ಕಲಬುರಗಿ: ಜಿಲ್ಲೆಯಲ್ಲಿ ಒಟ್ಟು 2,46,604 ಅನಿಲ ಸಂಪರ್ಕ ರಹಿತ ಕುಟುಂಬಗಳಿದ್ದು, ಮೊದಲ ಹಂತವಾಗಿ ಸುಮಾರು 78,450 ಕುಟುಂಬಗಳಿಗೆ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ ಉಚಿತ ಅನಿಲ ಸಂಪರ್ಕ ಕಲ್ಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ
ಪಾಟೀಲ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯ ಜಿಲ್ಲಾಮಟ್ಟದ ಆಯ್ಕೆ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಜಿಲ್ಲೆಯಲ್ಲಿರುವ ನ್ಯಾಯಬೆಲೆ ಅಂಗಡಿವಾರು, ಮತಕ್ಷೇತ್ರಗಳವಾರು ಅನಿಲ ಭಾಗ್ಯ ಯೋಜನೆಯ ಫಲಾನುಭವಿಗಳನ್ನು ಗುರುತಿಸಿ ಶಾಸಕರಿಗೆ ಸಲ್ಲಿಸಲಾಗಿದೆ. ವಾರದೊಳಗಾಗಿ ಎಲ್ಲ ಶಾಸಕರು ಫಲಾನುಭವಿಗಳನ್ನು ಆಯ್ಕೆ
ಮಾಡುವಂತೆ ತಿಳಿಸಿದರು.
ಅಫಜಲಪುರ ಮತಕ್ಷೇತ್ರದ-11,011, ಆಳಂದ-10,466, ಚಿಂಚೋಳಿ-11,236, ಚಿತ್ತಾಪುರ-9,023, ಜೇವರ್ಗಿ-13,775, ಸೇಡಂ-10,757, ಕಲಬುರಗಿ ಗ್ರಾಮಾಂತರ-9,949 ಹಾಗೂ ಕಲಬುರಗಿ ದಕ್ಷಿಣದ-2,232 ಫಲಾನುಭವಿಗಳನ್ನು ಪ್ರಥಮ ಹಂತವಾಗಿ ಗುರುತಿಸಲಾಗಿದೆ. ಇವರಿಗೆ 4,040 ರೂ.ಗಳಲ್ಲಿ ಉಚಿತ ಅನಿಲ ಸಂಪರ್ಕ, ಐ.ಎಸ್.ಐ. ಚಿನ್ಹೆ ಹೊಂದಿದ ಗ್ಯಾಸ್ ಬರ್ನರ್ ಸ್ಟೌವ್ ಹಾಗೂ ಎರಡು ಭರ್ತಿ ಮಾಡಿದ ಸಿಲಿಂಡರ್ ನೀಡಲಾಗುವುದು ಎಂದರು.
ಅನಿಲ ಸಂಪರ್ಕ ಹೊಂದಿರದ ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿದಾರರು ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರು ಮುಖ್ಯಮಂತ್ರಿ ಅನೀಲ ಭಾಗ್ಯ ಯೋಜನೆಗೆ ಅರ್ಹರಾಗಿದ್ದಾರೆ. ಪ್ರತಿ ಮತಕ್ಷೇತ್ರದಿಂದ ಆಯ್ಕೆಯಾದ ಫಲಾನುಭವಿಗಳು ಆಯಾ ಗ್ರಾಮ ಪಂಚಾಯತಿ, ಅಟಲ್‌ಜಿ ಜನಸ್ನೇಹಿ ಕೇಂದ್ರ, ಗುಲಬರ್ಗಾ ಒನ್ ಕೇಂದ್ರಗಳಲ್ಲಿ ಆಧಾರ್ ಕಾರ್ಡ್, ಪಡಿತರ ಚೀಟಿ ಸಲ್ಲಿಸಿ ನೋಂದಣಿ ಮಾಡಲು ಅನುಕೂಲವಾಗುವ ಹಾಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಸದೀಯ ಕಾರ್ಯದರ್ಶಿ ಡಾ| ಉಮೇಶ ಜಾಧವ, ಶಾಸಕ ದತ್ತಾತ್ರೇಯ ಸಿ. ಪಾಟೀಲ ರೇವೂರ, ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ, ಜಿಲ್ಲಾ ಧಿಕಾರಿ ಆರ್. ವೆಂಕಟೇಶಕುಮಾರ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ, ಸಮಾಜಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಂದೇನವಾಜ, ಆಹಾರ ಇಲಾಖೆ ಉಪನಿರ್ದೇಶಕ ಅರುಣಕುಮಾರ ಸಂಗಾವಿ, ಸಹಾಯಕ ಕಾರ್ಮಿಕ ಆಯುಕ್ತ ವೆಂಕಟೇಶ ಸಿಂದಿಹಟ್ಟಿ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.