ಇಂದಿನ ಟಿ20 ಯುಗದಲ್ಲಿ ಸಿಕ್ಸರ್ ಬಾರಿಸುವುದು ದೊಡ್ಡ ಕತೆಯಲ್ಲ. ಓವರಿಗೆ ಆರು ಸಿಕ್ಸರ್ ಸಿಡಿದರೂ ಇದೆಲ್ಲ ಮಾಮೂಲು ಎಂದು ಪರಿಗಣಿಸುವವರೇ ಹೆಚ್ಚು. ಆದರೆ ಆಗಿನ್ನೂ ಸೀಮಿತ ಓವರ್‌ಗಳ ಕ್ರಿಕೆಟ್ ಆರಂಭವಾಗದಿದ್ದ ಕಾಲದಲ್ಲಿ ಇಂಥದೊಂದು ಪರಾಕ್ರಮ ಮೆರೆದರೆ ಅದಕ್ಕೆ ಸಿಗುತ್ತಿದ್ದ ಮಾನ್ಯತೆ, ಗೌರವ, ಪ್ರಶಂಸೆಗಳನ್ನೆಲ್ಲ ಬಹುಶಃ ಕಲ್ಪಿಸಿಕೊಳ್ಳಲಿಕ್ಕೂ ಸಾಧ್ಯವಿರಲಿಲ್ಲ. ಇಂಥದೊಂದು ಗೌರವಕ್ಕೆ ಪಾತ್ರರಾದವರೇ ವೆಸ್ಟ್ ಇಂಡೀಸಿನ ಆಲ್‌ರೌಂಡರ್ ಸರ್ ಗ್ಯಾರಿ ಸೋಬರ್ಸ್!
ಕ್ರಿಕೆಟ್ ಇತಿಹಾಸದಲ್ಲಿ ಓವರಿನ ಆರೂ ಎಸೆತಗಳನ್ನು ಸಿಕ್ಸರ್‌ಗೆ ಬಡಿದಟ್ಟಿದ ಮೊದಲ ಆಟಗಾರನೇ ಗ್ಯಾರಿ ಸೋಬರ್ಸ್. ಬಳಿಕ ರವಿಶಾಸ್ತ್ರಿ, ಹರ್ಷಲ್ ಗಿಬ್ಸ್, ಯುವರಾಜ್ ಸಿಂಗ್ ಅವರೆಲ್ಲ ಈ ಸಾಹಸವನ್ನು ಪುನರಾವರ್ತಿಸಿದರು. ಆದರೆ ಸೋಬರ್ಸ್ ಅವರ ಆ ಮೊದಲ ಪರಾಕ್ರಮ ಮಾತ್ರ ಸಾಟಿಯಿಲ್ಲದ್ದು, ಕಲ್ಪನೆಗೂ ಮೀರಿದ್ದು.
1968ರ ಇಂಗ್ಲಿಷ್ ಕೌಂಟಿ ಋತುವಿನಲ್ಲಿ ಗ್ಯಾರಿ ಸೋಬರ್ಸ್ “ಸಿಕ್ಸ್ ಸಿಕ್ಸರ್’ ಮೂಲಕ ಕ್ರಿಕೆಟ್ ಲೋಕದಲ್ಲಿ ನೂತನ ಸಂಚಲನ ಮೂಡಿಸಿ ಸುದ್ದಿಯಾದರು. ನಾಟಿಂಗ್‌ಹ್ಯಾಮ್‌ಶೈರ್ ಕೌಂಟಿಯ ಪ್ರಮುಖ ಸದಸ್ಯನಾಗಿದ್ದ ಅವರು ಆಗಸ್ಟ್ 30ರಂದು ಗ್ಲಾಮರ್ಗನ್ ವಿರುದ್ಧ ಸ್ವಾನ್ಸಿ ಮೈದಾನದಲ್ಲಿ ಈ ಅಸಾಮಾನ್ಯ ಪರಾಕ್ರಮ ಮೆರೆದರು. ಇವರಿಂದ ದಂಡಿಸಲ್ಪಟ್ಟ ಬೌಲರ್ ವೇಗಿ ಮಾಲ್ಕಂ ನಾಶ್.
