Advertisement
ತೋಟಗಾರಿಕೆ ಹಾಗೂ ಅಕ್ಷರ ದಾಸೋಹದ ಸಹಕಾರ ಪಡೆದುಕೊಂಡು ಗ್ರಾಮಾಂತರದ ಪ್ರತಿ ಶಾಲೆಯಲ್ಲಿಯೂ ಕೈ ತೋಟ ರೂಪು ಪಡೆಯಲಿದೆ. ಶಾಲಾ ಮುಖ್ಯ ಗುರುಗಳೇ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿಕೊಡಬೇಕು. ಇದನ್ನು ಗ್ರಾ.ಪಂ.ನಲ್ಲಿ ನಿರ್ಣಯ ಮಾಡಬೇಕು. ನರೇಗಾ ಯೋಜನೆಗೆ ಗ್ರಾ.ಪಂ. ನಿರ್ಣಯ ಅಗತ್ಯ. ಇದನ್ನು ಜಿ.ಪಂ. ಸಿ.ಎಸ್.ಗೆ ಕಳುಹಿಸಿ ಕೊಡಲಾಗುವುದು. ಬಳಿಕವಷ್ಟೇ ಗಿಡಗಳ ಹಂಚಿಕೆ ಪ್ರಮಾಣ ಹಾಗೂ ತಾಂತ್ರಿಕ ಮಂಜೂರಾತಿ ನೀಡಲಾಗುತ್ತದೆ. ಅಂದ ಹಾಗೆ, ಶಾಲಾ ಕೈತೋಟ ರಚನೆ ಇದೇ ಮೊದಲಲ್ಲ.
ತರಕಾರಿ ಜತೆಗೆ ಹಣ್ಣಿನ ಗಿಡಗಳಿಗೂ ಪ್ರಾಶಸ್ತ್ಯ ನೀಡಲಾಗಿದೆ. ಮಾವು, ಸಪೋಟ, ಚಿಕ್ಕು, ಕರಿಬೇವು, ಹಲಸು, ಪಪ್ಪಾಯಿ, ಬಾಳೆಗಿಡ, ಪೇರಳೆ ಹಾಗೂ ವಾಣಿಜ್ಯ ಕೃಷಿಯಾದ ಅಡಿಕೆ, ತೆಂಗು, ಕರಿಮೆಣಸು ಗಿಡಗಳನ್ನು ನೀಡಲಾಗುತ್ತದೆ. ಆಹಾರ ಉತ್ಪನ್ನ ಮಾತ್ರವಲ್ಲ, ಶಾಲಾ ಆವರಣದಲ್ಲಿ ಹೆಚ್ಚು ಜಾಗ ಇದ್ದರೆ, ವಾಣಿಜ್ಯ ಬೆಳೆಗಳಿಂದ ವರಮಾನವನ್ನು ಪಡೆಯಬಹುದು.
Related Articles
ಕೈತೋಟ ರಚನೆ ಜತೆಗೆ, ಆಟದ ಮೈದಾನ, ಮಳೆಕೊಯ್ಲು, ಆವರಣ ಗೋಡೆ ಹಾಗೂ ಸೋಕ್ ಪಿಟ್ ನಿರ್ಮಾಣಕ್ಕೆ ಯೋಜನೆ ಸಿದ್ಧ ಪಡಿಸಲಾಗಿದೆ. ಇವೆಲ್ಲವನ್ನು ನರೇಗಾ ಯೋಜನೆಯಡಿಯೇ ಮಾಡಬಹುದು. ಆಟದ ಮೈದಾನಕ್ಕೆ 2.18 ಲಕ್ಷ ರೂ. ನೀಡುವ ಅವಕಾಶ ಇದೆ. ಮಳೆಕೊಯ್ಲು ಭವಿಷ್ಯದ ಸಂಪತ್ತು. ಗೋಳಿತ್ತೂಟ್ಟು ಹಾಗೂ ಹಿರೇಬಂಡಾಡಿಯಲ್ಲಿ ಯೋಜನೆ ಅನುಷ್ಠಾನಗೊಂಡಿದೆ. ಇದನ್ನು ಪ್ರತಿ ಶಾಲೆಗಳಿಗೂ ತಲುಪಿಸಲು ಸಿದ್ಧತೆ ನಡೆಯುತ್ತಿದೆ. ಇದಕ್ಕಾಗಿ 1.60 ಲಕ್ಷ ರೂ.ಗಳನ್ನು ವಿನಿಯೋಗ ಮಾಡಬಹುದು. ಆವರಣ ಗೋಡೆ ತುಂಬಾ ಅಗತ್ಯ. ಹೆಚ್ಚಿನ ಶಾಲೆಗಳಲ್ಲಿ ಆವರಣ ಗೋಡೆಯೇ ಇಲ್ಲ. ಕೊನೆಯದಾಗಿ, ಸೋಕ್ ಪಿಟ್. ಇದು ಕೊಳಚೆ ನೀರನ್ನು ಇಂಗಿಸುವ ಯೋಜನೆ. ನರೇಗಾದಡಿ ಇದಕ್ಕಾಗಿ 14 ಸಾವಿರ ರೂ. ನೀಡಲಾಗುತ್ತದೆ. ಕೊಳಚೆ ನೀರಿನಿಂದ ರೋಗಭೀತಿ ಹರಡುವುದನ್ನು ತಡೆಗಟ್ಟಲು ಇದು ಸಹಾಯ ಮಾಡುತ್ತದೆ.
