ಗದಗ: ದೇಶದ ಎಲ್ಲೆಡೆ ಇದೀಗ ಸ್ವತ್ಛ ಭಾರತ, ಸ್ವಚ್ಛತಾ ಹೀ ಸೇವಾ ಮಂತ್ರಗಳಿಂದಾಗಿ ಸ್ವಚ್ಛತಾ ಹೀ ಸೇವಾತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಅದರಂತೆ ಪ್ಲಾಸ್ಟಿಕ್ ಬಳಕೆ ನಿಷೇಧ, ಮನೆಯಿಂದಲೇ ಹಸಿ ಕಸ-ಒಣ ಕಸ ವಿಂಗಡನೆ ಸೇರಿದಂತೆ ತ್ಯಾಜ್ಯ ಸಮಸ್ಯೆ ನಿವಾರಣೆಗೆ ಒತ್ತು ನೀಡಲಾಗುತ್ತಿದೆ. ಆದರೆ, ಅವಳಿ ನಗರದ ಖಾಸಗಿ ಮಾಲೀಕತ್ವದ ಖಾಲಿ ನಿವೇಶನಗಳು ತ್ಯಾಜ್ಯ ವಿಲೇವಾರಿ ಕೇಂದ್ರಗಳಾಗಿ ಪರಿವರ್ತನೆಯಾಗಿದ್ದು, ಸ್ಥಳೀಯರಿಗೆ ತಲೆ ನೋವಾಗಿ ಕಾಡುತ್ತಿವೆ.
ಮಹಾತ್ಮ ಗಾಂಧಿಧೀಜಿ ಅವರ 150ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ದೇಶವನ್ನು ಕೊಳಕು ಮುಕ್ತ ಮಾಡುವ ಸದುದ್ದೇಶದಿಂದ ಪ್ರಧಾನಿ ಮೋದಿ ಅವರು ಸ್ವಚ್ಛ ಭಾರತ ಅಭಿಯಾನ ಘೋಷಣೆ ಮಾಡಿದಾಗ ಇಲ್ಲಿನ ನಗರಸಭೆಯೂ ಸ್ಪಂದಿಸಿತು. ಪ್ರಸಕ್ತ ಸಾಲಿನಲ್ಲಿ ಸ್ವತ್ಛತಾ ಹೀ ಸೇವಾ ಘೋಷಣೆಗೆ ಧ್ವನಿ ಗೂಡಿಸಿದ ಜಿಲ್ಲಾಡಳಿತ ಸ್ವತಃ ಜಿಲ್ಲಾಧಿಕಾರಿ, ಪೌರಾಯುಕ್ತರು ಜೋಳಿಗೆ ಹಾಕುವ ಮೂಲಕ ಸಾರ್ವಜನಿಕರ ಗಮನ ಸೆಳೆದಿದ್ದರು.
