Advertisement

ಗ್ಯಾಸ್‌ ಸಿಲಿಂಡರ್‌ ವಿತರಣೆ ಎಲ್ಲೂ ಉಚಿತ ಇಲ್ಲ!

03:16 AM Jan 11, 2021 | Team Udayavani |

ಮಂಗಳೂರು/ಉಡುಪಿ: ಇತ್ತೀಚೆಗಷ್ಟೇ ಹಿಂದೂಸ್ತಾನ್‌ ಪೆಟ್ರೋಲಿಯಂ ಕಂಪೆನಿಯ ಅಧಿಕಾರಿಗಳು ನೀಡಿದ್ದ “ಗ್ಯಾಸ್‌ ಸಿಲಿಂಡರ್‌ ವಿತರಣೆಗೆ ಗ್ರಾಹಕ ಹೆಚ್ಚುವರಿ ಶುಲ್ಕ ಪಾವತಿಬೇಕಿಲ್ಲ’ ಎಂಬ ಹೇಳಿಕೆ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ  ಕರಾವಳಿಯಾದ್ಯಂತ ಹೆಚ್ಚುವರಿ ಶುಲ್ಕ ಪಾವತಿ ಬಗ್ಗೆ ಚರ್ಚೆ ಆರಂಭವಾಗಿದೆ.

Advertisement

ಪ್ರಸ್ತುತ ಸಂದರ್ಭದಲ್ಲಿ ಉದಯವಾಣಿಯು ವಿವಿಧ ಭಾಗದ ಕೆಲವು ಗ್ರಾಹಕರಿಂದ ಮಾಹಿತಿ ಪಡೆದಾಗ, ಸಿಲಿಂಡರ್‌ ಮನೆಗೆ ಬರಬೇಕಾದರೆ ಬಹುತೇಕ ಸಂದರ್ಭ ಹೆಚ್ಚುವರಿ ಶುಲ್ಕ ಪಾವತಿಸ ಬೇಕು. ಇದು ಆ ಕಂಪೆನಿ, ಈ ಕಂಪೆನಿ ಎಂಬುದಿಲ್ಲ ಎನ್ನುತ್ತಾರೆ.

ಗ್ರಾಹಕರು ಹೇಳುವ ಪ್ರಕಾರ, ಸಿಲಿಂಡರ್‌ ಪೂರೈಕೆಗೆ ನಗರ ವ್ಯಾಪ್ತಿ ಸಹಿತ ಗ್ರಾಮೀಣ ಭಾಗದಲ್ಲೂ ಹೆಚ್ಚುವರಿ 30 ರೂ.ಗಳಷ್ಟು ಶುಲ್ಕ ವಸೂಲು ಮಾಡಲಾಗುತ್ತಿದೆಯಂತೆ. ಆದರೆ ಆಹಾರ ಇಲಾಖೆಯ ನಿಯಮಾವಳಿಯು, ಸಿಲಿಂಡರ್‌ ಶುಲ್ಕ ಹಾಗೂ ಸರಬರಾಜು ಶುಲ್ಕ ಎಲ್ಲ ಸೇರಿ ಬಿಲ್‌ನಲ್ಲಿ ನಮೂದಿಸಲಾಗಿರುತ್ತದೆ. ಅದಾದ ಮೇಲೆ ಹೆಚ್ಚುವರಿ ಶುಲ್ಕ ನೀಡಬೇಕಿಲ್ಲ ಎನ್ನುತ್ತದೆ.

ಏಜೆನ್ಸಿ ಪಕ್ಕದಲ್ಲಿದ್ದರೂ ಡೆಲಿವರಿ ಚಾರ್ಜ್‌ :

ಗ್ಯಾಸ್‌ ಏಜೆನ್ಸಿ ಮನೆಯ ಪಕ್ಕದಲ್ಲಿದ್ದರೂ ಡೆಲಿವರಿ ಶುಲ್ಕ ಹಾಕುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಸ್ವಲ್ಪ ಒಳಭಾಗಗಳಿಗೆ ತೆರಳುವಾಗ ಕೆಲವು ಮನೆಯವರು ಸ್ವ ಇಚ್ಛೆಯಿಂದ (ಟಿಪ್ಸ್‌ ಮಾದರಿಯಲ್ಲಿ) ಹಣ ನೀಡುತ್ತಾರೆ. ಕೆಲವು ಪೂರೈಕೆದಾರರು (ಮನೆಗೆ ವಿತರಿಸುವ ಸಿಬಂದಿ) ಇಂತಿಷ್ಟು ಹಣ ನೀಡಿ ಎಂದು ಆಗ್ರಹಿಸುವ ಪ್ರಸಂಗಗಳೂ ಇವೆ. ಒಮ್ಮೆ ಹಣ ನೀಡದಿದ್ದರೆ ಆ ಬಳಿಕ ವಿಳಾಸ ಸರಿಯಿಲ್ಲ ಎಂದು ಸತಾಯಿಸುವ ಪ್ರಕರಣಗಳೂ ಇವೆ ಎನ್ನುತ್ತಾರೆ ಕೆಲವರು.