ಶುರುವಾಯಿತು ಸಿಕ್ಸರ್ ಸುರಿಮಳೆ
ಅದು ಮಾಲ್ಕಂ ನಾಶ್ ಅವರ 4ನೇ ಓವರ್ ಆಗಿತ್ತು. ನಾಶ್ ಅವರ ಹಿಂದಿನ ಓವರ್‌ಗಳಲ್ಲೂ ಸೋಬರ್ಸ್ ಸಿಡಿದು ನಿಂತಿದ್ದರಿಂದ ಈ ಓವರಿನ ಮೊದಲ ಎಸೆತ ಸಿಕ್ಸರ್‌ಗೆ ರವಾನೆಯಾದಾಗ ಯಾರಿಗೂ ಅಚ್ಚರಿ ಆಗಲಿಲ್ಲ. 2ನೇ ಎಸೆತ ಆಫ್ ಸ್ಟಂಪಿನಿಂದ ತುಸು ಹೊರಗಿತ್ತು. ಉತ್ತಮ ನೆಗೆತವೂ ಲಭಿಸಿತು. ಸೋಬರ್ಸ್ ಬಡಿದಟ್ಟಿದ ರಭಸಕ್ಕೆ ಇದು ಲಾಂಗ್‌ಆಫ್ ಮೂಲಕ ಸಾಗಿ ವೀಕ್ಷಕರ ನಡುವೆ ಹೋಗಿ ಬಿತ್ತು. ಸತತ ಎರಡು ಸಿಕ್ಸರ್!
ಹತಾಶರಾಗಿ ಕೆಣಕಿದ ನಾಶ್
ಮಾಲ್ಕಂ ನಾಶ್ ದಿಕ್ಕೆಟ್ಟರು. ಸೀದಾ ನಾಯಕ ಟೋನಿ ಲೂಯಿಸ್ ಬಳಿ ಹೋಗಿ ಏನೋ ಹೇಳಿದರು. ಅವರು ಬೆನ್ನು ತಟ್ಟಿ ಕಳಿಸಿದರು. ಇದರಿಂದ ನಾಶ್‌ಗೆ ಏನನಿಸಿತೋ, ನೇರವಾಗಿ ಸೋಬರ್ ಬಳಿ ಹೋಗಿ, “ಈ ಎಸೆತಕ್ಕೆ ನಿಮ್ಮಿಂದ ಫ್ಲಡ್‌ಲೈಟ್ ಪುಡಿ ಮಾಡಲು ಸಾಧ್ಯವಾಗದು’ ಎಂದು ಕೆಣಕಿದರು.
ಸೋಬರ್ಸ್ ಸುಮ್ಮನುಳಿಯಲಿಲ್ಲ. “ಫ್ಲಡ್‌ಲೈಟ್ ಪುಡಿಗೈಯಬೇಕೆಂದು ನಾನೂ ಎಣಿಸಿದ್ದೆ. ಆದರೆ ನಿಮ್ಮ ಮಾತು ಕೇಳಿ ಈ ನಿರ್ಧಾರವನ್ನು ಬದಲಿಸಲು ತೀರ್ಮಾನಿಸಿದ್ದೇನೆ’ ಎಂದರು!
ಮೂರನೇ ಎಸೆತ ಧಾವಿಸಿ ಬಂತು. ಸೋಬರ್ಸ್ ಅವರಿಂದಷ್ಟೇ ಸಾಧ್ಯ ಎಂಬಂತಿದ್ದ ಹುಕ್ ಶಾಟ್ ಅದಾಗಿತ್ತು. ಅವರು ಸಿಕ್ಸರ್‌ಗಳ ಹ್ಯಾಟ್ರಿಕ್ ಪೂರ್ತಿಗೊಳಿಸಿದ್ದರು. ನಾಶ್ ಅವರ 4ನೇ ಎಸೆತವೂ ಸಿಕ್ಸರ್‌ಗೆ ರವಾನೆಯಾದಾಗ ವೀಕ್ಷಕರ ಹರ್ಷೋದ್ಗಾರ ಮುಗಿಲು ಮುಟ್ಟಿತು.
ಇದನ್ನೂ ಓದಿ:ಸಿಡ್ನಿ ಟೆಸ್ಟ್: ಪುರುಷರ ಪಂದ್ಯಕ್ಕೆ ವನಿತಾ ಫೋರ್ತ್ ಅಂಪಾಯರ್!
