Advertisement

ಕಾರು ಉಳ್ಳವರಿಗೆ ಗ್ಯಾಸ್‌ ಸಬ್ಸಿಡಿ ರದ್ದು: ಅಪ್ರಬುದ್ಧ ಚಿಂತನೆ

03:08 PM Dec 08, 2017 | Team Udayavani |

ಅನೇಕ ಕುಟುಂಬಗಳಿಗೆ ಕಾರು ಐಷರಾಮಿಗಿಂತಲೂ ಅನಿವಾರ್ಯವಾಗಿದೆ.ಕೆಲವೊಮ್ಮೆ ಕಾರು ಯಾರಧ್ದೋ ಹೆಸರಿನಲ್ಲಿ ನೋಂದಣಿಯಾಗಿರುವ ಸಾಧ್ಯತೆಯೂ ಇರುತ್ತದೆ. ಇಂತಹ ಪ್ರಕರಣಗಳಲ್ಲಿ ಕಾರನ್ನು ಜನರ ಆರ್ಥಿಕ ಸ್ಥಿತಿಗತಿಯ ಮಾನದಂಡ ಎಂದು ಪರಿಗಣಿಸುವ ಕೇಂದ್ರ ಸರ್ಕಾರದ ಐಡಿಯಾ ವಿಫ‌ಲವಾಗುವ ಸಾಧ್ಯತೆಯಿದೆ.

Advertisement

ದೇಶದ ಬೊಕ್ಕಸವನ್ನು ಸುಸ್ಥಿತಿಯಲ್ಲಿಡುವ ಸಲುವಾಗಿ ಹಲವಾರು ಮಾರ್ಗೋಪಾಯಗಳನ್ನು ಹುಡುಕುತ್ತಿರುವ ಸರಕಾರದ ಕಣ್ಣೀಗ ಕಾರು ಮಾಲಕರ ಮೇಲೆ ಬಿದ್ದಿದೆ. ವರದಿಗಳು ಹೇಳುವ ಪ್ರಕಾರ ಸರಕಾರವೀಗ ಸ್ವಂತ ಕಾರು ಹೊಂದಿರುವ ಕುಟುಂಬಗಳ ಅಡುಗೆ ಅನಿಲ ಸಬ್ಸಿಡಿಯನ್ನು ರದ್ದುಪಡಿಸುವ ಕುರಿತು ಚಿಂತನೆ ನಡೆಸಿದೆ. ಪಡಿತರ, ಅಡುಗೆ ಅನಿಲ ಇವೆಲ್ಲ ಅತ್ಯಧಿಕ ಸಬ್ಸಿಡಿ ಮೊತ್ತ ನುಂಗುವ ಸೌಲಭ್ಯಗಳು. ಪಡಿತರಕ್ಕಾದರೆ ಬಿಪಿಎಲ್‌, ಎಪಿಎಲ್‌ ಎಂಬ ಮಾನದಂಡವಿದೆ. ಆದರೆ ಅಡುಗೆ ಅನಿಲ ಎಲ್ಲರಿಗೂ ಸಮಾನವಾಗಿರುವುದರಿಂದ ಭಾರೀ ಮೊತ್ತದ ಸಬ್ಸಿಡಿ ಹಣ ಅಪಾತ್ರರಿಗೆ ಹೋಗುತ್ತಿದೆ. ಇದನ್ನು ತಡೆಯಲು ಜನರ ಆರ್ಥಿಕ ಸ್ಥಿತಿಗತಿಯನ್ನು ಮಾನದಂಡವಾಗಿರಿಸಿಕೊಳ್ಳುವುದು ಉತ್ತಮ ಕ್ರಮ. ಈಗಾಗಲೇ ಅಡುಗೆ ಅನಿಲ ಸಂಪರ್ಕವನ್ನು ಆಧಾರ್‌ಗೆ ಲಿಂಕ್‌ ಮಾಡಿರುವುದರಿಂದ ಸಬ್ಸಿಡಿ ಹಣ ಅನರ್ಹರ ಪಾಲಾಗುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಸಾಧ್ಯವಾಗಿದೆ. ಸಬ್ಸಿಡಿ ಹಣ ನೇರವಾಗಿ ಫ‌ಲಾನುಭವಿಗಳ ಬ್ಯಾಂಕ್‌ ಖಾತೆಗೆ ವರ್ಗಾವಣೆಯಾಗುವು ದರಿಂದ 3.6 ಕೋಟಿ ನಕಲಿ ಎಲ್‌ಪಿಜಿ ಸಂಪರ್ಕಗಳು ಪತ್ತೆಯಾಗಿವೆ ಹಾಗೂ ಸುಮಾರು 30,000 ಕೋ. ರೂ. ಉಳಿತಾಯವಾಗಿದೆ. ಈ ವ್ಯವಸ್ಥೆ ಬರುವ ಮೊದಲು ಕುಬೇರರಿಂದ ಹಿಡಿದು ಕುಚೇಲರ ತನಕ ಎಲ್ಲರೂ ಸಬ್ಸಿಡಿ ಗ್ಯಾಸಿನ ಫ‌ಲಾನುಭವಿಗಳಾಗಿದ್ದರು. ಈ ಹಿನ್ನೆಲೆಯಲ್ಲಿ ಈಗಿನ ಸರಕಾರ ಅಡುಗೆ ಅನಿಲದ ಸಬ್ಸಿಡಿಗೆ ಲಗಾಮು ಹಾಕಲು ಸರ್ವ ರೀತಿಯಲ್ಲೂ ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿಯೇ ಅಡುಗೆ ಅನಿಲ ಸಬ್ಸಿಡಿಗೆ 10 ಲ. ರೂ. ಆದಾಯ ಮಿತಿ ನಿಗದಿಪಡಿಸಲಾಗಿದೆ. ಅಂತೆಯೇ ಸಬ್ಸಿಡಿಯ ಹಂಗು ಬೇಡ ಎನ್ನುವವರಿಗೆ ಅದನ್ನು ಶರಣಾಗಿಸಲು ಗಿವ್‌ ಇಟ್‌ ಅಪ್‌ ಎಂಬ ಅಭಿಯಾನ ಪ್ರಾರಂಭಿಸಿದೆ. 1 ಕೋಟಿಗೂ ಅಧಿಕ ಮಂದಿ ಸಬ್ಸಿಡಿ ಬೇಡ ಎಂದಿರುವುದು ಈ ಅಭಿಯಾನ ಯಶಸ್ವಿಯಾಗಿರುವುದಕ್ಕೆ ಸಾಕ್ಷಿ. 

