ಮರವಂತೆ: ನಾವುಂದ ಗ್ರಾ.ಪಂ. ವ್ಯಾಪ್ತಿಯ ಗರಡಿ ಕಡೆಗೆ ಹೋಗುವ ರಸ್ತೆಗೆ ಕೊನೆಗೂ ಕಾಂಕ್ರೀಟ್ ಕಾಮಗಾರಿ ಮಾಡುವ ಮೂಲಕ ಈ ಭಾಗದ ಜನರ ಬಹುದಿನಗಳ ಸಂಕಷ್ಟದ ಸಂಚಾರಕ್ಕೆ ಮುಕ್ತಿ ಸಿಕ್ಕಂತಾಗಿದೆ.
ಕುಂದಾಪುರ – ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರ ನಾವುಂದ ಅಂಡರ್‌ಪಾಸ್ ಬಳಿಯಿಂದ ಶ್ರೀ ಬ್ರಹ್ಮಬೈದರ್ಕಳ ಕೋಟಿ ಚೆನ್ನಯ ಗರಡಿಗೆ ಹೋಗುವ ರಸ್ತೆಗೆ 40 ಲಕ್ಷ ರೂ. ವೆಚ್ಚದಲ್ಲಿ ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಮುತುವರ್ಜಿಯಲ್ಲಿ ಕಾಂಕ್ರೀಟ್ ಮಾಡಲಾಗಿದೆ.
ಹೊಂಡಮಯ ರಸ್ತೆಗೆ ಮುಕ್ತಿ
ಈ ರಸ್ತೆ ಡಾಮರುಗೊಂಡು ಸುಮಾರು ವರ್ಷಗಳೇ ಕಳೆದಿದೆ. ಆದರೆ 4-5 ವರ್ಷಗಳಿಂದ ಸುಮಾರು 500 ಮೀಟರ್ ದೂರದವರೆಗೆ ಡಾಮರೆಲ್ಲ ಅಲ್ಲಲ್ಲಿ ಎದ್ದು ಹೋಗಿ ಹೊಂಡದಿಂದ ಕೂಡಿದ ರಸ್ತೆಯಾಗಿತ್ತು. ಈ ಭಾಗದಲ್ಲಿ ಸುಮಾರು 100ಕ್ಕೂ ಅಧಿಕ ಮನೆಯವರು ಇದೇ ಮಾರ್ಗವನ್ನು ಆಶ್ರಯಿಸಿದ್ದಾರೆ.
ಸುದಿನ ವರದಿ ನಾವುಂದದಿಂದ ಗರಡಿಗೆ ಸಂಚರಿಸುವ ಈ ಡಾಮರು ರಸ್ತೆ ಅವ್ಯವಸ್ಥೆ, ಹೊಂಡಮಯ ರಸ್ತೆಯಲ್ಲಿ ಸಂಕಷ್ಟದ ಸಂಚಾರದ ಕುರಿತಂತೆ ‘ಉದಯವಾಣಿ ಸುದಿನ’ ವು ವಿಶೇಷ ವರದಿ ಪ್ರಕಟಿಸಿ, ಗಮನಸೆಳೆದಿತ್ತು.