Advertisement

ತ.ನಾಡು: ಜಿಗಿತದ ರಾಜಕೀಯದಾಟ

03:45 AM Feb 12, 2017 | |

ಚೆನ್ನೈ: ತಮಿಳುನಾಡಿನಲ್ಲಿ ಅಧಿಕಾರಕ್ಕಾಗಿ ನಡೆ ಯುತ್ತಿರುವ ಯುದ್ಧದಲ್ಲಿ ದಿನ ಕಳೆದಂತೆ ಹಂಗಾಮಿ ಸಿಎಂ ಪನ್ನೀರ್‌ ಸೆಲ್ವಂ ಕೈ ಬಲಿಷ್ಠವಾಗುತ್ತಾ ಸಾಗುತ್ತಿದೆ. ಶಾಸಕರನ್ನು ಕಟ್ಟಿಹಾಕಲು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ 

Advertisement

ಶಶಿಕಲಾ ನಟರಾಜನ್‌ ನಡೆಸುತ್ತಿರುವ ಯತ್ನ ವಿಫ‌ಲವಾಗು ತ್ತಿದ್ದು, ಅವರ ಕನಸು ಭಗ್ನವಾಗುವ ಹಂತ ತಲುಪಿದೆ.
ಒಂದರ ಮೇಲೊಂದರಂತೆ ಆಗುತ್ತಿರುವ ಆಘಾತಗಳಿಂದ ತತ್ತರಿಸಿಹೋಗಿರುವ ಶಶಿಕಲಾ, ಸಿಎಂ ಸ್ಥಾನದ ಪೈಪೋಟಿ ಯಿಂದ ಹಿಂದೆ ಸರಿದು, ಆ ಸ್ಥಾನಕ್ಕೆ ತನ್ನ ಆಪ್ತ ಸಂಗೊಟ್ಟಿ ಯನ್‌ ಹೆಸರನ್ನು ಸೂಚಿಸಬಹುದು ಎಂಬ ಮಾತು ಕೇಳಿಬಂದಿದೆ.

ಚದುರಂಗದಾಟ: ಸತತ 5ನೇ ದಿನ ಅಂದರೆ, ಶನಿವಾರವೂ ನೆರೆರಾಜ್ಯದ ರಾಜಕೀಯ ಚದುರಂಗದಾಟ ಬೆಳಗ್ಗಿನಿಂದ ರಾತ್ರಿಯವರೆಗೂ ಹೊಸ ಹೊಸ ಕುತೂಹಲವನ್ನು ಮೂಡಿ ಸುತ್ತಾ ಸಾಗಿತು. ಆದರೆ, ಈ ಬೆಳವಣಿಗೆಗಳಲ್ಲಿ ಶಶಿಕಲಾಗೆ ನಷ್ಟವಾಗಿದ್ದೇ ಹೆಚ್ಚು. ಶಶಿಕಲಾ ಬಣದಲ್ಲಿದ್ದ ಕೆಲವರು ಸಹಿತ 65 ಮಂದಿ ಶಾಸಕರ ನಿಷ್ಠೆ ಪನ್ನೀರ್‌ ಸೆಲ್ವಂರತ್ತ ತಿರುಗಿತು. ಇಬ್ಬರು ಸಚಿವರು, ಮೂವರು ಸಂಸದರು ಹಾಗೂ ಎಐಎಡಿಎಂಕೆ ವಕ್ತಾರ ಶನಿವಾರ ಸೆಲ್ವಂಗೆ ಬೆಂಬಲ ಘೋಷಿಸಿದ್ದು, ಅವರ ಬಣಕ್ಕೆ ವರವಾಗಿ ಪರಿಣಮಿಸಿತು. ಬೆಳಗ್ಗೆ ಶಿಕ್ಷಣ ಸಚಿವ ಕೆ. ಪಾಂಡ್ಯರಾಜನ್‌ ಅವರು ಹಂಗಾಮಿ ಸಿಎಂ ಬಣಕ್ಕೆ ನಿಷ್ಠೆ ತೋರಿದರೆ, ಅನಂತರ ಪಕ್ಷದ ವಕ್ತಾರ, ಹಿರಿಯ ಮುಖಂಡ ಪೊನ್ನಯ್ಯನ್‌ ಅವರೂ ಸೆಲ್ವಂಗೆ ಬೆಂಬಲ ಘೋಷಿಸಿದರು. ಇದೇ ವೇಳೆ, ನಮಕ್ಕಲ್‌ನ ಸಂಸದ ಪಿ.ಆರ್‌. ಸುಂದರಂ, ಕೃಷ್ಣಗಿರಿ ಸಂಸದ ಕೆ. ಅಶೋಕ್‌ ಕುಮಾರ್‌, ತಿರುಪುರ ಸಂಸದೆ ಸತ್ಯಭಾಮಾ ಕೂಡ ಶಶಿಕಲಾಗೆ ಬೆನ್ನು ತೋರಿ ಪನ್ನೀರ್‌ ಸೆಲ್ವಂ ಬಣಕ್ಕೆ ಸೇರ್ಪಡೆ ಯಾದರು. ಅನಂತರ, ಈ ಸರಣಿಗೆ ಗ್ರಾಮೀಣ ಕೈಗಾರಿಕಾ ಸಚಿವ ಪಿ. ಬೆಂಜಮಿಕ್‌ ಕೂಡ ಸೇರಿದರು.