Advertisement
ಹಿನ್ನೆಲೆಹಲವು ವರ್ಷಗಳಿಂದ ಶಿಕ್ಷಕರೇ ಸ್ವ-ಆಸಕ್ತಿಯಿಂದ ಕೈತೋಟ ನಿರ್ಮಿಸುತ್ತಿದ್ದರು. ಇಲ್ಲಿ ಬೆಳೆದ ತರಕಾರಿಯನ್ನು ಬಿಸಿಯೂಟಕ್ಕೆ ಬಳಕೆ ಮಾಡುತ್ತಿದ್ದರು. 2017-18ನೇ ಶೈಕ್ಷಣಿಕ ಸಾಲಿನಲ್ಲಿ ಜಿಲ್ಲೆಯ 407 ಶಾಲೆಗಳಲ್ಲಿ ಕೈತೋಟ ನಿರ್ಮಿಸಲಾಗಿತ್ತು. ಇದನ್ನು ಆಧರಿಸಿ ಜಿಲ್ಲಾ ಪಂಚಾಯತ್ ನಿಂದ ಅಕ್ಷರ ಕೈತೋಟ ಎಂಬ ಕಿರುಹೊತ್ತಗೆಯನ್ನು ಹೊರತಂದಿದ್ದರು. ಇದು ರಾಜ್ಯ ಮಟ್ಟದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು, ರಾಷ್ಟ್ರಮಟ್ಟದವರೆಗೂ ತಲುಪಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಗ್ರಾಮಾಂತರದ ಪ್ರತಿ ಶಾಲೆಗಳಲ್ಲಿ ಅಕ್ಷರ- ಕೈತೋಟ ರಚನೆಗೆ ಮುಂದಾಗಿದೆ. ನಗರ ಪ್ರದೇಶಕ್ಕಿಲ್ಲ
ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಕೃಷಿ ಚಟುವಟಿಕೆಯ ಟಚ್ ಕಡಿಮೆಯೇ. ಇತ್ತೀಚಿನ ದಿನಗಳಲ್ಲಿ, ಉತ್ತಮ ಸ್ಥಿತಿಗತಿ ಇರುವ ಕುಟುಂಬಗಳ ಮಕ್ಕಳನ್ನು ನಗರ ಪ್ರದೇಶದ ಶಾಲೆಗಳಿಗೇ ಕಳುಹಿಸಲಾಗುತ್ತಿದೆ. ಬಡ ಮನೆತನದವರು ಹಾಗೂ ಕೃಷಿ ಹಿನ್ನೆಲೆಯ ಮನೆಯವರು ಮಾತ್ರ ಗ್ರಾಮೀಣ ಭಾಗದ ಶಾಲೆಗಳಿಗೆ ಆಗಮಿಸುತ್ತಾರೆ. ಆದ್ದರಿಂದ ಇಂತಹ ಯೋಜನೆಗಳನ್ನು ನಗರ ಪ್ರದೇಶಗಳಿಗೂ ಅನ್ವಯಿಸಿದರೆ ಉತ್ತಮ ಎಂಬ ಅಭಿಪ್ರಾಯವೂ ಕೇಳಿಬಂದಿದೆ. 190 ಶಾಲೆಗಳಲ್ಲಿ
ಪುತ್ತೂರು ತಾಲೂಕಿನ ನಗರ ಪ್ರದೇಶಗಳನ್ನು ಹೊರತುಪಡಿಸಿ ಗ್ರಾಮಾಂತರ ಪ್ರದೇಶದ 190 ಶಾಲೆಗಳಲ್ಲಿ ಕೈತೋಟ ರಚನೆ ಆಗಲಿದೆ. ಶಾಲಾ ಮಕ್ಕಳಲ್ಲಿ ಕಂಡುಬರುವ ಆರೋಗ್ಯದ ಸಮಸ್ಯೆಗೆ ಆಹಾರದ ಪೌಷ್ಟಿಕಾಂಶದ ಕೊರತೆ ಕಾರಣ. ಈ ನಿಟ್ಟಿನಲ್ಲಿ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ| ಎಂ.ಆರ್. ರವಿ ಆದೇಶ ಹೊರಡಿಸಿದ್ದಾರೆ.
– ಡಿ.ಎನ್. ಸುಕನ್ಯಾ, ಕ್ಷೇತ್ರ ಶಿಕ್ಷಣಾಧಿಕಾರಿ, ಪುತ್ತೂರು — ಗಣೇಶ್ ಎನ್. ಕಲ್ಲರ್ಪೆ