾಯ್ದೆವು: ಬಂಧಿತ ಆರೋಪಿಗಳನ್ನು ಕಳೆದ 3-4 ತಿಂಗಳಿಂದ ಬೆನ್ನತ್ತಿದ್ದೆವು. ಸೂಕ್ತ ದಾಖಲೆಗಳನ್ನು
ಸಂಗ್ರಹಿಸಿಯೇ ಬಂಧಿಸಬೇಕು ಎಂದು ನಿರ್ಧರಿಸಿದೆವು. ಅಲ್ಲದೇ, ಒಂದು ತಂಡದ ಕೆಲಸ ಮತ್ತೂಂದು ತಂಡಕ್ಕೆ
ತಿಳಿಯುತ್ತಿರಲಿಲ್ಲ. ಹೀಗಾಗಿ ಕೆಲ ದಿನಗಳ ಬಳಿಕ ಮಾಧ್ಯಮಗಳು ಆರೋಪಿಗಳ ಸುಳಿವು ಸಿಕ್ಕಿಲ್ಲ ಎಂದು ಸುದ್ದಿ ಪ್ರಸಾರ
ಮಾಡುತ್ತಿದ್ದಂತೆ ಇತ್ತ ಆರೋಪಿಗಳು ಮತ್ತೆ ಪರಸ್ಪರ ಸಂಪರ್ಕ ಸಾಧಿಸಲು ಆರಂಭಿಸಿದರು. ಕೊನೆಗೆ ಎಲ್ಲ ಆರೋಪಿಗಳನ್ನು ಬಂಧಿಸವಲ್ಲಿ ಯಶಸ್ವಿಯಾದೆವು ಎಂದು ಎಸ್‌ಐಟಿ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.

ಆರೋಪಿ ಪರಶುರಾಮ್‌ನನ್ನು ಸದ್ಯದಲ್ಲೇ ಎಸ್‌ಐಟಿ ಅಧಿಕಾರಿಗಳು ಗೌರಿ ಮನೆ ಬಳಿ ಕರೆದೊಯ್ದು ಇಡೀ
ಪ್ರಕರಣವನ್ನು ಮರುಸೃಷ್ಟಿ ಮಾಡಲಿದ್ದಾರೆ. ಮನೆ ಬಳಿ ಸಿಕ್ಕ ಸಿಸಿಟಿವಿ ದೃಶ್ಯಕ್ಕೂ ಹಾಗೂ ಮರುಸೃಷ್ಟಿಯ ವೇಳೆ ತೆಗೆದ
ದೃಶ್ಯಕ್ಕೂ ಹೋಲಿಕೆ ಮಾಡಿ ಬಳಿಕ ಅಂತಿಮ ನಿರ್ಧಾರವನ್ನು ಎಸ್‌ಐಟಿ ಪ್ರಕಟಿಸಲಿದೆ.

ಎತ್ತರದ ಬಗ್ಗೆ ತನಿಖೆ: ಗೌರಿ ಹತ್ಯೆ ನಂತರ ಅವರ ಮನೆ ಮತ್ತು ಸುತ್ತಮುತ್ತ ಸಿಕ್ಕ ಸಿಸಿಟಿವಿಯ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿದ್ದ ಎಸ್‌ಐಟಿ ಅದನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಹಾಗೂ ವಿದೇಶಿ ಪ್ರಯೋಗಾಲಯಗಳಿಗೆ ಕಳುಹಿಸಿಕೊಟ್ಟಿತ್ತು. ಎಫ್ಎಸ್‌ಎಲ್‌ ಗೌರಿ ಹಂತಕ 5.2 ಅಡಿ ಎತ್ತರದ ವ್ಯಕ್ತಿ ಎಂದು ವರದಿ ನೀಡಿತ್ತು. ಈಗ ಎಸ್‌ಐಟಿ ವಶಕ್ಕೆ ಸಿಕ್ಕಿರುವ ಆರೋಪಿ ಪರಶುರಾಮ್‌ನ ಎತ್ತರ 5.2 ಅಡಿ. ಹೀಗಾಗಿ ಆರೋಪಿ ಎತ್ತರದಲ್ಲಿಯೂ ಸಾಮ್ಯತೆ ಇದ್ದು, ಆತನ ಎತ್ತರದ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.

