ಗರಿಬೊಮ್ಮನಹಳ್ಳಿ: ಪಟ್ಟಣದ ತಾಲೂಕು ಕಚೇರಿ ಕಟ್ಟಡ ಸಂಪೂರ್ಣ ಶಿಥಿಲಗೊಳ್ಳುವ ಹಂತ ತಲುಪಿದ್ದು ಕಂದಾಯ ಇಲಾಖೆಯ ಶಿರಸ್ತೇದಾರರ ಮೇಜಿನ ಪಕ್ಕಕ್ಕೆ ಮೇಲ್ಛಾವಣಿ ಅರ್ಧ ಭಾಗ ಕುಸಿದಿದ್ದು, ಇಲಾಖೆಯ ಅಧಿಕಾರಿಗಳು ಬುಧವಾರ ಆತಂಕಕ್ಕೊಳಗಾದ ಘಟನೆ ನಡೆದಿದೆ.
ಇತ್ತೀಚೆಗೆ ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದ ಪರಿಣಾಮ 17ಜನ ಸಾವನ್ನಪ್ಪಿದ್ದ ಘಟನೆ ಮಾಸುವ ಮುನ್ನವೇ ತಾಲೂಕು ಕಚೇರಿ ಮೇಲ್ಛಾವಣಿ ಕುಸಿತಕ್ಕೊಳಗಾಗಿರುವುದು ಅಧಿಕಾರಿ ವರ್ಗದವರನ್ನು ಬೆಚ್ಚಿ ಬೀಳಿಸಿದೆ. ಬುಧವಾರ ಸಂಜೆ 4.15ಕ್ಕೆ ಎಂದಿನಂತೆ ತಾಲೂಕು ಕಚೇರಿಯಲ್ಲಿ ಸುಮಾರು 30 ಹೆಚ್ಚು ಸಿಬ್ಬಂದಿಗಳು ತಮ್ಮ ಕರ್ತವ್ಯದಲ್ಲಿ ತೊಡಗಿದ್ದರು. ನೂರಾರು ಸಾರ್ವಜನಿಕರು ಕಚೇರಿ ಕೆಲಸ ಕಾರ್ಯಗಳಿಗೆ
ಅಲೆದಾಡುತ್ತಿದ್ದರು. ಇಂತಹ ಸಂದರ್ಭದಲ್ಲಿ ಶಿರಸ್ತೇದಾರ್ ಶಿವಕುಮಾರ್ ಎಂಬುವವರು ತಮ್ಮ ಚೇರ್‌ನಿಂದ ಮೇಲೆ ಎದ್ದು ಹೊರ ಬಂದ ತಕ್ಷಣ ಅವರ ಚೇರ್ ಮೇಲೆಯೇ ಮೇಲ್ಛಾವಣಿ ಕುಸಿದಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೇಲ್ಛಾವಣಿ ಶಿರಸ್ತೇದಾರರ ಚೇರ್ ಮೇಲೆ ಬಿದ್ದ ತಕ್ಷಣ ಚೇರ್ ಜಖಂಗೊಂಡಿತು. ಆತಂಕಗೊಂಡ ಕಚೇರಿಯ ಸಿಬ್ಬಂದಿಗಳು ಕುಸಿದು ಬಿದ್ದ ಶಬ್ದಕ್ಕೆ ಹೊರಗೆ ಓಡಿಬಂದರು. ಪ್ರತಿದಿನ ಮೇಲ್ಛಾವಣಿ ಸ್ವಲ್ಪಸ್ವಲ್ಪ ಕುಸಿಯುತ್ತಿದ್ದರೂ ಯಾರು ಗಮನ ಹರಿಸಿಲ್ಲ ಎಂದು ಸಿಬ್ಬಂದಿ ಗುನುಗಿದರು. ಜೀವಭಯದಿಂದಲೇ ಕರ್ತವ್ಯ ನಿರ್ವಹಿಸುವಂತಾಗಿದೆ ಎಂದು ಶಪಿಸುತ್ತಿರುವುದು ಕಂಡು ಬಂತು.
ಸಾಕಷ್ಟು ಬಾರಿ ಶಿಥಿಲಗೊಂಡ ಕಟ್ಟಡದ ಕುರಿತು ಮೇಲಧಿಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ನಂತರ ತಹಶೀಲ್ದಾರ್ ಜಿ.ಸಂತೋಷಕುಮಾರ್ ಕುಸಿದು ಬಿದ್ದ ಮೇಲ್ಛಾವಣಿಯನ್ನು ಪರಿಶೀಲಿಸಿ ಜಿಲ್ಲಾಧಿಕಾರಿಗಳಿಗೆ ಈ ಕುರಿತು ವರದಿಯನ್ನು ಸಲ್ಲಿಸುವುದಾಗಿ ತಿಳಿಸಿದರು. ತಾಲೂಕು ಕಚೇರಿಯಲ್ಲಿ ಕೆಲಸ ಇದ್ದರೂ ಹೋಗಲು ಭಯವಾಗುತ್ತದೆ. ಇಲ್ಲಿಯೇ ಇದ್ದು ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳು ಜೀವವನ್ನು ಕೈಯಲ್ಲಿ ಹಿಡಿದು ಕೆಲಸ ಮಾಡುವಂತಾಗಿದೆ. ಮಿನಿ ವಿಧಾನಸೌಧದ ಕಟ್ಟಡವನ್ನು ಜನಪ್ರತಿನಿಧಿಗಳು ಕೂಡಲೇ ಪ್ರಾರಂಭಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಇಂದಿನ ಪರಿಸ್ಥಿತಿಯನ್ನು ಕೂಡಲೇ ಅರಿತು ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಿ ಮುಂದಿನ ಅವಘಡ ತಪ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.