Advertisement

ಬಿಲ್‌ನಲ್ಲಿ ನಮೂದಿಸಿರುವ ಮೊತ್ತವನ್ನು ಹೊರತುಪಡಿಸಿ ಯಾವುದೇ ಹೆಚ್ಚುವರಿ ಶುಲ್ಕವನ್ನು ಸಂಗ್ರಹಿಸದೆ ಗ್ಯಾಸ್‌ ಸಿಲಿಂಡರನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವುದು ವಿತರಕರ ಹೊಣೆ ಎನ್ನುತ್ತದೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ.

ಪಾಯಿಂಟ್‌ ನಮೂದು :

ಗ್ರಾಮಾಂತರ ಭಾಗಗಳಿಗೆ ಗ್ಯಾಸ್‌ ಸರಬರಾಜು ಮಾಡುವಾಗ ಏಜೆನ್ಸಿಯವರು ಪಾಯಿಂಟ್‌ಗಳನ್ನು ನಿಗದಿಪಡಿಸುತ್ತಾರೆ. ಅಲ್ಲಿಗೆ ತಲುಪುವಾಗ ಕರೆ ಮಾಡಿ ತಿಳಿಸಲಾಗುತ್ತದೆ. ಗ್ರಾಹಕರು ಸ್ಥಳಕ್ಕೆ ಬಂದು ಸಿಲಿಂಡರ್‌ ಪಡೆದುಕೊಳ್ಳುವ ವ್ಯವಸ್ಥೆಯುಂಟು. ಇಂತಹ ಸಂದರ್ಭದಲ್ಲಿ ಬಹುತೇಕ ಮಂದಿ ಮನೆಗೆ ಬಂದು ಗ್ಯಾಸ್‌ ನೀಡುವಂತೆ ತಿಳಿಸುತ್ತಾರೆ. ಆಗ ಗ್ರಾಹಕರೇ ಅವರಿಗೆ ಹೆಚ್ಚುವರಿ ಮೊತ್ತ ಪಾವತಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ ಎನ್ನುತ್ತಾರೆ ಇನ್ನು ಕೆಲವರು. ಆದರೆ ಇದು ನಗರ ಪ್ರದೇಶಗಳಿಗೆ ಅನ್ವಯವಾಗದು.

ಹಣ ವಸೂಲಿ ದೂರು ಬಂದಿಲ್ಲ :

ಗ್ಯಾಸನ್ನು ಮನೆ ಬಾಗಿಲಿಗೆ ವಿತರಿಸಲು ಗ್ಯಾಸ್‌ ವಿತರಣ ಸಂಸ್ಥೆಗಳು ಹೆಚ್ಚುವರಿ ಹಣ ಪಡೆಯುತ್ತಿರುವ ಬಗ್ಗೆ ಯಾವುದೇ ದೂರು ಬಂದಿಲ್ಲ. ಒಂದುವೇಳೆ ಯಾರಾದರೂ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಟ್ಟಲ್ಲಿ ಇಲಾಖೆಯನ್ನು ಸಂಪರ್ಕಿಸಬಹುದು. ಇಂಥ ದೂರುಗಳಿದ್ದರೆ ಇಲಾಖೆಗೆ (0824-2423622) ದೂರವಾಣಿ ಅಥವಾ ಪತ್ರ ಮುಖೇನ ದೂರು ನೀಡಬಹುದು.-ರಮ್ಯಾ, ಜಂಟಿ ನಿರ್ದೇಶಕರು,  ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರ ಇಲಾಖೆ, ದ.ಕ.

ಡೆಲಿವರಿ ಶುಲ್ಕವನ್ನು ಬಿಲ್‌ ಮೊತ್ತದೊಂದಿಗೆ ಸೇರಿಸಲಾಗಿರುತ್ತದೆ. ಗ್ರಾಹಕರು ಯಾವುದೇ ಹೆಚ್ಚುವರಿ ದರ ನೀಡಬೇಕಿಲ್ಲ. ಪೂರೈಕೆದಾರರು ಹೆಚ್ಚುವರಿ ದರ ಕೇಳಿದರೆ ಸಂಬಂಧಪಟ್ಟ ಏಜೆನ್ಸಿ ಅಥವಾ ಆಹಾರ ಇಲಾಖೆಗೆ (0820 2574947) ದೂರು ನೀಡಬಹುದು.ಮೊಹಮ್ಮದ್‌ ಇಸಾಕ್‌, ಉಪನಿರ್ದೇಶಕರು, ಆಹಾರ ಇಲಾಖೆ, ಉಡುಪಿ

