ಬೆಂಗಳೂರು: ಕೊರೊನಾ ಮಹಾಮಾರಿಯ ಸಂಕಷ್ಟಕ್ಕೆ ಸಿಲುಕಿದವರ ನೋವಿನ ಕಥೆಗಳು ಒಂದೊಂದೇ ಹೊರಬರುತ್ತಿವೆ. ಅದಕ್ಕೆ ತಾಜಾ ಉದಾಹರಣೆ ಗಾರ್ಮೆಂಟ್ಸ್ ಉದ್ಯಮ. ಕಳೆದ ಎರಡು ತಿಂಗಳಿಂದ ಲಾಕ್‌ಡೌನ್ ಕಾರಣದಿಂದ ಬಂದ್ ಆಗಿರುವ ಗಾರ್ಮೆಂಟ್ಸ್ ಕಾರ್ಖಾನೆಗಳು ನಾಲ್ಕನೇ ಹಂತದ ಲಾಕ್‌ಡೌನ್ ಸಡಿಲಿಕೆಯ ಸಮಯದಲ್ಲಿ ಆರಂಭವಾಗಿದ್ದು, ಶೇ.33 ರಷ್ಟು ಕಾರ್ಮಿಕರನ್ನು ಮಾತ್ರ ಬಳಸಿಕೊಂಡು ಕೆಲಸ ನಿರ್ವಹಿಸಲಾಗುತ್ತಿದೆ.
ನೋವಿನ ಕಥೆ: ಲಾಕ್ ಡೌನ್ ನಂತರ ಗಾರ್ಮೆಂಟ್ಸ್ ನೌಕರರ ಪರಿಸ್ಥಿತಿ ಕುರಿತು ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರ ಮುನ್ನಡೆ ಮತ್ತು ಆಲ್ಟರ್‌ನೆàಟಿವ್ ಲಾ ಫೋರಂ ನಡೆಸಿರುವ ಸಮೀಕ್ಷೆಯಲ್ಲಿ ಮಹಿಳೆಯರ ನೋವಿನ ಕಥೆ ಬಿಚ್ಚಿಡುತ್ತದೆ. ಈಗ ಲಾಕ್‌ಡೌನ್ ಅವಧಿಯಲ್ಲಿ ಉದ್ಯಮಗಳಿಗೆ ಆಗಿರುವ ನಷ್ಟ ಸರಿದೂಗಿಸಲು ರಾಜ್ಯ ಸರ್ಕಾರ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತಂದು ಕೆಲಸದ ಅವಧಿಯನ್ನು ಕನಿಷ್ಟ 8ರಿಂದ 10 ಗಂಟೆಗೆ ಹೆಚ್ಚಳ ಮಾಡಿ ಆದೇಶಿಸಿದ್ದು, ಗಾರ್ಮೆಂಟ್ಸ್ ಕಾರ್ಮಿಕರ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. ಸರ್ಕಾರದ ಈ ಆದೇಶ ಕಾರ್ಮಿಕರಿಗೆ ಅದರಲ್ಲೂ ವಿಶೇಷವಾಗಿ ಮಹಿಳಾ ಕಾರ್ಮಿಕರಿಗೆ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
ರಾಜ್ಯದಲ್ಲಿ ಸುಮಾರು 8 ಲಕ್ಷ ಗಾರ್ಮೆಂಟ್ಸ್ ಕಾರ್ಮಿಕರಿದ್ದು, ಬೆಂಗಳೂರಿ ನಲ್ಲಿಯೇ 5 ಲಕ್ಷ ಕಾರ್ಮಿಕರಿದ್ದಾರೆ. ಅವರಲ್ಲಿ 85 ರಷ್ಟು ಮಹಿಳಾ ಕಾರ್ಮಿಕರೇ ಕೆಲಸ ಮಾಡುತ್ತಿದ್ದು, ಅವರು ಬೆಳಗ್ಗೆ 9.15 ಕ್ಕೆ ಫ್ಯಾಕ್ಟರಿಗೆ ತಲುಪಲು ಬೆಳಗ್ಗೆ 7 ಗಂಟೆಗೆ ಮನೆ ಬಿಡಬೇಕು. ಸಂಜೆ 5.30 ಕ್ಕೆ ಕೆಲಸದ ಅವಧಿ ಮುಗಿದರೂ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡು ಸಂಜೆ ಮನೆ ಸೇರಲು 7.30 ರಿಂದ 8 ಗಂಟೆ ಆಗುತ್ತದೆ. ಹೀಗಿರುವಾಗ ರಾಜ್ಯ ಸರ್ಕಾರ ಈಗ ಮತ್ತೆ 2 ಗಂಟೆ ಹೆಚ್ಚಿನ ಅವಧಿ ಕೆಲಸ ಮಾಡುವಂತೆ ಆದೇಶ ಮಾಡಿರುವುದು ಉದ್ಯೋಗದ ಜೊತೆ ಕುಟುಂಬ ನಿರ್ವಹಣೆ ಮಾಡುವುದು ಕಷ್ಟ ಎಂಬ ಅಭಿಪ್ರಾಯವನ್ನು ಬಹುತೇಕ ಮಹಿಳೆಯರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.
ಸಂಬಳ ಕೇಳಿದರೆ ರಾಜೀನಾಮೆಗೆ ಸೂಚನೆ: ಲಾಕ್ ಡೌನ್ ಘೋಷಣೆಯಾದ ನಂತರ ಬಹುತೇಕ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಿದ್ದು, ಈಗ ವಾಪಸ್ ಬಂದರೂ ಬಹುತೇಕ ಕಾರ್ಖಾನೆಗಳು ಕಾರ್ಮಿಕರಿಗೆ ನೀಡುತ್ತಿದ್ದ ಸಾರಿಗೆ ಸೌಲಭ್ಯವನ್ನು ಕಡಿತ ಮಾಡಿದ್ದು, ಸ್ವಂತ ವೆಚ್ಚದಲ್ಲಿ ಕೆಲಸಕ್ಕೆ ಆಗಮಿಸುವಂತೆ ಸೂಚಿಸುತ್ತಿವೆ ಎಂದು ತಿಳಿದು ಬಂದಿದೆ. ಕೆಲಸಕ್ಕೆ ಬರಲು ವಾಹನ ಸೌಲಭ್ಯ ಇಲ್ಲದ ಅಕ್ಕ ಪಕ್ಕದ ತಾಲೂಕು ಹಾಗೂ ಜಿಲ್ಲೆಗಳಿಂದ ಪ್ರಯಾಣ ಮಾಡುವ ಕಾರ್ಮಿಕರಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದೇ, ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
ರಾಜ್ಯ ಸರ್ಕಾರ ಏಕಾಏಕಿ ಕೆಲಸದ ಸಮಯ ಹೆಚ್ಚಳ ಮಾಡಿದ್ದರಿಂದ ಗಾರ್ಮೆಂಟ್ಸ್ ಕಾರ್ಮಿಕರಿಗೆ ಸಮಸ್ಯೆಯಾಗಿ ಪರಿಣಮಿಸಿದ್ದು, ಸಾಕಷ್ಟು ಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಸರ್ಕಾರದ ಈ ನಿರ್ಧಾರದ ವಿರುದ್ಧ ಶೀಘ್ರವೇ
ಹೋರಾಟ ಮಾಡುತ್ತೇವೆ.
-ಸರೋಜಾ, ಗಾರ್ಮೆಂಟ್ಸ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