ಯಳಂದೂರು: ಪಟ್ಟಣದಲ್ಲಿ ಕಸವನ್ನು ಸಂಗ್ರಹಿಸಲು ಪಟ್ಟಣ ಪಂಚಾಯಿತಿಯ ಬಳಿ ಇರುವ ಆಟೋ ಟಿಪ್ಪರ್, ಟ್ರ್ಯಾಕ್ಟರ್ ಟ್ರ್ಯಾಲಿಗಳು ತುಕ್ಕು ಹಿಡಿದಿದ್ದು ಕಸ ಸಂಗ್ರಹಿಸಲು ಇಲ್ಲಿನ ಸಿಬ್ಬಂದಿ ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದ 11 ವಾರ್ಡ್‌ಗಳಲ್ಲಿ 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ 2000 ಸಾವಿರಕ್ಕೂ ಹೆಚ್ಚು ಕುಟುಂಬಗಳಿವೆ. ಮನೆ ಮನೆಗಳಿಗೆ ತೆರಳಿ ಕಸ ಸಂಗ್ರಹಿಸಲು ಇಲ್ಲಿ ಎರಡೇ ವಾಹನಗಳು ಬರುತ್ತಿವೆ. ಈ ವಾಹನಗಳ ಟ್ರ್ಯಾಲಿಗಳ ಬಾಗಿಲುಗಳು ತುಕ್ಕು ಹಿಡಿದಿದ್ದು ಇವು ಒಡೆದಿವೆ. ಹಾಗಾಗಿ ಇದರೊಳಗೆ ಕಸ ಹಾಕಿದರೆ ರಸ್ತೆ ತುಂಬೆಲ್ಲಾ ಇದು ಕೆಳಕ್ಕೆ ಬೀಳುತ್ತಿದ್ದು ಇಲ್ಲಿನ ಸಿಬ್ಬಂದಿಗೆ ಇದನ್ನು ವಿಲೇವಾರಿ ಮಾಡುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಬಗ್ಗೆ ಇಲ್ಲಿನ ಅಧಿಕಾರಿ ವರ್ಗ ಗಮನ ಹರಿಸುತ್ತಿಲ್ಲ ಎಂಬುದು ಸಾರ್ವಜನಿಕರ ದೂರಾಗಿದೆ.
ಕಳೆದ ಹಲವು ದಿನಗಳಿಂದ ಕಸ ಸಂಗ್ರಹ ಸ್ಥಗಿತ: ಪಟ್ಟಣದ ಮನೆಗಳಿಂದ ಕಸ ಸಂಗ್ರಹಿಸುತ್ತಿದ್ದ ಎರಡು ವಾಹಗಳು ತುಕ್ಕು ಹಿಡಿದಿರುವ ಕಾರಣ ಕಸವನ್ನು ಸಂಗ್ರಹ ಮಾಡುತ್ತಿಲ್ಲ ಇದರಿಂದ ಮನೆಗಳಿಗೆ ಕಸವನ್ನು ಯಾವುದೇ ರೀತಿಯ ವಿಗಂಡಣೆ ಮಾಡದೇ ಹಾಗೇ ಚರಂಡಿ, ಖಾಲಿ ನಿವೇಶನ ಸೇರಿದಂತೆ ಇತರೇ ಸಾರ್ವಜನಿಕ ಸ್ಥಳಗಳಿಗೆ ಹಾಕುತ್ತಿರುವ ಪರಿಣಾಮ ರಸ್ತೆಗಳು ಚರಂಡಿಗಳು ಗಬ್ಬು ನಾರುತ್ತಿವೆ. ಇಲ್ಲಿ ಕೇವಲ ಎರಡು ವಾಹನಗಳು ಮಾತ್ರ ಇದ್ದು ಇಲ್ಲಿನ ಜನಸಂಖ್ಯೆಗೆ ಇದು ಸಾಲುತ್ತಿಲ್ಲ. ಇನ್ನೆರಡು ವಾಹನಗಳು ಇಲ್ಲಿಗೆ ಬೇಕಿವೆ. ಈ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳು ಅಧಿಕಾರಿ ವರ್ಗ ಗಮನ ಹರಿಸಬೇಕು ಎಂಬುದು ಇಲ್ಲಿನ ನಾಗರಿಕರ ಆಗ್ರಹವಾಗಿದೆ.
ಕಸ ಸಂಗ್ರಹಿಸಲು ಇನ್ನೂ ವಾಹನ ಬೇಕು: ಪಟ್ಟಣದಲ್ಲಿ ಎರಡು ಹಸಿ ಹಾಗೂ ಒಣ ಕಸಗಳನ್ನು ಸಂಗ್ರಹಿಸುವ ವಾಹನಗಳು ಮನೆ ಮನೆಗೆ ಹೋಗಿ ಸಂಗ್ರಹ ಮಾಡದ ಕಾರಣ ಕಸವನ್ನು ಅಕ್ಕ ಪಕ್ಕದ ಖಾಲಿ ನಿವೇಶನ ಸ್ಥಳ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸುರಿಯುತ್ತಿದ್ದು ಇದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಮೇಲಧಿಕಾರಿಗಳು ಪಟ್ಟಣ ವ್ಯಾಪ್ತಿಗೆ ಇನ್ನೂ ಕಸ ತುಂಬುವ ವಾಹನದ ವ್ಯವಸ್ಥೆಯನ್ನು ಹೆಚುವ ನಿಟ್ಟಿನಲ್ಲಿ ಗಮನಹರಿಸಬೇಕಾಗಿದೆ.
