Advertisement
ಸ್ಮಶಾನವೆಂದರೆ ಮೌನ, ಭಯದ ವಾತಾವರಣ, ರಣ ರಣ ಹೊಡೆಯುವ ಲಕ್ಷಣವಿರುವುದು ಸರ್ವೇ ಸಾಮಾನ್ಯ. ಆದರೆ ಇಲ್ಲಿರುವ ಸ್ಮಶಾನ ಇವೆಲ್ಲದಕ್ಕಿಂತ ಭಿನ್ನ-ವಿಭಿನ್ನ. ಎಲ್ಲಿ ನೋಡಿದರಲ್ಲಿ ಹಚ್ಚ ಹಸಿರಿನ ತಂಪಾದ ವಾತಾವರಣ, ಬೆಳೆದು ನಿಂತ ಬಗೆಬಗೆಯ ಗಿಡಗಳು, ಸುವಾಸನೆ ಬೀರುವ ಹೂಗಳು, ಅಷ್ಟೇ ಅಲ್ಲ, ನೀರಿನ ವ್ಯವಸ್ಥೆ, ಪೂಜೆಗೆ ವ್ಯವಸ್ಥೆ, ಸ್ವತ್ಛತೆ ಇಲ್ಲಿರುವ ವಿಶೇಷ.
Related Articles
Advertisement
ಹಿಂದೆ ಈ ಸ್ಥಳಕ್ಕೆ ಸುತ್ತಲಿನ ಜನ ಹಗಲಿನಲ್ಲೂ ಬರಲು ಹೆದರುತ್ತಿದ್ದರು. ಸ್ಮಶಾನ ಜಾಗವಲ್ಲವೇ? ಅದೇ ಕಾರಣಕ್ಕೆ ಎಲ್ಲರಿಗೂ ವಿಪರೀತ ಭಯವಿರುತ್ತಿತ್ತು. ಆದರಿಂದು ಇಲ್ಲಿ ಆ ವಾತಾವರಣವಿಲ್ಲ. ಸೇವಾ ನಿವೃತ್ತರಾದ ಪಿ.ಸಿ.ಪೈ ಹಾಗೂ ರಾಯ್ಕರ ತಿಮ್ಮಣ ನಾಯ್ಕ ಇವರ ವಿಶೇಷ ಕಾಳಜಿ ಹಾಗೂ ಸ್ಥಳೀಯರ ಸಹಾಯ-ಸಹಕಾರದಿಂದ ಈ ಸ್ಥಳವಿಂದು ಸಂಪೂರ್ಣ ಬದಲಾಗಿದೆ. ಇವರಿಬ್ಬರೂ ಇದರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಸ್ಥಳೀಯರು ಹಾಗೂ ಸಂಘ-ಸಂಸ್ಥೆಗಳು ಇದರ ಅಭಿವೃದ್ಧಿಗೆ ಸಾಥ್ ನೀಡಿದ್ದಾರೆ. ರಾಯ್ಕರ ನಾಯ್ಕ ಇಲ್ಲಿನ ಗಿಡಗಳಿಗೆ ಪ್ರತಿದಿನ ನೀರುಣಿಸುತ್ತಿದ್ದಾರೆ. ದೂರದ ಊರಿಗೆ ಹೋದಾಗ ಅಲ್ಲಿಂದ ತಂದ ಗಿಡಗಳನ್ನು ಸ್ಮಶಾನದಲ್ಲಿ ನೆಟ್ಟು ಪೋಷಿಸುತ್ತಿದ್ದಾರೆ. ಹೀಗಾಗಿ, ಹಿಂದೆ ಇಲ್ಲಿಗೆ ಬರಲು ಹೆದರುತ್ತಿದ್ದ ಜನ ಈಗ ವಾಯುವಿಹಾರಿಗಳಾಗಿದ್ದಾರೆ. ಕೆಲ ಗಂಟೆಗಳ ಕಾಲ ಕುಳಿತು ಹರಟೆ ಹೊಡೆದು ಹೋಗುತ್ತಿದ್ದಾರೆ. ಇಷ್ಟೇ ಅಲ್ಲ, ದೂರದಿಂದ ಬಂದ ಪ್ರವಾಸಿಗರು ಸಹ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಒಟ್ಟಾರೆ, ಸ್ಮಶಾನವೆಂಬುದು ಸ್ವರ್ಗದಂತೆ ಭಾಸವಾಗುತ್ತಿದೆ.
ಸ್ಮಶಾನದಲ್ಲೂ ನಡೆಯುತ್ತೆ ಧಾರ್ಮಿಕ ಕಾರ್ಯಶಿವರಾತ್ರಿ ಹಾಗೂ ನವರಾತ್ರಿ ಸಂದರ್ಭದಲ್ಲಿ ಇಲ್ಲಿ ಧಾರ್ಮಿಕ ಕಾರ್ಯಗಳು ನಡೆಯುತ್ತವೆ. ಶಿವರಾತ್ರಿ ಸಂದರ್ಭದಲ್ಲಿ ಸ್ಮಶಾನದೊಳಗಿನ ಶಿವನ ಮೂರ್ತಿಗೆ ವಿಶೇಷ ಅಭಿಷೇಕ-ಪೂಜೆಗಳು ನಡೆದರೆ, ನವರಾತ್ರಿ ಸಂದರ್ಭದಲ್ಲಿ ಸ್ಥಳೀಯ ಅಮ್ಮನವರ ದೇವರ ಪಲ್ಲಕ್ಕಿ ಇಲ್ಲಿಗೆ ಆಗಮಿಸಿ ವಿಶೇಷ ಪೂಜೆ ಪಡೆದು ಮುಂದೆ ಸಾಗುತ್ತದೆ. ಸಾಮಾನ್ಯವಾಗಿ ಎಲ್ಲರೂ ಸಮಾಜ ಸೇವೆಯ ನೆಪದಲ್ಲಿ ದೇವಸ್ಥಾನ, ಶಾಲೆ ಪ್ರಾರಂಭ ಮಾಡುತ್ತಾರೆ. ಆದರೆ ದಿನಗಳೆದಂತೆ ಅದರಲ್ಲೇ ಜನರನ್ನು ಲೂಟಿ ಮಾಡಲು ಆರಂಭಿಸುತ್ತಾರೆ. ಆದರೆ ನಾವು ಸ್ಮಶಾನ ಅಭಿವೃದ್ಧಿ ಪಡಿಸಿ ಇದರಲ್ಲೇ ನೆಮ್ಮದಿ ಕಾಣುತ್ತಿದ್ದೇವೆ. ಇದರಲ್ಲಿ ಯಾವುದೇ ಲಾಭವಿಲ್ಲ. ನಾವು ಮಾಡುತ್ತಿರುವ ಪ್ರತಿ ಕೆಲಸವೂ ನಮ್ಮ ಮನಸ್ಸು ಸಂತೋಷಕ್ಕೆ ಮಾಡ್ತಾ ಇರೋದಷ್ಟೇ…
ಪಿ.ಸಿ. ಪೈ, ನಿವೃತ್ತ ಸಿಬ್ಬಂದಿ -ವಿನಾಯಕ ಜಿ.ನಾಯ್ಕ, ತಾಳಮಕ್ಕಿ