ಇದೀಗ ಕಾರು ಇದ್ದವರ ಸಬ್ಸಿಡಿ ರದ್ದುಪಡಿಸುವುದು ಈ ನಿಟ್ಟಿನಲ್ಲಿ ಕೈಗೊಂಡಿರುವ ಇನ್ನೊಂದು ಉಪಕ್ರಮ. ಪ್ರಾದೇಶಿಕ ಸಾರಿಗೆ ಕಚೇರಿಗಳಿಂದ ಕಾರುಗಳ ನೋಂದಣಿ ವಿವರ ಪಡೆದುಕೊಂಡು ಅಂತವರ ಸಬ್ಸಿಡಿ ರದ್ದುಪಡಿಸುವುದು ಸರಕಾರದ ಉದ್ದೇಶ. ಕಾರು ಇದ್ದವರು ಶ್ರೀಮಂತರು ಎನ್ನುವುದು ಸಾರ್ವತ್ರಿಕವಾಗಿರುವ ಒಂದು ನಂಬಿಕೆ ಹಿಂದೆ ಇತ್ತು. ಆದರೆ ಜಾಗತೀಕರಣದ ಬದಲಾದ ಪರಿಸ್ಥಿತಿಯಲ್ಲಿ ಕಾರು ಐಷರಾಮಿ ಸೌಲಭ್ಯವಾಗಿ ಉಳಿದಿಲ್ಲ. ಈಗ ವಾರ್ಷಿಕ ಮೂರ್‍ನಾಲ್ಕು ಲಕ್ಷ ಆದಾಯ ಇರುವವರು ಕೂಡ ಕಾರು ಇಟ್ಟುಕೊಳ್ಳುತ್ತಾರೆ. ಅನೇಕ ಕುಟುಂಬಗಳಿಗೆ ಕಾರು ಐಷರಾ ಮಕ್ಕಿಂತಲೂ ಅನಿವಾರ್ಯವಾಗಿದೆ.ಕೆಲವೊಮ್ಮೆ ಕಾರು ಯಾರಧ್ದೋ ಹೆಸರಿನಲ್ಲಿ ನೋಂದಣಿಯಾಗಿರುವ ಸಾಧ್ಯತೆಯೂ ಇರುತ್ತದೆ. ಕಾರ್ಪೋ ರೇಟ್‌ ಕಂಪೆನಿಗಳಲ್ಲಿ ಐದಂಕಿ, ಆರಂಕಿ ಸಂಬಳಕ್ಕೆ ದುಡಿಯುವವರಿಗೆ ಕಂಪೆನಿಯೇ ತನ್ನ ಹೆಸರಿನಲ್ಲಿ ನೋಂದಣಿ ಮಾಡಿಕೊಂಡ ಕಾರನ್ನು ನೀಡುತ್ತದೆ. ಕೆಲವು ಆಗರ್ಭ ಶ್ರೀಮಂತರು ಯಾವುದೇ ವಾಹನ ಹೊಂದಿರುವುದಿಲ್ಲ. ಇಂತಹ ಪ್ರಕರಣಗಳಲ್ಲಿ ಕಾರನ್ನು ಆರ್ಥಿಕ ಸ್ಥಿತಿಗತಿಯ ಮಾನದಂಡ ಎಂದು ಪರಿಗಣಿಸುವ ಐಡಿಯಾ ವಿಫ‌ಲವಾಗುವ ಸಾಧ್ಯತೆಯಿದೆ. ಮಧ್ಯಮ ವರ್ಗದ ಕುಟುಂಬದವರೂ ಈಗ ಕಾರು ಖರೀದಿಸುವಷ್ಟು ಶಕ್ತರಾಗಿದ್ದಾರೆ. ಬ್ಯಾಂಕುಗಳು ಇದಕ್ಕಾಗಿ ಸುಲಭ ಕಂತಿನ ಸಾಲವನ್ನೂ ನೀಡುತ್ತಿವೆ. ಒಂದು ವೇಳೆ ಕಾರಿದ್ದವರ ಸಬ್ಸಿಡಿ ರದ್ದಾದರೆ ಇದರ ನೇರ ಪರಿಣಾಮವಾಗುವುದು ಸಾಲಸೋಲ ಮಾಡಿ ಕಾರು ಖರೀದಿಸಿದ ಮಧ್ಯಮ ವರ್ಗದವರ ಮೇಲೆ. ಇಂತಹ ಅಪ್ರಬುದ್ಧ ಮಾನದಂಡಗಳನ್ನು ನಿಗದಿಪಡಿಸುವ ಬದಲು ಕುಟುಂಬದ ವಾರ್ಷಿಕ ಆದಾಯವನ್ನೇ ಮಾನದಂಡವಾಗಿ ಪರಿಗಣಿಸುವುದು ಒಳ್ಳೆಯದು. ಪ್ರಸ್ತುತ ಇರುವ 10 ಲ. ರೂ. ಮಿತಿಯನ್ನು ಇನ್ನು ತುಸು ಇಳಿಸಿ ಇನ್ನಷ್ಟು ಕುಟುಂಬಗಳನ್ನು ಸಬ್ಸಿಡಿ ವ್ಯಾಪ್ತಿಯಿಂದ ಹೊರಗಿಡಬಹುದು. 

