Advertisement

ಅನಿಲ ದುರಂತ : ದುರದೃಷ್ಟಕರ ಘಟನೆ

09:47 AM May 08, 2020 | mahesh |

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ ಅನಿಲ ಸೋರಿಕೆ ದುರಂತವು ನಿಜಕ್ಕೂ ದುರದೃಷ್ಟಕರ ಘಟನೆ. ವಿಷಾನಿಲ ಸೋರಿಕೆಯಿಂದಾಗಿ ಹಲವರು ಮೃತಪಟ್ಟರೆ, ಸಾವಿರಕ್ಕೂ ಅಧಿಕ ಜನ ಚಿಕಿತ್ಸೆ ಪಡೆಯುತ್ತಿದ್ದು, ಇವರಲ್ಲೂ ಅನೇಕರ ಸ್ಥಿತಿ ಗಂಭೀರವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಸುದ್ದಿವಾಹಿನಿಗಳಲ್ಲಿ ಹರಿದಾಡುತ್ತಿರುವ ಸಂತ್ರಸ್ತರ ಯಾತನಾಮಯ ಚಿತ್ರಣಗಳು ನಿಜಕ್ಕೂ ಬೆಚ್ಚಿಬೀಳಿಸುವಂತಿವೆ. ಅನೇಕರು ಮಲಗಿದಲ್ಲೇ ಮೃತಪಟ್ಟರೆ, ಇನ್ನುಳಿದವರು ರಸ್ತೆಗಳಲ್ಲಿ, ನೀರಿನ ಗುಂಡಿಯಲ್ಲಿ ಪ್ರಜ್ಞೆ ತಪ್ಪಿದ, ಸಾವನ್ನಪ್ಪಿದ ಬಗ್ಗೆ ವರದಿಯಾಗಿದೆ. ನೂರಾರು ಪ್ರಾಣಿಪಕ್ಷಿಗಳೂ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದ್ದು, ಘಟಕದ ಮೂರು ಕಿಲೋಮೀಟರ್‌ ವ್ಯಾಪ್ತಿಯವರೆಗೂ ವಿಷಾನಿಲದ ಪ್ರಭಾವ ಇದೆಯೆಂದು ಹೇಳಲಾಗಿದೆ.

Advertisement

ಸೋರಿಕೆಯಾಗಿರುವ ಸ್ಟೈರಿನ್‌ ಅನಿಲದಿಂದ ಅನೇಕ ತೊಂದರೆಗಳು ಉಂಟಾಗುತ್ತವೆ. ಮನುಷ್ಯನ ಜಠರ, ಶ್ವಾಸಕೋಶ ಹಾಗೂ ನರಮಂಡಲದ ಮೇಲೂ ಇದು ದೀರ್ಘಾವಧಿ ಪರಿಣಾಮ ಬೀರುವ ಕಾರಣ, ಈಗ ಅಸ್ವಸ್ಥರಾಗಿರುವವರ ಭವಿಷ್ಯದ ಬಗ್ಗೆ ಆತಂಕ ಏರ್ಪಡುವುದು ಸಹಜವೇ. ಇದೇ ವೇಳೆಯಲ್ಲೇ, ಅತ್ತ ಛತ್ತೀಸ್‌ಗಢದ ಪೇಪರ್‌ಮಿಲ್‌ ಒಂದರಲ್ಲಿ ವಿಷಾನಿಲ ಸೋರಿಕೆಯಿಂದಾಗಿ ಹಲವರು ಅಸ್ವಸ್ಥರಾಗಿರುವ ಸುದ್ದಿಯೂ ಹೊರಬಿದ್ದಿದೆ.

