ಕೆ.ಆರ್.ಪುರ : ಮನೆಮನೆಗೆ ಗ್ಯಾಸ್ ಪೂರೈಕೆ ಮಾಡುವ ಉದ್ದೇಶದಿಂದ ಅಳವಡಿಸಿರುವ ಗೇಲ್ ಗ್ಯಾಸ್ ಪೈಪ್ ನಲ್ಲಿ ಉಂಟಾದ ಒತ್ತಡದ ಪರಿಣಾಮವಾಗಿ ಪೈಪ್ ಒಡೆದು ಸ್ಫೋಟಗೊಂಡಿರುವ ಘಟನೆ ಬಾಣಸವಾಡಿ ಸಮೀಪದ ಸುಬ್ಬಣ್ಣ ಪಾಳ್ಯದ ಪಿ.ಎನ್.ಎಸ್ ಬಡಾವಣೆಯಲ್ಲಿ ನಡೆದಿದೆ. ಈ ಅವಘಡದಿಂದ ಸ್ಥಳೀಯ ನಿವಾಸಿಗಳಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಬೆಳಿಗ್ಗೆ 8:30ರ ವೇಳೆಯಲ್ಲಿ ಗ್ಯಾಸ್ ಪೈಪ್ ನಲ್ಲಿ ಒತ್ತಡ ಹೆಚ್ಚಾಗಿ ಪೈಪ್ ಒಡೆದ ಪರಿಣಾಮ ಮನೆ ಮುಂದೆ ಚರಂಡಿಯ ಸ್ಲಾಬ್ ಗಳು ಚೂರು ಚೂರಾಗಿ ಛಿದ್ರಗೊಂಡಿದೆ. ಜೋರಾಗಿ ದೊಡ್ಡ ಶಬ್ದ ಕೇಳಿ ಬಂದ ಹಿನ್ನೆಲೆ ಜನರು ಭಯಭೀತರಾಗಿ ಮನೆ ನಿವಾಸಿಗಳು ಗಾಬರಿಯಿಂದ ಮನೆಯಿಂದ ಹೊರ ಬಂದಿದ್ದಾರೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಸ್ಥಳೀಯರು ಬಾಣಸವಾಡಿಯ ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನೆ ಸ್ಥಳಕ್ಕೆ ಆಗಮಿಸಿದ ಎರಡು ಅಗ್ನಿಶಾಮಕ ದಳ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತರಾಗಿ ಆಗಬಹುದಾದ ದೊಡ್ಡ ದುರಂತವನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗೇಲ್ ಗ್ಯಾಸ್ ಸಿಬ್ಬಂದಿಗಳು ಒಡೆದ ಪೈಪ್ ಲೈನ್ ದುರಸ್ತಿಪಡಿಸಿದರು. ನಿನ್ನೆ ಸೋಮವಾರ ಬೆಳಿಗ್ಗೆ ಖಾಸಗಿ ಸಂಸ್ಥೆಯೊಂದು ಇಂಟರ್ನೆಟ್ ಸೇವೆ ಒದಗಿಸಲು ಕಾಮಗಾರಿ ನಡೆಸುವ ವೇಳೆ ಗ್ಯಾಸ್ ಪೈಪ್ ಗೆ ತಾಗಿದೆ, ಹೀಗಾಗಿ ಒತ್ತಡ ಉಂಟಾಗಿ ಗ್ಯಾಸ್ ಪೈಪ್ ಒಡೆದಿದೆ ಎನ್ನಲಾಗಿದೆ.
ಇದನ್ನೂ ಓದಿ :ಫಲಿತಾಂಶ:ಗೋವಾ,ಉತ್ತರಾಖಂಡಕ್ಕೆ ರಾಜ್ಯ ಕಾಂಗ್ರೆಸ್ ಬಾಹುಬಲಿಗಳು
ಸರ್ವಜ್ಞನಗರ ಕ್ಷೇತ್ರದ ಶಾಸಕ ಕೆಜೆ ಜಾಜ್೯ ಅವರು ಗೇಲ್ ಗ್ಯಾಸ್ ಪೈಪ್‌ಗಳು ಒತ್ತಡದ ಪರಿಣಾಮವಾಗಿ ಒಡೆದ ಸ್ಥಳವನ್ನು ಪರಿಶೀಲಿಸಿದರು.ಆದಷ್ಟು ಬೇಗ ಸೂಕ್ತ ಹಾಗೂ ಸುರಕ್ಷಾ ಕ್ರಮ ಕೈಗೊಂಡು ಸಮಸ್ಯೆ ನಿವಾರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.