ಇದೇ ವೇಳೆ, ರೆಸಾರ್ಟ್‌ನಲ್ಲಿ ಶಶಿಕಲಾ ಕೂಡಿಹಾಕಿದ್ದಾರೆನ್ನ ಲಾದ 130 ಮಂದಿ ಶಾಸಕರ ಪೈಕಿ 65 ಮಂದಿ, ತಾವು ಪನ್ನೀರ್‌ ಸೆಲ್ವಂ ಪರ ಎಂದು ರೆಸಾರ್ಟ್‌ನಿಂದಲೇ ಬೆಂಬಲ ಪತ್ರಕ್ಕೆ ಸಹಿ ಮಾಡಿ ಕಳುಹಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಜತೆಗೆ, ಸಮತ್ವ ಮಕ್ಕಳ್‌ ಕಚ್ಚಿ ನಾಯಕ, ಮಾಜಿ ಶಾಸಕ ಶರತ್‌ ಕುಮಾರ್‌ ಕೂಡ ಸೆಲ್ವಂ ಬಣಕ್ಕೆ ಸೇರಿಕೊಂಡಿದ್ದಾರೆ.  ಏತನ್ಮಧ್ಯೆ, ಶಶಿಕಲಾ ವಿರುದ್ಧದ ಅಕ್ರಮ ಆಸ್ತಿ ಪ್ರಕರಣದ ತೀರ್ಪನ್ನು ಸೋಮವಾರದ ಬಳಿಕ ನೀಡಲಾಗುವುದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಹೀಗಾಗಿ ತಮಿಳುನಾಡಿನ ರಾಜಕೀಯ ಅನಿಶ್ಚಿತತೆ ಇನ್ನೂ ಕೆಲವು ದಿನಗಳ ಕಾಲ ಮುಂದುವರಿಯುವ ಲಕ್ಷಣ ಗೋಚರಿಸಿದೆ. ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಸಮಸ್ಯೆ ಉಂಟಾಗಬಾರದು ಎಂಬ ಕಾರಣಕ್ಕಾಗಿ ರಾಜ್ಯಾದ್ಯಂತ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿದೆ.

ರೆಸಾರ್ಟ್‌ಗೆ ಧಾವಿಸಿದ ಶಶಿಕಲಾ: ಶಾಸಕರ ಒಲವು ಪನ್ನೀರ್‌ರತ್ತ ತಿರುಗುತ್ತಿದ್ದಂತೆಯೇ ಗಲಿಬಿಲಿಗೊಂಡ ಶಶಿಕಲಾ, ಮಧ್ಯಾಹ್ನವೇ ಚೆನ್ನೈಯಿಂದ 100 ಕಿ.ಮೀ. ದೂರದಲ್ಲಿರುವ ರೆಸಾರ್ಟ್‌ಗೆ ಧಾವಿಸಿದರು. ಅಲ್ಲಿ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಅವರು, “ನಾವು ಪ್ರಜಾಪ್ರಭುತ್ವ ಮತ್ತು ನ್ಯಾಯದ ಮೇಲೆ ನಂಬಿಕೆಯಿಟ್ಟಿದ್ದೇವೆ. ಆದರೆ, ನಮ್ಮ ತಾಳ್ಮೆಗೂ ಒಂದು ಮಿತಿಯಿದೆ. ಸಹನೆಯ ಕಟ್ಟೆಯೊಡೆದ ಮೇಲೆ ಏನು ಮಾಡಬೇಕೆಂದು ನಾವು ನಿರ್ಧರಿಸುತ್ತೇವೆ’ ಎಂದು ಪರೋಕ್ಷ ಎಚ್ಚರಿಕೆಯ ಸಂದೇಶವನ್ನು ರವಾನಿಸಿದರು. ಬಳಿಕ ಎಲ್ಲ ಶಾಸಕರೂ, ಶಶಿಕಲಾ ಸಿಎಂ ಆಗುವವರೆಗೂ ನಾವು ಅವರಿಗೇ ಬೆಂಬಲ ನೀಡುತ್ತೇವೆಂದು ಶಪಥ ಮಾಡಿದ್ದಾರೆ ಎಂದು ಶಶಿಕಲಾ ಆಪ್ತ ಕೆ.ಎ. ಸೆಂಗೊಟ್ಟಾಯನ್‌ ತಿಳಿಸಿದರು. ಇನ್ನೊಂದೆಡೆ ಶಶಿಕಲಾ ಅವರು ರಾಜ್ಯಪಾಲರಿಗೆ ಪತ್ರ ಬರೆದು, “ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲು ಅವಕಾಶ ಕಲ್ಪಿಸಿ. ಬೇಕಿದ್ದರೆ, ನಿಮ್ಮ ಮುಂದೆ ನನ್ನ ಪರ ಶಾಸಕರ ಪರೇಡ್‌ ಮಾಡಿಸುತ್ತೇನೆ’ ಎಂದು ತಿಳಿಸಿದ್ದಾಗಿ ಪಕ್ಷದ ಮೂಲಗಳು ಹೇಳಿವೆ.

