Advertisement

ಗ್ರಾಪಂ ಮಟ್ಟದಲ್ಲಿ ಕಸ ವಿಲೇವಾರಿ ಘಟಕ

11:42 AM Jan 14, 2018 | Team Udayavani |

ಬೆಂಗಳೂರು: ನಗರದಲ್ಲಿ ಉಲ್ಬಣಿಸುವ ಕಸ ವಿಲೇವಾರಿ ಸಮಸ್ಯೆಯಿಂದ ಉಂಟಾಗುತ್ತಿರುವ ತೊಂದರೆ ಮನಗಂಡಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್‌ ಮುನ್ನಚ್ಚರಿಕೆ ಕ್ರಮವಾಗಿ “ಗ್ರಾಮ ಪಂಚಾಯತ್‌’ ಮಟ್ಟದಲ್ಲಿ ವೈಜ್ಞಾನಿಕ ಕಸ ವಿಲೇವಾರಿ ಘಟಕಗಳ ನಿರ್ಮಾಣಕ್ಕೆ ಮುಂದಾಗಿದೆ.

Advertisement

ಬೆಂಗಳೂರು ನಗರದಲ್ಲಿ ಅವೈಜ್ಞಾನಿಕ ಕಸ ವಿಲೇವಾರಿ ಹಾಗೂ ಸಂಸ್ಕರಣೆಯಿಂದಾಗಿ ಉಂಟಾದ ಸಮಸ್ಯೆ ಮತ್ತು ಸವಾಲು ಮುಂದಿನ ದಿನಗಳಲ್ಲಿ ತಮ್ಮ ಭಾಗಕ್ಕೂ ವ್ಯಾಪ್ತಿಸಬಹುದು ಎಂಬ ಮುಂದಾಲೋಚನೆಯಿಂದ ವೈಜ್ಞಾನಿಕ ಕಸ ವಿಲೇವಾರಿ ಘಟಕಗಳ ಸ್ಥಾಪನೆಗೆ ಯೋಜನೆ ರೂಪಿಸಿದೆ.

ಬೆಂಗಳೂರು ಬೆಳೆಯುತ್ತಿದ್ದು 50 ಕಿ.ಮೀ. ವ್ಯಾಪ್ತಿ ಮೀರಿ ವಿಸ್ತರಿಸುತ್ತಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಪಂ ಕೆಲ ಪ್ರದೇಶಗಳೂ ಬಿಬಿಎಂಪಿಗೆ ಹೊಂದಿಕೊಂಡಂತೆ ಇರುವುದರಿಂದ ಕಸ ಉತ್ಪಾದನೆ ಹೆಚ್ಚಾಗುತ್ತಿದೆ. ಹೀಗಾಗಿ, ವಿಲೇವಾರಿಯೂ ಸವಾಲಾಗುತ್ತಿದೆ.

ಬೆಂಗಳೂರು ಗ್ರಾಮಾಂತರ ಜಿಪಂ, ಗ್ರಾಪಂ ಮಟ್ಟದಲ್ಲಿ ಒಂದೊಂದು ವೈಜ್ಞಾನಿಕ ಕಸ ವಿಲೇವಾರಿ ಘಟಕ ಸ್ಥಾಪನೆಗೆ ತೀರ್ಮಾನಿಸಿ ಗ್ರಾಪಂ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಿಸಲು ಸೂಕ್ತ ಸ್ಥಳಗಳ ಹುಡುಕಾಟ ನಡೆಸಿದೆ.

ಕಸ ಸಂಗ್ರಹ ಮತ್ತು ವಿಲೇವಾರಿ ಸಮರ್ಪಕವಾಗಿ ನಡೆಯುವಂತಾಗಲು ಗ್ರಾಮಾಂತರ ಜಿಪಂ ವ್ಯಾಪ್ತಿಯಲ್ಲಿ ಸಾರ್ವಜನಿಕರು ಹಾಗೂ ಉದ್ಯಮಗಳಿಗೆ ಕೆಲವು ಮಾರ್ಗದರ್ಶನಗಳನ್ನು ಕಡ್ಡಾಯಗೊಳಿಸಲು ತೀರ್ಮಾನಿಸಿದೆ. 

Advertisement

ವ್ಯಾಪಾರ-ವಹಿವಾಟು ಚಟುವಟಿಕೆಗಳಿಗೆ ವ್ಯಾಪಾರ ಪರವಾನಗಿ ನೀಡುವಾಗ ಪ್ಲಾಸ್ಟಿಕ್‌ ಕೈ ಚೀಲ ಮಾರಾಟ ಹಾಗೂ ಬಳಕೆ ಮಾಡದಂತೆ ನಿರ್ಬಂಧ ವಿಧಿಸುವುದು.ಉಲ್ಲಂ ಸುವ ಅಂಗಡಿಗಳ ಪರವಾನಗಿ ರದ್ದುಪಡಿಸುವುದು.

