ರಾಮನಗರ: ವೇತನ ಸರಿಯಾಗಿ ಪಾವತಿಸದ ಬ್ಲೂ ಕ್ಲಿಫ್ ಅಪಾರೆಲ್ಸ್ ಘಟಕದ ನೌಕರರು ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದರು.
ನಗರದ ಜೂನಿಯರ್ ಕಾಲೇಜು ಬಳಿ ಇರುವ ಬ್ಲೂ ಕ್ಲಿಫ್ ಅಪಾರೆಲ್ಸ್ ಸಂಸ್ಥೆ ಮುಂಭಾಗ ಪ್ರತಿಭಟನೆ ನಡೆಸಿದ ನೌಕರರು ಸಂಸ್ಥೆ ತಮಗೆ ಕಳೆದೊಂದು ವರ್ಷದಿಂದ ವೇತನವನ್ನು ಸರಿಯಾಗಿ ಪಾವತಿ ಮಾಡಿಲ್ಲ, ಇದೀಗ ಮೂರು ತಿಂಗಳ ವೇತನ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವರ್ಷದ ಹಿಂದೆ ಈ ಘಟಕ ಆರಂಭವಾಗಿದೆ. ಸುಮಾರು 350 ಮಂದಿ ನೌಕರರು ಇಲ್ಲಿ ನೌಕರಿಗಿದ್ದಾರೆ. ಆರಂಭದಿಂದಲೂ ವೇತನ ಸರಿಯಾಗಿ ಪಾವತಿಸುತ್ತಿಲ್ಲ. ಹೊಸ ಘಟಕ ಎಂಬ ಕಾರಣಕ್ಕೆ ನೌಕರರು ಸಹ ಸಹಕಾರ ನೀಡಿದ್ದಾಗಿ, ಆದರೆ ಆಡಳಿತ ಮಂಡಳಿ ಅದನ್ನೇ ಪರಿಪಾಟ ಮಾಡಿಕೊಂಡಿದೆ.
2-3 ತಿಂಗಳಿಗೊಮ್ಮೆ ವೇತನ ಪಾವತಿಸುತ್ತಿದ್ದಾರೆ. ಜೀವನ ಸಾಗಿಸುವುದು ಕಷ್ಟಕರವಾಗಿದೆ. ಆಡಳಿತ ಮಂಡಳಿ ಸದಸ್ಯರನ್ನು ಕೇಳಿದರೆ ಎಲ್ಲಾ ಸರಿಹೋಗುತ್ತೆ ಎಂದು ತಿಪ್ಪೆಸಾರಿಸುತ್ತಿದ್ದಾರೆ. 3 ತಿಂಗಳಿಂದ ವೇತನ ಪಾವತಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಮ್ಮ ದುಡಿಮೆಯ ವೇತನವೇ ತಮ್ಮ ಕುಟುಂಬಗಳಿಗೆ ಆಧಾರ. ಕೆಲಸಕ್ಕೆನೇಮಿಸಿ ಕೊಂಡ ಉದ್ದಿಮೆದಾರರು ವೇತನ ಸರಿಯಾಗಿ ಪಾವತಿಸದಿದ್ದರೆ ಕುಟುಂಬಗಳ ಗತಿ ಏನೆಂದು ಪ್ರಶ್ನಿಸಿದರು.
ಮನವಿಗೆ ಕಿವಿಗೊಡದ ಕಾರ್ಮಿಕ ಅಧಿಕಾರಿಗಳು ಪ್ರತಿಭಟನೆಯ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಪೊಲೀಸರಿಗೂ ಆಡಳಿತ ವ್ಯವಸ್ಥೆಯ ಅಧಿಕಾರಿಗಳು ಎಲ್ಲಾ ಸರಿಹೋಗುತ್ತೆ ಎಂದು ತಮಗೆ ನೀಡಿದ ಉತ್ತರವನ್ನೇ ಕೊಟ್ಟು ಸಾಗಿ ಹಾಕಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು. ರೂಪಾ, ಗೀತಾ, ಸಾಕಮ್ಮ, ಶೋಭಾ, ಲಕ್ಷ್ಮೀ, ತಾರಾ, ಕವಿತಾ, ನಾರಾಯಣ, ಮಾದೇಶ ಇತರರಿದ್ದರು.