Advertisement

ನಮ್ಮನ್ನು ಅಪಹರಿಸಲಾಗಿಲ್ಲ
ಶಶಿಕಲಾ ಅವರು ಶಾಸಕರನ್ನು ಕೂಡಿಟ್ಟಿದ್ದಾರೆ ಎಂಬ ಆರೋಪದ ಹಿನ್ನೆಲೆ ಯಲ್ಲಿ ಶನಿವಾರ ಪೊಲೀಸರು ಹಾಗೂ ಕಂದಾಯ ಅಧಿಕಾರಿಗಳ ತಂಡವು ಮಹಾಬಲಿಪುರಂನ ಗೋಲ್ಡನ್‌ ಬೇ ಬೀಚ್‌ ರೆಸಾರ್ಟ್‌ನಲ್ಲಿ ತಪಾಸಣೆ ನಡೆಸಿದರು. ಬುಧವಾರ ರಾತ್ರಿಯಿಂದ ಅಲ್ಲಿರುವ ಪ್ರತಿಯೊಬ್ಬ ಶಾಸಕರನ್ನೂ ಭೇಟಿಯಾಗಿ ಹೈಕೋರ್ಟ್‌ ನಿರ್ದೇಶನದಂತೆ ಸ್ವತಂತ್ರ ತನಿಖೆಯನ್ನು ಕೈಗೊಳ್ಳಲಾಯಿತು. ರೆಸಾರ್ಟ್‌ಗೆ ಒತ್ತಾಯಪೂರ್ವಕವಾಗಿ ಕರೆತರಲಾಯಿತೇ ಹಿಂಸಿಸಲಾಯಿತೇ/ ಸ್ವಇಚ್ಛೆಯಿಂದಲೇ ಬಂದಿದ್ದರೇ ಇತ್ಯಾದಿ ಪ್ರಶ್ನೆ ಗಳನ್ನು ಹಾಕಲಾ ಯಿತು. ಈ ಬಗೆಗಿನ ಪ್ರತ್ಯೇಕ ವರದಿಗಳನ್ನು ಸೋಮವಾರ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾವು ಸ್ವಇಚ್ಛೆಯಿಂದಲೇ ಇಲ್ಲಿಗೆ ಬಂದಿದ್ದೇವೆ. ನಮ್ಮನ್ನು ಶಶಿಕಲಾ ಅಪಹರಿಸಿಲ್ಲ. ಆದರೆ, ಪನ್ನೀರ್‌ ಸೆಲ್ವಂರನ್ನು ಡಿಎಂಕೆ ಅಪಹರಿಸಿದೆ ಎಂದು ಕೆಲವು ಶಾಸಕರು ತಿಳಿಸಿದ್ದಾರೆ ಎನ್ನಲಾಗಿದೆ.