ಮುಂಬರುವ ಮಾರ್ಚ್‌ಗಾಗುವಾಗ ಎಲ್‌ಪಿಜಿ ಸಬ್ಸಿಡಿಯನ್ನು ಸಂಪೂರ್ಣವಾಗಿ ರದ್ದುಪಡಿಸುವ ಇರಾದೆ ಸರಕಾರಕ್ಕಿದೆ. ಇದನ್ನು ಕಾರ್ಯರೂಪಕ್ಕೆ ತರುವ ಸಲುವಾಗಿ ಪ್ರತಿ ತಿಂಗಳು 4 ರೂ.ಯಂತೆ ಬೆಲೆ ಏರಿಸುವುದಾಗಿ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಅವರೇ ಹೇಳಿದ್ದಾರೆ. ಈ ನಡುವೆ ಕಾರು ಹೊಂದಿರುವವರ ಸಬ್ಸಿಡಿಯನ್ನು ರದ್ದುಪಡಿಸುವ ಚಿಂತನೆ ಏಕೆ ಬಂದಿದೆ ಎನ್ನುವುದನ್ನು ಸರಕಾರ ಸ್ಪಷ್ಟಪಡಿಸಿಲ್ಲ. ಅಪಾತ್ರರಿಗೆ ಸಬ್ಸಿಡಿ ಸೌಲಭ್ಯ ಸಿಗುವುದನ್ನು ತಡೆಯುವ ಸ್ವಾಗತಾರ್ಹ ನಡೆಯೇ ಹೌದು. ಆದರೆ ಅಡುಗೆ ಅನಿಲ ಮೇಲಿನ ಸಬ್ಸಿಡಿ ಸಂಪೂರ್ಣ ರದ್ದಾದರೆ ಕೆಳ ಮಧ್ಯಮ ವರ್ಗದವರು ಮತ್ತು ಬಡವರಿಗೆ ಮಾತ್ರ ಭಾರೀ ಸಮಸ್ಯೆಯಾಗಲಿದೆ. ಏನೇ ಆದರೂ ಬಡವರ ಸಬ್ಸಿಡಿಗೆ ಕಲ್ಲುಹಾಕುವುದು ಸರಿಯಲ್ಲ.

Advertisement

Udayavani is now on Telegram. Click here to join our channel and stay updated with the latest news.

Next