ಗ್ಯಾಸ್‌ ಸಿಲಿಂಡರಿಗೆ 699 ರೂ. ಎಂದು ನಮೂದಾಗಿದೆ. 50 ರೂ. ಹೆಚ್ಚುವರಿಯಾಗಿ ತೆಗೆದುಕೊಳ್ಳುತ್ತಾರೆ. ಪ್ರಶ್ನಿಸಿದರೆ ಡೆಲಿವರಿ ಚಾರ್ಜ್‌ ಎನ್ನುತ್ತಾರೆ. ನಮಗೆ ತಾಲೂಕು ಕೇಂದ್ರದಿಂದ ಸರಬರಾಜು ಆಗಿ ಬರುತ್ತಿದೆ. ಹತ್ತಿರ ಅಥವಾ ನಗರದೊಳಗೆ ದರ ಕಡಿಮೆ ಇರಬಹುದು. ಪಕ್ಕದ ಬೆಳ್ಮಣ್‌ನಲ್ಲಿ  720 ರೂ. ಪಡೆಯುತ್ತಾರಂತೆ.ಮನೋಹರ ಪ್ರಭು, ಬೆಳ್ಮಣ್‌

ಎಷ್ಟೋ ಮಂದಿಗೆ ಮಾಹಿತಿಯೇ  ಇಲ್ಲ ಗ್ಯಾಸ್‌ ಬುಕ್‌ ಮಾಡಿದರೆ ಗಾಡಿಯಲ್ಲಿ ಬರುತ್ತದೆ. ಸಿಲಿಂಡರ್‌ ಡೆಲಿವರಿ ಉಚಿತ ಇದೆ. ಮನೆಗೆ ತಂದು ಹಾಕಿದರೆ ಮಾತ್ರ  10ರಿಂದ 30 ರೂ. ಕೇಳುತ್ತಾರೆ. ಅನೇಕರಿಗೆ ಉಚಿತ ಡೆಲಿವರಿಯ ಮಾಹಿತಿಯೇ ಇಲ್ಲ.ದೀಪಕ್‌ ಪೂಜಾರಿ ಕೋಡಿ, ಕುಂದಾಪುರ

ಬೆಳ್ತಂಗಡಿಯ ಏಜೆನ್ಸಿಯಿಂದ ಗ್ಯಾಸ್‌ ಪಡೆಯುತ್ತಿದ್ದೇವೆ. 6 ಕಿ.ಮೀ. ದೂರದ  ಮದ್ದಡ್ಕಕ್ಕೆ 693 ರೂ. ಗ್ಯಾಸ್‌ ದರವಿದ್ದಲ್ಲಿ 750 ರೂ. ಪಡೆಯುತ್ತಾರೆ. ಪ್ರಶ್ನಿಸಿದರೆ ಇಲ್ಲಸಲ್ಲದ ಸಬೂಬು ನೀಡುತ್ತಾರೆ. ಮುಂದೆ ಸಾಗುತ್ತಿದ್ದಂತೆ 10 ರೂ. ಏರಿಕೆಯಾಗುತ್ತಲೇ ಹೋಗುತ್ತದೆ. – ಶೇಖರ್‌ ಶೆಟ್ಟಿ, ಉಪ್ಪಡ್ಕ

ಮಾಹಿತಿ ಹಕ್ಕಿನ ಅಡಿಯಲ್ಲಿ ಅರ್ಜಿ ಸಲ್ಲಿಸಿದಾಗ ತೈಲ ಕಂಪೆನಿ ಉಚಿತ ವಿತರಣೆ ಕುರಿತು ಸ್ಪಷ್ಟನೆ ನೀಡಿದೆ. ಹಾಗಾದರೆ ಇದೇ ಕಂಪೆನಿ ತನ್ನ ವಿತರಕರಿಗೆ ಈ ನಿರ್ದೇಶನ ಮೊದಲೇ ನೀಡಿಲ್ಲವೇ ಅಥವಾ ನೀಡಿದ್ದೂ ವಿತರಕರು ಇಲ್ಲಿ ಜಾಣ ಕುರುಡಾಗಿದ್ದಾರಾ ಎನ್ನುವುದು ಪ್ರಶ್ನಾರ್ಹ. ಸದಾಶಿವ ಪೂಜಾರಿ ಮರವಂತೆ, ಕುಂದಾಪುರ

ಸಜೀಪಮುನ್ನೂರಿನ ಆಲಾಡಿ ಭಾಗದಲ್ಲಿ ಸಿಲಿಂಡರ್‌ ತಲುಪಿಸಲು ಬಾಡಿಗೆಗೆಂದು 35 ರೂ. ಹೆಚ್ಚು ವಸೂಲು ಮಾಡಲಾಗುತ್ತದೆ. ಅವರು ತೆಗೆದುಕೊಳ್ಳಬಾರದು ಎಂಬ ಕುರಿತು ನಮಗೆ ಮಾಹಿತಿ ಇಲ್ಲ.-ವಿಶ್ವನಾಥ ಕೊಟ್ಟಾರಿ,ಶಾರದಾನಗರ, ಆಲಾಡಿ, ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next