ಪಾಂಡ್ಯರಾಜನ್‌ ಉಲ್ಟಾ
ಶನಿವಾರ ಪನ್ನೀರ್‌ ಸೆಲ್ವಂ ಬಣಕ್ಕೆ ಸೇರ್ಪಡೆಗೊಂಡಿರುವ ಸಚಿವ ಪಾಂಡ್ಯರಾಜನ್‌ ಶುಕ್ರವಾರದ ತನಕವೂ ಶಶಿಕಲಾ ಬಣದಲ್ಲಿದ್ದ ಪ್ರಮುಖರಲ್ಲೊಬ್ಬರು. ಗುರುವಾರ ಶಶಿಕಲಾ ಅವರು ರಾಜ್ಯಪಾಲರ ಭೇಟಿಗೆ ತೆರಳಿದಾಗಲೂ ಪಾಂಡ್ಯರಾಜನ್‌ ಜತೆಗಿದ್ದರು. ಅಷ್ಟೇ ಅಲ್ಲ, “ಪನ್ನೀರ್‌ರನ್ನು ಒತ್ತಾಯಪೂರ್ವಕವಾಗಿ ರಾಜೀನಾಮೆ ಕೊಡಿಸಲಾಯಿತು ಎಂಬ ಆರೋಪ ಸುಳ್ಳು. ಇದನ್ನು ಕೇಳಿದರೆ ನಗು ಬರುತ್ತದೆ’ ಎಂದು ಹೇಳಿದ್ದರು. ಆದರೆ, ಈಗ ಏಕಾಏಕಿ ಉಲ್ಟಾ ಹೊಡೆದಿರುವ ಅವರು, ಶನಿವಾರ ಪನ್ನೀರ್‌ ಬೆಂಬಲಕ್ಕೆ ನಿಂತಿದ್ದು ಅಚ್ಚರಿ ಮೂಡಿಸಿತು.

ಮುಂದಿನ ವಾರ ತೀರ್ಪು
ಶಶಿಕಲಾ ಅಕ್ರಮ ಆಸ್ತಿಗೆ ಸಂಬಂಧಿಸಿದ ಬಹುನಿರೀಕ್ಷಿತ ತೀರ್ಪು ಸೋಮವಾರ ಪ್ರಕಟ ವಾಗುವ ಸಾಧ್ಯತೆಯಿಲ್ಲ. ಸೋಮವಾರದ ಕೇಸುಗಳ ಪಟ್ಟಿಯಲ್ಲಿ ಈ ವಿಚಾರ ಇಲ್ಲ. ಹೀಗಾಗಿ, ಮುಂದಿನ ವಾರ ಯಾವತ್ತಾದರೂ ತೀರ್ಪು ಹೊರಬೀಳಬಹುದು ಎಂದು ಮೂಲಗಳು ಹೇಳಿವೆ. ಫೆ. 6ರಂದು ಈ ಕುರಿತು ಪ್ರತಿಕ್ರಿಯಿಸಿದ್ದ ನ್ಯಾಯಪೀಠವು, ಒಂದು ವಾರದಲ್ಲೇ ತೀರ್ಪು ಪ್ರಕಟವಾಗುತ್ತದೆ ಎಂದು ಹೇಳಿತ್ತು. ಈ ನಡುವೆ, ಶನಿವಾರ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯನ್‌ ಸ್ವಾಮಿ ಅವರೂ ರಾಜ್ಯಪಾಲ ವಿದ್ಯಾಸಾಗರ್‌ ರಾವ್‌ರನ್ನು ಭೇಟಿಯಾಗಿ, ತಮಿಳುನಾಡಿನ ರಾಜಕೀಯ ಬಿಕ್ಕಟ್ಟಿನ ಕುರಿತು ಚರ್ಚಿಸಿದ್ದಾರೆ.

ಸಹಿ ಅಭಿಯಾನಕ್ಕೆ ಚಾಲನೆ
ಪೋಯೆಸ್‌ ಗಾರ್ಡನ್‌ ಅನ್ನು ಜಯಲಲಿತಾ ಅವರ ಸ್ಮಾರಕವನ್ನಾಗಿ ಬದಲಿಸುವುದಕ್ಕೆ ಸಹಿ ಅಭಿಯಾನ ಆರಂಭವಾಗಿದೆ. ಹಂಗಾಮಿ ಸಿಎಂ ಪನ್ನೀರ್‌ ಸೆಲ್ವಂ ಅವರೇ ಈ ಅಭಿಯಾನಕ್ಕೆ ಶನಿವಾರ ಚಾಲನೆ ನೀಡಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ವೇದ ನಿಲಯವನ್ನು ಸ್ಮಾರಕವಾಗಿಸುವ ಕುರಿತು ಪನ್ನೀರ್‌ ಸೆಲ್ವಂ ಆದೇಶ ಹೊರಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next