ಅವಳಿ ನಗರದಲ್ಲಿ ಸ್ವಚ್ಛ ಕಾಪಾಡುವ ನಿಟ್ಟಿನಲ್ಲಿ ಪೌರ ಕಾರ್ಮಿಕರು, ಗಂಟಿಗಾಡಿಗಳು ಸಾಕಷ್ಟು ಶ್ರಮಿಸುತ್ತಿದ್ದಾರೆ. ಆದರೆ, ಅವಳಿ ನಗರದಲ್ಲಿ ನೂರಾರು ಸಂಖ್ಯೆಯಲ್ಲಿರುವ ಖಾಲಿ ನಿವೇಶನಗಳಲ್ಲಿ ನೆರೆ ಹೊರೆಯವರು ಬೇಕಾಬಿಟ್ಟಿಯಾಗಿ ಕಸ ಚೆಲ್ಲುವುದರಿಂದ ತ್ಯಾಜ್ಯ ವಿಲೇವಾರಿ ಕೇಂದ್ರಗಳಾಗಿ ಪರಿವರ್ತನೆಯಾಗುತ್ತಿವೆ. ತಗ್ಗು ಪ್ರದೇಶದಲ್ಲಿರುವ ಖಾಲಿ
ನಿವೇಶಗಳಲ್ಲಿ ಕೊಳಚೆ ನೀರು ಸಂಗ್ರಹವಾಗುತ್ತಿದ್ದು, ಸೊಳ್ಳೆಗಳ ಉಗಮ ಸ್ಥಾನಗಳಾಗಿವೆ. ಅದರೊಂದಿಗೆ ಪ್ರಮುಖ ರಸ್ತೆಗಳ ಅಕ್ಕ- ಪಕ್ಕದಲ್ಲಿರುವ ಖಾಲಿ ನಿವೇಶನಗಳಲ್ಲಿ ಪಾರ್ಥೇನಿಯಂ ಗಿಡ, ಮುಳ್ಳಿನ ಕಂಟಿ ಬೆಳೆಯುತ್ತಿವೆ. ವಾಣಿಜ್ಯ ಮಳಿಗೆಗಳಿಂದ ಉತ್ಪತ್ತಿಯಾಗುವ ಕಸ, ಖಾಲಿ ಬಾಟಲಿ, ಹಳೇ ಬೆಡ್, ಹಾಸಿಗೆ, ಹೊದಿಕೆ ಸೇರಿದಂತೆ ಅನೇಕ ನಿರುಪಯುಕ್ತ ವಸ್ತುಗಳನ್ನು ಬಿಸಾಡುತ್ತಿದ್ದು, ನಗರದ ಅಂದಗೆಡಿಸುತ್ತಿವೆ ಎಂಬುದು ಸಾರ್ವಜನಿಕರ ದೂರು.
ಆ ಪೈಕಿ ಅವಳಿ ನಗರದಲ್ಲಿ ಪ್ರತಿಷ್ಠಿತ ಎನಿಸಿಕೊಳ್ಳುವ ಹುಡ್ಕೊ ಕಾಲೋನಿ, ಕಳಸಾಪುರ ರಸ್ತೆಯಲ್ಲಿರುವ ವಿವಿಧ ಬಡಾವಣೆಗಳು, ಸ್ವಾಮಿ ವಿವೇಕಾನಂದ ಬಡಾವಣೆ, ಕರಿಯಮ್ಮನ ಕಲ್ಲು ಬಡಾವಣೆ, ರಾಜೀವಗಾಂ ನಗರ, ಸಂಭಾಪುರ ರಸ್ತೆಯ ಹಲವು ಬಡಾವಣೆಗಳೂ ಈ ಸಮಸ್ಯೆಯಿಂದ ಹೊರತಾಗಿಲ್ಲ. ಕೆಲವರು ಹೂಡಿಕೆಗಾಗಿ ಜಾಗೆಗಳನ್ನು ಖರೀದಿಸಿ, ಕೈಬಿಡುವುದೇ ಈ ಸಮಸ್ಯೆಗೆ ಮೂಲ ಕಾರಣ ಎನ್ನಲಾಗಿದೆ. ಹೀಗಾಗಿ ಕೋಟ್ಯಂತರ ರೂಪಾಯಿ ಸುರಿದು ಪ್ರತಿಷ್ಠಿತ ಬಡಾವಣೆಗಳಲ್ಲಿ ಮನೆ ನಿರ್ಮಿಸಿಕೊಂಡಿದ್ದರೂ, ಸುತ್ತಮುತ್ತಲಿನ ಖಾಲಿ ನಿವೇಶನಗಳಿಂದ ಸ್ಥಳೀಯರಿಗೆ ಇರುಸು-ಮುರುಸಿನ ಜೊತೆಗೆ ಆರೋಗ್ಯದ ಸಮಸ್ಯೆ ಎದುರಾಗುತ್ತಿವೆ ಎಂಬುದು ಸ್ಥಳೀಯರ ಅಸಮಾಧಾನದ ಮಾತು.
-ವೀರೇಂದ್ರ ನಾಗಲದಿನ್ನಿ