ಮಂಡ್ಯ: ಪ್ರಸ್ತುತ ದಿನಗಳಿಂದ ಕೇಂದ್ರ ಸರ್ಕಾರ ಉಚಿತವಾಗಿ ನೀಡುತ್ತಿದ್ದ 5 ಕೆಜಿ ಅಕ್ಕಿಯೊಂದಿಗೆ ಒಂದು ಕೆ.ಜಿ ಹೆಚ್ಚುವರಿ ಪಡಿತರ ನೀಡಲಾಗುತ್ತಿದೆ ಎಂದು ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಎಂ.ಬಿ.ರಮೇಶ್ ತಿಳಿಸಿದರು.
ನಗರದ ರೈತರ ಸೊಸೈಟಿ ಆವರಣದಲ್ಲಿ ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾದಿಂದ ಕೋವಿಡ್-19ರ ಹಿನ್ನೆಲೆಯಲ್ಲಿ ಕೇಂದ್ರದ ಗರೀಬ್ ಕಲ್ಯಾಣ ಯೋಜನೆಯಡಿ ನೀಡುತ್ತಿದ್ದ ಪಡಿತರವನ್ನು ಮತ್ತೆ ಉಚಿತವಾಗಿ ಮುಂದಿರಿಸಿ, ಹೆಚ್ಚುವರಿ ಪಡಿತರ ನೀಡುತ್ತಿರುವುದಕ್ಕೆ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿ, ಕೊರೊನಾ ಸಂಕಷ್ಟಕದಲ್ಲಿ ಕೇಂದ್ರ ಗರಿಬ್ ಕಲ್ಯಾಣ ಯೋಜನೆಯಡಿ ಸಂಪುಟ ಸಭೆಯಲ್ಲಿ ಪ್ರಧಾನಿ ಮೋದಿ ಮಹತ್ವದ ಘೋಷಣೆ ಮಾಡಿ, ಕೊರೊನಾ ಸಮಯದಲ್ಲಿ ಬಡವರಿಗೆ ನೀಡಲಾಗುತ್ತಿದ್ದ ಉಚಿತ ಆಹಾರ ಧಾನ್ಯ ಯೋಜನೆಯಾದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯನ್ನು ಮತ್ತೆ 6 ತಿಂಗಳಿಗೆ ವಿಸ್ತರಿಸಲಾಗಿದೆ ಎಂದರು.
ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್ ಪಡಿತರ ಚೀಟಿ ಹೊಂದಿದ ಪ್ರತಿ ಕುಟುಂಬಕ್ಕೆ ಈಗಾಗಲೇ 5 ಕೆ.ಜಿ ಅಕ್ಕಿಯನ್ನು ಪ್ರತಿ ತಿಂಗಳು ಹಂಚಲಾಗುತ್ತಿದೆ. ಇದೀಗ 1 ಕೆ.ಜಿ ಅಕ್ಕಿ ಹೆಚ್ಚುವರಿ ಯಾಗಿ ನೀಡಲಾಗುವುದು. ಉಚಿತ ಆಹಾರ ಧಾನ್ಯ ವಿತರಣೆ ಯೋಜನೆ ವಿಸ್ತರಿಸರಣೆಯಿಂದ ದೇಶದ 80 ಕೋಟಿ ಜನರು ಪ್ರಯೋಜನ ಪಡೆಯಲಿದ್ದಾರೆ. 2020ರಲ್ಲಿ ಉಚಿತ ಪಡಿತರ ಯೋಜನೆ ಘೋಷಣೆ ಮಾಡಿದಾಗ 1.75 ಲಕ್ಷ ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು ಎಂದು ಮಾಹಿತಿ ನೀಡಿದರು.