ಹೆಸರಿಗಷ್ಟೇ ಪ್ಲಾಸ್ಟಿಕ್ ನಿಷೇಧ: ಪ್ಲಾಸ್ಟಿಕ್ ಕವರಗಳ ಮಾರಾಟ, ಬಳಕೆ ನಿಷೇಧವಿದ್ದರೂ ಇದು ಎಗ್ಗಿಲ್ಲದೆ ಮಾರಾಟ ವಾಗುತ್ತಿದೆ. ಪಟ್ಟಣ ವ್ಯಾಪ್ತಿಯ ಕಲ್ಯಾಣ ಮಂಟಪ, ಹೊಟೇಲ್, ಅಂಗಡಿ, ಚಿಲ್ಲರೆ ಅಂಗಡಿ, ಬೇಕರಿ, ಹಣ್ಣಿನ ಅಂಗಡಿ, ಟೀ ಅಂಗಡಿ ಸೇರಿದಂತೆ ಇತರೆಡೆ ಇದರ ಬಳಕೆ ಅವ್ಯಾಹತವಾಗಿ ಬಳಕೆಯಾಗುತ್ತಿದೆ. ಆದರೆ ಇದನ್ನು ತಡೆಯಬೇಕಿರುವ ಅಧಿಕಾರಿಗಳು ಮಾತ್ರ ಕಣ್ಣುಚ್ಚಿ ಕುಳಿತ್ತಿದ್ದಾರೆ. ಅಧಿಕಾರಿಗಳು ಮಾತ್ರ ನಿಷೇಧಿತ ಪ್ಲಾಸ್ಟಿಕ್ ಮಾರಾಟ, ಬಳಕೆಯ ಬಗ್ಗೆ ನಿಗಾ ವಹಿಸುತ್ತಿಲ್ಲ, ಇದರಿಂದ ರಾಜರೋಷವಾಗಿ ಪ್ಲಾಸ್ಟಿಕ್ ಮಾರಾಟ, ಬಳಕೆ ಮಾಡಲಾಗುತ್ತಿದ್ದು ಇದು ಕೂಡ ಕಸ ಹೆಚ್ಚು ಮಾಡುತ್ತಿದ್ದು ಇದರ ವಿಲೇವಾರಿಯೂ ಆಗದ ಕಾರಣ ಇಲ್ಲೇ ಹರಿಯುವ ಸುವರ್ಣಾವತಿ ನದಿಗೆ ಇದು ಮಾರಕವಾಗಿ ಪರಿಣಮಿಸುವ ಸಾಧ್ಯತೆಯೂ ಅಲ್ಲಗೆಳೆಯುವಂತಿಲ್ಲ.
ಕಸ ಸಂಗ್ರಹಿಸುವ ವಾಹನಗಳು ಸುತ್ತಲು ತುಕ್ಕು ಹಿಡಿದು ಕಸ ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ. ಈ ಪರಿಣಾಮ ಮನೆಗಳಿಂದ ಕಸವನ್ನು ಸಂಗ್ರಹಿಸುವ ಕೆಲಸ ಸ್ಥಗಿತಗೊಂಡಿದೆ. ಸಾರ್ವಜನಿಕರು ಅಕ್ಕ ಪಕ್ಕದ ಖಾಲಿ ಸ್ಥಳಗಳಲ್ಲಿ ಕಸ ಹಾಕುತ್ತಿದ್ದಾರೆ. ಈ ಬಗ್ಗೆ ತಕ್ಷಣ ತುಕ್ಕು ಹಿಡಿದಿರುವ ವಾಹನವನ್ನು ತಕ್ಷಣ ಸುರಸ್ತಿಪಡಿಸಿ ಕಸ ಸಂಗ್ರಹಿಸುವ ಕೆಲಸವನ್ನು ಅಧಿಕಾರಿಗಳು ಗಮನಹರಿಸಬೇಕಾಗಿದೆ.
●ವೈ.ಜಿ.ರಂಗನಾಥ, ಪಟ್ಟಣ ಪಂಚಾಯಿತಿ 2ನೇ ಸದಸ್ಯ
ಕಸ ವಿಲೆವಾರಿ ವಾಹನಗಳು ತುಕ್ಕು ಹಿಡಿದಿರುವ ಪರಿಣಾಮ ಮನೆಗಳಿಂದ ಕಸ ಸಂಗ್ರಹಿಸಲು ತೊಂದರೆಯಾಗುತ್ತಿ ರುವ ಬಗ್ಗೆ ಗಮನಹರಿಸಲಾಗುವುದು. ತಕ್ಷಣ ಇದರ ದುರಸ್ತಿಗೆ ಕ್ರಮ ವಹಿಸಲಾಗುವುದು.
●ರವಿಕೀರ್ತಿ, ಪಪಂ ಮುಖ್ಯಾಧಿಕಾರಿ, ಯಳಂದೂರು
-ಫೈರೋಜ್‌ಖಾನ್