Advertisement

ಜಿಲ್ಲೆಯ ಜೀವನದಿಯ ಜೀವಕ್ಕೆ ಎರವಾಗುತ್ತಿದೆ ಪ್ಲಾಸ್ಟಿಕ್‌

10:46 AM Sep 04, 2022 | Team Udayavani |

ಬಂಟ್ವಾಳ: ಮಳೆಗಾಲದಲ್ಲಿ ನದಿಗಳಲ್ಲಿ ಕಸಕಡ್ಡಿಗಳು ಹರಿದು ಬರುವುದು ಸಾಮಾನ್ಯವಾದರೂ ಇತ್ತೀಚಿನ ವರ್ಷಗಳಲ್ಲಿ ಪ್ಲಾಸ್ಟಿಕ್‌ ಬಾಟಲಿಗಳ ಪ್ರಮಾಣವೇ ಹೆಚ್ಚಾಗಿ ಕಾಣಿಸುತ್ತಿರುವುದು ಆತಂಕಕಾರಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿ ಸೇರಿದಂತೆ ಹೆಚ್ಚಿನೆಲ್ಲ ಹೊಳೆ, ನದಿಗಳ ತೀರವನ್ನೊಮ್ಮೆ ವೀಕ್ಷಿಸಿದರೆ ಅಲ್ಲಲ್ಲಿ ಪ್ಲಾಸ್ಟಿಕ್‌ ಬಾಟಲಿ, ಲಕೋಟೆಗಳು ರಾಶಿ ಬಿದ್ದಿರುವುದನ್ನು ಕಾಣಬಹುದು.

Advertisement

ಪ್ರಸ್ತುತ ದಿನಗಳಲ್ಲಿ ಕುಡಿಯುವ ನೀರು, ತಂಪು ಪಾನೀಯಗಳಿಗೆ ಪ್ಲಾಸ್ಟಿಕ್‌ ಬಾಟಲಿಗಳನ್ನೇ ಉಪಯೋಗಿಸಲಾಗುತ್ತಿದೆ. ಸಮಾರಂಭಗಳಲ್ಲೂ ಹೇರಳವಾಗಿ ಬಳಕೆಯಾಗುತ್ತಿದೆ. ಬಳಸಿದ ಬಳಿಕ ಸಮರ್ಪಕವಾಗಿ ವಿಲೇವಾರಿ ಮಾಡಬೇಕಾದ ಮಂದಿ ಹಾಗೆ ಮಾಡದೆ ಎಲ್ಲೋ ಎಸೆಯುವುದರಿಂದ ಅವುಗಳು ಮಳೆ ನೀರಿನಲ್ಲಿ ಹರಿದು ಬಂದು ನದಿಯನ್ನು ಸೇರುತ್ತಿವೆ. ನದಿ ಕಿನಾರೆಯಲ್ಲಿರುವ ಧಾರ್ಮಿಕ, ಪ್ರವಾಸಿ ತಾಣಗಳಲ್ಲೂ ಪ್ರವಾಸಿಗರು ನೀರು, ತಂಪು ಪಾನೀಯ ಕುಡಿದು ಬಾಟಲಿಗಳನ್ನು ನೇರವಾಗಿ ನದಿಗೆ ಎಸೆಯುತ್ತಾರೆ ಎಂಬ ಆರೋಪವೂ ಇದೆ.

ಬಾಟಲಿಗಳದ್ದೇ ರಾಶಿ!

ಶಂಭೂರು ಎಎಂಆರ್‌ ಅಣೆಕಟ್ಟಿನಿಂದ ಮೇಲ್ಭಾಗದ ಹಿನ್ನೀರನ್ನು ಗಮನಿಸುತ್ತ ಸಾಗಿದರೆ ವ್ಯಾಪಕ ಪ್ರಮಾಣದಲ್ಲಿ ಪ್ಲಾಸ್ಟಿಕ್‌ ಬಾಟಲಿಗಳು ಹರಿದು ಬರುವುದು ಕಂಡುಬರುತ್ತವೆ. ನದಿ ತಿರುವು ಪಡೆಯುವ ಪ್ರದೇಶದಲ್ಲಿ ಸಾವಿರಾರು ಬಾಟಲಿಗಳು ಒಂದೇ ಬದಿಯಲ್ಲಿ ಸಂಗ್ರಹವಾಗಿದೆ. ಅಣೆಕಟ್ಟಿನಲ್ಲಿ ಯಂತ್ರಗಳ ಒಳಗೆ ಕಸ ಹೋಗದಂತೆ ಗ್ರಾಬ್‌ ಮೆಷಿನ್‌ ಮೂಲಕ ತೆಗೆಯಲಾಗುತ್ತದೆ. ಆದರೆ ಎಷ್ಟು ಸಂಗ್ರಹವಾಗಿದೆ ಎಂಬ ನಿಖರ ಮಾಹಿತಿ ಲಭ್ಯವಾಗುವುದಿಲ್ಲ. ಪ್ರತೀ ಮಳೆಗಾಲದಲ್ಲೂ ಹೀಗೆಯೇ ಪ್ಲಾಸ್ಟಿಕ್‌ಗಳು ಹರಿದು ಬರುತ್ತಿವೆ; ನಾವು ವಿಲೇವಾರಿ ಮಾಡುತ್ತೇವೆ ಎಂದಷ್ಟೇ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ವಿಲೇವಾರಿಗೆ ಕ್ರಮ

ನದಿಗಳಲ್ಲಿ ನಿರ್ದಿಷ್ಟ ಜಾಗಗಳಲ್ಲೇ ಈ ರೀತಿ ಪ್ಲಾಸ್ಟಿಕ್‌ ಬಾಟಲಿಗಳು ರಾಶಿ ಬೀಳುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಮನಸ್ಸು ಮಾಡಿದಲ್ಲಿ ಅವುಗಳನ್ನು ಅಲ್ಲಿಂದ ತೆಗೆದು ಸಂಬಂಧಿಸಿ ತ್ಯಾಜ್ಯ/ಎಂಆರ್‌ಎಫ್‌ ಘಟಕಗಳಲ್ಲಿ ವಿಲೇವಾರಿ ಮಾಡಬಹುದು. ಅಣೆಕಟ್ಟುಗಳಲ್ಲೂ ವಿಲೇವಾರಿಗೆ ಕ್ರಮ ತೆಗೆದುಕೊಳ್ಳಬಹುದು.

ಗಮನಕ್ಕೆ ಬರುವುದಿಲ್ಲ: ತುಂಬೆ ಅಣೆಕಟ್ಟಿಗಿಂತ ಮೇಲ್ಭಾಗದಲ್ಲಿ ಎಎಂಆರ್‌ ಅಣೆಕಟ್ಟು ಇರುವುದರಿಂದ ಅಲ್ಲಿ ಒಂದು ಹಂತದಲ್ಲಿ ನೀರಿನ ಕಸಗಳನ್ನು ತೆಗೆಯುವುದರಿಂದ ನಮಗೆ ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಟಿಕ್‌ ಬಾಟಲಿಗಳು ಹರಿದು ಬರುವುದು ಗಮನಕ್ಕೆ ಬರುವುದಿಲ್ಲ. –ನರೇಶ್‌ ಶೆಣೈ, ಕಾರ್ಯಪಾಲಕ ಎಂಜಿನಿಯರ್‌, ಮಹಾನಗರ ಪಾಲಿಕೆ, ಮಂಗಳೂರು.

 

Advertisement

Udayavani is now on Telegram. Click here to join our channel and stay updated with the latest news.

Next