ಇನ್ನು ಪರಶುರಾಮ್‌ ವಾಗ್ಮೋರೆ ಬಂಧನದ ವೇಳೆ ಈತನ ಸ್ನೇಹಿತ ಸುನಿಲ್‌ ಅಗಸರನನ್ನು ಎಸ್‌ಐಟಿ ವಶಕ್ಕೆ
ಪಡೆದುಕೊಂಡಿತ್ತು. ಈತನನ್ನು ವಿಚಾರಣೆಗೊಳಪಡಿಸಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಸುನಿಲ್‌ ಶ್ರೀರಾಮಸೇನೆ
ಕಾರ್ಯಕರ್ತನಾಗಿದ್ದು, ಆರೋಪಿ ಪರಶುರಾಮನ ಸ್ನೇಹಿತನಾಗಿರುವುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಪಿಸ್ತೂಲ್‌-ಬೈಕ್‌ ಇನ್ನೂ ಸಿಕಿಲ್ಲ
ಪರಶುರಾಮ್‌ ವಾಗ್ಮೋರೆ ಬಂಧನದ ಬಳಿಕ ಎಸ್‌ಐಟಿ ಅಧಿಕಾರಿಗಳಿಗೆ ಪ್ರಕರಣದ ಪ್ರಮುಖ ಸಾಕ್ಷ್ಯ ಪಿಸ್ತೂಲ್‌. ಆದರೆ,ಆರೋಪಿ ಗುಂಡು ಹಾರಿಸಿದ ಬಳಿಕ ಪಿಸ್ತೂಲ್‌ ಬೇರೆಯವರಿಗೆ ಕೊಟ್ಟಿದ್ದೇನೆ ಎಂದು ಹೇಳುವ ಮೂಲಕ ಪ್ರಕರಣದ ದಿಕ್ಕು ತಪ್ಪಿಸುತ್ತಿದ್ದಾನೆ. ಹೀಗಾಗಿ, ಪಿಸ್ತೂಲ್‌ ಮತ್ತು ಬೈಕ್‌ ಇನ್ನೂ ತನಿಖಾಧಿಕಾರಿಗಳಿಗೆ ಸಿಕ್ಕಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಬೈಕ್‌ನಲ್ಲಿ ಪರಶುರಾಮ್‌ ಜತೆ ಇದ್ದ ವ್ಯಕ್ತಿ ಯಾರೆಂಬುದು ನಿಗೂಢವಾಗಿಯೇ ಇದೆ.

ಹೊಟ್ಟೆ ಮಂಜನಿಂದ ಜಾಮೀನು ಅರ್ಜಿ ಸಲ್ಲಿಕೆ
ಬೆಂಗಳೂರು
: ಗೌರಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಹೊಟ್ಟೆ ಮಂಜ ಅಲಿಯಾಸ್‌ ನವೀನ್‌ ಕುಮಾರ್‌
ಪರ ವಕೀಲರು ಬುಧವಾರ ಸೆಷನ್ಸ್‌ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.

ಆರೋಪಿ ಪರ ವಕೀಲ ವೇದಮೂರ್ತಿ ವಾದ ಮಂಡಿಸಿ, ಗೌರಿ ಹತ್ಯೆ ಪ್ರಕರಣದಲ್ಲಿ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ನವೀನ್‌ ಕುಮಾರ್‌ ನನ್ನು ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ಆರೋಪಿಯನ್ನಾಗಿ ಮಾಡಲಾಗಿದೆ. ಅಲ್ಲದೆ, ಅಭಿ, ಗಿರಿ ಮತ್ತು ಅನಿಲ್‌ ಎಂಬ ಮೂವರ ಹೇಳಿಕೆಯನ್ನಾಧರಿಸಿ ಪ್ರಕರಣದಲ್ಲಿ ನವೀನ್‌ ಕುಮಾರ್‌ನನ್ನು ಬಂಧಿಸಲಾಗಿದೆ. ಇದಕ್ಕೆ ಅಗತ್ಯ ದಾಖಲೆಗಳನ್ನು ಕೂಡ ಎಸ್‌ಐಟಿ, ಕೋರ್ಟ್‌ಗೆ ಸಲ್ಲಿಸಿಲ್ಲ. ಅಕ್ರಮ ಶಸಾOಉಸOಉ ಪ್ರಕರಣದಲ್ಲಿ ಬಂಧಿಸಿದ ಉಪ್ಪಾರಪೇಟೆ ಠಾಣೆ ಪೊಲೀಸರು, ವಿಚಾರಣೆ ನಡೆಸಿದ ವೇಳೆ ನವೀನ್‌ ಕುಮಾರ್‌ ನೀಡಿರುವ ಹೇಳಿಕೆಯನ್ನೇ ಎಸ್‌ಐಟಿ ಆರೋಪ ಪಟ್ಟಿಯಲ್ಲಿ ಉಲ್ಲೇಖೀಸಿದ್ದಾರೆ. ನವೀನ್‌ ಸಹ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ ಎಂದಿದ್ದಾನೆ. 

ಗುಜರಾತ್‌ನ ವಿಧಿವಿಜ್ಞಾನ ಪರೀಕ್ಷಾ ಕೇಂದ್ರದಲ್ಲಿ ನವೀನ್‌ ನೀಡಿರುವ ಹೇಳಿಕೆಯಲ್ಲಿ,ಗೌರಿ ಹತ್ಯೆ ಆಗುವವರೆಗೂ ಆಕೆ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾನೆ. ಹೀಗಾಗಿ, ತಮ್ಮ ಕಕ್ಷಿದಾರರಿಗೂ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ವಾದಿಸಿ, ಜಾಮೀನು ನೀಡುವಂತೆ ಮನವಿ ಮಾಡಿದರು. ಗುರುವಾರ ಅರ್ಜಿಯ ವಿಚಾರಣೆ ನಡೆಯಲಿದೆ.

ಪ್ರಕರಣ ಕುರಿತು ತನಿಖೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ತನಿಖೆಯ ಪ್ರಗತಿಯನ್ನು ಬಹಿರಂಗಪಡಿಸಲು
ಸಾಧ್ಯವಿಲ್ಲ. ತನಿಖಾಧಿಕಾರಿಗಳೇ ಅಗತ್ಯ ಮಾಹಿತಿಗಳನ್ನು ಒದಗಿಸುತ್ತಾರೆ. 

– ಡಾ.ಜಿ.ಪರಮೇಶ್ವರ್‌, ಗೃಹ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next