ಸುರತ್ಕಲ್: ನಗರದಲ್ಲಿ ಕೇರಿಗಳ ಕಸ ಸಂಗ್ರಹಿಸಿ ಸಾಗಾಟ ಮಾಡುವ ಜವಾಬ್ದಾರಿ ಹೊತ್ತಿರುವ ಪಿಕಪ್ ವಾಹನಗಳು, ಕಸ ಸಾಗಾಟ ಸಂದರ್ಭ ಸರಿಯಾಗಿ ಟರ್ಫಾಲ್ ಹಾಕದೇ ವಾಹನದಲ್ಲಿ ಕಸ ಸಾಗಿಸುತ್ತಿರುವುದರಿಂದ, ತ್ಯಾಜ್ಯದ ಕಟ್ಟುಗಳು ರಸ್ತೆಯುದ್ದಕ್ಕೂ ಚೆಲ್ಲಿ ಪರಿಸರದ ನೈರ್ಮಲ್ಯವನ್ನು ಹಾಳುಗೆಡುತ್ತಿವೆ.
ಒಂದು ಬಡಾವಣೆಯಲ್ಲಿ ತ್ಯಾಜ್ಯ ತುಂಬಿದರೆ ದೊಡ್ಡ ಕಂಟೈನರ್‌ಗಳಿಗೆ ಆ ತ್ಯಾಜ್ಯವನ್ನು ರವಾನಿಸಿದ ನಂತರ ಇನ್ನೊಂದು ಬಡಾವಣೆಗೆ ಬರಬೇಕಿದೆ. ಆದರೆ ಡೀಸೆಲ್ ಉಳಿತಾಯಕ್ಕಾಗಿ ವಾಹನದ ಗರಿಷ್ಠ ಮಿತಿಗಿಂತ ಹೆಚ್ಚಿನ ತ್ಯಾಜ್ಯ ಹೇರಿಕೆ ಮಾಡುತ್ತಿರುವ ಪರಿಣಾಮ ರಸ್ತೆಯುದ್ದಕ್ಕೂ ಕಸ ಚೆಲ್ಲುತ್ತಿದೆ. ಒಳರಸ್ತೆ ಮತ್ತು ಹೆದ್ದಾರಿಯಲ್ಲೂ ಸಾಗಾಟ ಸಂದರ್ಭ ನಿತ್ಯ ಹಲವಾರು ತ್ಯಾಜ್ಯದ ಕಟ್ಟುಗಳು ರಸ್ತೆಮೇಲೆ ಬಿದ್ದಿರುವುದು ಕಂಡು ಬರುತ್ತಿದೆ.
ಈ ಹಿಂದೆ ತ್ಯಾಜ್ಯ, ಕಲ್ಲು, ಮಣ್ಣು ಸಹಿತ ಮಾಲಿನ್ಯಕ್ಕೆ ಕಾರಣವಾಗುವ ಸರಕನ್ನು ಟರ್ಪಾಲ್ ಮುಚ್ಚಿ ಸುರಕ್ಷೆ ವಹಿಸಿ ಸಾಗಾಟ ಮಾಡಬೇಕೆಂಬ ಆದೇಶ ರವಾನೆಯಾಗಿದ್ದರೂ ಕೆಲವು ದಿನಗಳ ಪಾಲನೆಯ ಬಳಿಕ ಮಾಯವಾಗುತ್ತಿವೆ. ಗುತ್ತಿಗೆ ಕಂಪೆನಿ ಟರ್ಪಾಲ್ ಪೂರೈಕೆ ಮಾಡಿ ಸುರಕ್ಷಿತ ಸಾಗಾಟಕ್ಕೆ ಒತ್ತು ನೀಡಬೇಕಿದೆ. ಆದರೆ ಹಾಗಾಗುತ್ತಿಲ್ಲ. ವಾಹನ ಸ್ವಲ್ಪ ಜೋರಾಗಿ ಸಾಗಿದರೂ ಹಗುರವಿರುವ ಪ್ಲಾಸ್ಟಿಕ್ ತ್ಯಾಜ್ಯಕಟ್ಟುಗಳು ರಸ್ತೆ ಪಾಲಾಗುತ್ತವೆ.
ಮಾಲಿನ್ಯಕ್ಕೆ ಕಾರಣ
ಸುರತ್ಕಲ್‌ನ ಪ್ರಾಥಮಿಕ ಆರೋಗ್ಯ ಕೇಂದ್ರದ ಕಾಂಪೌಂಡ್ ಒಳಗೆ ನಿಲ್ಲಿಸಲಾಗುವ ವಾಹನಗಳಲ್ಲಿ ಟರ್ಪಾಲ್ ಇಲ್ಲದಿರುವುದರಿಂದ ಜೋರಾಗಿ ಗಾಳಿ ಬಂದರೆ ಪ್ಲಾಸ್ಟಿಕ್ ಚೀಲ, ಸಣ್ಣಪುಟ್ಟ ಒಣಕಸದ ಕಟ್ಟುಗಳು ಚೆಲ್ಲಾಪಿಲ್ಲಿಯಾಗುತ್ತವೆ ಮಾತ್ರವಲ್ಲ ವಾಹನಗಳಲ್ಲಿ ತ್ಯಾಜ್ಯವನ್ನು ಉಳಿಸಿಕೊಂಡೇ ಪಾರ್ಕಿಂಗ್ ಮಾಡಲಾಗುತ್ತಿದ್ದು, ಮಾಲಿನ್ಯಕ್ಕೂ ಕಾರಣವಾಗುತ್ತಿದೆ.
ಚೆಲ್ಲದಂತೆ ಗಮನಿಸಲು ಸೂಚನೆ
ತ್ಯಾಜ್ಯ ಸಾಗಾಟ ವಾಹನಗಳಲ್ಲಿ ಟರ್ಪಾಲ್ ಮುಚ್ಚಿ ಸಾಗಾಟ ಮಾಡಬೇಕೆಂದು ಈ ಹಿಂದೆಯೇ ಆದೇಶಿಸಲಾಗಿದೆ. ತ್ಯಾಜ್ಯಗಳು ರಸ್ತೆಯಲ್ಲಿ ಚೆಲ್ಲದಂತೆ ಗಮನ ಹರಿಸಲು ವಾಹನ ಸಿಬಂದಿಗೆ ಸೂಚಿಸಲಾಗುವುದು.
-ಡಾ| ಮಂಜಯ್ಯ ಶೆಟ್ಟಿ, ಆರೋಗ್ಯಾಧಿಕಾರಿ ಮನಪಾ