ವಿಷಾನಿಲ ಸೋರಿಕೆ ಎಂದಾಕ್ಷಣ ಭಾರತೀಯರ ಮನಸ್ಸಿನಲ್ಲಿ 1984ರ ಭೋಪಾಲ್‌ ಅನಿಲ ದುರಂತ ಎದುರಾಗುತ್ತದೆ. ಈ ರೀತಿಯ ಘಟನೆಯ ದುಷ್ಪರಿಣಾಮ ದಶಕಗಳು ಕಳೆದರೂ ಎಷ್ಟು ಘೋರವಾಗಿರುತ್ತದೆ ಎನ್ನುವುದನ್ನು ನಾವು ಅರಿತಿದ್ದೇವೆ. 1984ರಲ್ಲಿ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಯೂನಿಯನ್‌ ಕಾರ್ಬೈಡ್‌ ರಾಸಾಯನಿಕ ಘಟಕದಿಂದ ಸೋರಿಕೆಯಾದ 30 ಟನ್‌ಗೂ ಅಧಿಕ ಮೀಥೈಲ್‌ ಐಸೋಸೈನೇಟ್‌ ವಿಷಾನಿಲವು, ಮೂರು ಸಾವಿರದ ಐನೂರಕ್ಕೂ ಅಧಿಕ ಜನರ ಸಾವಿಗೆ ಕಾರಣವಾಗಿದ್ದಷ್ಟೇ ಅಲ್ಲದೇ, ಸುತ್ತಮುತ್ತಲಿನ ಪ್ರದೇಶಗಳಲ್ಲಿ 6 ಲಕ್ಷಕ್ಕೂ ಅಧಿಕ ಜನರನ್ನು ಅಸ್ವಸ್ಥಗೊಳಿಸಿತ್ತು. ಘಟನೆ ನಡೆದು ಮೂರು ದಶಕಗಳು ಕಳೆದರೂ ಇನ್ನೂ ಜನರು ಅದರ ದುಷ್ಪರಿಣಾಮವನ್ನು ಎದುರಿಸುತ್ತಿದ್ದಾರೆ. ಸರಕಾರದ ಅಂಕಿ ಅಂಶದ ಪ್ರಕಾರ ಈಗಲೂ 1 ಲಕ್ಷಕ್ಕೂ ಅಧಿಕ ಜನರು ಅಂಧತ್ವ/ ದೃಷ್ಟಿ ದೋಷ, ನರಸಂಬಂಧಿ ಸಮಸ್ಯೆಗಳು, ಕರಳು, ಶ್ವಾಸಕೋಶ-ಹೃದಯದ ತೊಂದರೆ ಸೇರಿದಂತೆ ತೀವ್ರತರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಯಾವ ಮಟ್ಟಕ್ಕೆ ಅವರ ರೋಗ ನಿರೋಧಕ ಶಕ್ತಿ ಕುಸಿದುಬಿಟ್ಟಿದೆಯೆಂದರೆ, ಈಗ ಕೊರೊನಾ ಸೋಂಕಿನಿಂದ ಭೋಪಾಲದಲ್ಲಿ ಮೃತಪಟ್ಟ 20 ಜನರಲ್ಲಿ 17 ಮಂದಿ ಭೋಪಾಲ್‌ ಅನಿಲ ದುರಂತದಲ್ಲಿ ಹಾನಿ ಅನುಭವಿಸಿದ್ದವರು! ಭೋಪಾಲ್‌ ಅನಿಲ ದುರಂತದ ಸಂತ್ರಸ್ತರ ಶ್ವಾಸಕೋಶ ಮತ್ತು ರೋಗನಿರೋಧಕ ವ್ಯವಸ್ಥೆ ಎಷ್ಟು ದುರ್ಬಲವಾಗಿದೆಯೆಂದರೆ, ಕೊರೊನಾ ಸೋಂಕಿನಿಂದ ಅವರನ್ನು ಬಚಾವು ಮಾಡಲು ಅಲ್ಲಿನ ಆಡಳಿತ ಪರದಾಡುವಂತಾಗಿದೆ. ತಮ್ಮದಲ್ಲದ ತಪ್ಪಿಗೆ ಈ ಲಕ್ಷಾಂತರ ಜನರು ಈಗಲೂ ತತ್ತರಿಸುತ್ತಿರುವುದು ಬಹುದೊಡ್ಡ ದುರಂತವೇ ಸರಿ.ವೈಜಾಗ್‌ ಘಟನೆಯ ದುಷ್ಪರಿಣಾಮ ಮುಂದಿನ ಎಷ್ಟೋ ವರ್ಷಗಳು ಇರುವ ಸಾಧ್ಯತೆ ಇದೆ ಎನ್ನುವುದೇ ಆತಂಕದ ವಿಚಾರ. ಯಾರಿಗೂ ಕೂಡ ಇಂಥ ಪರಿಸ್ಥಿತಿ ಎದುರಾಗಲೇಬಾರದು. ಇಲ್ಲಿ ಬಹುದೊಡ್ಡ ಜವಾಬ್ದಾರಿ ಇರುವುದು ಕಂಪೆನಿಗಳ ಮೇಲೆ. ತಪ್ಪು ಮಾಡಿದವರಿಗೆ ಕಠಿಣಾತಿಕಠಿಣ ಶಿಕ್ಷೆಯಾಗಲೇಬೇಕು. ಅಲ್ಲದೇ, ಸಂತ್ರಸ್ತರಿಗೆ ಶೀಘ್ರವೇ ಸೂಕ್ತ ಪರಿಹಾರ ದೊರಕಿಸಿಕೊಡುವಂತಾಗಬೇಕು. ಎಲ್ಲರೂ ಬೇಗನೇ ಚೇತರಿಸಿಕೊಳ್ಳುವಂತಾಗಲಿ ಎಂದು ಆಶಿಸೋಣ.

Advertisement

Udayavani is now on Telegram. Click here to join our channel and stay updated with the latest news.

Next