ಗರೀಬ್ ಕಲ್ಯಾಣ ಯೋಜನೆ ಘೋಷಣೆ: ಮೊದಲ ಲಾಕ್‌ಡೌನ್ ವೇಳೆ ವಲಸೆ ಕಾರ್ಮಿಕರು ಕೆಲಸ ಕಳೆದುಕೊಂಡು ಸಂಕಷ್ಟ ಅನುಭವಿಸಿದ್ದರು. ಸರಿ ಸುಮಾರು 120 ಮಿಲಿಯನ್ ವಲಸೆ ಕಾರ್ಮಿಕರು ಕೆಲಸ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಇದನ್ನು ಅರಿತಿದ್ದ ಕೇಂದ್ರ ಲಾಕ್‌ಡೌನ್ ಘೋಷಿಸಿದ ಬೆನ್ನಲ್ಲೇ ಗರೀಬ್ ಕಲ್ಯಾಣ ಯೋಜನೆ ಘೋಷಿಸಿದ್ದರು. ಕೊರೊನಾದಿಂದ ಹಲವು ಬಾರಿ ವಿಸ್ತರಣೆಯಾಗಿದ್ದ ಗರೀಬ್ ಕಲ್ಯಾಣ ಯೋಜನೆ ಮಾರ್ಚ್ 2022ಕ್ಕೆ ಅಂತ್ಯಗೊಳ್ಳುತ್ತಿತ್ತು. ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿದ ಮೋದಿ, ಸೆಪ್ಟೆಂಬರ್ 2022ರ ವರೆಗೆ ವಿಸ್ತರಿಸಲಾಗಿದೆ. ಕೊರೊನಾ ಮೊದಲ ಅಲೆ, ಲಾಕ್‌ಡೌನ್ ಸಂಕಷ್ಟದಿಂದ ನಲುಗಿದ ಬಡವರಿ ಗೆ ಉಚಿತ ಆಹಾರ ಧಾನ್ಯ ನೀಡಲು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಆರಂಭಿಸಲಾಗಿತ್ತು. ಬಳಿಕ ಹಲವು ಬಾರಿ ವಿತರಿಸಲಾಗಿತ್ತು. ಮತ್ತೆ ವಿಸ್ತರಣೆಗೊಂಡು ಒಂದು ಕೆಜಿ ಅಕ್ಕಿ ಹೆಚ್ಚುವರಿಯಾಗಿ ನೀಡಲು ಮುಂದಾಗಿದೆ ಫಲಾನುಭವಿಗಳು ಪಡೆದುಕೊಳ್ಳಿ ಎಂದು ಹೇಳಿದರು.
ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅನ್ವಯ 80 ಕೋಟಿ ಪಡಿತರ ಫಲಾನುಭವಿಗಳಿಗೆ ಇದರ ಲಾಭ ಸಿಗಲಿದೆ. ಇದಕ್ಕಾಗಿ 53,344 ಕೋಟಿ ರೂ. ಹೆಚ್ಚುವರಿ ವೆಚ್ಚವನ್ನು ಸರ್ಕಾರ ಮಾಡಲಿದೆ. ಇದರೊಂದಿಗೆ ಉಚಿತ ಪಡಿತರಕ್ಕೆಂದು ಸರ್ಕಾರ ಮಾಡಿದ ಈವರೆಗಿನ ವೆಚ್ಚ 2.6 ಲಕ್ಷ ಕೋಟಿ ರೂ.ಗೆ ಏರಲಿದೆ ಎಂದರು.
ನಗರಸಭಾ ಸದಸ್ಯ ಶಿವಕುಮಾರ್ ಕೆಂಪಯ್ಯ, ಬಿಜೆಪಿ ನಗರಾಧ್ಯಕ್ಷ ವಿವೇಕ್, ಒಬಿಸಿ ಮೋರ್ಚಾ ಉಪಾಧ್ಯಕ್ಷ ಎಲ್.ಎಸ್.ಸಿದ್ದರಾಜು, ನವೀನ್ ಕುಮಾರ್, ಆನಂದ್, ಮಹೇಶ್, ಎಲ್ಲೇ ಗೌಡ, ಪುಟ್ಟಸ್ವಾಮಿ, ಶರತ್, ಧನಂಜಯ್ ಇದ್ದರು.