ಮಾಂಸದಂಗಡಿಗಳಿಗೆ ಪರವಾನಗಿ ನೀಡುವಾಗ ತ್ಯಾಜ್ಯವಿಲೇವಾರಿಗೆ ವಿಲೇವಾರಿ ಗುಂಡಿಗಳನ್ನು ಮಾಡಿಕೊಳ್ಳುವುದು ಹಾಗೂ ತಮ್ಮ ಅಂಗಡಿಗಳಲ್ಲಿ ಉತ್ಪತ್ತಿಯಾದ ತ್ಯಾಜ್ಯ ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವುದು ಸೇರಿದಂತೆ ಹಲವು ರೀತಿ ಸೂತ್ರಗಳನ್ನು ಜಿಲ್ಲಾಡಳಿತ ರೂಪಿಸುತ್ತಿದೆ. ಸಮರ್ಪಕ ಕಸ ಸಂಸ್ಕರಣೆ ನಿಟ್ಟಿನಲ್ಲಿ ಹಸಿ ಕಸ‌, ಒಣ ಕಸ ವಿಗಂಡನೆ ಕುರಿತು ಜಾಗೃತಿ ಮೂಡಿಸಲು ಜಿಪಂ ಮುಂದಾಗಿದೆ.

ಕಸ ವಿಂಗಡನೆಗೊಳಿಸಿ ಮನೆಯ ಕಸ ಎಲ್ಲೆಂದರಲ್ಲಿ ಹಾಕುವವರಿಗೆ ದಂಡ ವಿಧಿಸುವ ಕ್ರಮದ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಈ ಕುರಿತು ಗ್ರಾಪಂ ನಿರ್ಣಯ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೃಷಿಗೆ ಗೊಬ್ಬರ: ಗ್ರಾಪಂ ನಿಧಿಯಿಂದ ಸ್ಥಳಾಂತರಿಸಬಹುದಾದ ಕಸ ತುಂಬುವ ಕಂಟೈನರ್‌ ಖರೀದಿಸಿ ಹೋಟೆಲ್‌, ಕಲ್ಯಾಣ ಮಂಟಪ, ಮಾರುಕಟ್ಟೆಗಳಿಂದ ಹಣ್ಣು -ತರಕಾರಿ, ಹೂವು, ಉಳಿದ ಆಹಾರದಂತಹ ಕಸ ಒಂದೆಡೆ ಶೇಖರಣೆ ಮಾಡಿ ನಂತರ ಆ ತ್ಯಾಜ್ಯವನ್ನು ಸಂಸ್ಕರಿಸಿ ಕೃಷಿ ಗೆ ಗೊಬ್ಬರವಾಗಿ ಬಳಕೆಗೆ ನೀಡುವ ಉದ್ದೇಶವೂ ಜಿಪಂ ಹೊಂದಿದೆ ಎಂದು ತಿಳಿದು ಬಂದಿದೆ.

ಘಟಕ ಸ್ಥಾಪನೆ: ಈಗಾಗಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 9 ಘನತ್ಯಾಜ್ಯ ಘಟಕಗಳಿದ್ದರೂ ಕೆಲವೆಡೆ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತ ಪಕ್ಷಿಗಳ ಚಲನವಲನ ಹೆಚ್ಚುತ್ತಿರುವುದರಿಂದ ವಿಮಾನ ಹಾರಾಟಕ್ಕೆ ಅಡ್ಡಿಯಾಗುತ್ತಿದೆ ಎಂಬ ದೂರು ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತಕ್ಕೆ ಬಂದಿದ್ದು ಈ ಬಗ್ಗೆ ಕ್ರಮಕೈಗೊಳ್ಳುವಂತೆ ಸೂಚನೆ ಬಂದಿದ್ದು, ಗ್ರಾಪಂ, ಜಿಪಂ ವ್ಯಾಪ್ತಿಯಲ್ಲಿ ವೈಜ್ಞಾನಿಕ ಕಸ ವಿಲೇವಾರಿ ಘಟಕಗಳನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ.

ನಗರಕ್ಕೆ ಹೊಂದಿಕೊಂಡಿರುವ ಗ್ರಾಮಾಂತರ ವಲಯ ನಗರೀಕರಣಗೊಳ್ಳುತ್ತಿದೆ. ಬಿಬಿಎಂಪಿಯಲ್ಲಿ ಆಗಾಗ್ಗೆ ಉಂಟಾಗುವ ಘನತ್ಯಾಜ್ಯ ವಿಲೇವಾರಿ ಸಮಸ್ಯೆ ಮುಂದೆ ಇಲ್ಲಿಯೂ ಕಾಣಿಸಿಕೊಳ್ಳಬಹುದು. ಹೀಗಾಗಿ, ಮುಂದೆ ಸಮಸ್ಯೆ ಎದುರಾಗದಂತೆ ಈಗಲೇ ಮುನ್ನಚ್ಚರಿಕೆ ಕ್ರಮದಡಿ ಯೋಜನೆ ರೂಪಿಸಲಾಗುತ್ತಿದೆ. ಆ ಪೈಕಿ ಗ್ರಾಪಂ ಮಟ್ಟದಲ್ಲಿ ವೈಜ್ಞಾನಿಕ ಕಸ ವಿಲೇವಾರಿ ಘಟಕ ಸ್ಥಾಪಿಸುವುದು ಸೇರಿದೆ.
-ಕೆ.ಎ. ದಯಾನಂದ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next