Advertisement

ಗ್ಯಾಸ್‌ ಸಿಲಿಂಡರ್‌ ಮಿತಿ: ಗ್ರಾಹಕರಿಗೆ ಫ‌ಜೀತಿ

01:55 AM Dec 29, 2022 | Team Udayavani |

ಉಡುಪಿ: ಗೃಹ ಬಳಕೆಗೆ (ಡೊಮೆಸ್ಟಿಕ್‌ ಯೂಸ್‌) ವಾರ್ಷಿಕ 15 ಗ್ಯಾಸ್‌ ಸಿಲಿಂಡರ್‌ ಮಾತ್ರ ನೀಡಲಾಗುವುದು ಎಂಬ ನಿಯಮ ಜಾರಿಗೆ ಬಂದ ಅನಂತರದಲ್ಲಿ ಗ್ರಾಹಕರಿಗೆ ಸಂಕಷ್ಟ ಎದುರಾಗಿದೆ.

Advertisement

ಈ ಹಿಂದೆ ತಿಂಗಳಿಗೆ ಒಂದರಂತೆ 12 ಗ್ಯಾಸ್‌ ಸಿಲಿಂಡರ್‌ ವರ್ಷಕ್ಕೆ ಪಡೆಯುವ ನಿಯಮ ತಂದಾಗ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ಬಂದ ಹಿನ್ನೆಲೆಯಲ್ಲಿ ನಿರ್ದಿಷ್ಟ ಮಿತಿಯನ್ನು ಕೇಂದ್ರ ಸರಕಾರ ತೆರವುಗೊಳಿಸಿತ್ತು. ಇದರಿಂದ ಗ್ರಾಹಕರು ತಮಗೆ ಬೇಕಾದಷ್ಟು ಬಳಕೆ ಮಾಡಿಕೊಳ್ಳುತ್ತಿದ್ದರು. ಇದೀಗ ಮತ್ತೆ ವರ್ಷಕ್ಕೆ 15 ಸಿಲಿಂಡರ್‌ಗಳನ್ನು ಮಾತ್ರ ಪಡೆದುಕೊಳ್ಳಬೇಕು ಎಂಬ ನಿಯಮ ಬಂದಿರುವ ಹಿನ್ನೆಲೆಯಲ್ಲಿ 15 ಗ್ಯಾಸ್‌ ಸಿಲಿಂಡರ್‌ ಮಿತಿ ದಾಟಿರುವವರಿಗೆ ಗ್ಯಾಸ್‌ ಸಿಲಿಂಡರ್‌ ಬುಕ್‌ ಮಾಡಲು ಸಾಧ್ಯವಾಗುತ್ತಿಲ್ಲ ಮತ್ತು ಪೂರೈಕೆಯೂ ಆಗುತ್ತಿಲ್ಲ.

ಮಾಹಿತಿಯೇ ಇಲ್ಲ
ಕೆಲವು ಕುಟುಂಬಗಳಿಗೆ ಎರಡುತಿಂಗಳಿಗೆ ಒಂದು ಗ್ಯಾಸ್‌ ಸಿಲಿಂಡರ್‌ ಬಳಕೆಗೆ ಸಾಕಾದರೆ ಇನ್ನು ಅನೇಕ ಕುಟುಂಬಗಳಿಗೆ ಪ್ರತೀ ತಿಂಗಳಿಗೆ ಎರಡರಿಂದ ಮೂರು ಗ್ಯಾಸ್‌ ಸಿಲಿಂಡರ್‌ ಬೇಕಾಗುತ್ತದೆ. ವಾರ್ಷಿಕ 12 ಸಿಲಿಂಡರ್‌ ಮಾತ್ರ ಎಂಬ ಮಿತಿ ಸಡಿಲಗೊಂಡ ಅನಂತರದಲ್ಲಿ ನಾವು ಕುಟುಂಬಕ್ಕೆ ಮಾಸಿಕ ಎಷ್ಟು ಬೇಕು ಅಷ್ಟು ಸಿಲಿಂಡರ್‌ ಮುಂಗಡ ಕಾದಿರಿಸಿಕೊಳ್ಳುತ್ತಿದ್ದೇವೆ. ಈಗ ಏಕಾಏಕಿ 15 ಸಿಲಿಂಡರ್‌ ಮಾತ್ರ ನೀಡಲಾಗುವುದು ಎಂಬ ನಿಯಮ ಮಾಡಿದ್ದಾರೆ. ಈಗಾಗಲೇ 15 ಸಿಲಿಂಡರ್‌ ಈ ವರ್ಷ ಬಳಕೆ ಮಾಡಿದವರೆ ಮುಂದಿನ ಎಪ್ರಿಲ್‌ ತನಕ ಸಿಲಿಂಡರ್‌ ನೀಡಲಾಗುವುದಿಲ್ಲ ಎಂದೂ ಹೇಳಲಾಗುತ್ತಿದೆ. ಸರಿಯಾದ ಮಾಹಿತಿ ನೀಡದೆ ಇಂತಹ ನಿರ್ಬಂಧ ಹಾಕುವುದು ಸರಿಯಲ್ಲ. ಇದರಿಂದ ಅನೇಕ ಕುಟುಂಬಕ್ಕೆ ಸಮಸ್ಯೆಯಾಗಲಿದೆ ಎಂದು ಕೆಲವರು ಆಕ್ರೋಶ ಹೊರ ಹಾಕಿದ್ದಾರೆ.

ಈ ಮೊದಲು ವಾರ್ಷಿಕ 12 ಗ್ಯಾಸ್‌ ಸಿಲಿಂಡರ್‌ ಮಿತಿ ಇತ್ತು. ಅದನ್ನು ಸಡಿಲಗೊಳಿಸಲಾಗಿತ್ತು. ಇತ್ತೀಚೆಗೆ 15 ಗ್ಯಾಸ್‌ ಸಿಲಿಂಡರ್‌ ಮಿತಿ ನಿಗದಿ ಮಾಡಲಾಗಿದೆ. ಗೃಹ ಬಳಕೆ ಸಿಲಿಂಡರ್‌ಗೆ ಈ ಮಿತಿ ವಿಧಿಸಲಾಗಿದೆ. ವಾಣಿಜ್ಯ ಉದ್ದೇಶಕ್ಕೆ ಬಳಸುವ ಗ್ಯಾಸ್‌ ಸಿಲಿಂಡರ್‌ಗಳಿಗೆ ಯಾವುದೇ ಮಿತಿ ಇಲ್ಲ ಎಂದು ಬಾಲಾಜಿ ಗ್ಯಾಸ್‌ ಏಜೆನ್ಸಿ ಮಾಲಕ ರಾಘವೇಂದ್ರ ಆಚಾರ್ಯ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next