ಸಿಕ್ಕಿತೊಂದು ಜೀವದಾನ!
5ನೇ ಎಸೆತದ ವೇಳೆ ಎಡವಟ್ಟೊಂದು ಸಂಭವಿಸಿತು. ಗುಡ್‌ಲೆಂತ್ ಆಗಿ ಆಫ್‌ಸ್ಟಂಪ್‌ನಿಂದ ಸ್ವಲ್ಪವೇ ಹೊರಗೆ ಹೋಗುತ್ತಿದ್ದ ಚೆಂಡನ್ನು ಸೋಬರ್ಸ್ ಲಾಂಗ್‌ಆಫ್‌ನತ್ತ ಎತ್ತಿ ಬಾರಿಸಿದರು. ಅದು ಗಾಳಿಯಲ್ಲಿ ಹಾರಾಡುತ್ತ ನೇರವಾಗಿ ಫೀಲ್ಡರ್ ರೋಜರ್ ಡೇವಿಸ್ ಕೈಸೇರಿತು. ಸೋಬರ್ಸ್ ಔಟಾಗಬೇಕಿತ್ತು, ಆದರೆ ಹಾಗಾಗಲಿಲ್ಲ. ಕ್ಯಾಚ್ ಪಡೆಯುವಾಗ ನಿಯಂತ್ರಣ ಕಳೆದುಕೊಂಡ ಡೇವಿಸ್ ಬೌಂಡರಿ ಗೆರೆ ದಾಟಿ ಬಿಟ್ಟರು. ನಾಶ್ ಅವರ ಸಂಭ್ರಮ ಕೆಲವೇ ಕ್ಷಣದಲ್ಲಿ ಸರ್ವನಾಶವಾಗಿತ್ತು. ಅವರು ಸೋಬರ್ಸ್ ಗೆ ಸತತ 5ನೇ ಸಿಕ್ಸರ್ ನೀಡಿದ್ದರು!
ಎರಡು ವಿಶ್ವದಾಖಲೆ
ಮಾಲ್ಕಂ ನಾಶ್ ತೀವ್ರ ಹತಾಶರಾಗಿದ್ದರು. ಸೋಬರ್ಸ್ ವಿಕೆಟ್ ಉರುಳಿಸಲು ಸಾಧ್ಯವಾಗದಿದ್ದರೂ ವಿಶ್ವದಾಖಲೆ ನಿರ್ಮಾಣವಾಗದಂತೆ ತಡೆಯಬೇಕೆಂಬ ತೀರ್ಮಾನಕ್ಕೆ ಬಂದರು. ಹೀಗಾಗಿ ಯಾರ್ಕರ್ ಎಸೆಯಲು ಮುಂದಾದರು. ಆದರೆ ಸಂಪೂರ್ಣವಾಗಿ ಲಯ ತಪ್ಪಿದರು. ಸೋಬರ್ಸ್ ಬ್ಯಾಟಿನಿಂದ ಬಂದೂಕಿನ ಗೋಲಿಯತೆ ಸಿಡಿದ ಆ ಚೆಂಡು ಯಾವ ಮಾರ್ಗವಾಗಿ ಮೈದಾನದಿಂದ ಹಾರಿ ಹೋಯಿತು ಎಂಬುದು ಯಾರಿಗೂ ತಿಳಿಯಲಿಲ್ಲ!
ಹೀಗೆ ಓವರೊಂದರಲ್ಲಿ ಸತತ 6 ಸಿಕ್ಸರ್ ಹಾಗೂ ಓವರಿಗೆ ಅತ್ಯಧಿಕ 36 ರನ್ ಬಾರಿಸಿದ ಅಮೋಘ ವಿಶ್ವದಾಖಲೆಗಳಿಗೆ ಗ್ಯಾರಿ ಸೋಬರ್ಸ್ ಭಾಜನರಾಗಿದ್ದರು. ಕ್ರಿಕೆಟ್ ಜಗತ್ತಿನ ಸಂಭ್ರಮಕ್ಕೆ ಪಾರವಿರಲಿಲ್ಲ!
ಅಭಿ